vuukle one pixel image

ದರ್ಶನ್ ಶತ್ರು ಸಂಹಾರ ಪೂಜೆ ಮಾಡಿದ ಕೇರಳದ ದೇಗುಲ ರಹಸ್ಯ!

Anusha Kb  | Updated: Mar 24, 2025, 1:39 PM IST

ದರ್ಶನ್ ಜೈಲಿನಿಂದ ಬಿಡುಗಡೆಯಾದ ಮೇಲೆ ಅನೇಕ ದೇಗುಲಗಳಿಗೆ ಭೇಟಿ ಕೊಟ್ಟಿದ್ರು. ಆದ್ರೆ ಕೇರಳದ ಮಾಡಾಯಿಕಾವು ಭಗವತಿ ದೇಗುಲಕ್ಕೆ ಹೋಗಿರೋದು ಮಾತ್ರ ದೊಡ್ಡ ಸಂಚಲನ ಮೂಡಿಸಿದೆ. ಯಾಕಂದ್ರೆ ಈ ದೇಗುಲದ ಹಿನ್ನೆಲೆಯೇ ಅಂಥದ್ದು. ಇಲ್ಲಿ ವಾಮಾಚಾರ, ಶತ್ರು ಸಂಹಾರ ಸೇರಿದಂತೆ ಅನೇಕ ಕ್ಷುದ್ರ ಪೂಜೆಗಳನ್ನ ಮಾಡಲಾಗುತ್ತೆ. ದೊಡ್ಡ ದೊಡ್ಡ ರಾಜಕಾರಣಿಗಳು ಇಲ್ಲಿ ಶತ್ರುಸಂಹಾರ ಪೂಜೆ ಮಾಡಿಸಿದ್ದಾರೆ. ಹಾಗಾದ್ರೆ ಈ ದೇಗುದಲ್ಲಿ ದರ್ಶನ್ ಮಾಡಿಸಿದ್ದು ಅದೆಂಥಾ ಪೂಜೆ..? ಏನದರ ಹಿಂದಿನ ಮರ್ಮ..? ಆ ಕುರಿತ ರೋಚಕ ಸ್ಟೋರಿ ಇಲ್ಲಿದೆ ನೋಡಿ.

ಮಾಡಾಯಿಕಾವು ಶ್ರೀಭಗವತಿ ಸನ್ನಿಧಾನದಲ್ಲಿ ದಾಸನ ಪೂಜೆ..!
ಯೆಸ್ ಕೇರಳದ ಕಣ್ಣೂರಿನ ಸುಪ್ರಸಿದ್ದ ಮಾಡಾಯಿಕಾವು ಭಗವತಿ ದೇಗುಲಕ್ಕೆ  ಭೇಟಿ ಕೊಟ್ಟಿದ್ದಾರೆ. ಪತ್ನಿ ವಿಜಯಲಕ್ಷ್ಮೀ, ಪುತ್ರ ವಿನೀಶ್, ಮತ್ತು ನಟ ಧನ್​​ವೀರ್ ಜೊತೆಗೆ ಹೋಗಿ ಭಗವತಿ ಸನ್ನಿಧಾನದಲ್ಲಿ ಪೂಜೆ ಮಾಡಿಸಿದ್ದಾರೆ. ಅಸಲಿಗೆ ದರ್ಶನ್ ಜೈಲಿಂದ ಮೈಸೂರು ಚಾಮುಂಡೇಶ್ವರಿ ದೇಗುಲ ಸೇರಿದಂತೆ ಅನೇಕ ದೇವಸ್ಥಾನಗಳಿಗೆ ಭೇಟಿ ಕೊಟ್ಟಿದ್ದಾರೆ. 

ದರ್ಶನ್ ಪತ್ನಿ ವಿಜಯಲಕ್ಷ್ಮೀ ಅಂತೂ ಕೊಲ್ಲೂರಿನಿಂದು ಹಿಡಿದು ಅಸ್ಸಾಮಿನ ಕಾಮಕ್ಯ ದೇವಿವರೆಗೂ ಹತ್ತಾರು ದೇಗುಲಗಳಿಗೆ ಹೋಗಿ ಪೂಜೆ ಸಲ್ಲಿಸಿ ಬಂದಿದ್ದಾರೆ. ದರ್ಶನ್ ತಾಯಿ ಮೀನಾ ತೂಗುದೀಪ ಗೌಡಗೆರೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಮಾಡಿಸಿದ್ದಾರೆ. ಆದ್ರೆ ಈ ಎಲ್ಲದ್ದಕ್ಕಿಂತ ಹೆಚ್ಚಾಗಿ ಈ ಸಾರಿ ದರ್ಶನ್ ಹೋಗಿರೋ ದೇಗುಲದ ವಿಚಾರ ದೊಡ್ಡ ಸುದ್ದಿಯಾಗಿದೆ. ಯಾಕಂದ್ರೆ ಈ ದೇಗುಲವೇ ಬೇರೆ ತರಹದ್ದು.

