ಕುಣಿಯುವ ಪಾದ, ಮನಸು ಹಿಮಾಲಯ; ನೃತ್ಯಭ್ಯಾಸವೂ ಒಂದು ಬಗೆಯ ಧ್ಯಾನ!

By Kannadaprabha NewsFirst Published Aug 4, 2020, 9:01 AM IST
Highlights

ಒಬ್ಬ ಡ್ಯಾನ್ಸರ್‌ ತನ್ನ ಎಚ್ಚರ ಮತ್ತು ಧ್ಯಾನದ ಬಗೆಗೆ ಇಲ್ಲಿ ಹೇಳಿಕೊಂಡಿದ್ದಾರೆ. ಕಲೆಯಲ್ಲಿ ಧ್ಯಾನ ಮತ್ತು ಎಚ್ಚರದ ಒಳಹರಿವು ಇಲ್ಲವಾದರೆ ಅದು ಬರಿಯ ಕ್ರಿಯೆಯಾಗಷ್ಟೇ ಉಳಿಯುತ್ತದೆ. ನೃತ್ಯ, ಸಂಗೀತ, ಚಿತ್ರ ಯಾವುದೂ ಇದಕ್ಕೆ ಹೊರತಲ್ಲ. ಮೈಕಲ್‌ ಏಂಜಲೋ ಸತತ ಒಂದು ವರ್ಷ ಆ ಶಿಲೆಯೊಂದಿಗೆ ಧ್ಯಾನಸ್ಥನಾಗದಿದ್ದರೆ ಮೇರಿ ಮತ್ತು ಕ್ರಿಸ್ತನ ಆ ಅದ್ಭುತ ಕಲಾಕೃತಿ ಹೊಮ್ಮುತ್ತಿರಲಿಲ್ಲ. ಇಲ್ಲಿ ಕಲೆ ಮತ್ತು ಅಧ್ಯಾತ್ಮದ ಒಳ ಹರಿವಿನ ನರ್ತನವಿದೆ.

- ವಿದುಷಿ ಮಂಜುಳಾ ಸುಬ್ರಹ್ಮಣ್ಯ ಪುತ್ತೂರು

ಕಣ್ಣು ಮುಚ್ಚಿ ಕುಳಿತರೆ ಮಾತ್ರ ಅದು ಧ್ಯಾನಸ್ಥ ಸ್ಥಿತಿ ಅಂತ ನಾನಂದುಕೊಂಡಿಲ್ಲ. ನಾವು ನಮ್ಮ ಕೆಲಸ ಕಾರ್ಯಗಳಲ್ಲಿ ತನ್ಮಯರಾಗಿ ತಲ್ಲೀನರಾಗುವುದು ಒಂದು ಧ್ಯಾನಸ್ಥ ಸ್ಥಿತಿಯೆ. ಅದು ಹೇಗೆ ಅಂತ ಅನ್ನಿಸಿದರೂ ಕಲಾವಿದೆಯಾದ ನನಗದು ಹೌದು ಎನ್ನಿಸುವುದು ಸಹಜವೇ. ನಾನು ಆರಿಸಿಕೊಂಡ ನೃತ್ಯ ಅಂದರೆ ಕಲಾ ಬದುಕು ನನಗೆ ಧ್ಯಾನ ಮಾರ್ಗವನ್ನು ತೋರಿಸಿದೆ. ಏಕಾಗ್ರತೆ ಸಾಧಿಸಲು ಸಹಾಯಕವಾಗಿದೆ.

