ಕಲ್ಲಿದ್ದಲು ಬರ : ರಾಜ್ಯಕ್ಕೆ ಕಗ್ಗತ್ತಲು ಕಾಡುವ ಆತಂಕ

By Kannadaprabha NewsFirst Published Oct 8, 2021, 8:01 AM IST
Highlights
  • ದೇಶಾದ್ಯಂತ ಕಲ್ಲಿದ್ದಲಿಗೆ ಅಭಾವ ಸೃಷ್ಟಿಯಾಗಿರುವ ಬೆನ್ನಲ್ಲೇ ರಾಜ್ಯದಲ್ಲೂ ಶಾಖೋತ್ಪನ್ನ ವಿದ್ಯುತ್‌ ಘಟಕಗಳಿಗೆ ಕಲ್ಲಿದ್ದಲಿನ ತೀವ್ರ ಕೊರತೆ
  • ಪರಿಣಾಮ ವಿದ್ಯುತ್‌ ಉತ್ಪಾದನೆ ಶೇ.70ರಷ್ಟುಕುಸಿದಿದ್ದು, ಕೊರತೆ ಇದೇ ರೀತಿ ಮುಂದುವರೆದರೆ ವಿದ್ಯುತ್‌ ಉತ್ಪಾದನೆ ಕಡಿಮೆಯಾಗಿ ರಾಜ್ಯದಲ್ಲಿ ವಿದ್ಯುತ್‌ ಕ್ಷಾಮ

 ಬೆಂಗಳೂರು (ಅ.08):  ದೇಶಾದ್ಯಂತ ಕಲ್ಲಿದ್ದಲಿಗೆ (Coal) ಅಭಾವ ಸೃಷ್ಟಿಯಾಗಿರುವ ಬೆನ್ನಲ್ಲೇ ರಾಜ್ಯದಲ್ಲೂ ಶಾಖೋತ್ಪನ್ನ ವಿದ್ಯುತ್‌ ಘಟಕಗಳಿಗೆ ಕಲ್ಲಿದ್ದಲಿನ ತೀವ್ರ ಕೊರತೆ ಉಂಟಾಗಿದೆ. ಪರಿಣಾಮ ವಿದ್ಯುತ್‌ ಉತ್ಪಾದನೆ (Electricity ) ಶೇ.70ರಷ್ಟುಕುಸಿದಿದ್ದು, ಕೊರತೆ ಇದೇ ರೀತಿ ಮುಂದುವರೆದರೆ ವಿದ್ಯುತ್‌ ಉತ್ಪಾದನೆ ಕಡಿಮೆಯಾಗಿ ರಾಜ್ಯದಲ್ಲಿ ವಿದ್ಯುತ್‌ ಕ್ಷಾಮ ಉಂಟಾಗುವ ಆತಂಕ ತಲೆದೋರಿದೆ.

ರಾಜ್ಯದಲ್ಲಿ ಒಟ್ಟು ವಿವಿಧ ಮೂಲಗಳಿಂದ ಗರಿಷ್ಠ 11,336 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯವಿದೆ. ಈ ಪೈಕಿ 5,000 ಮೆ.ವ್ಯಾ ವಿದ್ಯುತ್‌ ಅನ್ನು ರಾಯಚೂರು (Raichur), ಬಳ್ಳಾರಿ ಹಾಗೂ ಯರಮರಸ್‌ ಶಾಖೋತ್ಪನ್ನ ವಿದ್ಯುತ್‌ ಘಟಕಗಳಿಂದಲೇ ಉತ್ಪಾದಿಸಬೇಕು. ಆದರೆ, ಈ ಮೂರು ಘಟಕಗಳಲ್ಲಿ ಕಲ್ಲಿದ್ದಲಿನ ತೀವ್ರ ಕೊರತೆ ಉಂಟಾಗಿದ್ದು, ವಿದ್ಯುತ್‌ ಉತ್ಪಾದನೆ ಒಟ್ಟು ಸಾಮರ್ಥ್ಯದ ಶೇ.33ಕ್ಕೆ ಕುಸಿದಿದೆ.

ದೇಶದಲ್ಲಿ ಕಲ್ಲಿ​ದ್ದಲು ಕೊರತೆ: ವಿದ್ಯುತ್‌ ಉತ್ಪಾ​ದನೆ, ಪೂರೈಕೆ ಕುಂಠಿತ ಭೀತಿ!

