ವಿಚಾರಣೆಗೆ ಬರದಿದ್ದರೆ ಪ್ರಜ್ವಲ್ ರೇವಣ್ಣ ಬಂಧನ: ಗೃಹ ಸಚಿವ ಪರಮೇಶ್ವರ್‌

By Kannadaprabha News  |  First Published May 2, 2024, 8:29 AM IST

ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಸಿಲುಕಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಫಾರಂ-41 ಎ ಜಾರಿಗೊಳಿಸಿದ್ದು, ನೋಟಿಸ್ ಜಾರಿಗೊಂಡ 24 ಗಂಟೆಯಲ್ಲೇ ತನಿಖೆಗೆ ಹಾಜರಾಗದಿದ್ದರೆ ಬಂಧಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು.


ದಾವಣಗೆರೆ (ಮೇ.02): ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಸಿಲುಕಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಫಾರಂ-41 ಎ ಜಾರಿಗೊಳಿಸಿದ್ದು, ನೋಟಿಸ್ ಜಾರಿಗೊಂಡ 24 ಗಂಟೆಯಲ್ಲೇ ತನಿಖೆಗೆ ಹಾಜರಾಗದಿದ್ದರೆ ಬಂಧಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು. ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದೂರು ದಾಖಲಾಗಿದೆ. ರೇವಣ್ಣ ವಿಚಾರಣೆಗೆ ಹಾಜರಾಗಬಹುದು. ಪ್ರಜ್ವಲ್‌ ನೋಟಿಸ್‌ ಹಿನ್ನೆಲೆ ವಿಚಾರಣೆಗೆ ಹಾಜರಾಗದಿದ್ದರೆ ಪೊಲೀಸರು ತಮ್ಮ ಕೆಲಸವನ್ನು ಮಾಡಲಿದ್ದಾರೆ ಎಂದರು.

ರಾಜ್ಯ ಮಹಿಳಾ ಆಯೋಗವು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿತ್ತು. ಸಿಎಂ ಈ ಬಗ್ಗೆ ಸೂಕ್ತ ಕ್ರಮಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದರು. ಲೈಂಗಿಕ ದೌರ್ಜನ್ಯದ ಪ್ರಕರಣದ ತನಿಖೆಗೆ ಸಿಐಡಿನಲ್ಲೇ ಎಸ್‌ಐಟಿ ರಚನೆ ಮಾಡಿ, ಬಿ.ಕೆ.ಸಿಂಗ್‌ ನೇತೃತ್ವದಲ್ಲಿ ಇಬ್ಬರು ಮಹಿಳಾ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ತನಿಖೆಗೆ ನೇಮಿಸಿದೆ. ಎಸ್ಐಟಿ ಕಾನೂನು ಪ್ರಕಾರ ತನಿಖೆ ನಡೆಸಿ, ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದರು.

