ಟೋಕಿಯೋ ಒಲಿಂಪಿಕ್ಸ್‌ 2020: ಕೋವಿಡ್‌ ನಡುವೆ ಕ್ರೀಡಾ ಕುಂಭಮೇಳಕ್ಕೆ ಕ್ಷಣಗಣನೆ

By Kannadaprabha NewsFirst Published Jul 20, 2021, 12:57 PM IST
Highlights

* ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಕೋವಿಡ್‌ ಭೀತಿ

* ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟ ಜುಲೈ 23ರಿಂದ ಆರಂಭ

* ಸದ್ಯ ಜಪಾನಿನಲ್ಲಿ 70,000ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ಇವೆ.

ಜಪಾನ್(ಜು.20): ಟೋಕಿಯೋ ಒಲಿಂಪಿಕ್ಸ್‌ ಆರಂಭಕ್ಕೆ ಕೇವಲ 3 ದಿನ ಮಾತ್ರ ಬಾಕಿ ಇದೆ. ಕೊರೋನಾ ಸೋಂಕಿನ ಆತಂಕದ ನಡುವೆಯೇ ವಿಶ್ವದ ಅತಿದೊಡ್ಡ ಕ್ರೀಡಾಕೂಟಕ್ಕೆ ಸಕಲ ಸಿದ್ಧತೆಗಳು ನಡೆದಿವೆ. ಕ್ರೀಡಾಕೂಟ ನಡೆಸಲು ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ಏನೆಲ್ಲಾ ಸಾಹಸ ನಡೆಸಿದೆ. ಜಪಾನ್‌ ಸರ್ಕಾರ ಯಾವೆಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಕ್ರೀಡಾಕೂಟ ಅಯೋಜಿಸುತ್ತಿದೆ. ಕ್ರೀಡಾಪಟುಗಳು ಮಾನಸಿಕವಾಗಿ ಎಷ್ಟರ ಮಟ್ಟಿಗೆ ಸಿದ್ಧರಾಗಿದ್ದಾರೆ? ಈ ಕುರಿತ ಸಂಪೂರ್ಣ ಮಾಹಿತಿಯನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸೋದರ ಸಂಸ್ಥೆ ಕನ್ನಡಪ್ರಭ ಕಲೆಹಾಕಿದೆ ನೋಡಿ.

ಹಟ ಬಿಡದ ಐಒಸಿ, ಜಪಾನ್‌ ಸರ್ಕಾರ

2020ರ ಒಲಿಂಪಿಕ್ಸ್‌, ಅಧಿಕೃತವಾಗಿ ಕರೆಯುವುದಾದರೆ 32ನೇ ಒಲಿಂಪಿಕ್‌ ಕ್ರೀಡಾಕೂಟವು 23 ಜುಲೈ 2021ರಿಂದ 8 ಆಗಸ್ಟ್‌ 2021ರ ವರೆಗೂ ಜಪಾನ್‌ನ ರಾಜಧಾನಿ ಟೋಕಿಯೋದಲ್ಲಿ ನಡೆಯಲಿದೆ. ಕ್ರೀಡಾಕೂಟವು ಜು.24, 2020ರಿಂದ ಆ.9, 2020ರವರೆಗೂ ನಡೆಯಬೇಕಿತ್ತು. ಆದರೆ ಕೊರೋನಾ ಮಹಾಮಾರಿ ಇಡೀ ಜಗತ್ತಿಗೇ ವಕ್ಕರಿಸಿದ ಕಾರಣ, ಒಲಿಂಪಿಕ್ಸ್‌ ಮುಂದೂಡುವ ಅನಿವಾರ್ಯತೆ ಎದುರಾಯಿತು.

ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಂಡಿರುವ ಭಾರತದ ಶೂಟರ್‌ಗಳಿವರು

2020ರ ಮಾರ್ಚ್‌ನಲ್ಲಿ  ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ (ಐಒಸಿ) ಕ್ರೀಡಾಕೂಟವನ್ನು 2021ರ ಜುಲೈಗೆ ಮುಂದೂಡುತ್ತಿರುವುದಾಗಿ ಘೋಷಿಸಿತು. ಆದರೆ ಜಾಹೀರಾತು ಹಾಗೂ ಬ್ರ್ಯಾಡಿಂಗ್‌ ಕಾರಣಗಳಿಗಾಗಿ, ಕ್ರೀಡಾಕೂಟವನ್ನು ‘ಟೋಕಿಯೋ 2020’ ಎಂದೇ ಉಳಿಸಿಕೊಳ್ಳಲಾಯಿತು. ಒಲಿಂಪಿಕ್‌ ಕ್ರೀಡಾಕೂಟವು ರದ್ದುಗೊಳ್ಳದೆ ಮುಂದೂಡಲ್ಪಟ್ಟಿದ್ದು ಇದೇ ಮೊದಲು.

ಅಂದು 865, ಇಂದು 70,000 ಸಕ್ರಿಯ ಕೇಸ್‌!

ಒಲಿಂಪಿಕ್ಸ್‌ ಮುಂದೂಡಲು ನಿರ್ಧಾರ ಕೈಗೊಂಡಾಗ ಜಪಾನ್‌ನಲ್ಲಿ 865 ಸಕ್ರಿಯ ಕೋವಿಡ್‌ ಪ್ರಕರಣಗಳು ಇದ್ದವು. ಆದರೆ ಇದೀಗ 16 ತಿಂಗಳುಗಳ ಬಳಿಕ 70,000ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ಇವೆ.

200ಕ್ಕೂ ಹೆಚ್ಚು ರಾಷ್ಟ್ರಗಳ ಸುಮಾರು 11000 ಕ್ರೀಡಾಪಟುಗಳು, 4000 ಸಹಾಯಕ ಸಿಬ್ಬಂದಿ ಟೋಕಿಯೋದಲ್ಲಿ 2 ವಾರಗಳ ಕ್ರೀಡಾಕೂಟಕ್ಕೆ ಸೇರಲಿದ್ದಾರೆ. ಒಂದು ತಿಂಗಳ ಬಳಿಕ 5,000 ಅಥ್ಲೀಟ್‌ಗಳು, ಮತ್ತೊಂದಷ್ಟು ಸಹಾಯಕ ಸಿಬ್ಬಂದಿ ಪ್ಯಾರಾಲಿಂಪಿಕ್ಸ್‌ಗಾಗಿ ಟೋಕಿಯೋಗೆ ಬರಲಿದ್ದಾರೆ. ಕ್ರೀಡಾಪಟುಗಳು, ಸಿಬ್ಬಂದಿ ಹಾಗೂ ಜಪಾನ್‌ನ ನಾಗರಿಕರನ್ನು ಸುರಕ್ಷಿತವಾಗಿರಿಸಿ ಕ್ರೀಡಾಕೂಟವನ್ನು ನಡೆಸುವ ಅತಿದೊಡ್ಡ ಸವಾಲು ಆಯೋಜಕರ ಹೆಗಲ ಮೇಲಿದೆ.

2020ರ ಜನವರಿಯಲ್ಲೇ ಸುಳಿವು

ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗುತ್ತಿದ್ದಂತೆ ಇದರ ಪರಿಣಾಮ ಒಲಿಂಪಿಕ್ಸ್‌ ಮೇಲೆ ಪ್ರಭಾವ ಬೀರಲಿದೆ ಎನ್ನುವ ಸುಳಿವು ಜಪಾನ್‌ ಹಾಗೂ ಐಒಸಿಗೆ ಸಿಕ್ಕಿತ್ತು. 200ಕ್ಕೂ ಹೆಚ್ಚು ರಾಷ್ಟ್ರಗಳ ಕ್ರೀಡಾಪಟುಗಳು, ಕೋಚ್‌, ಸಿಬ್ಬಂದಿ, ಅಧಿಕಾರಿಗಳು ಜಪಾನ್‌ಗೆ ಪ್ರಯಾಣಿಸುವುದು ಸುರಕ್ಷಿತವಲ್ಲ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಲೇ ಇದ್ದವು. ಕ್ರೀಡಾಕೂಟದ ಆಯೋಜಕರು ಪರಿಸ್ಥಿತಿ ಮೇಲೆ ನಿಗಾ ವಹಿಸುವುದಾಗಿ ಹೇಳಿದ್ದರು.

