ಮಳೆ ಕೊರತೆ: ತಮಿಳುನಾಡು ವರಸೆಗೆ ಕರ್ನಾಟಕದ ಡ್ಯಾಂಗಳೇ ಬರಿದು..!

By Kannadaprabha NewsFirst Published Aug 31, 2023, 7:01 AM IST
Highlights

ಮುಂಗಾರು ಮಳೆ ಕೈ ಕೊಟ್ಟ ಪರಿಣಾಮ ರಾಜ್ಯದ ಜಲಾಶಯಗಳಲ್ಲಿ ನೀರಿನ ಪ್ರಮಾಣ ತೀರಾ ಕಡಿಮೆಯಾಗುವಂತಾಗಿದೆ. ದಿನದಿಂದ ದಿನಕ್ಕೆ ಒಳಹರಿವು ಕಡಿಮೆಯಾಗುತ್ತಿದ್ದು, ಹೊರಹರಿವು ಮಾತ್ರ ಮಾಮೂಲಿಯಂತಿದೆ. ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳಲ್ಲಿ ಶೇ.45 ಮಾತ್ರ ನೀರು ಭರ್ತಿಯಾಗಿದೆ. ಅಲ್ಲದೆ, ಒಳಹರಿವಿಗಿಂತ ಹೆಚ್ಚು ನೀರನ್ನು ಹೊರಗೆ ಬಿಡಲಾಗುತ್ತಿದೆ. 

ಬೆಂಗಳೂರು(ಆ.31): ಮಳೆ ಕೊರತೆ ಹಿನ್ನೆಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾಜ್ಯದ ಅಣೇಕಟ್ಟುಗಳಲ್ಲಿನ ನೀರಿನ ಸಂಗ್ರಹ ತೀರಾ ಕಡಿಮೆಯಾಗಿದೆ. ಕಳೆದ ವರ್ಷದ ಆಗಸ್ಟ್‌ 30ರ ವೇಳೆಗೆ 467.45 ಟಿಎಂಸಿ ಅಡಿಗಳಷ್ಟು ನೀರು ರಾಜ್ಯದ 22 ಜಲಾಶಯಗಳಲ್ಲಿ ಶೇಖರಣೆಯಾಗಿತ್ತು. ಆದರೆ, ಈ ವರ್ಷ ಕೇವಲ 335.59 ಟಿಎಂಸಿ ಅಡಿ ನೀರು ಶೇಖರಣೆಯಾಗಿದೆ. ಅದರಲ್ಲೂ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಪ್ರಮಾಣ ತೀರಾ ಕಡಿಮೆಯಿದ್ದು, ಜನರಲ್ಲಿ ಆತಂಕ ಮನೆಮಾಡುವಂತಾಗಿದೆ.

ಮುಂಗಾರು ಮಳೆ ಕೈ ಕೊಟ್ಟ ಪರಿಣಾಮ ರಾಜ್ಯದ ಜಲಾಶಯಗಳಲ್ಲಿ ನೀರಿನ ಪ್ರಮಾಣ ತೀರಾ ಕಡಿಮೆಯಾಗುವಂತಾಗಿದೆ. ದಿನದಿಂದ ದಿನಕ್ಕೆ ಒಳಹರಿವು ಕಡಿಮೆಯಾಗುತ್ತಿದ್ದು, ಹೊರಹರಿವು ಮಾತ್ರ ಮಾಮೂಲಿಯಂತಿದೆ. ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳಲ್ಲಿ ಶೇ.45 ಮಾತ್ರ ನೀರು ಭರ್ತಿಯಾಗಿದೆ. ಅಲ್ಲದೆ, ಒಳಹರಿವಿಗಿಂತ ಹೆಚ್ಚು ನೀರನ್ನು ಹೊರಗೆ ಬಿಡಲಾಗುತ್ತಿದೆ. ಇದರಿಂದಾಗಿ ದಿನದಿಂದ ದಿನಕ್ಕೆ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ರೈತರಲ್ಲಿ ಆತಂಕವನ್ನುಂಟು ಮಾಡಿದೆ.

ಕರ್ನಾಟಕಕ್ಕೆ ಮತ್ತೆ ಕಾವೇರಿ ಕಂಟಕ: ತಮಿಳುನಾಡಿಗೆ ನಿತ್ಯ ನೀರು ಬಿಡುಗಡೆಗೆ ಆದೇಶ

ಮಳೆ ಕಡಿಮೆಯಾಗಿರುವ ಕಾರಣದಿಂದಾಗಿ ರಾಜ್ಯದ 22 ಜಲಾಶಯಗಳಲ್ಲಿ ಕಳೆದೊಂದು ವಾರದಲ್ಲಿ 17 ಟಿಎಂಸಿ ನೀರು ಕಡಿಮೆಯಾಗಿದೆ. ಆಗಸ್ಟ್‌ 23ರಲ್ಲಿ 352.47 ಟಿಎಂಸಿ ಅಡಿಗಳಷ್ಟುನೀರು ಜಲಾಶಯಗಳಲ್ಲಿ ಶೇಖರಣೆಯಾಗಿತ್ತು. ಅದೇ ಈಗ 335.59ಕ್ಕೆ ಇಳಿದಿದೆ. ಮುಂದಿನ ಕೆಲ ದಿನಗಳ ಕಾಲ ಮಳೆಯಾಗದಿದ್ದರೆ, ಒಳಹರಿವು ಹೆಚ್ಚದಿದ್ದರೆ ನೀರಿನ ಪ್ರಮಾಣ ಮತ್ತಷ್ಟು ಕುಸಿಯಲಿದೆ.

ಕಾವೇರಿ ಭಾಗದಲ್ಲಿ ಆತಂಕ:

ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ಸ್‌ ನೀರು ಹರಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿದೆ. ಅಲ್ಲದೆ ಶುಕ್ರವಾರ ಸುಪ್ರೀಂಕೋರ್ಚ್‌ನಲ್ಲಿ ಕಾವೇರಿ ನೀರಿನ ಕುರಿತಾದ ಪ್ರಕರಣದ ಕುರಿತ ವಿಚಾರಣೆಯಿದ್ದು, ಅಲ್ಲಿಯವರೆಗೆ ನೀರು ಬಿಡುವುದು ಅನಿವಾರ್ಯ ಎಂದು ರಾಜ್ಯ ಸರ್ಕಾರವೂ ಅಭಿಪ್ರಾಯ ವ್ಯಕ್ತಪಡಿಸಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳಲ್ಲಿನ ನೀರಿನ ಪ್ರಮಾಣ ಸಾಕಷ್ಟು ಕಡಿಮೆಯಿದೆ.

ನಾಲ್ಕೂ ಜಲಾಶಯಗಳಲ್ಲಿ ಒಟ್ಟು 70.67 ಟಿಎಂಸಿ ಅಡಿಗಳಷ್ಟುಮಾತ್ರ ನೀರಿದೆ. ಅದರಲ್ಲಿ ಕೆಆರ್‌ಎಸ್‌ನಲ್ಲಿ 24.07 ಟಿಎಂಸಿ ಅಡಿ, ಹೇಮಾವತಿಯಲ್ಲಿ 25.27 ಟಿಎಂಸಿ ಅಡಿ, ಹಾರಂಗಿಯಲ್ಲಿ 7.68 ಟಿಎಂಸಿ ಅಡಿ ಹಾಗೂ ಕಬಿನಿಯಲ್ಲಿ 13.65 ಅಡಿಗಳಷ್ಟುನೀರಿದೆ. ಆದರೆ, ಅದರಲ್ಲಿ ಒಟ್ಟು 23.32 ಟಿಎಂಸಿ ಅಡಿ ನೀರನ್ನು ಡೆಡ್‌ಸ್ಟೋರೇಜ್‌ ಎಂದು ನಿಗದಿ ಮಾಡಲಾಗಿದ್ದು, ಅದನ್ನು ಬಳಸುವಂತಿಲ್ಲ. ಹೀಗಾಗಿ ನಾಲ್ಕೂ ಜಲಾಶಯಗಳಿಂದ 47.35 ಟಿಎಂಸಿ ಅಡಿಗಳಷ್ಟುನೀರನ್ನು ಮಾತ್ರ ಬಳಕೆಗೆ ಲಭ್ಯವಿದೆ.