ಶತ್ರುಗಳ ಸಂಹರಿಸೋ ಮಾಡಾಯಿಕಾವು  ಶ್ರೀಭಗವತಿ ದೇವಿ..!
ದರ್ಶನ್ ಭೇಟಿ ನೀಡಿರುವುದು ಕೇರಳದ ಕಣ್ಣೂರಿನ ಪ್ರಸಿದ್ಧ ಮಾಡಾಯಿಕಾವು ಶ್ರೀಭಗವತೀ ದೇವಾಲಯ ಹಲವು  ಭಿನ್ನ ಆಚರಣೆಗಳನ್ನು ಸಹ ಹೊಂದಿದೆ. ಕೇರಳದಲ್ಲಿ ಹಲವು ಭದ್ರಕಾಳಿ ದೇವಾಲಯಗಳಿವೆ ಆದರೆ ದರ್ಶನ್ ಭೇಟಿ ನೀಡಿರುವ ಮಾಡಾಯಿಕಾವು ಶ್ರೀಭಗವತೀ ದೇವಾಲಯ ಬಹಳಾನೇ ಫೇಮಸ್. ಇಲ್ಲಿ ಪಾರ್ವತಿ ದೇವಿ  ಭದ್ರಕಾಳಿ ಅವತಾರದಲ್ಲಿ ಸಾಕ್ಷಾತ್ ಸಂಚಾರ ಮಾಡ್ತಾಳೆ ಅನ್ನೋ ಪ್ರತೀತಿ ಇದೆ. ಹೀಗಾಗಿ ರಾತ್ರಿ ಎಂಟರ ಬಳಿಕ ದೇವಾಲಯದಲ್ಲಿ ಯಾವ ಭಕ್ತರೂ ಇರುವಂತಿಲ್ಲ ಅನ್ನೋ ನಿಯಮ ಇದೆ. 

ಈ ದೇವಾಲಯದಲ್ಲಿ ಹಲವು ವಿಶೇಷ ಪೂಜೆಗಳನ್ನ  ಮಾಡಲಾಗುತ್ತದೆ. ಕಲಶಂ ಎನ್ನುವ ಪೂಜೆ ನಡೆಸುವಾಗ ಕೋಳಿಗಳನ್ನ ಬಲಿ ಕೊಡಲಾಗುತ್ತೆ.  ಭಕ್ತರಿಗೆ ಪ್ರಸಾದವಾಗಿ ಕೋಳಿ ಮಾಂಸವನ್ನು ನೀಡಲಾಗುತ್ತದೆ.  ಇನ್ನೂ  ಕೆಲವು ವಿಶೇಷ ಪೂಜೆಗಳಿಗೆ ಮದ್ಯವನ್ನ ಸಹ ದೇವರಿಗೆ ಅರ್ಪಿಸಲಾಗುತ್ತೆ.  ಬಹಳ ಪುರಾತನ ದೇವಾಲಯ ಇದಾಗಿದ್ದು, ಚರಕಲ ರಾಜರು ಯುದ್ಧಕ್ಕೆ ಹೋಗುವ ಮುಂಚೆ ಇಲ್ಲಿ ಶತ್ರುಸಂಹಾರ ಪೂಜೆ ಮಾಡ್ತಾ ಇದ್ರು  ಅನ್ನೋ ಪ್ರತೀತಿ ಇದೆ. ಅಂತೆಯೇ ಈ ದೇವಿ ಶತ್ರುಗಳನ್ನು ಸಂಹರಿಸುತ್ತಾಳೆ ಎಂಬ ನಂಬಿಕೆ ನೂರಾರು ವರ್ಷಗಳಿಂದಲೂ ಇದೆ.

ಇನ್ನು ಈ ದೇವಾಲಯದಲ್ಲಿ ಹಲವು ವಿಧದ ಕ್ಷುದ್ರ  ಪೂಜೆಗಳನ್ನ ಮಾಡಲಾಗುತ್ತೆ. ತ್ರಿಕಾಲ ಪುಷ್ಪಾಂಜಲಿ, ರಕ್ತ ಪುಷ್ಪಾಂಜಲಿ ಸೇರಿದಂತೆ ವಿಚಿತ್ರ ಪೂಜೆಗಳು ನಡೆಯುತ್ವೆ. ಆದರೆ ಶತ್ರು ಸಂಹಾರ ಪೂಜೆಯೇ ಇಲ್ಲಿ ಬಹಳ ಫೇಮಸ್.. ಮಧ್ಯಾಹ್ನ 12 ಗಂಟೆಯಿಂದ ಆರು ಗಂಟೆ ವರೆಗೆ ಈ ಪೂಜೆಗಳನ್ನ ಮಾಡಲಾಗುತ್ತದೆ. ಈ ಪೂಜೆಗಳನ್ನು ಗೌಪ್ಯವಾಗಿ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಕೇವಲ ಪೂಜೆ ಮಾಡುವವರಿಗೆ ಮಾತ್ರವೇ ಪ್ರವೇಶಕ್ಕೆ ಅವಕಾಶ ಇರುತ್ತೆ. ದೇಶದ ಹಲವು ಘಟಾನುಘಟಿ ರಾಜಕಾರಣಿಗಳು ಇಲ್ಲಿ ಶತ್ರುಸಂಹಾರ ಪೂಜೆ ಮಾಡಿಸಿದ್ದಾರೆ.

ಶತ್ರುಸಂಹಾರ.. ವಾಮಾಚಾರ.. ಏನಿದು  ದಾಸನ ವ್ಯವಹಾರ..?
ಹೌದು ಇಂಥದ್ದೊಂದು ದೇಗುಲಕ್ಕೆ ದರ್ಶನ್ ಯಾಕೆ ಹೋದರು ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಇಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ ಮಾಡಿಸಿದ್ರಾ.,.? ವಾಮಾಚಾರದ ಮೊರೆ ಹೋದ್ರಾ ಅನ್ನೋ ಚರ್ಚೆ ಶುರುವಾಗಿದೆ. ಇನ್ನೊಂದು ಅಚ್ಚರಿಯ ಸಂಗತಿ ಅಂದ್ರೆ ದರ್ಶನ್ ಜೊತೆಗೆ ಪ್ರಜ್ವಲ್ ರೈ ಅನ್ನೋ ಮತ್ತೊಬ್ಬ ಮಂಗಳೂರು ಮೂಲದ ಕೊಲೆ ಆರೋಪಿ ಕಾಣಿಸಿಕೊಂಡಿದ್ದಾನೆ. ಅಸಲಿಗೆ ಈತನೇ ದರ್ಶನ್​ಗೆ ಈ ದೇಗುಲದ ಬಗ್ಗೆ ತಿಳಿಸಿ ದೇವಾಲಯಕ್ಕೆ ಕರೆತಂದಿದ್ದಾನೆ ಅನ್ನೋ ಸುದ್ದಿ ಇದೆ.

ಶನಿವಾರ.. ಅಷ್ಟಮಿ ತಿಥಿ.. ದರ್ಶನ್ ಕುಟುಂಬದ ಗೌಪ್ಯ ಪೂಜೆ..!
ಹೌದು ದರ್ಶನ್ ಮೇಲೆ ಬಂದಿರೋ ಆರೋಪಗಳು, ಬೆನ್ನು ಬಿದ್ದಿರೋ ಸಮಸ್ಯೆಗಳು ನಿವಾರಣೆ ಆಗಬೇಕು. ಜೊತೆಗೆ ದರ್ಶನ್ ಗೆ ಕಾಟ ಕೊಡ್ತಾ ಇರೋ ಶತ್ರುಗಳು ವಿನಾಶ ಆಗಬೇಕು ಅಂದ್ರೆ ಇಲ್ಲಿ ಪೂಜೆ ಮಾಡಿಸಿ ಅಂತ ಜ್ಯೋತಿಷಿಗಳು ಸಲಹೆ ಕೊಟ್ಟಿದ್ರಂತೆ. ಶನಿವಾರದ ದಿನ ಅಷ್ಟಮಿ ತಿಥಿ ಇದ್ದು ಅಂದೇ ಪೂಜೆ ಮಾಡಿಸಬೇಕು ಅಂತ ದರ್ಶನ್ ಕುಟುಂಬ ಇಲ್ಲಿಗೆ ಹೋಗಿದೆ ಎನ್ನಲಾಗ್ತಾ ಇದೆ.