ರಾಜ್ಯದಲ್ಲಿ ನಿತ್ಯ ಪೂರೈಕೆಗೆ ಗರಿಷ್ಠ 8,499 ಮೆ.ವ್ಯಾ ವಿದ್ಯುತ್‌ ಬೇಕು. ಗುರುವಾರ 7923 ಮೆ.ವ್ಯಾ ವಿದ್ಯುತ್‌ ಸರಬರಾಜು ಮಾಡಲಾಗಿದೆ. ಈ ಪೈಕಿ ಎನ್‌ಇಸಿ (NEC) ಮೂಲಗಳಿಂದ 2,606 ಮೆ.ವ್ಯಾ, ಸಿಜಿಎಸ್‌ (ಸೆಂಟ್ರಲ್‌ ಜನರೇಟಿಂಗ್‌ ಸ್ಟೇಷನ್ಸ್‌) 1771 ಮೆ.ವ್ಯಾ ವಿದ್ಯುತ್‌ ಆಮದು ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿರುವ 11336 ಮೆ.ವ್ಯಾ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದ ಘಟಕಗಳಿಂದ ಉತ್ಪಾದನೆಯಾಗಿರುವುದು 3546 ಮೆ.ವ್ಯಾ ಮಾತ್ರ.

1,720 ಮೆ.ವ್ಯಾ ಸಾಮರ್ಥ್ಯದ ಆರ್‌ಟಿಪಿಎಸ್‌ (RTPCR) (ರಾಯಚೂರು) ಶಾಖೋತ್ಪನ್ನ ಘಟಕದಲ್ಲಿ 617 ಮೆ.ವ್ಯಾ, 1,700 ಮೆ.ವ್ಯಾ ಉತ್ಪಾದನೆ ಸಾಮರ್ಥ್ಯದ ಬಿಪಿಟಿಎಸ್‌ (ಬಳ್ಳಾರಿ) 424 ಮೆ.ವ್ಯಾ ಹಾಗೂ 1,600 ಮೆ.ವ್ಯಾ ಉತ್ಪಾದನೆ ಸಾಮರ್ಥ್ಯದ ವೈಟಿಪಿಎಸ್‌ (YTPS) (ಯರಮರಸ್‌) ಘಟಕದಲ್ಲಿ 647 ಮೆ.ವ್ಯಾ ವಿದ್ಯುತ್‌ ಮಾತ್ರ ಉತ್ಪಾದನೆಯಾಗುತ್ತಿದೆ. ಅಲ್ಲದೆ, ಈ ಮೂರು ಘಟಕಗಳಲ್ಲಿ ಒಂದು ದಿನಕ್ಕೆ ಆಗುವಷ್ಟುಕಲ್ಲಿದ್ದಲು ಮಾತ್ರ ದಾಸ್ತಾನು ಇದೆ. ಆಯಾ ದಿನಕ್ಕೆ ಲಭ್ಯವಾಗುವ ಕಲ್ಲಿದ್ದಲಿನಿಂದಲೇ ವಿದ್ಯುತ್‌ ಉತ್ಪಾದನೆ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ರಾಜ್ಯದಲ್ಲಿ 25,000 ಬಡಜನರ ಮನೆಗೆ ವಿದ್ಯುತ್‌ ಸಂಪರ್ಕವೇ ಇಲ್ಲ

ಪ್ರಸ್ತುತ ಬಳ್ಳಾರಿಯ ಕುಡುತಿನಿ ಕೇಂದ್ರದಲ್ಲಿ 12.2 ಟನ್‌, ರಾಯಚೂರಿನ ಶಕ್ತಿನಗರದಲ್ಲಿ 12.1 ಟನ್‌, ಯರಮರಸ್‌ನಲ್ಲಿ 20.3 ಟನ್‌, ಕೂಡಗಿಯ ಎನ್‌ಟಿಪಿಸಿಯಲ್ಲಿ 23.2 ಟನ್‌ ಕಲ್ಲಿದ್ದಲು ಮಾತ್ರ ದಾಸ್ತಾನು ಇದೆ. ಹೀಗಾಗಿ ರಾಯಚೂರಿನ ಆರ್‌ಟಿಪಿಎಸ್‌ ಕೇಂದ್ರದಲ್ಲಿನ ಆರ್‌ಟಿಪಿಎಸ್‌ನ ಎಂಟು ವಿದ್ಯುತ್‌ ಉತ್ಪಾದನಾ ಘಟಕಗಳ ಪೈಕಿ ನಾಲ್ಕು ಸ್ಥಗಿತಗೊಂಡಿವೆ. ಬಿಟಿಪಿಎಸ್‌ನ ಮೂರು ಘಟಕಗಳ ಪೈಕಿ ಎರಡು ಹಾಗೂ ವೈಟಿಪಿಎಸ್‌ನ ಎರಡು ಘಟಕಗಳ ಪೈಕಿ ಒಂದು ಸ್ಥಗಿತಗೊಂಡಿದೆ.

