ತವರಿಗೆ ವಾಪಸಾದ ಮಗಳು ಅಮ್ಮನ ಮನೆಗೆ ಭಾರವಾಗ್ತಾಳಾ? ಹೆಣ್ಣಿನ ಜೀವನ ಇಷ್ಟೆನಾ? ನೆಟ್ಟಿಗರ ಅಸಮಾಧಾನ

By Suvarna NewsFirst Published Apr 30, 2024, 1:25 PM IST
Highlights

ಸಹನಾ ಮನೆಬಿಡುವ ನಿರ್ಧಾರ ಮಾಡಿದ್ದಾಳೆ. ತವರಿಗೆ ವಾಪಸಾದ ಮಗಳು ಯಾರಿಗೂ ಬೇಡವಾಗ್ತಾಳಾ?  ಅಭಿಮಾನಿಗಳ ಬೇಸರ... 
 

ಕೊಟ್ಟ ಹೆಣ್ಣು ಕುಲದಿಂದ ಹೊರಕ್ಕೆ ಎನ್ನುವ ಗಾದೆ ಮಾತು ತಲೆತಲಾಂತರಗಳಿಂದಲೇ ಬಂದುಬಿಟ್ಟಿದೆ.ಮದುವೆ ಮಾಡಿಕೊಟ್ಟ ಮೇಲೆ ಆಕೆ ಗಂಡನ ಮನೆಗೆ ಸೇರಿದವಳು.  ಏನೇ ಆದರೂ ಆಕೆ ಅಲ್ಲಿಯೇ ಇರಬೇಕು. ಎಷ್ಟೇ ಕಷ್ಟವಾದರೂ, ಏನೇ ದೌರ್ಜನ್ಯ ಎಸಗಿದರೂ ಹೆಣ್ಣಾದವಳಿಗೆ ಗಂಡನೇ ಸರ್ವಸ್ವ, ಪತಿಯೇ ಪರದೈವ, ಅತ್ತೆ ಮನೆಯೇ ಎಲ್ಲವೂ ಎನ್ನುವ ಮಾತು ಹಿಂದಷ್ಟೇ ಅಲ್ಲ, ಈಗಲೂ ಹಲವೆಡೆ ಕೇಳಿ ಬರುವುದು ಇದೆ. ಪತಿಯ ಮನೆಯಲ್ಲಿ ದೌರ್ಜನ್ಯ ಸಹಿಸಲಾಗದೇ ಮನೆಬಿಟ್ಟು ತವರು ಮನೆ ಸೇರಿದ ಎಷ್ಟೋ ಹೆಣ್ಣುಮಕ್ಕಳಿಗೆ ಬುದ್ಧಿಮಾತು ಹೇಳಿ ಗಂಡನ ಮನೆಗೆ ವಾಪಸ್​ ಕಳಿಸಿರುವ ಉದಾಹರಣೆಗಳು ಸಾಕಷ್ಟಿವೆ. ಈ ಪೈಕಿ ಆ ಹೆಣ್ಣುಮಕ್ಕಳು ಮತ್ತೆ ಹೆತ್ತವರಿಗೆ ಸಿಗುವುದು ಶವವಾಗಿ ಎನ್ನುವುದೂ ಅಷ್ಟೇ ಸತ್ಯ. ಕೆಲವು ಸಂದರ್ಭಗಳಲ್ಲಿ ಚಿಕ್ಕಪುಟ್ಟ ಜನಗಳಮಾಡಿಕೊಂಡು ತವರು ಸೇರಿದಾಗ ಇಬ್ಬರನ್ನೂ ಕುಳ್ಳರಿಸಿ ಬುದ್ಧಿಮಾತು ಹೇಳಿ ದಂಪತಿಯನ್ನು ಒಂದು ಮಾಡುವುದು ಒಳ್ಳೆಯ ನಿರ್ಧಾರ. ಆದರೆ ದೌರ್ಜನ್ಯ ಸಹಿಸಿಕೊಳ್ಳಲಾಗದೇ ತವರಿಗೆ ಬರುವ ಹೆಣ್ಣುಮಗಳಿಗೂ ಹೀಗೆ ಮಾಡುವುದು ಎಂದರೆ? 

