ದೂರದೂರಿಗೆ ಹೋಗುವಾಗ ಅಗತ್ಯವಿರಲಿ, ಇಲ್ಲದಿರಲಿ ಒಂದಿಷ್ಟು ಹೆಚ್ಚುವರಿ ಸಾಮಾನುಗಳು ಬ್ಯಾಗ್ ಸೇರುತ್ತವೆ. ರೈಲಿನಲ್ಲಿ ಪ್ರಯಾಣಿಸುವಾಗ ಲಗೇಜ್ ಗಾತ್ರ ಮತ್ತಷ್ಟು ದೊಡ್ಡದಾಗಿರುತ್ತದೆ. ವಿಮಾನದಲ್ಲಿ ಮಾತ್ರವಲ್ಲ ರೈಲಿನಲ್ಲೂ ಲಗೇಜ್ ರೂಲ್ಸ್ ಇದೆ. ಪ್ರಯಾಣಕ್ಕಿಂತ ಮೊದಲು ಅದು ತಿಳಿದಿದ್ದರೆ ಒಳ್ಳೆಯದು.
ಭಾರತದ ರೈಲ್ವೆ (Indian Railways) ವ್ಯವಸ್ಥೆ, ವಿಶ್ವದ ಎರಡನೇ ಅತಿದೊಡ್ಡ ರೈಲು ಜಾಲವೆಂದು ಹೆಸರು ಪಡೆದಿದೆ. ಇಂದಿಗೂ ಭಾರತದಲ್ಲಿ ಜನರು ದೂರದ ಪ್ರಯಾಣಕ್ಕೆ ರೈಲನ್ನು ಆಶ್ರಯಿಸುತ್ತಾರೆ. ಭಾರತೀಯ ರೈಲ್ವೇಯಲ್ಲಿ ಪ್ರತಿದಿನ ಲಕ್ಷಾಂತರ ಜನರು ಪ್ರಯಾಣಿ(Travel)ಸುತ್ತಾರೆ. ಇದಕ್ಕೆ ಮುಖ್ಯ ಕಾರಣ ರೈಲು ಪ್ರಯಾಣ ಆರಾಮದಾಯಕ ಪ್ರಯಾಣವಾಗಿದೆ. ಶುಲ್ಕದಿಂದ ಹಿಡಿದು ಪ್ರತಿಯೊಂದು ವಿಷಯದಲ್ಲೂ ರೈಲು ಪ್ರಯಾಣ ಸಾಮಾನ್ಯ ವರ್ಗದವರಿಗೆ ಅನುಕೂಲವಾಗಿದೆ. ವಾರಕ್ಕೊಮ್ಮೆ ನಾವು ರೈಲಿನಲ್ಲಿ ಪ್ರಯಾಣ ಬೆಳೆಸಬಹುದು. ಆದರೆ ರೈಲಿನ ಕೆಲವು ನಿಯಮಗಳು ನಮಗೆ ತಿಳಿದಿರುವುದಿಲ್ಲ. ರೈಲಿನಲ್ಲಿ ಎಷ್ಟು ವಸ್ತು(item)ಗಳನ್ನು ತೆಗೆದುಕೊಂಡು ಹೋಗಬಹುದು ಎಂಬ ಬಗ್ಗೆಯೂ ನಮಗೆ ಸರಿಯಾಗಿ ತಿಳಿದಿಲ್ಲ. ಸಾಮಾನ್ಯವಾಗಿ ವಿಮಾನ (Flight) ಪ್ರಯಾಣಕ್ಕೂ ಮುನ್ನ ಎಲ್ಲರೂ ಹೆಚ್ಚಿನ ತಯಾರಿ ನಡೆಸುತ್ತಾರೆ. ವಿಮಾನದ ನಿಯಮಕ್ಕೆ ತಕ್ಕಂತೆ ಬ್ಯಾಗ್ ವ್ಯವಸ್ಥೆ ಮಾಡುತ್ತಾರೆ. ರೈಲಿನಲ್ಲಿ ಪ್ರಯಾಣಿಸುವಾಗ ಲಗೇಜ್ (Luggage) ಬಗ್ಗೆ ಚಿಂತೆ ಮಾಡುವುದಿಲ್ಲ. ದೂರದ ಪ್ರಯಾಣವಾದ ಕಾರಣ ಅಗತ್ಯಕ್ಕಿಂತ ಹೆಚ್ಚು ಲಗೇಜ್ ತೆಗೆದುಕೊಂಡು ಹೋಗಲು ಮುಂದಾಗುತ್ತೇವೆ. ಆದರೆ ರೈಲ್ವೆ ಇಲಾಖೆ ಕೂಡ ಕೆಲ ನಿಯಮಗಳನ್ನು ಹೊಂದಿದೆ. ನಿಗದಿತ ಲಗೇಜ್ ನಂತರ ರೈಲ್ವೆ ಇಲಾಖೆ ಶುಲ್ಕ ( charge )ವಿಧಿಸುತ್ತದೆ. ಭಾರತೀಯ ರೈಲ್ವೇಯ ಪ್ರಯಾಣಿಕರ ಸಾಮಾನು ಸರಂಜಾಮುಗೆ ವಿಧಿಸುವ ನಿಯಮಗಳ ವಿವರ ಇಲ್ಲಿದೆ.