ಸಾವಿರಾರು ಕೋಟಿ ವೆಚ್ಚ ಮಾಡಿರುವ ಕಾರಣ, ಕ್ರೀಡಾಕೂಟವನ್ನು ರದ್ದುಗೊಳಿಸುವ ಇಲ್ಲವೇ ಬಹಳ ದಿನಗಳ ಕಾಲ ಮುಂದೂಡಲು ಸಾಧ್ಯವಿಲ್ಲ ಎಂದು ಐಒಸಿ, ಪ್ರಾಯೋಜಕರು ಹಾಗೂ ಸ್ವತಃ ಜಪಾನ್‌ನ ಪ್ರಧಾನಿಯಾಗಿದ್ದ ಶಿನ್ಜೋ ಅಬೆ ಆತಂಕ ವ್ಯಕ್ತಪಡಿಸಿದ್ದರು.

ಸ್ಥಳಾಂತರದ ಪ್ರಸ್ತಾಪ

ಕೊರೋನಾದಿಂದ ಒಲಿಂಪಿಕ್ಸ್‌ ಮುಂದೂಡಿಕೆಯಾಗುತ್ತಿದ್ದಂತೆ ಲಂಡನ್‌ನ ಮೇಯರ್‌ ಅಭ್ಯರ್ಥಿ ಶಾನ್‌ ಬೈಲಿ, 2012ರಲ್ಲಿ ಆಯೋಜಿಸಿದ್ದ ಕ್ರೀಡಾಂಗಣಗಳಲ್ಲೇ ಒಲಿಂಪಿಕ್ಸ್‌ ಆಯೋಜಿಸಲು ಲಂಡನ್‌ ಸಿದ್ಧವಿದೆ ಎಂದಿದ್ದರು. ಆದರೆ ಟೋಕಿಯೋ ರಾಜ್ಯಪಾಲ ಯುರಿಕೋ ಕೊಯ್ಕೆ, ಬೈಲಿ ಪ್ರಸ್ತಾಪವನ್ನು ವಿರೋಧಿಸಿದ್ದರು. 2021ರ ಆರಂಭದಲ್ಲಿ ಅಮೆರಿಕದ ಫ್ಲೋರಿಡಾ ರಾಜ್ಯವು ಒಲಿಂಪಿಕ್ಸ್‌ ಆಯೋಜಿಸಲು ಸಿದ್ಧವಿರುವುದಾಗಿ ತಿಳಿಸಿತ್ತು. ಆದರೆ ಐಒಎನ ಟೋಕಿಯೋ ಗೇಮ್ಸ್‌ ಮುಖ್ಯಸ್ಥ ಜಾನ್‌ ಕೋಟ್ಸ್‌, ಕ್ರೀಡಾಕೂಟವು ಜಪಾನ್‌ನಲ್ಲೇ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದರು.

ಎದುರಾಗಿತ್ತು ರದ್ದಾಗುವ ಭೀತಿ

ಕೊರೋನಾ ಮೊದಲ ಅಲೆ ಮುಕ್ತಾಯಗೊಂಡ ಕೆಲವೇ ತಿಂಗಳುಗಳಲ್ಲಿ 2ನೇ ಅಲೆ ಶುರುವಾಯಿತು. ಭಾರತ ಸೇರಿ ಕೆಲ ರಾಷ್ಟ್ರಗಳಲ್ಲಿ ಮೊದಲ ಅಲೆಗಿಂತ 2ನೇ ಅಲೆ ಸೃಷ್ಟಿಸಿದ ಭೀತಿ ಭೀಕರವಾಗಿತ್ತು. ಜಪಾನ್‌ನಲ್ಲೂ ಕೋವಿಡ್‌ ಅಷ್ಟು ಸುಲಭವಾಗಿ ನಿಯಂತ್ರಣಕ್ಕೆ ಬರಲಿಲ್ಲ. ಜಪಾನ್‌ನ ಶೇ.80ಕ್ಕಿಂತ ಹೆಚ್ಚು ನಾಗರಿಕರು, ವೈದ್ಯಕೀಯ ಸಿಬ್ಬಂದಿ, ತಜ್ಞರು ಒಲಿಂಪಿಕ್ಸ್‌ ರದ್ದುಗೊಳಿಸುವುದೇ ಒಳ್ಳೆಯದು ಎನ್ನುವ ಅಭಿಪ್ರಾಯವನ್ನು ಸಮೀಕ್ಷೆವೊಂದರ ವೇಳೆ ವ್ಯಕ್ತಪಡಿಸಿದರು. ಜಪಾನ್‌ ಸರ್ಕಾರದ ಮೇಲೆ ಒತ್ತಡ ಹೇರಿದರು.

ಅಲ್ಲದೇ, ಕೊರೋನಾ ಲಸಿಕೆ ಲಭ್ಯವಾಗುವುದು ತಡವಾಯಿತು. ಲಸಿಕೆ ಹೊರಬಂದ ಬಳಿಕ ಯಾವ ಲಸಿಕೆ ತೆಗೆದುಕೊಳ್ಳಬೇಕು. ಯಾವ ಲಸಿಕೆ ಎಷ್ಟು ಪರಿಣಾಮಕಾರಿ ಎನ್ನುವ ಚರ್ಚೆ ಶುರುವಾಯಿತು. ಜಪಾನ್‌ನಲ್ಲಿ ಲಸಿಕಾಕರಣ ಆರಂಭಗೊಂಡಿದ್ದೇ ತಡವಾಗಿ. ಇನ್ನು ಅಲ್ಲಿನ ಬಹುತೇಕರಿಗೆ ಲಸಿಕೆಯೇ ಸಿಕ್ಕಿಲ್ಲ. ಹೀಗಿದ್ದರೂ, ಐಒಸಿ ಹಾಗೂ ಜಪಾನ್‌ ಸರ್ಕಾರ ಹಟ ಬಿಡಲಿಲ್ಲ. ಕ್ರೀಡಾಕೂಟವನ್ನು ನಡೆಸಿಯೇ ತೀರುವುದಾಗಿ ಘೋಷಿಸಿದರು.

ಈ ಹಿಂದೆಯೂ ಆತಂಕ

ಒಲಿಂಪಿಕ್ಸ್‌ಗೆ ಸಾಂಕ್ರಾಮಿಕ ಕಾಯಿಲೆಗಳ ಸಮಸ್ಯೆ ಎದುರಾಗಿದ್ದು ಇದೇ ಮೊದಲೇನಲ್ಲ. 2016ರ ರಿಯೋ ಒಲಿಂಪಿಕ್ಸ್‌ ವೇಳೆ ಝೀಕಾ ವೈರಸ್‌ ಆತಂಕವಿತ್ತು. 2010ರ ವ್ಯಾನ್ಕೋವರ್‌ ಚಳಿಗಾಲದ ಒಲಿಂಪಿಕ್ಸ್‌ ವೇಳೆ ಎಚ್‌1ಎನ್‌1 ಸೋಂಕು ಕಾಡಿತ್ತು. ಆದರೆ ಕೊರೋನಾ ಸೋಂಕಿನಷ್ಟು ದೊಡ್ಡ ಮಟ್ಟದಲ್ಲಿ ಸಮಸ್ಯೆ ಉಂಟು ಮಾಡಿರಲಿಲ್ಲ.
 

click me!