ಕೇರಳದಲ್ಲಿ ಸಿಲ್ವರ್ ಲೈನ್ ಯೋಜನೆ: 3.52 ತಾಸಿನಲ್ಲಿ 529.45 ಕಿ. ಮೀ ಪ್ರಯಾಣ!

Aug 9, 2021, 5:05 PM IST

ತಿರುವನಂತಪುರಂ(ಆ.09): ಕೇರಳ ಸರ್ಕಾರದ ಕನಸಿನ ಯೋಜನೆ ಸಿಲ್ವರ್ ಲೈನ್‌ಗಾಗಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲು ಅನುಮೋದನೆ ನೀಡಲಾಗಿದೆ. ರಾಜ್ಯದ ಉತ್ತರ ಮತ್ತು ದಕ್ಷಿಣ ಭಾಗದ ನಡುವಿನ ಪ್ರಯಾಣದ ಅವಧಿ ಕಡಿಮೆಗೊಳಿಸುವುದೇ ಈ ಸೆಮಿ ಹೈಸ್ಪೀಡ್ ರೈಲ್ವೆ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಗೆ ರೂ. 63,941 ಕೋಟಿ ವೆಚ್ಚ ಅಂದಾಜಿಸಲಾಗಿದ್ದು, ಆಡಳಿತಾಡ LDF ಸರ್ಕಾರದ ಅತಿದೊಡ್ಡ ಮೂಲಸೌಕರ್ಯ ವ್ಯವಸ್ಥೆ ಎನ್ನಲಾಗಿದೆ. ಇನ್ನು ಈ ಯೋಜನೆಯಿಂದಾಗಿ 9 ಸಾವಿರ ಕಟ್ಟಡಗಳನ್ನು ನೆಲಸಮಗೊಳಿಸಿ, ಸುಮಾರು 10 ಸಾವಿರ ಕುಟುಂಬಗಳನ್ನು ಸ್ಥಳಾಂತರಿಸಬೇಕಾಗುತ್ತದೆ, ಹೀಗಾಗಿ ಈ ಯೋಜನೆಗೆ ಭಾರೀ ವಿರೋಧವೂ ವ್ಯಕ್ತವಾಗಿದೆ.

3 ನೇ ಅಲೆ ಭೀತಿ: ಟೆಸ್ಟ್ ತಪ್ಪಿಸಿಕೊಳ್ಳಲು ರೈಲ್ವೇ ನಿಲ್ದಾಣದ ಗೋಡೆ ಹಾರಿ ಪ್ರಯಾಣಿಕರು ಎಸ್ಕೇಪ್!

ಈ ಯೋಜನೆಯಡಿ ರಾಜ್ಯದ ದಕ್ಷಿಣ ತುದಿಯನ್ನು ಮತ್ತು ರಾಜ್ಯದ ರಾಜಧಾನಿ ತಿರುವನಂತಪುರವನ್ನು ಕಾಸರಗೋಡಿನ ಉತ್ತರ ತುದಿಗೆ ಸಂಪರ್ಕಿಸಲು ರಾಜ್ಯದ ಮೂಲಕ ಅರೆ ಹೈಸ್ಪೀಡ್ ರೈಲ್ವೇ ಕಾರಿಡಾರ್ ನಿರ್ಮಾಣ ಮಾಡಲಾಗುತ್ತದೆ. 529.45 ಕಿಮೀ ಉದ್ದದ ಮಾರ್ಗ ನಿರ್ಮಿಸುವ ಯೋಜನೆಯೂ ಇದೆ. ಇದರಡಿ 11 ಜಿಲ್ಲೆಗಳನ್ನು, 11 ನಿಲ್ದಾಣಗಳ ಮೂಲಕ ಜೋಡಿಲಾಗುತ್ತದೆ. ಯೋಜನೆ ಪೂರ್ಣಗೊಂಡ ಬಳಿಕ ಕಾಸರಗೋಡಿನಿಂದ ತಿರುವನಂತಪುರಂಗೆ ಪ್ರತಿ ಗಂಟೆಗೆ 200 ಕಿಮೀ ದೂರ ಪ್ರಯಾಣಿಸುವ ರೈಲುಗಳ ಮೂಲಕ ನಾಲ್ಕು ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಪ್ರಯಾಣಿಸಬಹುದು. 

ಪ್ರಸ್ತುತ, ಭಾರತೀಯ ರೈಲ್ವೆ ನೆಟ್ವರ್ಕ್‌ನಲ್ಲಿ ಇಷ್ಟು ದೂರ ಪ್ರಯಾಣಿಸಲು ಸುಮಾರು 12 ತಾಸು ಬೇಕಾಗುತ್ತದೆ. ಈ ಯೋಜನೆಯನ್ನು ಪೂರ್ಣಗೊಳಿಸಲು ಕೇರಳ ರೈಲು ಅಭಿವೃದ್ಧಿ ನಿಗಮ ನಿಯಮಿತ (KRDCL)ಗೆ 2025 ರವರೆಗೆ ಗಡುವು ವಿಧಿಸಲಾಗಿದೆ. KRDCL/ K-Rail ಕೇರಳ ಸರ್ಕಾರ ಮತ್ತು ಕೇಂದ್ರ ರೈಲ್ವೇ ಸಚಿವಾಲಯ ಜಂಟಿಯಾಗಿ ಈ ಯೋಜನೆ ಸಾಕಾರಗೊಳಿಸಲಿವೆ.