ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್ ಮತ್ತು ಅರಣ್ಯಾಧಿಕಾರಿ ಮಹೇಶ್ ಬಿಳೆಯಗೆ ತಲಾ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಸಿಬಿಐ ದಾಖಲಿಸಿದ್ದ 6 ಪ್ರಕರಣಗಳಲ್ಲಿ ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿತ್ತು.
ಬೆಂಗಳೂರು (ಅ.26): ರಾಜ್ಯದಲ್ಲಿ 2010ರಲ್ಲಿ ನಡೆದ ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಆರೋಪಿಗಳಾದ ಕಾರವಾರದ ಶಾಸಕ ಸತೀಶ್ ಸೈಲ್ ಹಾಗೂ ಅರಣ್ಯಾಧಿಕಾರಿ ಆಗಿದ್ದ ಮಹೇಶ್ ಬಿಳೆಯ ಅವರಿಗೆ ಮೊದಲ ಮತ್ತು 2ನೇ ಪ್ರಕರಣಗಳಲ್ಲಿ ತಲಾ 7 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ಹೊರಡಿಸಿದೆ.
ಬೆಲೇಕೆರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಅಧೀನದ ತನಿಖಾ ಸಂಸ್ಥೆ ಸಿಬಿಐನಿಂದ ಬೇಲೇಕೇರಿ ಅದಿರು ನಾಪತ್ತೆಗೆ ಸಂಬಂಧಿಸಿದಂತೆ ದಾಖಲಾದ 6 ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿತ್ತು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ವಾದ, ಪ್ರತಿವಾದ ಆಲಿಸಿ ಅ.24ರಂದು ಅಂತಿಮ ಆದೇಶವನ್ನು ಹೊರಡಿಸಿದ್ದರು. ಈ ವೇಳೆ ಒಟ್ಟು 6 ಪ್ರಕರಣಗಳಲ್ಲಿ ಶಾಸಕ ಸತೀಶ್ ಸೈಲ್ ಹಾಗೂ ಅರಣ್ಯ ಸಂರಕ್ಷಣಾಧಿಕಾರಿ ಆಗಿದ್ದ ಮಹೇಶ್ ಬಿಳೆಯಿ ಅಪರಾಧಿ ಎಂದು ಆದೇಶ ಹೊರಡಿಸಲಾಗಿತ್ತು. ಇದೀಗ ಶಿಕ್ಷೆ ವಿಧಿಸಲಾಗಿದೆ. ಮೊದಲ ಕೇಸಿನಲ್ಲಿ ಶಾಸಕ ಸತೀಶ್ ಸೈಲ್ ಹಾಗೂ ಅರಣ್ಯಾಧಿಕಾರಿ ಆಗಿದ್ದ ಮಹೇಶ್ ಬಿಳೆಯ ಅವರಿಗೆ ತಲಾ 7 ವರ್ಷ ಶಿಕ್ಷೆ ಹಾಗೂ ಎಲ್ಲಾ ಆರೋಪಿಗಳಿಗೂ ಸೇರಿ 9.60 ಕೋಟಿ ರೂ. ದಂಡ ವಿಧಿಸಿದೆ.
undefined
ಇದನ್ನೂ ಓದಿ: ಬೇಲೇಕೇರಿ ಅದಿರು ನಾಪತ್ತೆ 6 ಕೇಸಲ್ಲೂ ಶಾಸಕ ಸತೀಶ್ ಸೈಲ್ ಅಪರಾಧಿ; 7 ಮಂದಿ ಜೈಲುಪಾಲು!
ಇನ್ನು ಬೆೇಲೇಕೇರಿ ಅದಿರು ನಾಪತ್ತೆಯ 2ನೇ ಪ್ರಕರಣದಲ್ಲಿಯೂ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ ಹಾಗೂ ಎಲ್ಲಾ ಆರೋಪಿಗಳಿಗೂ ಸೇರಿ 6 ಕೋಟಿ ರೂ. ಡಂಡವನ್ನು ವಿಧಿಸಲಾಗಿದೆ. ಇನ್ನು 3ನೇ ಪ್ರಕರಣದಲ್ಲಿಯೂ ಶಾಸಕ ಸತೀಶ್ ಸೈಲ್ ಸೇರಿದಂತೆ ಎಲ್ಲ ಆರೋಪಿಗಳಿಗೂ ತಲಾ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದ್ದು, ಎಲ್ಲ ಆರೋಪಿಗಳಿಗೆ ಸೇರಿ 9.36 ಕೋಟಿ ರೂ. ದಂಡ ವಿಧಿಸಲಾಗಿದೆ. 4ನೇ ಪ್ರಕರಣದಲ್ಲಿಯೂ ಸತೀಶ್ ಸೈಲ್ ಸೇರಿ ಎಲ್ಲ ಆರೋಪಿಗಳಿಗೆ ತಲಾ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದ್ದು, ಎಲ್ಲ ಆರೋಪಿಗಳಿಗೆ ಸೇರಿ 9.52 ಕೋಟಿ ರೂ. ದಂಡ ವಿಧಿಸಲಾಗಿದೆ. ಇನ್ನು ದಂಡ ಪಾವತಿ ಮಾಡಲಾಗದಿದ್ದಲ್ಲಿ ಒಂದು ವರ್ಷ ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಲು ಆದೇಶ ಹೊರಡಿಸಲಾಗಿದೆ.
