ಈ ಅವಧಿಯಲ್ಲಿ ಅಧಿಕ ಮಳೆಯಿಂದಾಗಿ 84 ಮನೆಗಳು ಸಂಪೂರ್ಣ ಹಾನಿಗೀಡಾಗಿದ್ದು, 2077 ಮನೆಗಳು ಭಾಗಶಃ ಹಾನಿಗೀಡಾಗಿವೆ. ಪೂರ್ತಿ ಮನೆಗೆ 1.20 ಲಕ್ಷ ರು. ಪರಿಹಾರ ಹಾಗೂ ಮನೆ ನಿರ್ಮಿಸಿ ಕೊಡಲು ಈಗಾಗಲೇ ಆದೇಶಿಸಲಾಗಿದೆ. ಭಾಗಶಃ ಹಾನಿಗೀಡಾದ ಮನೆಗಳಿಗೆ 50 ಸಾವಿರದವರೆಗೆ ಪರಿಹಾರ ಒದಗಿಸಲು ಆದೇಶಿಸಲಾಗಿದೆ. ಜತೆಗೆ ಈ ನಿಯಮವನ್ನು ಡಿಸೆಂಬರ್‌ವರೆಗೆ ವಿಸ್ತರಿಸಲಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು(ಅ.27): ರಾಜ್ಯದಲ್ಲಿ ಕಳೆದ 25 ದಿನಗಳಲ್ಲಿ 100 ವರ್ಷ ಗಳಲ್ಲೇ 3ನೇ ಅತಿ ಹೆಚ್ಚು ದಾಖಲೆ ಪ್ರಮಾಣದ ಮಳೆಯಾಗಿದೆ. ಈ ಅತಿವೃಷ್ಟಿಯಿಂದ ಉಂಟಾಗಿರುವ ಸಾವು ಹಾಗೂ ಮನೆಗಳ ಹಾನಿಗೆ ಕಡ್ಡಾಯವಾಗಿ 48 ಗಂಟೆಗಳಲ್ಲಿ ಪರಿಹಾರ ಒದಗಿಸಬೇಕು. ಬೆಳೆ ಹಾನಿ ಕುರಿತು ಒಂದು ವಾರದಲ್ಲಿ ಜಂಟಿ ಸಮೀಕ್ಷೆ ನಡೆಸಿ ವರದಿ ನೀಡ ಬೇಕು ಎಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಅಲ್ಲದೆ, ನವೆಂಬರ್ ಹಾಗೂ ಡಿಸೆಂಬರ್ ನಲ್ಲೂ ಹೆಚ್ಚು ಮಳೆಯ ಮುನ್ಸೂಚನೆ ಲಭ್ಯವಾಗಿದೆ. ಹೀಗಾಗಿ ಸಂಭವನೀಯ ಅತಿವೃಷ್ಟಿ, ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಗಳು ಖುದ್ದು ಭೇಟಿ ನೀಡಿ ಯಾವುದೇ ಅನಾಹುತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಆದೇಶ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಎಲ್ಲಾ ಜಿಲ್ಲಾಧಿಕಾರಿ ಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ನೆರೆ ಪರಿಹಾರ ಕ್ರಮಗಳು ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಹಲವು ಸೂಚನೆಗಳನ್ನು ನೀಡಿದರು.
undefined
ಕೇವಲ 25 ದಿನದಲ್ಲಿ ವಾಡಿಕೆಗಿಂತ ಶೇ.58ರಷ್ಟು ಹೆಚ್ಚು ಸುರಿದ ಹಿಂಗಾರು ಮಳೆ: 25 ಮಂದಿ ಸಾವು!
