ಇತಿಹಾಸ ಪ್ರಸಿದ್ಧ ಹಾಸನಾಂಬ ದೇಗುಲ ಓಪನ್: ಭಕ್ತರಿಗೆ 11 ದಿನ ದೇವಿ ದರ್ಶನ ಭಾಗ್ಯ

Oct 17, 2019, 5:21 PM IST

ಹಾಸನ (ಅ.17): ವರ್ಷಕ್ಕೊಮ್ಮೆ ಬಾಗಿಲು ತೆಗೆಯುವ ಇಲ್ಲಿನ ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಾಲಯದ ಬಾಗಿಲನ್ನು ಇಂದು (ಗುರುವಾರ) ತೆಗೆಯಲಾಗಿದೆ.

ಅಶ್ವೀಜ ಮಾಸದ ಮೊದಲ ಗುರುವಾರವಾದ ಇಂದು ಮಧ್ಯಾಹ್ನ 12.35ಕ್ಕೆ ಇಂದು ದೇವಿಯ ಗರ್ಭಗುಡಿ ಬಾಗಿಲು ತೆರೆಯಲಾಗಿದ್ದು, ದೇವಿ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.

ಸಪ್ತಮಾತೆಯರು ಮನ ಸೋತ ಹಾಸನಾಂಬೆ ಕ್ಷೇತ್ರ ಮಹಿಮೆ!

ಇಂದು ಸಾಂಪ್ರದಾಯಕ ಪೂಜೆ ಬಳಿಕ ಅರಸು ವಂಶದ ನಟರಾಜು ಅವರು ಬನ್ನಿ ಕಡಿದು ಹಾಸನಾಂಬ ದೇಗುಲದ ದ್ವಾರ ತೆರೆದರು. ಇಂದಿನಿಂದ  13 ದಿನಗಳ ಕಾಲ  ಹಾಸನಾಂಬ ದೇವಾಲಯದ ಬಾಗಿಲು ದಿನ ತೆರೆದಿರಲಿದ್ದು,  11 ದಿನಗಳು ಮಾತ್ರ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶವಿರುತ್ತದೆ. 

ಇಂದು ಹಾಗೂ ಕೊನೆಯ ದಿನ ಮಾತ್ರ ಭಕ್ತರಿಗೆ ದೇವಿಯ ದರ್ಶನ ಇರುವುದಿಲ್ಲ. ಅಕ್ಟೋಬರ್ 18ರಿಂದ ಪ್ರತಿದಿನ ದೇವಿಗೆ ಪೂಜೆ, ನೈವೇದ್ಯ ಸಮಯದಾದ ಮಧ್ಯಾಹ್ನ 1 ರಿಂದ 3ಗಂಟೆಯ ತನಕ ಭಕ್ತರು ದರ್ಶನ ಪಡೆಯುವಂತಿಲ್ಲ. ಉಳಿದ ಅವಧಿಯಲ್ಲಿ ರಾತ್ರಿ 11 ಗಂಟೆ ತನಕ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ.

ದೇವಿಯ ದರ್ಶನಕ್ಕಾಗಿ ಹಾಸನ ಮಾತ್ರವಲ್ಲದೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಭಕ್ತಸಾಗರ ಹರಿದು ಬರಲಿದೆ. ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆದು ದೇವಿ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿಕೊಡಲಾಗುತ್ತದೆ.

ಬಲಿಪಾಡ್ಯಮಿ ಹಬ್ಬದ ಮಾರನೇ ದಿನ ಬಾಗಿಲು ಮುಚ್ಚಲಾಗುತ್ತದೆ. ವರ್ಷದ ಉಳಿದ ಯಾವುದೇ ಸಮಯದಲ್ಲಿ ದೇವಿಯ ದರ್ಶನ ಪಡೆಯಲು ಸಾಧ್ಯವಿಲ್ಲ.