ಮುಂದುವರೆದು 5ನೇ ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್ ಸೇರಿದಂತೆ ಎಲ್ಲಾ ಆರೋಪಿಗಳಿಗೂ 120(B) ಅಡಿ ತಲಾ 5 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಜೊತೆಗೆ, 9.25 ಕೋಟಿ ರೂ. ದಂಡ ವಿಧಿಸಲಾಗಿದೆ. 6ನೇ ಪ್ರಕರಣದಲ್ಲಿಯೂ ಸತೀಶ್ ಸೈಲ್ ಸೇರಿದಂತೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದ್ದು, ಇದರಲ್ಲಿ 90 ಲಕ್ಷ ರೂ. ದಂಡ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ. ದಂಡ ಪಾವತಿಸದೇ ಇದ್ದಲ್ಲಿ ಒಂದು ವರ್ಷ ಹೆಚ್ಚುವರಿ ಜೈಲು ಶಿಕ್ಷೆ ವಿಸ್ತರಣೆ ಮಾಡಲಾಗುತ್ತದೆ. ಒಟ್ಟಾರೆಯಾಗಿ ಬೇಲೇಕೇರಿ ಅದಿರು ನಾಪತ್ತೆ ಮಾಡಿದ 6 ಪ್ರಕರಣದಲ್ಲಿ ಭಾಗಿಯಾದ ಎಲ್ಲ ಆರೋಪಿಗಳಿಗೆ ಗರಿಷ್ಠ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಇದನ್ನೂ ಓದಿ: ಯಾಸೀರ್ ಅಹಮದ್‌ಗೆ ಶಿಗ್ಗಾವಿ ಟಿಕೆಟ್ ಕೊಟ್ಟ ಕಾಂಗ್ರೆಸ್; 6ನೇ ಬಾರಿಯೂ ಮುಸ್ಲಿಮರಿಗೆ ಮಣೆ!
ಕಾಂಗ್ರೆಸ್ ಶಾಸಕ ಅರೆಸ್ಟ್ ಬಗ್ಗೆ ಡಿಕೆಶಿ ಹೇಳಿದ್ದೇನು?
ಶಾಸಕ ಸತೀಶ್ ಸೈಲ್ ಗೆ 7 ವರ್ಷ ಶಿಕ್ಷೆ ನೀಡಿದ ವಿಚಾರದ ಬಗ್ಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಈ ವಿಚಾರವನ್ನು ಕೇಳಿ ನನಗೆ ಶಾಕ್ ಆಯ್ತು. ಈ ತೀರ್ಪಿನ್ನು ಪ್ರಶ್ನಿಸಿ ಅಪೀಲು ಮಾಡಲು ಅವಕಾಶವಿದೆ. ಅವರು ಲೀಗಲ್ ಟೀಂ ಜೊತೆ ಮಾತನಾಡ್ತಾರೆ. ಮುಂದೇನು ಅಂತ ನೋಡ್ತಾರೆ. ಶಾಸಕತ್ವ ರದ್ದಾಗುವ ವಿಚಾರದ ಬಗ್ಗೆ ನನಗೆ ಏನು ಅಂತ ಗೊತ್ತಿಲ್ಲ. ಇದನ್ನೂ ಅವರು ಆಫೀಲು ಮಾಡಬಹುದು. ಲೀಗಲಿ ಅವರು ಅಟೆಂಡ್ ಮಾಡ್ತಾರೆ. ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಎಂಬ ಪ್ರಶ್ನೆಗೆ ಡಿ.ಕೆ. ಶಿವಕುಮಾರ್ ಯಾವುದೇ ಉತ್ತರ ನೀಡದೇ ಮುನ್ನಡೆದರು.