ದಾಖಲೆ ಮಳೆ:
ಅಧಿಕಾರಿಗಳ ಜೊತೆ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 'ಅ.1 ರಿಂದ ಅ.25ರವರೆಗೆ ವಾಡಿಕೆ ಮಳೆ 114 ಮಿ.ಮೀ ಮಾತ್ರ. ಆದರೆ ಈ ಬಾರಿ 181 ಮಿ.ಮೀ. ಮಳೆಯಾಗಿದೆ. ಇದು ಕಳೆದ 100 ವರ್ಷಗಳಲ್ಲಿ ಮೂರನೇ ಅತ್ಯಧಿಕ ಮಳೆ ದಾಖಲೆಯಾಗಿದೆ. ಈ ಹಿಂದೆ 2005, 1946ರಲ್ಲಿ ದಾಖಲೆ ಮಳೆಯಾಗಿತ್ತು. ಈ ಮೊದಲು ಮುಂಗಾರು ಮಳೆ ಶೇ.15ರಷ್ಟು ಹೆಚ್ಚು ಸುರಿದಿತ್ತು. ಇದೀಗ ಹಿಂಗಾರಿನಲ್ಲೂ 58 ಮಿ.ಮೀ. ಮಳೆ ಜಾಸ್ತಿಯಾಗಿದೆ. ಹಿಂಗಾರಿನಲ್ಲಿ ಅತಿವೃಷ್ಟಿಯಿಂದ ಒಟ್ಟು 25 ಸಾವು ಸಂಭವಿಸಿದ್ದು, ತುರ್ತಾಗಿ ಪರಿಹಾರ ಪಾವತಿಸಲಾಗಿದೆ' ಎಂದು ತಿಳಿಸಿದರು.
ಮನೆಗಳಿಗೆ ಪರಿಹಾರ:
ಈ ಅವಧಿಯಲ್ಲಿ ಅಧಿಕ ಮಳೆಯಿಂದಾಗಿ 84 ಮನೆಗಳು ಸಂಪೂರ್ಣ ಹಾನಿಗೀಡಾಗಿದ್ದು, 2077 ಮನೆಗಳು ಭಾಗಶಃ ಹಾನಿಗೀಡಾಗಿವೆ. ಪೂರ್ತಿ ಮನೆಗೆ 1.20 ಲಕ್ಷ ರು. ಪರಿಹಾರ ಹಾಗೂ ಮನೆ ನಿರ್ಮಿಸಿ ಕೊಡಲು ಈಗಾಗಲೇ ಆದೇಶಿಸಲಾಗಿದೆ. ಭಾಗಶಃ ಹಾನಿಗೀಡಾದ ಮನೆಗಳಿಗೆ 50 ಸಾವಿರದವರೆಗೆ ಪರಿಹಾರ ಒದಗಿಸಲು ಆದೇಶಿಸಲಾಗಿದೆ. ಜತೆಗೆ ಈ ನಿಯಮವನ್ನು ಡಿಸೆಂಬರ್‌ವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿದರು. ಇನ್ನು ನವೆಂಬರ್ ಹಾಗೂ ಡಿಸೆಂಬರ್‌ನಲ್ಲೂ ಹೆಚ್ಚು ಮಳೆ ಇರುವುದರಿಂದ ಜಿಲ್ಲಾಧಿಕಾರಿಗಳು ಕಟ್ಟೆಚ್ಚರ ವಹಿಸಬೇಕು. ಸಾವು ಹಾಗೂ ಮನೆ ಹಾನಿಗಳಿಗೆ 48 ಗಂಟೆಗಳಲ್ಲಿ ಪರಿಹಾರ ಕಲಿಸಬೇಕು ಸೂಚಿಸಿರುವುದಾಗಿ ತಿಳಿಸಿದರು.