ಅಲ್ಲಿಗೆ ದರ್ಶನ್ ಈಗಿರುವ ಸ್ಥಿತಿಯಲ್ಲಿ ಯಾರು ಏನೇ ಹೇಳಿದ್ರೂ ಮಾಡುವ ಸ್ಥಿತಿಗೆ ತಲುಪಿದ್ದಾರೆ. ತನ್ನ ಬೆಂಬಿದ್ದಿರೋ ಕೊಲೆ ಆರೋಪ, ಕಾನೂನು ಕುಣಿಕೆಯಿಂದ ಪಾರಾಗಬೇಕು ಅಂತ ಪ್ರಯತ್ನ ಪಡ್ತಾ ಇದ್ದಾರೆ. ಆದ್ರೆ ದರ್ಶನ್ ಬದಲಾಗಿಲ್ಲ ಅನ್ನೋದಕ್ಕೆ ಸಾಕ್ಷಿ ಅವರ ಜೊತೆಗಿದ್ದ ಕೊಲೆ ಆರೋಪಿ ಪ್ರಜ್ವಲ್ ರೈ.

ದರ್ಶನ್ ತನ್ನ ಸುತ್ತ ಅಪರಾಧ ಹಿನ್ನೆಲೆ ಉಳ್ಳವರನ್ನ ಇಟ್ಟುಕೊಂಡಿದ್ದರಿಂದಲೇ ಇವತ್ತಿನ ಸ್ಥಿತಿಗೆ ತಲುಪಿದ್ದಾರೆ. ಈಗಲೂ ಕೂಡ ಅವರ  ಸುತ್ತಲಿನ ಗುಂಪು ಬದಲಾಗಿಲ್ಲ. ಇನ್ನೂ ದುರಂತ ಅಂದ್ರೆ ನಿಜಕ್ಕೂ ತಮ್ಮ ಹಿತ ಬಯಸುವವರನ್ನ ದರ್ಶನ್ ದೂರ ಮಾಡಿಕೊಂಡು ಇನ್ನೊಂದು ಕಡೆಗೆ ಶತ್ರನಾಶ ಮಾಡಿಸೋದಕ್ಕೆ ಹೊರಟು ನಿಂತಿದ್ದಾರೆ.

ದರ್ಶನ್ ಜೈಲಿಂದ ಹೊರಬರ್ತಾನೇ ಒಂದು ಲಿಸ್ಟ್ ರೆಡಿ ಮಾಡಿಕೊಂಡಿದ್ದಾರಂತೆ. ತಾನು ಜೈಲಿಗೆ ಹೋದಾಗ ಯಾರು ಬೆಂಬಲಕ್ಕೆ ಬಂದ್ರು. ಯಾರು ದೂರ ಉಳಿದರು. ಯಾರು ತನ್ನ ಬಗ್ಗೆ ಮಾಧ್ಯಮಗಳಲ್ಲಿ ಕೆಟ್ಟದಾಗಿ ಮಾತನಾಡಿದ್ರು ಅನ್ನೋ ಲಿಸ್ಟ್ ರೆಡಿ ಮಾಡಿರೋ ದರ್ಶನ್ ಅವರನ್ನೆಲ್ಲಾ ದೂರ ಇಡೋದಕ್ಕೆ ನಿರ್ಧಾರ ಮಾಡಿದ್ದಾರೆ. ಅದರ ಪರಿಣಾಮವೇ ಮದರ್ ಇಂಡಿಯಾ ಸುಮಲತಾರನ್ನ ದೂರ ಇಟ್ಟಿರೋದು.

