ಎರಡು ಆರೋಪ ಮುಂದಿಟ್ಟುಕೊಂಡು ವಿಚ್ಛೇದನ ಕೋರಿದ ಸಂದರ್ಭದಲ್ಲಿ ಒಂದು ಆರೋಪ ಸಾಬೀತಾಗಿ ಮತ್ತೊಂದು ದೃಢಪಡದಿದ್ದರೂ ವಿಚ್ಛೇದನ ಮಂಜೂರು ಮಾಡಲು ಕಾನೂನಿನ ತೊಡಕು ಇರುವುದಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ವೆಂಕಟೇಶ್ ಕಲಿಪಿ
ಬೆಂಗಳೂರು (ಮೇ.06): ಎರಡು ಆರೋಪ ಮುಂದಿಟ್ಟುಕೊಂಡು ವಿಚ್ಛೇದನ ಕೋರಿದ ಸಂದರ್ಭದಲ್ಲಿ ಒಂದು ಆರೋಪ ಸಾಬೀತಾಗಿ ಮತ್ತೊಂದು ದೃಢಪಡದಿದ್ದರೂ ವಿಚ್ಛೇದನ ಮಂಜೂರು ಮಾಡಲು ಕಾನೂನಿನ ತೊಡಕು ಇರುವುದಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಪ್ರಕರಣವೊಂದರಲ್ಲಿ ಪತಿ ತನ್ನ ಚಾರಿತ್ರ್ಯ ಶಂಕಿಸಿ ಮಾನಸಿಕ ಕ್ರೌರ್ಯ ಎಸಗಿದ್ದಾರೆ ಮತ್ತು ತನ್ನನ್ನು ಪರಿತ್ಯಜಿಸಿದ್ದಾರೆ ಎಂಬ ಎರಡು ಆರೋಪಗಳನ್ನು ಮುಂದಿಟ್ಟು ಪತ್ನಿ ವಿಚ್ಛೇದನ ಕೋರಿದ್ದರು. ಆದರೆ, ಪತಿಯು ಪತ್ನಿಯ ಚಾರಿತ್ರ್ಯ ಶಂಕಿಸಿರುವುದು ಸಾಬೀತಾದರೂ ಪರಿತ್ಯಜಿಸಿರುವ ಆರೋಪ ದೃಢಪಟ್ಟಿರಲಿಲ್ಲ.
ಹೀಗಿರುವಾಗ ಮಾನಸಿಕ ಕ್ರೌರ್ಯ ಎಸಗಿರುವುದನ್ನೇ ಪರಿಗಣಿಸಿದ ಹೈಕೋರ್ಟ್, ದಂಪತಿಯ ವಿವಾಹ ರದ್ದುಪಡಿಸಿ ವಿಚ್ಛೇದನ ನೀಡಿದೆ. ಪತಿ ಧ್ರುವ ಜೊತೆಗಿನ ವಿವಾಹವನ್ನು ಅನೂರ್ಜಿತಗೊಳಿಸಿ ವಿಚ್ಛೇದನ ಮಂಜೂರು ಮಾಡುವಂತೆ ಕೋರಿ ತುಮಕೂರಿನ ನವ್ಯ ಎಂಬುವರು (ಇಬ್ಬರ ಹೆಸರು ಬದಲಿಸಲಾಗಿದೆ) ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಅನು ಶಿವರಾಮನ್ ಅವರ ನೇತೃತ್ವದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ಬೆಂಗಳೂರು ರೇಸ್ ಕೋರ್ಸ್: ಎಫ್ಐಆರ್ ರದ್ದಿಗೆ ಹೈಕೋರ್ಟ್ ನಕಾರ
ಪ್ರಕರಣದಲ್ಲಿ ಪತಿಯ ಮಾನಸಿಕ ಕ್ರೌರ್ಯ ಮತ್ತು ಪರಿತ್ಯಾಗದ ಕಾರಣವನ್ನು ಪರಿಗಣಿಸಿ ವಿಚ್ಛೇದನ ನೀಡಲು ಪತ್ನಿ ಕೋರಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿದಾಗ ಪತ್ನಿ ತನ್ನ ಸಹೋದ್ಯೋಗಿಯೊಬ್ಬನ ಜೊತೆ ಸಂಬಂಧ ಹೊಂದಿದ್ದರು. ಆತನನ್ನು ಮದುವೆಯಾಗಲೆಂದೇ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಧ್ರುವ ಆಧಾರರಹಿತ ಆರೋಪ ಮಾಡಿರುವುದು ಸಾಬೀತಾಗಿದೆ. ಇದು