ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಬಿದ್ದ ವೃದ್ಧ, ಸಿನಿಮೀಯ ರೀತಿಯಲ್ಲಿ ರಕ್ಷಣೆ: ವಿಡಿಯೋ ವೈರಲ್

May 27, 2022, 4:02 PM IST

ಉಡುಪಿ, (ಮೇ.27): ರೈಲಿನಿಂದ ಇಳಿಯುತ್ತಿದ್ದಾಗ ಆಯತಪ್ಪಿ ಬಿದ್ದ ವ್ಯಕ್ತಿಯನ್ನು ಸಿನಿಮೀಯ ರೀತಿಯಲ್ಲಿ ರೈಲ್ವೆ ಸಿಬ್ಬಂದಿಯೊಬ್ಬರು ರಕ್ಷಿಸಿದ್ದು, ಆ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ. ಉಡುಪಿ ರೈಲ್ವೆ ನಿಲ್ದಾಣದಲ್ಲಿ ನಡೆದಿರುವ ಈ ಘಟನೆಯ ಸಾಹಸಕಾರಿ ದೃಶ್ಯಾವಳಿಗಳು  ಸದ್ಯ ವೈರಲ್ ಆಗುತ್ತಿದೆ. ರೈಲ್ವೆ ಸಿಬ್ಬಂದಿಯ ಸಮಯೋಚಿತ ಸಾಹಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಉಡುಪಿ ಜಿಲ್ಲೆಯ ಪೆರ್ಡೂರು ಮೂಲದ ಕುತಿ ಕುಂದನ್ 70ರ ಇಳಿವಯಸ್ಸಿನ ವೃದ್ಧರು. ಇವರು ತಮ್ಮ ಮಗಳನ್ನು ರೈಲಿನಲ್ಲಿ ಕುಳ್ಳಿರಿಸಿ, ಆಕೆಯ ಜೊತೆಗೆ ತಂದಿದ್ದ ಬ್ಯಾಗುಗಳನ್ನು ರೈಲಿನಲ್ಲಿ ಇರಿಸಿ, ಇನ್ನೇನು ರೈಲಿನಿಂದ ಇಳಿಯಲು ಸಜ್ಜಾಗಿದ್ದರು. ಅಷ್ಟರಲ್ಲಾಗಲೇ ಒಂದು ಕಾಲನ್ನು ರೈಲಿನಿಂದ ಹೊರಗೆ ಇರಿಸಿದ್ದರು. ಇದ್ದಕ್ಕಿದ್ದಂತೆ ರೈಲು ಚಲಿಸಲು ಆರಂಭಿಸಿದೆ. ವೃದ್ಧರಾದ ಕುತಿ ಕುಂದನ್ ಗೆ ತಕ್ಷಣ ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ರೈಲಿನ ಹ್ಯಾಂಡಲ್ ನ್ನು ಬಲವಾಗಿ ಹಿಡಿದು ಕೊಂಡರು. ಚಲಿಸುತ್ತಿರುವ ರೈಲಿನ ಜೊತೆಗೆ ಎಳೆದೊಯ್ಯಲ್ಪಡುತ್ತಿದ್ದರು.‌ ಇನ್ನೇನು ಸಂಪೂರ್ಣ ಆಯತಪ್ಪಿ ಬಿದ್ದೇಬಿಟ್ಟರು ಎನ್ನುವಷ್ಟರಲ್ಲಿ, ಒಂದು ವಿಶೇಷ ಕಾರ್ಯಾಚರಣೆ ನಡೆದಿದೆ.

ಚಲಿಸುತ್ತಿರುವ ರೈಲಿನಲ್ಲಿ ಎಳೆದೊಯ್ಯಲ್ಪಡುತ್ತಿದ್ದ ಈ ವೃದ್ದರನ್ನು ಗಮನಿಸಿದ ರೈಲ್ವೆ ಸಿಬ್ಬಂದಿ ಸಜೀರ್ ತಕ್ಷಣ ಅಲ್ಲಿಗೆ ಬಂದಿದ್ದಾರೆ.  ಬೀಳುವ ಹಂತದಲ್ಲಿದ್ದ ವೃದ್ಧರನ್ನು ಎಳೆದು ಅಲ್ಲಿಂದ ಪಾರು ಮಾಡಿದ್ದಾರೆ. ಕಣ್ಣುಮುಚ್ಚಿ ತೆರೆಯುವಷ್ಟರಲ್ಲಿ ಎಲ್ಲವೂ ನಡೆದು ಹೋಗಿದೆ. ರಕ್ಷಣಾ ಕಾರ್ಯಾಚರಣೆ ಒಂದು ಸೆಕೆಂಡು ತಡವಾಗಿದ್ದರೂ, ಕುತಿ ಕುಂದನ್ ಅವರ ಜೀವಕ್ಕೆ ಅಪಾಯ ಬರುತ್ತಿತ್ತು. ರಕ್ಷಣಾ ಕಾರ್ಯಾಚರಣೆ ಬಳಿಕ ಅವರಿಗೆ ಪ್ರಥಮ ಚಿಕಿತ್ಸೆಯನ್ನು ನೀಡಿ, ಕುಟುಂಬಸ್ಥರೊಂದಿಗೆ ಕಳುಹಿಸಿಕೊಡಲಾಗಿದೆ. ಅಲ್ಲಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿರುವ ಕುತಿ ಕುಂದನ್ ಸದ್ಯ ಚೇತರಿಸಿಕೊಂಡಿದ್ದಾರೆ.

ಸಜೀರ್ ಅವರ ಈ ಸಕಾಲಿಕ ನೆರವಿನಿಂದ ಒಂದು ಅಮೂಲ್ಯ ಜೀವ ಉಳಿದಿದೆ. ಅವರ ಸಮಯೋಚಿತ ಸಹಾಯಕ್ಕೆ ಕುಟುಂಬಸ್ಥರು ಅಭಿನಂದಿಸಿದ್ದಾರೆ.‌ ಸದ್ಯ ಈ ರಕ್ಷಣಾ ಕಾರ್ಯಾಚರಣೆ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದೆ