ರಾಜ್ಯ ಅಕ್ರಮ ಬಾಂಗ್ಲನ್ನರ ಸಾಮ್ರಾಜ್ಯ!

By Kannadaprabha NewsFirst Published Oct 23, 2019, 7:34 AM IST
Highlights

ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಾಂಗ್ಲಾದೇಶದ ಪ್ರಜೆಗಳು ತಮ್ಮ ಅಸ್ತಿತ್ವ ವಿಸ್ತರಿಸಿಕೊಂಡಿದ್ದಾರೆ. ಹಲವು ರೀತಿಯ ಸಾಮಾಜಿಕ ಸಮಸ್ಯೆಗಳ ಹುಟ್ಟಿಗೂ ಅವರು ಕಾರಣರಾಗಿದ್ದಾರೆ.

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು [ಅ.23] :  ದಶಕಗಳ ಹಿಂದೆ ಹಸಿವು ನೀಗಿಸಿಕೊಳ್ಳಲು ದೇಶದ ಗಡಿಯೊಳಗೆ ನುಸುಳಿ ಅಕ್ರಮ ಹಾದಿ ಮೂಲಕ ಕರುನಾಡಿಗೆ ಕಾಲಿಟ್ಟನೆರೆಯ ಬಾಂಗ್ಲಾದೇಶದ ಪ್ರಜೆಗಳು ಈಗ ರಾಜ್ಯದ ಭದ್ರತೆಗೆ ಆತಂಕಕಾರಿಯಾಗಿ ಪರಿಣಮಿಸಿದ್ದಾರೆ.

ಮೊದಲೆಲ್ಲ ಈಶಾನ್ಯ ರಾಜ್ಯಗಳಲ್ಲಿ ಮಾತ್ರ ಕಾಣಬರುತ್ತಿದ್ದ ಬಾಂಗ್ಲಾ ಪ್ರಜೆಗಳ ಹಾವಳಿ ಈಗ ವಿಸ್ತಾರವಾಗಿದ್ದು, ಕರ್ನಾಟಕ ಕೂಡ ಇದನ್ನು ಎದುರಿಸಬೇಕಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಾಂಗ್ಲಾದೇಶದ ಪ್ರಜೆಗಳು ತಮ್ಮ ಅಸ್ತಿತ್ವ ವಿಸ್ತರಿಸಿಕೊಂಡಿದ್ದಾರೆ. ಹಲವು ರೀತಿಯ ಸಾಮಾಜಿಕ ಸಮಸ್ಯೆಗಳ ಹುಟ್ಟಿಗೂ ಅವರು ಕಾರಣರಾಗಿದ್ದಾರೆ.

ಕಾಸ್ಮೋಪಾಲಿಟಿನ್‌ ಸಿಟಿ, ಐಟಿ ಹಬ್‌ ಎಂಬ ಖ್ಯಾತಿ ಪಡೆದ ಬೆಂಗಳೂರಿಗೆ ಇಂದು ಬಾಂಗ್ಲಾದೇಶದ ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಸದಸ್ಯರ ಆಶ್ರಯ ತಾಣ ಎಂಬ ಕಳಂಕ ಮೆತ್ತಿಕೊಂಡಿದೆ. ತುತ್ತಿನ ಚೀಲ ತುಂಬಿಸಿಕೊಳ್ಳಲು ಬಂದ ವಲಸಿಗರು ಈಗ ರಾಜ್ಯದ ಮತದಾರರಾಗಿದ್ದಾರೆ. ತಿಂಗಳು ತಿಂಗಳು ಅವರ ಜೋಳಿಗೆಗೂ ಸರ್ಕಾರದ ಪಡಿತರ ಬೀಳುತ್ತದೆ. ದೇಶದ ನಾಗರಿಕ ಎನ್ನಿಸಿಕೊಳ್ಳಲು ಅವರ ಜೇಬಿನಲ್ಲಿ ಆಧಾರ್‌ ಕಾರ್ಡ್‌ಗಳು ಸಿಗುತ್ತವೆ. ಈ ಪೈಕಿ ಹಲವರು ಮತ್ತೊಂದು ಅವತಾರದಲ್ಲಿ ಮನೆಗಳ್ಳತನ, ವೇಶ್ಯಾವಾಟಿಕೆ, ಕೊಲೆ ಹೀಗೆ ಅಪರಾಧ ಚಟುವಟಿಕೆ ಆರಂಭಿಸಿ ಆಂತರಿಕ ಭದ್ರತೆಗೆ ಆತಂಕ ತಂದೊಡ್ಡಿದ್ದಾರೆ.

ಸುಮಾರು ಹತ್ತು ವರ್ಷಗಳ ಹಿಂದೆ ನೂರರ ಲೆಕ್ಕದಲ್ಲಿ ಎಣಿಕೆ ಮಾಡಬಹುದಾಗಿದ್ದ ಈ ವಲಸೆ ಹಕ್ಕಿಗಳ ಹಿಂಡು ಇಂದು ಬೃಹತ್ತಾಗಿದೆ. ಬೆಂಗಳೂರಿನ ವ್ಯಾಪ್ತಿ ಮೀರಿ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಗೂಡು ಕಟ್ಟಿಕೊಂಡಿದ್ದಾರೆ. ಆದರೆ ಸರ್ಕಾರದ ದಾಖಲೆಗಳಲ್ಲಿ ಇವತ್ತಿಗೂ ರಾಜ್ಯದಲ್ಲಿ ನೆಲೆಸಿರುವ ಅಕ್ರಮ ಬಾಂಗ್ಲಾ ವಲಸಿಗರ ಕುರಿತು ನಿಖರವಾದ ಮಾಹಿತಿ ಇಲ್ಲ. ಮೂರು ದಿನಗಳ ಹಿಂದೆ ಮುಖ್ಯಮಂತ್ರಿಗಳು ಕರೆದಿದ್ದ ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆಯಲ್ಲಿ 15ರಿಂದ 20 ಸಾವಿರ ಅಕ್ರಮ ವಲಸಿಗರಿದ್ದಾರೆ ಎಂಬ ಅಂದಾಜಿನ ಮಾಹಿತಿ ನೀಡಲಾಗಿದೆ. ಆದರೆ ಖಾಸಗಿ ಸಂಸ್ಥೆಗಳು ಹಾಗೂ ಸಾಮಾಜಿಕ ಕಾರ್ಯಕರ್ತರು, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸರಿಸುಮಾರು 80ರಿಂದ 90 ಸಾವಿರ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ ಎನ್ನುತ್ತಾರೆ.

ಆರಂಭದಲ್ಲಿ ಚಿಂದಿ ಆಯಲು ಬಂದ ಬಾಂಗ್ಲಾ ಪ್ರಜೆಗಳ ಕಾಯಕ ಕೂಡ ಕ್ರಮೇಣ ಬದಲಾಯಿತು. ಖಾಸಗಿ ಆಸ್ಪತ್ರೆಗಳು, ಕಂಪನಿಗಳು ಹಾಗೂ ಸುಲಭ ಶೌಚಾಲಯಗಳಲ್ಲಿ ಸ್ವಚ್ಛತಾ ಕೆಲಸಗಳು ಅವರ ಪಾಲಾದವು. ನಂತರ ಹೋಟೆಲ್‌ಗಳಿಗೆ ಪ್ರವೇಶಿಸಿದ ಅವರು, ತರುವಾಯ ಗ್ರಾಮೀಣ ಪ್ರದೇಶಗಳಿಗೂ ಲಗ್ಗೆ ಹಾಕಿ ಕಾಫಿ ಎಸ್ಟೇಟ್‌, ತೋಟ ಮತ್ತಿತರ ಕೃಷಿ ಜಮೀನುಗಳಲ್ಲಿ ಕೆಲಸಕ್ಕೆ ಸೇರಿದ್ದಾರೆ. ಕಸಾಯಿಖಾನೆಗಳು, ಚರ್ಮೋದ್ಯಮ ಕಾರ್ಖಾನೆಗಳು ಹೀಗೆ ಶ್ರಮದಾಯಕ ಕಾಯಕಗಳಲ್ಲಿ ಬಾಂಗ್ಲಾ ಪ್ರಜೆಗಳು ತೊಡಗಿದ್ದಾರೆ. ಖಾಸಗಿ ವಲಯದ ಭದ್ರತೆಯಲ್ಲಿ ಸಹ ಇದ್ದಾರೆ. ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ ಲಭಿಸಿದ ಬಳಿಕ ಅವರು ಚಾಲಕ ವೃತ್ತಿ ಆರಂಭಿಸಿದ್ದಾರೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತರು.