ಸದ್ಯದಲ್ಲೇ ಕ್ಷಾಮ ಸಾಧ್ಯತೆ:

ಕರ್ನಾಟಕ ವಿದ್ಯುತ್‌ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಪೊನ್ನುರಾಜ್‌ ಅವರ ಪ್ರಕಾರವೇ, ರಾಜ್ಯದಲ್ಲಿ ಕಲ್ಲಿದ್ದಲಿಗೆ ತೀವ್ರ ಕೊರತೆ ಉಂಟಾಗಿದೆ. ಇದರಿಂದ ವಿದ್ಯುತ್‌ ಉತ್ಪಾದನೆ ಕುಸಿದಿದೆ. ಕಲ್ಲಿದ್ದಲಿನ ಪೂರೈಕೆ ಇದೇ ರೀತಿ ಮುಂದುವರೆದರೆ ಸದ್ಯದಲ್ಲೇ ವಿದ್ಯುತ್‌ ಉತ್ಪಾದನೆಗೆ ಸಮಸ್ಯೆಯಾಗಲಿದೆ. ಪರಿಣಾಮ ಪೂರೈಕೆಯಲ್ಲೂ ವ್ಯತ್ಯಯವಾಗಲಿದೆ ಎಂದು ಹೇಳಿದ್ದಾರೆ. ಹೀಗಾಗಿ ಕೇಂದ್ರವು ಕಲ್ಲಿದ್ದಲು ಕೊರತೆ ನಿಭಾಯಿಸಲು ವಿಫಲವಾದರೆ ಸದ್ಯದಲ್ಲೇ ರಾಜ್ಯದಲ್ಲಿ ವಿದ್ಯುತ್‌ ಕ್ಷಾಮ ತಲೆದೋರುವ ಅಪಾಯ ಎದುರಾಗಿದೆ.

ರಾಜ್ಯದ ಬೇಡಿಕೆ:

ರಾಜ್ಯಕ್ಕೆ ನಿತ್ಯ 8,499 ಮೆ.ವ್ಯಾ ವಿದ್ಯುತ್‌ ಬೇಕಾಗುತ್ತದೆ. ಗುರುವಾರ ರಾತ್ರಿ 7.45ರ ವೇಳೆಗೆ 4,801 ಮೆಗಾವ್ಯಾಟ್‌ ವಿದ್ಯುತ್‌ ಬಳಕೆಯಾಗಿತ್ತು. ಚೀನಾ ದೇಶದಲ್ಲಿ ಕಲ್ಲಿದ್ದಲಿನ ಕೊರತೆ ಉಂಟಾಗಿ ಅಭಾವ ಸೃಷ್ಟಿಯಾಗಿದೆ. ಆಮದು ಕಲ್ಲಿದ್ದಲಿನ ದರ ಏರಿಕೆ ಜತೆಗೆ ಭಾರತದಲ್ಲೂ ಕಲ್ಲಿದ್ದಲಿನ ಉತ್ಪಾದನೆ ಕುಸಿತಗೊಂಡಿದೆ. ಸತತವಾಗಿ ಮೂರು ತಿಂಗಳ ಕಾಲ ಸುರಿದ ಮಳೆಯಿಂದಾಗಿ ಕಲ್ಲಿದ್ದಲಿನ ಗಣಿಗಳಲ್ಲಿ ಕಲ್ಲಿದ್ದಲು ದಾಸ್ತಾನು ಆಗಿಲ್ಲ.

