ಮಿಕ್ಸೆಡ್ ಮಾರ್ಷಲ್ ಆರ್ಟ್ಸ‌್‌ನಲ್ಲಿ ರಾಜ್ಯದ ತರುಣ್ ಹಿರೇಮಠ್ ಅತ್ಯುತ್ತಮ ಸಾಧನೆ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ದೇಶಿಯ ಸ್ಪರ್ಧೆಯಲ್ಲಿ ಮೂರು ಚಿನ್ನದ ಪದಕ ಗೆದ್ದುಕೊಂಡಿರುವ ಹಿರೇಮಠ್, ಇದೀಗ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಆದರೆ ಬೆಂಗಳೂರಿನ ಈ ಕ್ರೀಡಾಪಟುವಿಗೆ ಸರ್ಕಾರದ ನೆರವು ಬೇಕಿದೆ.
ಬೆಂಗಳೂರು(ಡಿ.26) ಬಾಕ್ಸಿಂಗ್, ಕುಸ್ತಿ ಮಧ್ಯೆ ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯವಾಗುತ್ತಿರುವ ಇದೇ ಮಾದರಿಯ ಕ್ರೀಡೆ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್(ಎಂಎಂಎ). ಅಪ್ಪಟ ಭಾರತೀಯ ಶೈಲಿಯಲ್ಲಿ ಮಲ್ಲಯುದ್ಧ ಎಂದು ಹೇಳಬಹುದಾದ ಈ ಕ್ರೀಡೆ ಭಾರತವನ್ನು ಪ್ರವೇಶಿಸಿದ್ದು ಬೆಂಗಳೂರು ಮೂಲಕ ಎಂಬುದು ವಿಶೇಷ. ಇದೀಗ ಬೆಂಗಳೂರಿನಲ್ಲಿ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ ಹೊಸ ಟ್ರೆಂಡ್ ಸೃಷ್ಟಿಸುತ್ತಿದೆ. ಈ ನಿಟ್ಟಿನಲ್ಲಿ ಕೊಡಗಿನ ಕ್ಲಿಂಟನ್ ಡಿ'ಕ್ರೂಜ್ ಜತೆ ರಾಜ್ಯದಿಂದ ಹಲವು ರಾಷ್ಟ್ರೀಯ ಪ್ರಶಸ್ತಿ, ಅಂತಾರಾಷ್ಟ್ರೀಯ ಪ್ರಶಸ್ತಿಗಳೊಂದಿಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರತಿಭೆ ಬೆಂಗಳೂರಿನ ತರುಣ್ ಡಿ. ಹಿರೇಮಠ್. ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿರುವ ತರುಣ್‌ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಅವಕಾಶ ಬಂದಿದೆ. ಆದರೆ ತರುಣ್ ಸಾಧನೆಗೆ ನೆರವಿನ ಅಗತ್ಯವಿದೆ.
ಬೆಂಗಳೂರಿನ ಇಂಡಿಯನ್ ಕಾಂಬೋಟ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಕೋಚ್ ಜಿತೇಶ್ ಬಂಜನ್ ಗರಡಿಯಲ್ಲಿ ಕಳೆದ ಎಂಟು ವರ್ಷಗಳಿಂದ ತರಬೇತಿ ಪಡೆಯುತ್ತಿರುವ ತರುಣ್ ಹಿರೇಮಠ್, 2019ರಲ್ಲಿ ಚೆನ್ನೈನಲ್ಲಿ ನಡೆದ ಬ್ರಜೆಲಿಯನ್ ಜಿಯು ಜಿಟ್ಸ್ ಸ್ಪರ್ಧೆಯಲ್ಲಿ ಮೂರು ಚಿನ್ನದ ಪದಕಗಳೊಂದಿಗೆ ಕಿಕ್ ಬಾಕ್ಸಿಂಗ್ ನಲ್ಲಿ ತಮ್ಮ ಸಾಧನೆ ಆರಂಭಿಸಿದ್ದಾರೆ.
ಟಿವಿಯಲ್ಲಿ ಪ್ರೊ ಕಬಡ್ಡಿ ನೋಡಿ ವೃತ್ತಿಪರ ಆಟಗಾರನಾದ ಭರತ್ ಹೂಡಾ..!
