
ಬೆಂಗಳೂರು(ಜ.27): ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಭಾಗಶಃ ಬಿಳಿ ಬಣ್ಣದ (ಅಲ್ಬಿನೊ) ಸೀಳುನಾಯಿ ರಾಜ್ಯದ ಕಾವೇರಿ ವನ್ಯಜೀವಿಧಾಮದಲ್ಲಿ ಪತ್ತೆಯಾಗಿದೆ. ಸೀಳುನಾಯಿ (ಕೆನ್ನಾಯಿ) 11 ದೇಶಗಳಲ್ಲಿ ಕಂಡುಬರುತ್ತವಾದರೂ ಈವರೆಗೆ ಅಲ್ಬಿನೊ ಸೀಳುನಾಯಿ ದಾಖಲಾಗಿರಲಿಲ್ಲ. ಕೂದಲು, ಚರ್ಮ ಮತ್ತು ಕಣ್ಣಿಗೆ ಬಣ್ಣ ನೀಡುವ ಮೆಲನಿನ್‌ನ ಅನುಪಸ್ಥಿತಿಯಿಂದ ಆಲ್ಬಿನಿಸಂ ಉಂಟಾಗುತ್ತದೆ. ಪ್ರಾಣಿ, ಪಕ್ಷಿ, ಸರೀಸೃಪಗಳಲ್ಲಿ ಇದು ಕಂಡುಬರುತ್ತದೆ. ಆದರೆ, ಸೀಳುನಾಯಿಗಳಲ್ಲಿ ಇದು ವಿಶ್ವದಲ್ಲೇ ಪ್ರಥಮ ಬಾರಿಗೆ ದಾಖಲಾಗಿದೆ.
ಕಾವೇರಿ ವನ್ಯಜೀವಿಧಾಮದಲ್ಲಿ ಸಾಮಾನ್ಯವಾಗಿರುವ (ಕಂದು ಬಣ್ಣದ) ಆರು ಸೀಳುನಾಯಿಗಳಿರುವ ಗುಂಪಿನಲ್ಲಿ ಅಲ್ಬಿನೊ ಸೀಳುನಾಯಿ ಕಾಣಿಸಿಕೊಂಡಿದೆ. ಆದರೆ, ಈ ಅಲ್ಬಿನೊ ಸೀಳು ನಾಯಿ ಬೀದಿ ನಾಯಿಯೊಡನೆ ಬೆರಕೆಯಾಗಿ ಹುಟ್ಟಿರುವ ಸಾಧ್ಯತೆಯೂ ಇದೆ. ಇದರ ಡಿಎನ್‌ಎ ಮಾದರಿ ವಿಶ್ಲೇಷಿಸಿದರೆ ಮಾತ್ರ ಹೆಚ್ಚು ಮಾಹಿತಿ ಕಲೆಹಾಕಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮೂರು ಮರಿಗಳಿಗೆ ಜನ್ಮ ನೀಡಿದ ಪಿಲಿಕುಳದ ಸೀಳುನಾಯಿ
ಭಾರತ ಬಿಟ್ಟರೆ ನೇಪಾಳ, ಬಾಂಗ್ಲಾದೇಶ, ಭೂತಾನ್, ಕಾಂಬೋಡಿಯಾ, ಚೀನಾ, ಇಂಡೋನೇಷ್ಯಾದಲ್ಲಿ ಸೀಳುನಾಯಿಗಳಿವೆ. ಇವು ಸಾಕಷ್ಟುಅಪಾಯ ಎದುರಿಸುತ್ತಿವೆ. ಆಷ್ಘಾನಿಸ್ತಾನ, ಕೊರಿಯಾ, ಮಂಗೋಲಿಯಾಗಳಲ್ಲಿ ಈಗಾಗಲೇ ಕಣ್ಮರೆಯಾಗಿವೆ ಎಂದು ಅಂತಾರಾಷ್ಟ್ರೀಯ ನಿಸರ್ಗ ಸಂರಕ್ಷಣಾ ಸಂಸ್ಥೆ (ಐಯುಸಿಎನ್) ತಿಳಿಸುತ್ತದೆ. ಭಾರತದಲ್ಲಿ ಸೀಳುನಾಯಿಗಳು ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ಅಧಿನಿಯಮ 2ರಲ್ಲಿ ಸಂರಕ್ಷಿತಗೊಂಡಿವೆ.
4 ಬಾರಿ ಕ್ಯಾಮೆರಾದಲ್ಲಿ ದಾಖಲು
ಚಿರತೆಗಳ ಕುರಿತು ಅಧ್ಯಯನ ನಡೆಸುತ್ತಿರುವ ನೇಚರ್ ಕನ್ಸರ್ವೇಷನ್ ಫೌಂಡೇಶನ್ ಮತ್ತು ಹೊಳೆಮತ್ತಿ ನೇಚರ್ ಫೌಂಡೇಶನ್‌ನ ಡಾ.ಸಂಜಯ್ ಗುಬ್ಬಿ ಮತ್ತು ಅವರ ತಂಡ ಅಳವಡಿಸಿರುವ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಈ ಹೆಣ್ಣು ಅಲ್ಬಿನೊ ಸೀಳುನಾಯಿ ಪತ್ತೆಯಾಗಿದೆ. ಕಾವೇರಿ ವನ್ಯಜೀವಿಧಾಮದ ಸಂಗಮ ವಲಯದಲ್ಲೇ ನಾಲ್ಕು ಬಾರಿ ಇದು ದಾಖಲಾಗಿದೆ. ಅರಣ್ಯ ಇಲಾಖೆ ಮುಂಚೂಣಿ ಸಿಬ್ಬಂದಿ ಕೂಡ ಇದನ್ನು ಮೊದಲು ಗಮನಿಸಿದ್ದರು. ಹಿಂದೆ 2014ರಲ್ಲಿ ಇದೇ ತಂಡ ರಾಜ್ಯದಲ್ಲೇ ಪ್ರಥಮ ಬಾರಿಗೆ ಇಲ್ಲಿ ತರ ಕರಡಿ (ಹನಿ ಬ್ಯಾಡ್ಜರ್) ಇರುವುದನ್ನು ದಾಖಲಿಸಿತ್ತು.
ಚಿರತೆಗಳ ಕುರಿತು 12 ವರ್ಷದಿಂದ ಅಧ್ಯಯನ ನಡೆಸುತ್ತಿದ್ದು, ಕ್ಯಾಮೆರಾದಲ್ಲಿ ಅಲ್ಬಿನೊ ಸೀಳುನಾಯಿ ಕಾಣಿಸಿಕೊಂಡಿದೆ. ಇದು ತನ್ನ ಗುಂಪಲ್ಲಿ ಹೊಂದಿಕೊಂಡಿದೆ. ಇದರ ವರ್ತನೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಇದರ ಮುಂದಿನ ಮರಿಗಳು ಇದೇ ರೀತಿ ಜನಿಸುತ್ತವೆಯೊ ಅಥವಾ ಸಾಮಾನ್ಯವಾಗಿರುತ್ತವೆಯೊ ಎಂಬುದನ್ನು ಮುಂದೆ ನೋಡಬೇಕು ಅಂತ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