ಅಬ್ಬಾ, ಕರೀನಾಗೆ ಬಯ್ಯೋ ಧೈರ್ಯ ಮಾಡಿದ್ದರಂತೆ ಡ್ಯಾನ್ಸರ್ ಸರೋಜ್ ಖಾನ್

ನೃತ್ಯದ ಕುರಿತೇ ಹೇಳುವುದಾದರೆ ನಾವು ಅದನ್ನು ಮೈಗೂಡಿಸಿಕೊಳ್ಳಬೇಕು, ನಮ್ಮ ದೇಹ ಪ್ರಕೃತಿಗೆ ನೃತ್ಯವನ್ನು ಒಗ್ಗಿಸಿಕೊಳ್ಳಬೇಕಾದಲ್ಲಿ ಕಠಿಣ ಅಭ್ಯಾಸದ ಅಗತ್ಯ ಇದೆ. ಅದಕ್ಕಾಗಿ ಸಮಯವನ್ನು ವ್ಯಯಿಸಬೇಕಾದುದು ಕೂಡಾ ಅಗತ್ಯವೇ. ಪ್ರಾಥಮಿಕ ಹೆಜ್ಜೆಗಳನ್ನೇ ಅಭ್ಯಾಸ ಮಾಡುತ್ತೇವೆ ಎಂದಿಟ್ಟುಕೊಳ್ಳೋಣ. ಮೂಲಭೂತವಾದ ಹೆಜ್ಜೆಗಳನ್ನು ಮಾಡುವಾಗ ಬರಿಯ ಕೈ ಕಾಲಿನ ಚಲನೆ ಮಾತ್ರ ಆಗುತ್ತಿದೆ ಎಂದರೆ ಅದು ತಪ್ಪಾಗುತ್ತದೆ. ಕೈ, ಕಾಲು ಚಲನೆ ಅದು ತಾಳಲಯಕ್ಕನುಗುಣವಾಗಿ, ಜೊತೇಲಿ ಕಣ್ಣಿನ ನೋಟದ ಕಡೆಗೂ ನಮ್ಮ ಗಮನವಿರಬೇಕು. ದೇಹವೆಲ್ಲಾ ನರ್ತಿಸುತ್ತಿರಬೇಕಾದರೆ ಕಣ್ಣಿನಲ್ಲಿ ಯಾವುದೇ ಭಾವನೆ ಇಲ್ಲದೇ ಇರುವುದೂ ಸಹ್ಯವಲ್ಲ, ಕಿವಿಯಂತೂ ತೆರೆದಿರಲೇಬೇಕು, ಹೆಜ್ಜೆಗಳ ಬೋಲ್ಸ್‌ (ಸೊಲ್ಕಟ್ಟು) ಕೇಳಿಸಿಕೊಳ್ಳಬೇಕಾದುದು ನೃತ್ಯದ ಒಂದ ಭಾಗ . ಇದೆಲ್ಲವು ಕ್ರೀಯಾಶೀಲವಾಗಿ ಕೆಲಸಮಾಡಬೇಕೆಂದಿದ್ದಾಗ ಮನಸ್ಸು ಕೇಂದ್ರೀಕೃತವಾಗಿರಲೇ ಬೇಕಲ್ಲವೇ. ಹೀಗೆ ತಾದಾತ್ಮ್ಯದಿಂದ ಸಂಪೂರ್ಣವಾಗಿ ನೃತ್ಯದಲ್ಲಿ ತೊಡಗಿಸಿಕೊಂಡೆವು ಅಂದಾಗ ನಮಗೇ ಬೇರೆ ಯಾವುದೇ ಇಹದ ಜಂಜಡಗಳು ಅರಿವಿಗೆ ಬಾರದು. ಕುಳಿತು ಮಾಡುವ ಧ್ಯಾನವನ್ನು ನೃತ್ಯದ ಮೂಲಕ, ಅಭ್ಯಾಸದ ಮೂಲಕ ತಮ್ಮದಾಗಿಸಿಕೊಳ್ಳುವಿಕೆಯಿದು. ನೃತ್ಯದ ಆ ಸುಂದರ ಹಸ್ತಗಳು ಚಿತ್ರಿಸುವುದು ಮನಸ್ಸಿನ ಚಿತ್ರಗಳನ್ನೇ.

ಯತೋ ಹಸ್ತಃ ಸ್ತತೋ ದೃಷ್ಟಿಃ

ಯತೀ ದೃಷ್ಟಿಃ ಸ್ತತೋ ಮನಃ

ಯತೋಮನಃ ಸ್ತತೋ ಭಾವಃ

ಯತೋ ಭಾವಃ ಸ್ತತೋರಸಃ.

ಎಲ್ಲಿ ಹಸ್ತ ವಿರುತ್ತದೋ ಅಲ್ಲಿ ದೃಷ್ಟಿ, ಎಲ್ಲಿ ದೃಷ್ಟಿಇರುವುದೋ ಅಲ್ಲಿ ಮನಸ್ಸು, ಎಲ್ಲಿ ಮನಸ್ಸಿರುವುದೋ ಅಲ್ಲಿ ಭಾವ, ಎಲ್ಲಿ ಭಾವವಿರುವುದೋ ಅಲ್ಲಿ ರಸ ಉತ್ಪತ್ತಿಯಾಗುವುದು. ಹೀಗೆ ಸಂಪೂರ್ಣವಾಗಿ ನಾವು ನೃತ್ಯ ಅಭ್ಯಾಸ ಎಂದರೆ ತಮ್ಮನ್ನು ತಾವೇ ಅರ್ಪಿಸಿಕೊಳ್ಳುವುದು, ಒಂದು ಬಗೆಯ ಧ್ಯಾನದಲ್ಲಿ ಲೀನವಾಗುವುದು.

ಗೆಳತಿ ನೀನು ಕೇಳಲೇ ಬೇಕು 'ಏನೀ ಅದ್ಭುತವೇ'! ಚಿತ್ರರಂಗದ ಕಲಾವಿದೆ ಮಾನಸಿ ಸುಧೀರ್!

ಕಲಾವಿದರಿಗೆ ಮುಖ್ಯವಾಗಿ ಪ್ರದರ್ಶನ ನೀಡುವ ಕಲಾಕಾರರಿಗೆ ಜನರ ಮಧ್ಯೇ ಇರಬೇಕಾಗುವುದು ಅನಿವಾರ್ಯ ಹಾಗೂ ಅಗತ್ಯ. ಇಂತಹ ಸಂದರ್ಭದಲ್ಲಿ ಮನಸ್ಸಿನ ಏಕಾಗ್ರತೆಗೆ ತೊಂದರೆಯಾಗುವ ಘಟನೆಗಳಾಗುತ್ತವೆ. ಈ ಸಮಯದಲ್ಲಿ ಮನಸ್ಸನ್ನು ಏಕತ್ರಗೊಳಿಸುವುದು ಸವಾಲು. ಆದರೆ ನಮ್ಮ ಮನಸ್ಸಿಗೆ ಅದನ್ನೂ ಸಾಧಿಸುವ ಅದ್ಭುತ ಶಕ್ತಿ ಇದೆ. ಸಂತೆಯ ಗದ್ದಲದಲ್ಲೂ ಧ್ಯಾನಿಯಾಗುವ ಅಪೂರ್ವ ಸ್ಥಿತಿಯದು. ಇದಕ್ಕೆ ನಾವು ನೃತ್ಯದಲ್ಲಿ ಒಂದು ತಂತ್ರ ಮಾಡುತ್ತೇವೆ. ಪ್ರದರ್ಶನದ ಮೊದಲಿನ ಸುದೀರ್ಘ ಮೌನ ನಮಗೆ ಅಂಥದ್ದೊಂದು ಶಕ್ತಿಯನ್ನು ನೀಡುತ್ತದೆ. ಆ ಹೊತ್ತಿಗೆ ತೀರಾ ಅಗತ್ಯದ ಮಾತುಗಳನ್ನು ಹೊರತುಪಡಿಸಿದರೆ ನಾವು ಬಹುತೇಕ ಮೌನವಾಗಿರುತ್ತೇವೆ. ನಮ್ಮ ಗಮನ ಉಸಿರಾಟದ ಕಡೆಗಿರುತ್ತದೆ. ಸುಮ್ಮನೇ ಕುಳಿತು ನಿಧಾನ ಉಸಿರಾಟ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತೇವೆ. ಸರಳವಾದ ವ್ಯಾಯಾಮಗಳನ್ನು ಮಾಡಿಕೊಂಡು ದೇಹ, ಮನಸ್ಸನ್ನು ತಹಬಂದಿಗೆ ತರುತ್ತೇವೆ. ಇಂಥದ್ದೊಂದು ಸಿದ್ಧತೆಯ ಜೊತೆಗೆ ರಂಗದ ಮೇಲೆ ಬಂದರೆ ಆಮೇಲಿನದು ನಾವು, ನಮ್ಮ ನೃತ್ಯ, ಅದರೊಳಗೇ ಧ್ಯಾನಸ್ಥರಾಗುತ್ತಾ, ಎದುರು ಕೂತ ಪ್ರೇಕ್ಷಕರನ್ನೂ ಆ ಧ್ಯಾನದೊಳಗೆ ಸೇರಿಸುತ್ತಾ, ಅಲ್ಲೊಂದು ಕಲಾಧ್ಯಾನವನ್ನು ನಿರ್ಮಾಣ ಮಾಡುವ ಪ್ರಯತ್ನ. ಎಲ್ಲಾ ಹೊತ್ತಿಗೂ ಇಂಥಾ ಸ್ಥಿತಿ ನಿರ್ಮಾಣವಾಗುತ್ತೆ ಎನ್ನಲಾಗದು. ಆದರೆ ಒಂದು ಹಂತದಲ್ಲಿ ನಮ್ಮರಿವಿಗೇ ಬರದಂತೆ ನಾವು ನರ್ತಿಸುತ್ತಾ ಮೈ ಮರೆಯುವಾಗ, ಪ್ರೇಕ್ಷಕ ಅದನ್ನು ನೋಡುತ್ತಾ ಮೈ ಮರೆಯುವಾಗ ಅಲ್ಲೊಂದು ದೈವಿಕ, ಆಧ್ಯಾತ್ಮಿಕ ಮಿಂಚು ಹೊಳೆಯುವುದು!

*

ಕಲಾವಿದರು ಒಂದು ಪ್ರದರ್ಶನಕ್ಕೆ ತಯಾರುಗೊಳ್ಳುವುದು ಇದು ಒಂದು ರೀತಿಯ ಧ್ಯಾನವೇ ಅಲ್ಲದೆ ಮತ್ತೇನು. ರಂಗದ ಮೇಲೆ ಇರುವಷ್ಟುಹೊತ್ತು ನಮ್ಮೆಲ್ಲಾ ಅಂಗಾಗಗಳು ಎಚ್ಚರವಿರುವಂತೆ ನೋಡಿಕೊಳ್ಳಬೇಕು, ಅದು ಯಾವುದೇ ತೆರನಾದ ಕಲೆಯನ್ನು ಮೈಗೂಡಿಸಿಕೊಂಡಿರುವ ಕಲಾವಿದನೇ ಆಗಿರಲಿ, ಆತನಿಗೆ ಈ ಎಚ್ಚರ ಇರಲೇ ಬೇಕು. ನೃತ್ಯ ಕಲಾವಿದರ ಕುರಿತು ಹೇಳುವುದಾದರೆ ರಂಗದ ಮೇಲೆ ಇರುವಷ್ಟುಹೊತ್ತು ದೇಹವೇ ಕಣ್ಣಾಗಿರಬೇಕು. ಬೆರಳ ತುದಿಯು ಸಹ ಪ್ರೇಕ್ಷಕರ ನೋಟದಿಂದ ತಪ್ಪಿಸಿಕೊಳ್ಳಲಾರದು ಎಂಬುದು ಗಮನದಲ್ಲಿಟ್ಟು ರಂಗದಲ್ಲಿರಬೇಕು. ಇದು ಎಲ್ಲಾ ಅಂಗಾಂಗಗಳ ಎಚ್ಚರ ಇರುವ ಧ್ಯಾನಸ್ಥ ಸ್ಥಿತಿ. ಇದು ದೇಹದ ಟೆಕ್ನಿಕ್‌ ಆದ ಭಾಷೆ ಆದರೆ ಮನಸ್ಸಿಗೆ ಸಂಬಂಧಿಸಿದ್ದು ಭಾವನಾತ್ಮಕ. ನೃತ್ಯದಲ್ಲಿ ಆಯ್ದುಕೊಳ್ಳುವ ಸಾಹಿತ್ಯ ಕೃತಿಗಳು ಅವಕ್ಕೆ ಸಹಾಯಕವಾಗುತ್ತವೆ. ಉದಾಹರಣೆಗೆ ಹೇಳುವುದಾದರೆ ಬಾರೋ ಕೃಷ್ಣಯ್ಯ ಎಂಬ ದಾಸರ ಪದ. ನೃತ್ಯ ಕಲಾವಿದರಿಗೆ ಅತ್ಯಂತ ಹತ್ತಿರ ಈ ಶ್ರೀಕೃಷ್ಣ. ಆತನ ಜೊತೆಗಿರುವಷ್ಟುಸಲುಗೆ, ಭಯ, ಭಕ್ತಿ ಬೇರೆ ಯಾವ ದೇವರೊಂದಿಗೂ ಕಷ್ಟಸಾಧ್ಯ. ಅಂತಹ ಕೃಷ್ಣನ ಕುರಿತಾದ ಹಾಡು ಈ ‘ಬಾರೋ ಕೃಷ್ಣಯ್ಯ..’ ಇಲ್ಲಿ ಪುಟ್ಟಬಾಲಕನನ್ನು ಕರೆಯುವ ವಾತ್ಸಲ್ಯಮಯಿ ತಾಯಿ, ಪ್ರೇಮದಿಂದ ಆಹ್ವಾನಿಸುವ ಗೋಪಿಕಾ ಸ್ತ್ರೀ. ಕೊನೆಯಲ್ಲಿ ಈ ಪ್ರೇಮವೇ ಭಕ್ತಿಯಾಗಿ, ಧ್ಯಾನವಾಗಿ ಭಗವಂತ ಮತ್ತು ಭಕ್ತನ ನಡುವಿನ ಅಂತರವೆಲ್ಲ ಮಾಯವಾಗಿ ಭಗವಂತನಲ್ಲಿ ಲೀನವಾಗುವ ಹಂತ. ಇಲ್ಲಿ ಎಲ್ಲಾ ಹಂತಹಂತವಾಗಿ ಭಾವನೆಗಳ ಬದಲಾವಣೆ ಆದರೂ ಕೊನೆಯಲ್ಲಿ ಅದು ಭಕ್ತಿಯಲ್ಲೇ ಲೀನವಾಗುವಲ್ಲಿಗೆ ಮುಕ್ತಾಯವಾಗುತ್ತದೆ.