ಅಸ್ಸಾಂ, ಪಶ್ಚಿಮ ಬಂಗಾಳವೇ ದಾರಿ:

ಭಾರತಕ್ಕೆ ಅಕ್ರಮವಾಗಿ ಬಾಂಗ್ಲಾ ಪ್ರಜೆಗಳು ನುಸುಳಲು ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳ ಗಡಿಗಳೇ ಅವರಿಗೆ ಹೆದ್ದಾರಿಗಳಾಗಿವೆ. ಕುರಿಗಾಹಿಗಳ ಸೋಗಿನಲ್ಲಿ ಭದ್ರತಾ ಪಡೆಗಳ ಕಣ್ತಪ್ಪಿಸಿ ದೇಶದೊಳಗೆ ನುಗ್ಗುವ ಅವರು, ಅನಂತರ ಬೇರೆ ಬೇರೆ ರಾಜ್ಯಗಳಿಗೆ ವಲಸೆ ಹೋಗಿ ನೆಲೆ ನಿಲ್ಲುತ್ತಾರೆ. ಹೀಗೆ ಕರ್ನಾಟಕಕ್ಕೂ ಬಂದಿದ್ದಾರೆ.

ರೈಲುಗಳ ಮೂಲಕವೇ ಅವರು ಬೆಂಗಳೂರಿಗೆ ಬಂದಿಳಿಯುತ್ತಾರೆ. ಕೆಲ ದಿನಗಳು ನಗರದಲ್ಲಿ ವಾಸವಾಗಿ ಬಳಿಕ ಬೇರೆಡೆ ಹೋಗಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ ಎಂದು ಹೆಸರು ಹೇಳ ಬಯಸದ ಹಿರಿಯ ಅಧಿಕಾರಿಗಳು ಹೇಳುತ್ತಾರೆ.

ಕಡಿಮೆ ಸಂಬಳಕ್ಕಾಗಿ ಜನರಿಗೆ ಪ್ರೀತಿ:

ಅಕ್ರಮ ಬಾಂಗ್ಲಾ ವಲಸಿಗರು ಶ್ರಮದಾಯಕ ಕೆಲಸಗಳಿಗೂ ಸಹ ಸೈ ಎನ್ನುತ್ತಿದ್ದಾರೆ. ಅಲ್ಲದೆ, ಸ್ಥಳೀಯರಿಗಿಂತ ಕಡಿಮೆ ಕೂಲಿ ಪಡೆದು ಬೆವರು ಸುರಿಸಿ ದುಡಿಯುತ್ತಾರೆ. ಹೀಗಾಗಿ ಹೊರಗಿನವರಿಗೆ ಹೆಚ್ಚಿನ ಪ್ರೀತಿ ತೋರುವ ಸಾರ್ವಜನಿಕರು, ಅಕ್ರಮ ಬಾಂಗ್ಲಾ ವಲಸಿಗರಿಗೆ ರಾಜ್ಯದಲ್ಲಿ ನೆಲೆಯೂರಲು ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ಪೊಲೀಸರು ಹೇಳುತ್ತಾರೆ.

ಬೆಂಗಳೂರಿನಲ್ಲಿ ಕಸ ಗುಡಿಸುವ, ಸುಲಭ ಶೌಚಾಲಯಗಳ ಸ್ವಚ್ಛತೆ, ಖಾಸಗಿ ಕಂಪನಿಗಳ ಸ್ವಚ್ಛತಾ ವಿಭಾಗ ಹಾಗೂ ಹೋಟೆಲ್‌ಗಳಲ್ಲಿ ಕೆಲಸ ಮಾಡುವ ಬಹುಪಾಲು ಕಾರ್ಮಿಕರು ಅಕ್ರಮ ಬಾಂಗ್ಲಾ ವಲಸಿಗರೇ ಆಗಿದ್ದಾರೆ. ಅದೇ ರೀತಿ ಚಿಕ್ಕಮಗಳೂರು, ಮಡಿಕೇರಿ ಜಿಲ್ಲೆಗಳ ಕಾಫಿ ಎಸ್ಟೇಟ್‌ಗಳ ಕೂಲಿಗಳಲ್ಲೂ ಬಾಂಗ್ಲಾ ನಿವಾಸಿಗಳಿದ್ದಾರೆ. ವಿಜಯಪುರ, ಬೆಂಗಳೂರು, ಮೈಸೂರು, ಮಂಗಳೂರು ಹಾಗೂ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಹಲವೆಡೆ ಕಸಾಯಿಖಾನೆಗಳು ಹಾಗೂ ಚರ್ಮೋದ್ಯಮದಲ್ಲೂ ಸಹ ವಲಸಿಗರ ಪಾರುಪತ್ಯ ನಡೆದಿದೆ. ರಾಜ್ಯದ ಪ್ರಮುಖ ನಗರ ಮತ್ತು ಪಟ್ಟಣಗಳಲ್ಲಿ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಕೂಡಾ ಬಾಂಗ್ಲಾ ಪ್ರಜೆಗಳು ಬಳಕೆಯಾಗುತ್ತಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಅಸ್ಸಾಂನವರು ಎಂದು ಹೇಳಿಕೊಂಡು ನೌಕರಿ

ರಾಜ್ಯದಲ್ಲಿ ಖಾಸಗಿ ವಲಯ ಮತ್ತು ಕೃಷಿ ಕ್ಷೇತ್ರದಲ್ಲಿ ಅಸ್ಸಾಂ ಪ್ರಜೆಗಳ ಸೋಗಿನಲ್ಲಿ ಬಾಂಗ್ಲಾ ವಲಸಿಗರು ಕೆಲಸ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅವರ ಪೂರ್ವಾಪರ ವಿಚಾರಿಸಿದಾಗಲೇ ಸತ್ಯ ಗೊತ್ತಾಗುತ್ತದೆ. ಆದರೆ ಕೂಲಿ ವಿಚಾರದಲ್ಲಿ ತಕರಾರು ಮಾಡದ ವಲಸಿಗರ ಚರಿತ್ರೆ ಕೆದಕುವ ಗೋಜಿಗೆ ಖಾಸಗಿ ವಲಯ ಹೋಗುತ್ತಿಲ್ಲ. ಇದೇ ಭವಿಷ್ಯದಲ್ಲಿ ರಾಜ್ಯದ ಭದ್ರತೆಗೆ ಭೀತಿ ಸೃಷ್ಟಿಸುವ ಶಕ್ತಿಗಳ ಉಗಮಕ್ಕೆ ಕಾರಣವಾಗುತ್ತಿದೆ ಎಂದು ಪೊಲೀಸರು ಹೇಳುತ್ತಾರೆ.

ಮೊದಲು ಸರ್ಕಾರವು ಅಕ್ರಮ ನಿವಾಸಿಗಳು ಮತ್ತು ವಲಸಿಗರ ನಡುವಿನ ವ್ಯತ್ಯಾಸ ತಿಳಿಯಬೇಕು. ವೀಸಾ ಅವಧಿ ಮುಗಿದ ಬಳಿಕ ನೆಲೆಸುವ ಆಫ್ರಿಕಾ ಪ್ರಜೆಗಳ ಮೇಲಷ್ಟೆಸರ್ಕಾರ ಕ್ರಮ ಜರುಗಿಸುತ್ತಿದೆ. ಆದರೆ ದಿನೇ ದಿನೇ ದೇಶದ ಭದ್ರತೆಗೆ ಸಮಸ್ಯೆಯಾಗುತ್ತಿರುವ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಠಿಣ ನಿಲುವು ತಾಳುತ್ತಿಲ್ಲ.

- ಸುಧೀರ್‌ ಶೆಟ್ಟಿ, ಅಕ್ರಮ ಬಾಂಗ್ಲಾ ಪ್ರಜೆಗಳ ವಿರೋಧಿ ಅಂದೋಲನದ ಕಾರ್ಯಕರ್ತ

click me!