ರೈಲಿನಲ್ಲಿ ಎಷ್ಟು ತೂಕದ ಲಗೇಜಿಗೆ ಅನುಮತಿ :
ರೈಲು ಪ್ರಯಾಣದ ಸಮಯದಲ್ಲಿ ಒಬ್ಬ ಪ್ರಯಾಣಿಕನು ಗರಿಷ್ಠ 50 ಕೆಜಿಯಷ್ಟು ಲಗೇಜ್ ಕೊಂಡೊಯ್ಯಬಹುದು. ಇದಕ್ಕಿಂತ ಹೆಚ್ಚಿನ ಸಾಮಾನು ಇದ್ದರೆ, ಅವನು ಆ ಲಗೇಜ್‌ನ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಸಾಮಾನುಗಳಿಗೆ ಪ್ರಯಾಣಿಕ ಲಗೇಜ್ ಟಿಕೆಟ್ ತೆಗೆದುಕೊಳ್ಳಬೇಕು. ಈ ನಿಯಮ ಎಲ್ಲ ಕೋಚ್ ನಲ್ಲಿ ಪ್ರಯಾಣಿಸುವವರಿಗೆ ಒಂದೇ ಆಗಿರುವುದಿಲ್ಲ. ಬೇರೆ ಬೇರೆ ಕೋಚ್ ನಲ್ಲಿ ಪ್ರಯಾಣಿಸುವವರ ಲಗೇಜ್ ಪ್ರಮಾಣ ಹಾಗೂ ಶುಲ್ಕ ಬೇರೆಯಾಗಿರುತ್ತದೆ. ಎಸಿ ಕೋಚ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು, ಯಾವುದೇ ಶುಲ್ಕವಿಲ್ಲದೆ 70 ಕೆಜಿಯಷ್ಟು ಲಗೇಜನ್ನು ಸುಲಭವಾಗಿ ಸಾಗಿಸಬಹುದು. ಸ್ಲೀಪರ್ ಕೋಚ್ ಟಿಕೆಟ್ ತೆಗೆದುಕೊಂಡ ಪ್ರಯಾಣಿಕ ತನ್ನೊಂದಿಗೆ 40 ಕೆಜಿಯಷ್ಟು ಲಗೇಜನ್ನು ಮಾತ್ರ ತೆಗೆದುಕೊಂಡು ಹೋಗಬಹುದು. ಹೆಚ್ಚಿನ ಲಗೇಜ್ ಇದ್ದಾಗ ಅದಕ್ಕೆ ಶುಲ್ಕವನ್ನು ವಿಧಿಸಬೇಕಾಗುತ್ತದೆ. ಪ್ರಯಾಣಿಕ ತನ್ನ ಹೆಚ್ಚುವರಿ ಲಗೇಜ್ ಗೆ ಶುಲ್ಕವನ್ನು ಪಾವತಿಸಿದ ನಂತರವೂ 100 ಕೆಜಿಯಷ್ಟು ಲಗೇಜನ್ನು ಮಾತ್ರ ತೆಗೆದುಕೊಂಡು ಹೋಗಬಹುದು.
undefined
ಟ್ರಾವೆಲ್ ಸಿಕ್‌ನೆಸ್ ತಡೆಯೋದು ಹೇಗೆ?
ಪ್ರಯಾಣಿಕ ಕೊಂಡೊಯ್ಯುವ ವಸ್ತುವಿನ ಗಾತ್ರ : ಕೇವಲ ಲಗೇಜ್ ತೂಕ ಮಾತ್ರ ಇಲ್ಲಿ ಪರಿಗಣನೆಗೆ ಬರುವುದಿಲ್ಲ. ಭಾರತೀಯ ರೈಲ್ವೆ ಇಲಾಖೆ ಪ್ರಕಾರ,ಲಗೇಜ್ ಗಾತ್ರ ಕೂಡ ಮಹತ್ವ ಪಡೆಯುತ್ತದೆ. ದೊಡ್ಡ ಗಾತ್ರದ ವಸ್ತುಗಳಿಗೆ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದಕ್ಕಾಗಿ ಪ್ರಯಾಣಿಕ ಕನಿಷ್ಠ 30 ರೂಪಾಯಿ ಶುಲ್ಕ ನೀಡಬೇಕು. ನಿಗದಿತ ಮಿತಿಗಿಂತ ಹೆಚ್ಚಿನ ಸರಕುಗಳನ್ನು ಹೊಂದಿದ್ದರೆ ಒಂದೂವರೆ ಪಟ್ಟು ಹೆಚ್ಚು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಒಬ್ಬರು 100cmsx 60cmsx25cms (ಉದ್ದ, ಅಗಲ ಮತ್ತು ಎತ್ತರ) ಅಳತೆಯನ್ನು ಹೊಂದಿರುವ ಟ್ರಂಕ್ ಅಥವಾ ಸೂಟ್‌ಕೇಸನ್ನು ತೆಗೆದುಕೊಂಡು ಹೋಗಬಹುದು.ಇದಕ್ಕಿಂತ ಗಾತ್ರ ದೊಡ್ಡದಿದ್ದರೆ ರೈಲು ಹತ್ತುವ ಮೊದಲೇ ಅದಕ್ಕೆ ಶುಲ್ಕ ಪಾವತಿಸಬೇಕು. ಅದನ್ನು ಬೇರೆ ಕಂಪಾರ್ಟ್‌ಮೆಂಟ್‌ನಲ್ಲಿ ಇಡಲಾಗುವುದು.