ಇದು ಒಂದೆಡೆಯಾದರೆ, ತವರು ಸೇರಿದ ಮನೆಮಗಳ ಮೇಲೆ ನೆರೆಹೊರೆಯವರ, ಸಂಬಂಧಿಕರ ಕಣ್ಣುಗಳು ಬೇರೆ, ತಲೆಗೊಂದರಂತೆ ಮಾತು! ಬೇರೆಯವರ ಮನೆಯ ವಿಷಯಗಳೆಂದರೆ ಹೆಚ್ಚಿನವರಿಗೆ ತುಂಬಾ ಪ್ರೀತಿ. ಇದೇ ಕಾರಣಕ್ಕೆ  ತವರು ಸೇರಿದ ಮನೆ ಮಗಳಿಗೆ ಇನ್ನಿಲ್ಲದ ಮಾನಸಿಕ ಚಿತ್ರಹಿಂಸೆ ಕೊಡುವಲ್ಲಿ ಇವರು ಹಿಂದೆ-ಮುಂದೆ ನೋಡಲ್ಲ. ಇದೇ ಕಾರಣಕ್ಕೆ ಹೆಣ್ಣಿಗೆ ಅತ್ತ ಗಂಡನ ಮನೆಯೂ ಇಲ್ಲದೇ, ಇತ್ತ ತವರಿನಲ್ಲಿಯೂ ಇರಲಾಗದೇ ಕೊನೆಗೆ ಆತ್ಮಹತ್ಯೆಗೆ ಶರಣಾಗುವುದೊಂದೇ ದಾರಿಯಾಗಿಬಿಡುತ್ತದೆ. ಇದು ಪ್ರತಿನಿತ್ಯ ನಮ್ಮ ನಡುವೆಯೇ ನಡೆಯುತ್ತಿರುವ ಘಟನೆಗಳೂ ಹೌದು. ಕೊನೆಗೆ ಶವದ ಮುಂದೆ ಕುಳಿತು ಅಳುವುದೊಂದೇ ಕುಟುಂಬದವರಿಗೆ ಇರುವ ದಾರಿ.

ಅಶೋಕಂಗೆ ಕರಿಮಣಿ ಮಾಲೀಕ ನೀನಲ್ಲ ಎನ್ನೋದಾ ಪ್ರಿಯಾ: ಹೀಗೆಲ್ಲಾ ಹೇಳ್ಬೇಡಿ ಪ್ಲೀಸ್​ ಅಂತಿದ್ದಾರೆ ಫ್ಯಾನ್ಸ್​

