ಮೃತ ಸ್ವಾತಂತ್ರ್ಯಯೋಧನ ಪತ್ನಿ ಪಿಂಚಣಿಗೆ ಅರ್ಹರಲ್ಲ: ಕರ್ನಾಟಕ ಹೈಕೋರ್ಟ್‌

By Kannadaprabha NewsFirst Published Jul 26, 2023, 10:36 AM IST
Highlights

ಪಿಂಚಣಿ ನೀಡಲು ಸೂಚಿಸಿದ್ದ ಏಕಸದಸ್ಯಪೀಠ ಆದೇಶ ರದ್ದುಪಡಿಸಿದ ಹೈಕೋರ್ಟ್‌ ವಿಭಾಗೀಯ ಪೀಠ, ಸ್ವಾತಂತ್ರ್ಯಯೋಧ ಮೃತನಾದ ನಂತರ ಅವರ ಹೆಸರಲ್ಲಿ ಪಿಂಚಣಿ ನೀಡಲಾಗದು, 2014ರಲ್ಲೇ ಈ ಬಗ್ಗೆ ನಿಯಮ ರೂಪಿಸಲಾಗಿದೆ: ವಿಭಾಗೀಯ ಪೀಠ

ಬೆಂಗಳೂರು(ಜು.26):  ಮೃತ ಸ್ವಾತಂತ್ರ್ಯ ಹೋರಾಟಗಾರನ ವೃದ್ಧ ಪತ್ನಿಗೆ ಪಿಂಚಣಿ ಮತ್ತು ಹಿಂಬಾಕಿ ಪಾವತಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ಹೈಕೋರ್ಟ್‌ ಏಕ ಸದಸ್ಯ ನ್ಯಾಯಪೀಠ ಹೊರಡಿಸಿದ್ದ ತೀರ್ಪನ್ನು ವಿಭಾಗೀಯ ಪೀಠ ರದ್ದುಪಡಿಸಿದೆ. ಏಕ ಸದಸ್ಯಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಆರ್‌.ದೇವದಾಸ್‌ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

‘ಕೇಂದ್ರ ಸರ್ಕಾರಿ ಸನ್ಮಾನ್‌ ಪಿಂಚಣಿ ಯೋಜನೆ’ಯ ವಿತರಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ 2014ರಲ್ಲಿ ಪ್ರಕಟಿಸಿದ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಸಹ ಪಾಲಿಸುತ್ತಿದೆ. ಆ ಮಾರ್ಗಸೂಚಿ ಪ್ರಕಾರ ಸ್ವಾತಂತ್ರ್ಯ ಹೋರಾಟಗಾರ ಅಥವಾ ಹೋರಾಟಗಾರ್ತಿ ಸಾವನ್ನಪ್ಪಿದ ನಂತರ ಅವರ ಹೆಸರಿನಲ್ಲಿ ಪಿಂಚಣಿ ವಿತರಿಸುವಂತಿಲ್ಲ. ಜತೆಗೆ, ಹೋರಾಟಗಾರ ಮತ್ತು ಹೋರಾಟಗಾರ್ತಿ ವಿಷಯವು ಪರಿಶೀಲನೆಯಲ್ಲಿದ್ದರೂ ಸಹ ಪಿಂಚಣಿ ಪಾವತಿಸುವಂತಿಲ್ಲ. ಅದರಂತೆ ರಾಜ್ಯ ಸರ್ಕಾರವು ಪ್ರಕರಣದಲ್ಲಿ ಮೃತ ಸ್ವಾತಂತ್ರ್ಯ ಹೋರಾಟಗಾರನ ವೃದ್ಧ ಪತ್ನಿಯಾದ ಬೆಳಗಾವಿಯ ನಿವಾಸಿ ಸಾವಂತ್ರವ್ವ (89) ಅವರಿಗೆ ಪಿಂಚಣಿ ನಿರಾಕರಿಸಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶ ಸೂಕ್ತವಾಗಿದೆ’ ಎಂದು ವಿಭಾಗೀಯ ಪೀಠ ಆದೇಶದಲ್ಲಿ ತಿಳಿಸಿದೆ.

ಕರ್ನಾಟಕ ಹೈಕೋರ್ಟ್‌ ಜಡ್ಜ್‌ಗಳಿಗೆ ಕೊಲೆ ಬೆದರಿಕೆ, 50 ಲಕ್ಷ ಕೊಡದಿದ್ರೆ ದುಬೈ ಗ್ಯಾಂಗ್‌ನಿಂದ ಮರ್ಡರ್‌..!