ಕಿಂಕ್ ಬಾಕ್ಸಿಂಗ್, ಮಲ್ಲಯುದ್ಧ ಹೀಗೆ ಹಲವು ವಿಭಾಗಗಳಲ್ಲಿ ಸ್ಪರ್ಧಿಸಿ 2023ರಲ್ಲಿ ಮುಂಬೈನಲ್ಲಿ ನಡೆದ ಎಂಎಂಎ ವಾರಿಯರ್ ಕನಸಿನ ಸರಣಿ, ದೆಹಲಿಯ ಲೈಟ್ ಹೆವಿವೈಟ್ ವಿಭಾಗದ ಮ್ಯಾಟ್ರಿಕ್ಸ್ ಫೈಟ್ ನೈಟ್ (ಎಂಎಫ್ ಎನ್) ಸರಣಿ, ಎಂಎಫ್ಎನ್ ಮತ್ತು ಡಿಸ್ನಿ ಹಾಟ್ ಸ್ಟಾರ್ ಗುತ್ತಿಗೆ ಸ್ಪರ್ಧೆಗಳಲ್ಲಿ ಗೆದ್ದು ಈ ಕ್ರೀಡೆಯಲ್ಲಿ ಪಾರಮ್ಯ ಮೆರೆಯುತ್ತಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ ನಲ್ಲಿ ಭಾರತ, ಅದರಲ್ಲೂ ಬೆಂಗಳೂರಿನ ಕ್ರೀಡಾಪಟುಗಳು ಉತ್ತಮ ಸಾಧನೆ ತೋರುತ್ತಿದ್ದಾರಾದರೂ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಈ ಕ್ರೀಡೆ ಒಲಿಂಪಿಂಕ್ ಗೇಮ್ಸ್ ಗಳಲ್ಲಿ ಸ್ಥಾನ ಪಡೆಯದ ಕಾರಣ ರಾಜ್ಯ ಸರಕಾರದಿಂದ ಯಾವುದೇ ಪ್ರೋತ್ಸಾಹ ಸಿಗುತ್ತಿಲ್ಲ. ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಕೇಂದ್ರ ಸರಕಾರದಿಂದ ವಿಮಾನದ ಟಿಕೆಟ್ ಸಿಗುತ್ತದೆಯಾದರೂ ಉಳಿದಂತೆ ಎಲ್ಲಾ ವೆಚ್ಚವನ್ನು ಕ್ರೀಡಾಪಟುಗಳು ಅಥವಾ ಅವರು ತರಬೇತಿ ಪಡೆಯುತ್ತಿರುವ ಅಕಾಡೆಮಿಗಳು ಭರಿಸಬೇಕಾಗುತ್ತದೆ.
ಪ್ರಸ್ತುತ ತರುಣ್ ಹಿರೇಮಠ್ ಕಿಕ್ ಬಾಕ್ಸಿಂಗ್ ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ತೋರಿ ಹಲವು ಪ್ರಶಸ್ತಿಗಳೊಂದಿಗೆ ಅಂತಾರಾಷ್ಟ್ರೀಯ ಸ್ಪರ್ಧೆಗೂ ಅಣಿಯಾಗುತ್ತಿದ್ದಾರೆ. ಅದಕ್ಕಾಗಿ ಸರಕಾರದಿಂದ ಪ್ರೋತ್ಸಾಹ ಮತ್ತು ನೆರವಿಗೆ ಕಾಯುತ್ತಿದ್ದಾರೆ.
ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕಟ: ಮೊಹಮ್ಮದ್ ಶಮಿಗೆ ಅರ್ಜುನ ಪ್ರಶಸ್ತಿ, ಚಿರಾಗ್-ಸಾತ್ವಿಕ್‌ಗೆ ಖೇಲ್ ರತ್ನ!
ದೇಶದಲ್ಲಿ ಮೊದಲ ಬಾರಿ ರಾಮರೆಡ್ಡಿ ಎಂಬುವರು 2006ರಲ್ಲಿ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ ಕ್ರೀಡೆಯನ್ನು ಬೆಂಗಳೂರಿನಲ್ಲಿ ಆರಂಭಿಸಿದರು. ಅವರ ನಂತರ ಇಂಡಿಯನ್ ಕಾಂಬೋಟ್ ಸ್ಪೋರ್ಟ್ಸ್ ಅಕಾಡೆಮಿಯ ಕೋಚ್ ಜಿತೇಶ್ ಬಂಜನ್ ಇದನ್ನು ಹೆಚ್ಚು ಜನಪ್ರಿಯಗೊಳಿಸುತ್ತಿದ್ದಾರೆ. ಆದರೆ, ಸರಕಾರದಿಂದ ಈ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ಸಿಕ್ಕಿದರೆ ರಾಜ್ಯದ ಹಲವು ಕ್ರೀಡಾಪಟುಗಳು ಇಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಹೆಚ್ಚಿಸಲು ಸಹಾಯವಾಗುತ್ತದೆ ಎಂದು ತರುಣ್ ಹಿರೇಮಠ್ ಹೇಳಿದ್ದಾರೆ.