ಪ್ರತ್ಯೇಕವಾಗಿದೆ ವೈದ್ಯಕೀಯ (Medical) ನಿಯಮ :
ಕೆಲವೊಮ್ಮೆ ರೋಗಿಯೊಂದಿಗೆ ರೈಲಿನಲ್ಲಿ ಪ್ರಯಾಣಿಸುವ ಅನಿವಾರ್ಯತೆ ಎದುರಾಗುತ್ತದೆ. ಭಾರತೀಯ ರೈಲ್ವೆಯು ವೈದ್ಯಕೀಯ ವಿಷಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ನಿಯಮವನ್ನು ಹೊಂದಿದೆ. ಅದರ ಅಡಿಯಲ್ಲಿ,ವೈದ್ಯರ ಒಪ್ಪಿಗೆ ಮೇರೆಗೆ ರೋಗಿಗಳು ಆಮ್ಲಜನಕ ಸಿಲಿಂಡರ್ (Oxygen cylinder )ಗಳನ್ನು ಮತ್ತು ಸ್ಟ್ಯಾಂಡ್ ಗಳನ್ನು ತೆಗೆದುಕೊಂಡು ಹೋಗಬಹುದು. ಇದಕ್ಕೆ ವೈದ್ಯರ ಪ್ರಮಾಣ ಪತ್ರ ತೋರಿಸಬೇಕು.
ರೈಲಿನಲ್ಲಿ ಈ ಸಾಮಾನುಗಳು ನಿಷಿದ್ಧ : ರೈಲಿನಲ್ಲಿ ಪ್ರಯಾಣಿಕ ತನಗೆ ಇಷ್ಟಬರುವ ಎಲ್ಲ ಸಾಮಾನುಗಳನ್ನು ಕೊಂಡೊಯ್ಯಲು ಸಾಧ್ಯವಿಲ್ಲ. ರೈಲು ಪ್ರಯಾಣದ ಸಮಯದಲ್ಲಿ ಯಾವುದೇ ಸ್ಫೋಟಕ (Explosive )ವಸ್ತುಗಳನ್ನು ಸಾಗಿಸಲು ರೈಲ್ವೆ ಮಂಡಳಿಯಿಂದ ಅನುಮತಿ ಇಲ್ಲ. ಸ್ಫೋಟಕ ವಸ್ತುಗಳನ್ನು ಕೊಂಡೊಯ್ಯುತ್ತಿರುವುದು ತಿಳಿದಲ್ಲಿ,ಪ್ರಯಾಣಿಕನ ವಿರುದ್ಧ ಇಲಾಖೆ ಕ್ರಮಕೈಗೊಳ್ಳುವ ಅಧಿಕಾರ ಹೊಂದಿದೆ.
ಲಗೇಜ್ ಬುಕ್ಕಿಂಗ್ ವಿಧಾನ : ಒಂದು ದಿನ ಮೊದಲೇ ರೈಲ್ವೆ ನಿಲ್ದಾಣಕ್ಕೆ ಹೋಗಿ,ಲಗೇಜ್ ಬುಕ್ಕಿಂಗ್ ಮಾಡಬೇಕಾಗುತ್ತದೆ. ಇದಕ್ಕೆ ಕೆಲ ದಾಖಲೆ,ಟಿಕೆಟ್ ನೀಡಬೇಕು. ಪ್ರಯಾಣಿಕ ಮನಸ್ಸಿಗೆ ಬಂದಂತೆ ಮಾಡಿದ ಪ್ಯಾಕಿಂಗನ್ನು ರೈಲ್ವೆ ಇಲಾಖೆ ಅನುಮತಿಸುವುದಿಲ್ಲ. ಇಲಾಖೆ ನಿಯಮದಂತೆ ಪ್ಯಾಕಿಂಗ್ ನಡೆಯುತ್ತದೆ. ಬುಕ್ಕಿಂಗ್ ರಸೀದಿಯನ್ನು ಭದ್ರವಾಗಿಟ್ಟುಕೊಳ್ಳಬೇಕಾಗುತ್ತದೆ. ರೈಲು ಇಳಿದ ನಂತ್ರ ರೈಲ್ವೆ ಪಾರ್ಸಲ್ ಕಚೇರಿಗೆ ಹೋಗಿ ರಸೀದಿ ತೋರಿಸಿ ಲಗೇಜ್ ಪಡೆಯಬೇಕಾಗುತ್ತದೆ.