ಜಂಟಿ ಬೆಳೆ ಹಾನಿ ಸಮೀಕ್ಷೆಗೆ ಸೂಚನೆ:
ಬೆಳೆ ಹಾನಿ ಕುರಿತು ಸ್ಥಳ ಪರಿಶೀಲನೆ ನಡೆಸಿದ ಆಧಾರದಲ್ಲಿ ಪ್ರಾಥಮಿಕ ವರದಿಯನ್ನು ಪಡೆಯಲಾಗಿದೆ. ಅತಿವೃಷ್ಟಿಯಿಂದಾಗಿ ಅಂದಾಜು 74,993 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ಹಾನಿ, 30,941 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆ ಹಾನಿ ಸೇರಿ ಒಟ್ಟು 1,05,937 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಆಗಿದೆ. ಬೆಳೆ ಹಾನಿಯ ಕುರಿತು ಕೃಷಿ, ಕಂದಾಯ ಹಾಗೂ ತೋಟಗಾರಿಕೆ ಇಲಾಖೆ ಜಂಟಿ ಸಮೀಕ್ಷೆ ನಡೆಯುತ್ತಿದ್ದು, 3-4 ದಿನಗಳಲ್ಲಿ ಸಮೀಕ್ಷೆ ಕಾರ್ಯ ಪೂರ್ಣಗೊಳ್ಳಲಿದೆ. ಜಂಟಿ ಸಮೀಕ್ಷೆ ಕಾರ್ಯವನ್ನು ಒಂದು ವಾರದ ಒಳಗಾಗಿ ಪೂರ್ಣಗೊಳಿಸಿವರದಿಯನ್ನು ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
667 ಕೋಟಿ ರು. ಅನುದಾನ:
ಅತಿವೃಷ್ಟಿ ಪರಿಹಾರ ಕಾರ್ಯಗಳಿಗೆ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 551.25 ಕೋಟಿ ಹಾಗೂ ತಹಶೀಲ್ದಾರ್ ಅವರ ಖಾತೆಯಲ್ಲಿ 115.71 ಕೋಟಿ ಸೇರಿದಂತೆ ಒಟ್ಟು 666.96 ಕೋಟಿ ರು. ಹಣ ಲಭ್ಯವಿದೆ. ಅತಿವೃಷ್ಟಿಯಿಂದಾಗಿ 12,553 ಕಿ.ಮೀ. ಗ್ರಾಮೀಣ ರಸ್ತೆಗಳು, ಗ್ರಾಮೀಣ ಪ್ರದೇಶಗಳಲ್ಲಿ 1106 ಸಣ್ಣ ಸೇತುವೆ, ಮೋರಿಗಳು ಹಾನಿಗೀಡಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯಗಳಿಗೆ ಉಂಟಾಗಿರುವ ಹಾನಿ ಕುರಿತು ಸಮಗ್ರ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಮೂರು ಜಿಲ್ಲೆಗಳಲ್ಲಿ ವರುಣನ ಆರ್ಭಟ, ಮುಂದುವರಿದ ಸಂಕಷ್ಟ: ಬೆಂಗ್ಳೂರಲ್ಲಿ ತಗ್ಗಿದ ಮಳೆ!
ಬೆಳೆಗಳಿಗೆ ನೀರೊದಗಿಸಲು ಸೂಚನೆ:
ರಾಜ್ಯದ ಪ್ರಮುಖ ಜಲಾಶಯಗಳ ಒಟ್ಟು ಸಂಗ್ರಹಣಾ ಸಾಮರ್ಥ್ಯ 895.62 ಟಿಎಂಸಿ ಆಗಿದ್ದು, ಪ್ರಸ್ತುತ 871.26 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದು 505.81 ಟಿಎಂಸಿ ಇತ್ತು. ಪ್ರಸ್ತುತ ಹಿಂಗಾರಿನಲ್ಲೂ ನೀರು ಲಭ್ಯವಿದ್ದು, ಅವಕಾಶ ಇರುವ ಕಡೆ ರೈತರಿಗೆ ಬೆಳೆಗಳಿಗೆ ನೀರೊದಗಿಸಲು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಹೆಚ್ಚುವರಿ ಬಿತ್ತನೆಗೆ ರೈತರಿಂದ ಬಿತ್ತನೆ ಬೀಜಕ್ಕೆ ಬೇಡಿಕೆ ಬಂದರೆ ಅದನ್ನು ಒದಗಿಸಲು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ರೈತರಿಗೆ ಪರ್ಯಾಯ ಬೆಳೆ ಬೆಳೆಸಲು ಬಿತ್ತನೆ ಬೀಜ ಲಭ್ಯವಿದೆ. ಬಿತ್ತನೆ ಬೀಜ ಮತ್ತು ಗೊಬ್ಬರ ಸಾಕಷ್ಟು ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಕೃಷ್ಣ ಬೈರೇಗೌಡ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಕಾರ್ಮಿಕ ಸಚಿವ ಸಂತೋಷ್ ಲಾಡ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿ ಹಲವರು ಹಾಜರಿದ್ದರು.