ತಮಿಳುನಾಡಿಗೆ ನೀರು ಹಸಿರುವುದು ಸಿದ್ದು, ಡಿಕೆಶಿ ಸೂತ್ರವಾ?: ಕೋಡಿಹಳ್ಳಿ ಚಂದ್ರಶೇಖರ್‌

ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ಮುಂದಿನ 15 ದಿನಗಳ ಕಾಲ 5 ಸಾವಿರ ಕ್ಯುಸೆಕ್‌ ನೀರನ್ನು ತಮಿಳುನಾಡಿಗೆ ಹರಿಯಬಿಡಬೇಕಿದೆ. ಹಾಗೇನಾದರು ನೀರು ಹರಿತಿಸಿದರೆ ಮುಂದಿನ 15 ದಿನಗಳಲ್ಲಿ ಮಳೆಯಾಗದಿದ್ದರೆ, ನಿರೀಕ್ಷೆಯಷ್ಟುಒಳಹರಿವು ಇಲ್ಲದಿದ್ದರೆ ನಾಲ್ಕೂ ಜಲಾಶಯಗಳಲ್ಲಿ ಕನಿಷ್ಠ 7.5 ಟಿಎಂಸಿ ಅಡಿಗಳಷ್ಟುನೀರು ಕಡಿಮೆಯಾಗಿ, ನೀರಿನ ಮಟ್ಟ40 ಟಿಎಂಸಿ ಅಡಿಗೆ ಇಳಿಯಲಿದೆ.

ಒಳಹರಿವಿಗಿಂತ, ಹೊರಹರಿವು ದುಪ್ಪಟ್ಟು

ಕಾವೇರಿ ಕೊಳ್ಳದ ಜಲಾಶಯಗಳ ಹೊರಹರಿವಿನ ಪ್ರಮಾಣ ಒಳಹರಿವಿಗಿಂತ ಶೇ. 120ರಷ್ಟಿದೆ. ನಾಲ್ಕೂ ಜಲಾಶಯಗಳಿಗೆ ಆಗಸ್ಟ್‌ 30ಕ್ಕೆ 6,054 ಕ್ಯೂಸೆಕ್ಸ್‌ನಷ್ಟುಒಳಹರಿವಿತ್ತು. ಅದೇ ನದಿ ಹಾಗೂ ಕೆನಾಲ್‌ಗಳ ಮೂಲಕ ಹರಿಬಿಡುತ್ತಿರುವ ನೀರಿನ ಪ್ರಮಾಣ 14,173 ಕ್ಯುಸೆಕ್‌ ಇದೆ. ಅದರಲ್ಲೂ ಹೇಮಾವತಿ ಜಲಾಶಯಕ್ಕೆ 952 ಕ್ಯುಸೆಕ್‌, 6,025 ಕ್ಯೂಸೆಕ್ಸ್‌ ನೀರು ಜಲಾಶಯದಿಂದ ಹೊರಗೆ ಬಿಡಲಾಗುತ್ತಿದೆ. ಕೆಆರ್‌ಎಸ್‌ನಲ್ಲಿ 2,300 ಕ್ಯುಸೆಕ್‌ ಒಳಹರಿವು, 4,448 ಕ್ಯುಸೆಕ್‌ ಹೊರಹರಿವು, ಕಬಿನಿಯಲ್ಲಿ 2,594 ಕ್ಯುಸೆಕ್‌ ಒಳಹರಿವು, 2 ಸಾವಿರ ಕ್ಯುಸೆಕ್‌ ಹೊರಹರಿವು, ಹಾರಂಗಿ ಜಲಾಶಯದಲ್ಲಿ 208 ಒಳಹರಿವು ಹಾಗೂ 1,700 ಕ್ಯುಸೆಕ್‌ ಹೊರಹರಿವಿದೆ.

click me!