ಪತ್ನಿಯ ಚಾರಿತ್ರ್ಯವನ್ನು ಹಾಳು ಮಾಡುವುದು ಬಿಟ್ಟು ಮತ್ತೇನು ಅಲ್ಲ ಮತ್ತು ಪತ್ನಿ ಮೇಲೆ ಎಸಗಿದ ಮಾನಸಿಕ ಕ್ರೌರ್ಯ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಅಲ್ಲದೆ, ಪತಿಯ ನಡವಳಿಕೆಯಿಂದ ಪತ್ನಿ ಪ್ರತ್ಯೇಕವಾಗಿ ಜೀವನ ನಡೆಸುವುದರಲ್ಲಿ ಸ್ವಲ್ಪ ಮಟ್ಟಿಗೆ ಸಮರ್ಥನೀಯವಾಗಿದೆ. ಪತಿ ತನ್ನ ವೈವಾಹಿಕ ಸಂಬಂಧದ ಮರು ಸ್ಥಾಪನೆಗೆ ಇಂಗಿತ ವ್ಯಕ್ತಪಡಿಸಿದರೆ, ಪತ್ನಿ ಮಾತ್ರ ಪತಿಯೊಂದಿಗೆ ಜೀವಿಸಲು ಅಸಾಧ್ಯ ಎಂದಿದ್ದಾರೆ. ಇದರಿಂದ ಪರಿತ್ಯಾಗದ ಸಾಬೀತಿಗೆ ಸಮರ್ಪಕ ಕಾರಣ ಇಲ್ಲ. ಪ್ರಕರಣದಲ್ಲಿ ಕ್ರೌರ್ಯ ಆರೋಪ ಸಾಬೀತಾದರೂ ಪರಿತ್ಯಾಗ ಆರೋಪ ದೃಢಪಟ್ಟಿಲ್ಲ. ಹೀಗಿದ್ದರೂ ವಿಚ್ಛೇದನ ಮಂಜೂರಾತಿಗೆ ಮಾಡಲಾದ ಎರಡು ಆರೋಪಗಳು ಸಹ ಸಾಬೀತಾಗಬೇಕು ಎಂದು ಕಾನೂನು ಕಡ್ಡಾಯಗೊಳಿಸುವುದಿಲ್ಲ. ಒಂದು ಆರೋಪ (ಕಾರಣ) ಸಾಬೀತಾದರೂ, ವಿಚ್ಛೇದನ ಮಂಜೂರಾತಿಗೆ ಅದು ಸಾಕಾಗುತ್ತದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಪ್ರಕರಣದ ಪಕ್ಷಕಾರರ ವಿವಾಹ ಅನೂರ್ಜಿತೊಗಳಿಸಿ ವಿಚ್ಛೇದನ ನೀಡಿದೆ.
ಪ್ರಕರಣದ ವಿವರ: ತುಮಕೂರಿನ ನವ್ಯ ಮತ್ತು ಧ್ರುವ 2013ರ ಮಾರ್ಚ್‌ನಲ್ಲಿ ವಿವಾಹವಾಗಿದ್ದರು. ಆದರೆ, 2019ರಲ್ಲಿ ವಿಚ್ಛೇದನ ಕೋರಿ ನವ್ಯ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ‘ನಾನು ನನ್ನ ಸಹೋದ್ಯೋಗಿಯೊಂದಿಗೆ ಸಂಬಂಧ ಹೊಂದಿದ್ದೇನೆ ಎಂದು ಪತಿ ಆಧಾರ ರಹಿತ ಆರೋಪ ಮಾಡುವ ಮೂಲಕ ನನ್ನ ಚಾರಿತ್ರ್ಯ ಶಂಕಿಸುತ್ತಾ ಮಾನಸಿಕ ಕ್ರೌರ್ಯ ಎಸಗಿದ್ದಾರೆ. ಮೊಬೈಲ್ ಪೋನ್ ಕರೆಗಳನ್ನು ಪರಿಶೀಲಿಸುತ್ತಿದ್ದರು. ಬೇರೊಬ್ಬರಿಂದ ನಾನು ಗರ್ಭವತಿಯಾಗಿದ್ದೇನೆ ಎಂದು ಗರ್ಭಪಾತಕ್ಕೆ ಒತ್ತಾಯಿಸುತ್ತಿದ್ದರು. ವೈದ್ಯಕೀಯ ತಪಾಸಣೆಯಲ್ಲಿ ನಾನು ಗರ್ಭಿಣಿಯಾಗಿಲ್ಲ ಎಂದು ತಿಳಿಯಿತು. ಇದರಿಂದ ಪತಿಯೊಂದಿಗೆ ಜೀವನ ನಡೆಸಲು ಕಷ್ಟವಾದ ಪರಿಣಾಮ 2017ರಿಂದ ಪ್ರತ್ಯೇಕವಾಗಿ ಜೀವಿಸುತ್ತಿದ್ದೇನೆ. ಆದ್ದರಿಂದ ಕ್ರೌರ್ಯ ಮತ್ತು ಪರಿತ್ಯಾಗ ಆರೋಪ ಪರಿಗಣಿಸಿ ವಿಚ್ಛೇದನ ಮಂಜೂರು ಮಾಡಬೇಕು’ ಎಂದು ಅರ್ಜಿಯಲ್ಲಿ ನವ್ಯ ಕೋರಿದ್ದರು.