ಹೀಗಾಗಿ ರಾಜ್ಯಕ್ಕೆ ಸಿಂಗರೇಣಿ, ಮಹಾನದಿ ಮತ್ತು ವೆಸ್ಟರ್ನ್‌ ಕೋಲ್‌ ಗಣಿಯಿಂದ ದಿನಕ್ಕೆ 7 ರೇಕ್‌ (3,750 ಟನ್‌ ಸಾಮರ್ಥ್ಯದ 58 ವ್ಯಾಗನ್‌ಗಳಿಗೆ ಒಂದು ರೇಕ್‌) ಕಲ್ಲಿದ್ದಲು ಬರುತ್ತಿದೆ. ಕನಿಷ್ಠ 11 ರೇಕ್‌ ಕಲ್ಲಿದ್ದಲು ರಾಜ್ಯಕ್ಕೆ ಅಗತ್ಯವಿದೆ. ಅಲ್ಲದೆ, ಕನಿಷ್ಠ ಒಂದು ವಾರದ ದಾಸ್ತಾನು ಇರಬೇಕು. ಆದರೆ ಆಯಾ ದಿನಕ್ಕೆ ಬೇಡಿಕೆಗೂ ಕಡಿಮೆ ಕಲ್ಲಿದ್ದಲು ಪೂರೈಕೆಯಾಗುತ್ತಿರುವುದರಿಂದ ಯಾವುದೇ ಕ್ಷಣದಲ್ಲೂ ವಿದ್ಯುತ್‌ ಅಭಾವ ಸೃಷ್ಟಿಯಾಗುವ ಸಾಧ್ಯತೆ ಇದೆ.

ಕನಿಷ್ಠ ವಾರಕ್ಕೆ ಆಗುವಷ್ಟುಕಲ್ಲಿದ್ದಲು ದಾಸ್ತಾನು ಕಳಿಸಲು ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಆದರೆ ಒಂದು ದಿನದ ಮಟ್ಟಿಗೆ ಆಗುವಷ್ಟುದಾಸ್ತಾನು ಮಾತ್ರ ಕಳಿಸಿದ್ದು, ಆಯಾ ದಿನಕ್ಕೆ ಬಳಕೆ ಮಾಡುತ್ತಿದ್ದೇವೆ. ಕನಿಷ್ಠ 11 ರೇಕ್‌ ಕಲ್ಲಿದ್ದಲು ಅಗತ್ಯವಿದ್ದರೆ ಪ್ರಸ್ತುತ 7 ರೇಕ್‌ ಮಾತ್ರ ಬರುತ್ತಿದೆ. ಲಭ್ಯವಿರುವ ಕಲ್ಲಿದ್ದಲಿನಲ್ಲೇ ನಿರ್ವಹಣೆ ಮಾಡುತ್ತಿದ್ದು, ಕೊರತೆ ಇದೇ ರೀತಿ ಮುಂದುವರೆದರೆ ವಿದ್ಯುತ್‌ ಉತ್ಪಾದನೆಗೆ ಸಮಸ್ಯೆಯಾಗಲಿದೆ.

ಪೊನ್ನುರಾಜ್‌, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತ (ಕೆಪಿಸಿಎಲ್‌)

ವಿದ್ಯುತ್‌ ಪೂರೈಕೆ ಕಡಿತ ಸಾಧ್ಯತೆ

ರಾಜ್ಯದಲ್ಲಿ ಕಲ್ಲಿದ್ದಲು ತೀವ್ರ ಕೊರತೆ ಉಂಟಾಗಿದೆ. ಇದರಿಂದ ವಿದ್ಯುತ್‌ ಉತ್ಪಾದನೆ ಕುಸಿದಿದೆ. ಕಲ್ಲಿದ್ದಲಿನ ಪೂರೈಕೆ ಇದೇ ರೀತಿ ಮುಂದುವರೆದರೆ ಸದ್ಯದಲ್ಲೇ ವಿದ್ಯುತ್‌ ಉತ್ಪಾದನೆಗೆ ಸಮಸ್ಯೆಯಾಗಲಿದೆ. ಪರಿಣಾಮ ಪೂರೈಕೆಯಲ್ಲೂ ವ್ಯತ್ಯಯವಾಗಲಿದೆ.

- ಪೊನ್ನುರಾಜ್‌, ಕರ್ನಾಟಕ ವಿದ್ಯುತ್‌ ನಿಗಮದ ಎಂ.ಡಿ.

click me!