ದರ್ಶನ್​ದು ಸಿಡುಕು ಬುದ್ದಿ. ಸಣ್ಣ ವಿಚಾರಕ್ಕೂ ಕೋಪ ನೆತ್ತಿಗೇರುತ್ತೆ. ಹಿಂದೆ ಜೀವಕ್ಕೆ ಜೀವ ಕೊಡುವ ಗೆಳೆಯನಂತಿದ್ದ ಸುದೀಪ್​ನ ಇಂಥದ್ದೇ ಸಣ್ಣ ಕಾರಣಕ್ಕೆ ದರ್ಶನ್ ದೂರ ಮಾಡಿದ್ರು. ಸುದೀಪ್​ರ ಒಂದು ಸಂದರ್ಶನವನ್ನ ನೆಪ ಮಾಡಿಕೊಂಡು, ಇನ್ನುಮುಂದೆ ಸುದೀಪ್ ನನ್ನ ಗೆಳೆಯ ಅಲ್ಲ ಅಂತ ಸೋಷಿಯಲ್ ಮಿಡಿಯಾದಲ್ಲಿ ಘೋಷಿಸಿದ್ರು.

ಇದೀಗ ಸುಮಲತಾರನ್ನ ಮತ್ತು ಇಡೀ ಅಂಬಿ ಫ್ಯಾಮಿಲಿ ಸದಸ್ಯರನ್ನ ಅನ್​ಫಾಲೋ ಮಾಡಿದ್ದಾರೆ. ಸುಮಲತಾ ಅಷ್ಟೇ ಅಲ್ಲ ಜೈಲಿನಲ್ಲಿದ್ದಾಗ ತನ್ನನ್ನ ಬೆಂಬಲಿಸದ ನಟರ ಒಂದು ದೊಡ್ಡ ಲಿಸ್ಟ್ ಅನ್ನೇ ರೆಡಿ ಮಾಡಿದ್ದಾರೆ ದರ್ಶನ್. ಧನಂಜಯ್ ತಮ್ಮ ಮದುವೆಗೆ ಕರೆಯೋದಕ್ಕೆ ಪ್ರಯತ್ನ ಪಟ್ಟರೂ ಸಿಗಲಿಲ್ಲ. ಅಲ್ಲಿಗೆ ಡಾಲಿ ಮೇಲೂ ದರ್ಶನ್ ಹಗೆ ಶುರುವಾಗಿದೆ.

ದೊಡ್ಡದೊಂದು ಪಟ್ಟಿ ಮಾಡಿ ಅವರೆಲ್ಲರಿಂದ ದೂರ ಇರ್ತಿನಿ ಅಂತ ದರ್ಶನ್ ನಿರ್ಧಾರ ಮಾಡಿಯಾಗಿದೆ. ಅದ್ರೆ ಎಲ್ಲರನ್ನೂ ಕಳೆದುಕೊಂಡ್ರೆ ದಾಸನ ಜೊತೆಗೆ ಕೊನೆಗೆ ಉಳಿಯೋದಾದ್ರೂ ಯಾರು. ಈಗಾಗ್ಲೇ ಸುದೀಪ್, ಧ್ರುವ ಸೇರಿದಂತೆ ಅನೇಕ ನಟರ ಜೊತೆಗೆ ದರ್ಶನ್ ಸಂಬಂಧ ಹಳಸಿದೆ. ಈಗ ಮತ್ತಷ್ಟು ಜನರ ಜೊತೆ ಖುದ್ದು ದರ್ಶನ್ ಸಂಬಂಧ ಹಾಳು ಮಾಡಿಕೊಳ್ತಾ ಇದ್ದಾರೆ. ವಿನಾಕಾರಣ ಹಗೆ ಸಾಧಿಸ್ತಾ ಇದ್ದಾರೆ. ಜೊತೆಗೆ ಶತ್ರನಾಶ ಮಾಡಿಸ್ತಿನಿ ಅಂತ ದೇಗುಲಗಳನ್ನ ಅಲೀತಾ ಇದ್ದಾರೆ. ದಾಸನಿಗೆ ಬೇರ್ಯಾರೋ ಹೊರಗಿನ ಶತ್ರುಗಳಿಲ್ಲ.. ತನ್ನ ದುರ್ಗಣಗಳೇ ತನ್ನ ಶತ್ರು ಅನ್ನೋದು ಅರ್ಥವಾಗಿದ್ರೆ ಇಂಥಾ ಅನಾಹುತವೂ ನಡೀತಾ ಇರಲಿಲ್ಲ. ಜೊತೆಗೆ ಶತ್ರುವಿನಾಶ ಪೂಜೆಯೂ ಬೇಕಿರಲಿಲ್ಲ..