ದಂಪತಿ 2018ರವರೆಗೆ ಒಟ್ಟಿಗೆ ಜೀವಿಸಿದ್ದರು ಎಂಬುದನ್ನು ಪರಿಗಣಿಸಿ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಮಂಜೂರಾತಿಗೆ ನಿರಾಕರಿಸಿತ್ತು. ಇದರಿಂದ ನವ್ಯ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್‌ನಲ್ಲಿ ಪತ್ನಿಯ ಎಲ್ಲ ಆರೋಪಗಳನ್ನು ಧ್ರುವ ಅಲ್ಲಗಳೆದು, ‘ಪತ್ನಿಯ ನಡತೆಯನ್ನು ಶಂಕಿಸಿಯೇ ಇಲ್ಲ. ಮದುವೆಯಾದ ನಂತರ ನವ್ಯ ಎಂಜಿನಿಯರಿಂಗ್ ಪದವಿ ಪೂರೈಸಿದ ನಂತರ ಆಕೆಯಲ್ಲಿ ಅಹಂಕಾರ ಮೂಡಿತು. ತನ್ನ ಪೋಷಕರ ಮನೆಯಲ್ಲಿಯೇ ಇರುವಂತೆ ಪತ್ನಿ ನನಗೆ ತೀವ್ರ ಒತ್ತಡ ಹೇರುತ್ತಿದ್ದರು. ನನ್ನ ಪೋಷಕರು ಮತ್ತು ಸಹೋದರಿಯನ್ನು ನೋಡಿಕೊಳ್ಳಬೇಕಾದ ಕಾರಣ ಪತ್ನಿಯ ಒತ್ತಡಕ್ಕೆ ಮಣಿಯಲಿಲ್ಲ. ನನ್ನ ಮನೆಯಲ್ಲಿಯೇ ಪತ್ನಿಯೊಂದಿಗೆ ನೆಲೆಸಲು ಸಿದ್ಧನಿದ್ದೇನೆ’ ಎಂದು ಧ್ರುವ ವಾದಿಸಿದ್ದರು.
ಮಗುವಿಗೆ ತಾಯಿಯ ಆರೈಕೆ ಬಹಳ ಮುಖ್ಯ: ಹೈಕೋರ್ಟ್ ಆದೇಶದಲ್ಲೇನಿದೆ?
ಸಂಗಾತಿಯ ನಡೆ ಬಗ್ಗೆ ಶಂಕೆ ಮಾನಸಿಕ ಕ್ರೌರ್‍ಯ: ವಿವಾಹವು ದಂಪತಿ ನಡುವಿನ ಪರಸ್ಪರ ನಂಬಿಕೆ, ವಿಶ್ವಾಸ ಮತ್ತು ಪ್ರೀತಿ ಮೇಲೆ ನಿಂತಿರುತ್ತದೆ. ಆಧಾರ ರಹಿತವಾಗಿ ಸಂಗಾತಿಯ ನಡತೆಯನ್ನು ಶಂಕಿಸುವುದು ವಿವಾಹ ಸೌಧವನ್ನು ಅಲುಗಾಡಿಸುತ್ತದೆ ಮತ್ತು ಮಾನಸಿಕ ಕ್ರೌರ್ಯ ಎಸಗಿದಂತಾಗುತ್ತದೆ. ಇಂತಹ ಸಂದರ್ಭದಲ್ಲಿ ಪತಿ ಮನೆಯಲ್ಲಿ ಪತ್ನಿ ನೆಮ್ಮದಿಯಿಂದ ಜೀವಿಸುವುದು ಕಷ್ಟಕರವಾಗಲಿದೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.