ಇದೀಗ ಪುಟ್ಟಕ್ಕನ ಮಗಳು ಸಹನಾ ವಿಷಯಕ್ಕೆ ಬರುವುದಾದರೆ, ಇಲ್ಲಿ ಸಹನಾ ಕೂಡ ತನ್ನನ್ನು ಸಾಯಿಸಲು ಹೊರಟ ಅತ್ತೆ, ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಬಂದಿರುವ ಗಂಡನ ಸಂಬಂಧಿ ವಿರುದ್ಧದ ಸಿಡಿದೆದ್ದು ತವರು ಸೇರಿದ್ದಾಳೆ. ತನ್ನ ಪರವಾಗಿ ಇರಬೇಕಾದ ಪತಿ ತನ್ನನ್ನೇ ಹುಚ್ಚಿ ಎಂದು ಹೇಳಿರುವುದು ಆಕೆಗೆ ನುಂಗಲಾಗದ ತುತ್ತಾಗಿದೆ. ಆದರೆ ಪುಟ್ಟಕ್ಕನಿಗೋ ಮಗಳ ಜೀವನವನ್ನು ಹೇಗಾದರೂ ಸರಿ ಮಾಡುವ ಚಿಂತೆ. ತಾಯಿಯ ಸ್ಥಾನದಲ್ಲಿ ನಿಂತು ಪುಟ್ಟಕ್ಕನನ್ನು ನೋಡುವುದಾದರೆ, ಅವಳಿಗೆ ಮಗಳ ಸಂಸಾರ ಸರಿಯಾಗಬೇಕಷ್ಟೇ. ಏಕೆಂದರೆ ಇಲ್ಲಿ ಸಹನಾಳ ಗಂಡ ತನ್ನ ತಾಯಿಯ ಪರ ಇದ್ದಾನೆ ಎನ್ನುವುದು ಬಿಟ್ಟರೆ ಆತ ತುಂಬಾ ಒಳ್ಳೆಯವ. ಸಹನಾಳನ್ನು ತುಂಬಾ ಪ್ರೀತಿಸುತ್ತಾನೆ. ಇದಕ್ಕಾಗಿ ಪುಟ್ಟಕ್ಕನಿಗೆ ಇಬ್ಬರನ್ನೂ ಒಂದು ಮಾಡುವ ಚಿಂತೆ. ಇದಕ್ಕಾಗಿ ಸಹನಾಳಿಗೆ ಬುದ್ಧಿ ಮಾತು ಹೇಳುತ್ತಿದ್ದಾಳೆ.

ಆದರೆ ತಾಯಿಗೆ ತನ್ನಿಂದ ನೋವಾಗುತ್ತಿದೆ, ತವರು ಸೇರಿರುವುದಕ್ಕೆ ಆಕೆಗೆ ಹಿಂಸೆ ಆಗುತ್ತಿದೆ ಎನ್ನುವ ಸತ್ಯ ಸಹನಾಳಿಗೆ ಆಗಿದೆ. ಇದೇ ಕಾರಣಕ್ಕೆ ಆಕೆ ತನ್ನಿಂದ ತಾಯಿಗೆ ನೋವಾಗಬಾರದು ಎಂದು ಅಂದುಕೊಳ್ಳುತ್ತಿದ್ದಾಳೆ. ಯಾವುದೇ ಕಾರಣಕ್ಕೂ ಗಂಡನ ಮನೆಗೆ ಹೋಗುವ ಮನಸ್ಸು ಆಕೆಗಿಲ್ಲ. ಪತಿಯೇ ತನ್ನ ಮೇಲೆ ಸಂದೇಹ ಪಟ್ಟಿದ್ದರಿಂದ ಅವಳ ಮನಸ್ಸು ಜರ್ಜರಿತವಾಗಿದೆ. ಇದರಿಂದ ಮನೆ ಬಿಟ್ಟು ಹೋಗಲು ನಿರ್ಧರಿಸಿ ಅಪ್ಪ-ಅಮ್ಮನ ಕಾಲಿಗೆ ಬಿದ್ದಿದ್ದಾಳೆ. ಹಾಗಿದ್ದರೆ ಈ ರೀತಿ ಸೀರಿಯಲ್​ಗಳಲ್ಲಿ ತೋರಿಸುವುದು ಸರಿಯೇ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ತವರಿಗೆ ಬಂದ ಮಗಳು ಎಲ್ಲಿಯೂ ಸಲ್ಲಳು ಎಂಬ ಅರ್ಥದ ಈ ದೃಶ್ಯಕ್ಕೆ ಪುಟ್ಟಕ್ಕನ ಮಕ್ಕಳು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. 

ಕೊನೆಗೂ ಆ ದಿನ ಬಂದೇ ಬಿಟ್ಟಿತು... ಸಿಹಿಯ ಹುಟ್ಟಿನ ಸತ್ಯ ದೇಸಾಯಿ ಎದುರು ಬಹಿರಂಗವಾಯ್ತು!

click me!