ಹೀಗೆ ಪ್ರದರ್ಶನ ಕಲೆಯೊಂದು ಆಧ್ಯಾತ್ಮದೊಡನೆ ಬೆಸೆದುಕೊಳ್ಳುತ್ತದೆ. ತನ್ಮಯತೆ, ಶ್ರದ್ಧೆ ಆರಂಭಿಕವಾಗಿ ಸಾಧಿಸಬೇಕಾದ್ದು. ಬಳಿಕ ಏಕಾಗ್ರತೆಗಾಗಿ ಧ್ಯಾನ. ಆ ಧ್ಯಾನದೊಂದಿಗೆ ಕಲೆಯನ್ನು ನಾವು ನಮ್ಮೊಳಗೆ ಆವಾಹಿಸಿಕೊಳ್ಳುತ್ತಾ ಹೋಗುವುದು. ಕಲಾವಿದನ ಮೂಲಕ ಹೊರಹೊಮ್ಮುವ ಕಲೆ ಮತ್ತು ಕಲಾವಿದ ಒಂದೇ ಸ್ಥಿತಿಯ ಎರಡು ಗತಿಗಳಾಗಿ ಕಾಣುವುದು. ಕಲಾವಿದ ಧ್ಯಾನಸ್ಥನಾಗುತ್ತಾ ಹೋದಷ್ಟುಕಲೆಯೊಳಗಿನ ಹೊಳಹುಗಳು ಗೋಚರಿಸುತ್ತಾ ಹೋಗುತ್ತವೆ. ಇದೊಂದು ಕೊನೆ ಮೊದಲಿಲ್ಲದ ಪ್ರಕ್ರಿಯೆ, ಯಾವಾಗ ಕೊನೆಯಾಗುತ್ತದೋ ಆಗ ಕಲಾವಿದನೂ ಕೊನೆಯಾಗುತ್ತಾನಷ್ಟೇ.

click me!