ಕ್ವಿಟ್‌ ಇಂಡಿಯಾದಲ್ಲಿ ಭಾಗಿ ಆಗಿದ್ದ ಬಸಪ್ಪ:

1942ರಲ್ಲಿ ನಡೆದಿದ್ದ ‘ಕ್ವಿಟ್‌ ಇಂಡಿಯಾ’ ಚಳುವಳಿಯಲ್ಲಿ ಸಾವಂತ್ರವ್ವ ಪತಿ ಬಸಪ್ಪ ಹಿತ್ತಲಮನಿ ಭಾಗವಹಿಸಿ ಸ್ವಾತಂತ್ರ್ಯ ಹೋರಾಟ ನಡೆಸಿದ್ದರು. 1969ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಪಿಂಚಣಿ ಯೋಜನೆ ರೂಪಿಸಲಾಗಿತ್ತು. ಪಿಂಚಣಿ ಕೋರಿ ಅಗತ್ಯ ದಾಖಲೆಗಳೊಂದಿಗೆ ಬಸಪ್ಪ ರಾಜ್ಯ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು. 1992ರ ಸೆ.10ರಂದು ಬಸಪ್ಪಗೆ ಪಿಂಚಣಿ ನೀಡಲು ಸರ್ಕಾರ ಆದೇಶಿಸಿತ್ತು. ಆದರೆ, ದಾಖಲೆಗಳ ಕೊರತೆಯಿಂದ ಪಿಂಚಣಿ ಪಾವತಿಯನ್ನು 2000ರಲ್ಲಿ ಸರ್ಕಾರ ಸ್ಥಗಿತಗೊಳಿಸಿತ್ತು.

ಆ ಕ್ರಮ ಪ್ರಶ್ನಿಸಿ ಬಸಪ್ಪ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಬಸಪ್ಪ ಮನವಿ ಪರಿಗಣಿಸಲು ಹೈಕೋರ್ಟ್‌ ಸೂಚಿಸಿದ್ದರೂ ಸಹ 2002ರಲ್ಲಿ ಸರ್ಕಾರ ಮತ್ತೆ ಪಿಂಚಣಿ ನಿರಾಕರಿಸಿತ್ತು. ಈ ನಡುವೆ 2003ರಲ್ಲಿ ಬಸಪ್ಪ ಸಾವನ್ನಪ್ಪಿದ್ದರು.
ಇದಾದ 12 ವರ್ಷ ಬಳಿಕ ಅಂದರೆ 2014ರಲ್ಲಿ ಬಸಪ್ಪ ಪತ್ನಿ ಸಾವಂತ್ರವ್ವ ಪಿಂಚಣಿಗೆ ಅರ್ಜಿ ಸಲ್ಲಿಸಿದ್ದರು. ಈ ವಿಚಾರದಲ್ಲಿ ನ್ಯಾಯಾಲಯದಲ್ಲಿ ಹಲವು ಸುತ್ತಿನ ವ್ಯಾಜ್ಯಗಳು ನಡೆದಿತ್ತು. ಅಂತಿಮವಾಗಿ ಸಾವಂತ್ರವ್ವಗೆ ಪಿಂಚಣಿ ಮತ್ತು ಹಿಂಬಾಕಿ ಪಾವತಿಸುವಂತೆ 2021ರ ಸೆ.14ರಂದು ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿತ್ತು. ಅದನ್ನು ಸರ್ಕಾರ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿತ್ತು.

ಸರ್ಕಾರದ ಮೇಲ್ಮನವಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ, 1992ರಿಂದ ಬಸಪ್ಪಗೆ ನೀಡುತ್ತಿದ್ದ ಪಿಂಚಣಿಯನ್ನು ಅಗತ್ಯ ದಾಖಲೆಗಳ ಕೊರತೆಯಿಂದ 2000ರಲ್ಲಿ ನಿಲ್ಲಿಸಲಾಗಿತ್ತು. ಬಸಪ್ಪ ಮರಣ ನಂತರದ 12 ವರ್ಷ ಬಳಿಕ ಸಾವಂತ್ರವ್ವ ಪಿಂಚಣಿ ಕೋರಿದ್ದರು. ಸರ್ಕಾರ ಆಕೆಯ ಮನವಿಯನ್ನು ಕೂಲಂಕಷವಾಗಿ ಪರಿಶೀಲಿಸಿ ನಿಯಮದಲ್ಲಿ ಅವಕಾಶವಿಲ್ಲದ ಕಾರಣ ಪಿಂಚಣಿ ನಿರಾಕರಿಸಿದೆ. ಹೀಗಿದ್ದರೂ ಏಕ ಸದಸ್ಯ ನ್ಯಾಯಪೀಠವು ಸಾವಂತ್ರವ್ವಗೆ ಪಿಂಚಣಿ ನೀಡಲು ನಿರ್ದೇಶಿಸಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿತಲ್ಲದೆ, ಏಕ ಸದಸ್ಯ ನ್ಯಾಯಪೀಠದ ಆದೇಶ ರದ್ದುಗೊಳಿಸಿ ತೀರ್ಪು ನೀಡಿದೆ.

click me!