Tap to resize

Latest Videos

ದೇವೇಗೌಡ್ರು ಪ್ಲಾನ್‌ ಮಾಡಿಯೇ ಪ್ರಜ್ವಲ್‌ನ ವಿದೇಶಕ್ಕೆ ಕಳ್ಸಿದ್ದಾರೆ: ಸಿಎಂ ಸಿದ್ದರಾಮಯ್ಯ

ಪ್ರಜ್ವಲ್ ವಿದೇಶಕ್ಕೆ ತೆರಳಿದ್ದು, ಅಲ್ಲಿಂದ ವಾಪಾಸ್ ಕರೆ ತರಲು ಕೇಂದ್ರ ಸರ್ಕಾರದ ಸಹಕಾರ ಬೇಕು. ಷೆಂಗೆನ್ ವೀಸಾ (Schengen visa)ದಡಿ ವಿದೇಶಕ್ಕೆ ತೆರಳಿದ್ದು, ಎಷ್ಟು ದಿನ ಪ್ರಜ್ವಲ್ ದೇಶದಿಂದ ದೂರ ಇರಲು ಸಾಧ್ಯ? ಜನ ಮಾತನಾಡುತ್ತಾರೆ, ಬಿಜೆಪಿ ನಾಯಕರು ಮಾತನಾಡುತ್ತಾರೆಂದು ಮಾತನಾಡಿದರೆ ಅರ್ಥ ಇರುವುದಿಲ್ಲ. ಪ್ರಜ್ವಲ್ ವಿದೇಶಕ್ಕೆ ಹೋಗುವ ಮಾಹಿತಿ ಕೇಂದ್ರಕ್ಕೆ ಇರಲಿಲ್ಲವೇ? ಯಾರನ್ನೂ ರಕ್ಷಣೆ ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ. ನಮ್ಮ ನೆಲದಲ್ಲಿ ಬಡವನಿಗೂ ಅದೇ ಕಾನೂನು, ಶ್ರೀಮಂತರಿಗೂ ಅದೇ ಕಾನೂನು ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.

ಉತ್ತರ ಕರ್ನಾಟಕದ 14 ಕ್ಷೇತ್ರದಲ್ಲೂ ಕಾಂಗ್ರೆಸ್ ಅಲೆ: ರಾಜ್ಯ, ರಾಷ್ಟ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಯಾವುದೇ ಮೋದಿಯ ಅಲೆಯೂ ಇಲ್ಲ. ಪ್ರಧಾನಿ ನರೇಂದ್ರ ಮೋದಿಗೆ ಬದಲಾವಣೆ ಮಾಡಬೇಕೆಂಬ ಗಾಳಿ ಇದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದರು. ನಗರದಲ್ಲಿ ಶಾಮನೂರು ಶಿವಶಂಕರಪ್ಪ ನಿವಾಸ "ಶಿವ ಪಾರ್ವತಿ"ಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ 14 ಕ್ಷೇತ್ರಕ್ಕೆ ಮೊದಲ ಹಂತದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಲೆ ಇದ್ದು, ಉಳಿದ 14 ಕ್ಷೇತ್ರಕ್ಕೆ ಮೇ 7ಕ್ಕೆ ನಡೆಯುವ ಚುನಾವಣೆಯಲ್ಲೂ ಕಾಂಗ್ರೆಸ್ ಅಲೆಯೇ ಕಂಡುಬರುತ್ತಿದೆ ಎಂದರು.

ರಾಕ್ಷಸ ಪರಾರಿಯಾದ ಬಗ್ಗೆ ಪ್ರಧಾನಿ ಮೋದಿ ಹೇಳಲಿ: ರಾಹುಲ್ ಗಾಂಧಿ

ಕಾಂಗ್ರೆಸ್ ನೀಡಿದ್ದ ಗ್ಯಾರಂಟಿ ಯೋಜನೆಗಳಿಗೆ ಜನರ ಆಶೀರ್ವಾದ ಸಿಕ್ಕಿದೆ. ದಾವಣಗೆರೆ ಸೇರಿದಂತೆ ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ದಾವಣಗೆರೆ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪನವರ ಸೊಸೆ, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನರ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ ಭಾರಿ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ ಎಂದು ತಿಳಿಸಿದರು. ಶಾಮನೂರು ಶಿವಶಂಕರಪ್ಪ ಹಾಗೂ ತಮ್ಮ ತಂದೆಗೆ ಉತ್ತಮ ಸ್ನೇಹವಿತ್ತು. ತಮಗೂ ಹಾಗೂ ಸಚಿವ ಮಲ್ಲಿಕಾರ್ಜುನ ಜೊತೆಗೂ ಅದೇ ಒಡನಾಟವಿದೆ. ನಮಗೆ ನಮ್ಮದೇ ಆದಂತಹ ಗುಪ್ತಮಾಹಿತಿ ನಮಗೆ ಸಿಗುತ್ತವೆ. ಗೃಹ ಇಲಾಖೆ ಸಚಿವರಾಗಿ ಹಾಗೂ ಕಾಂಗ್ರೆಸ್ಸಿನ ಮುಖಂಡರಾಗಿ ತಮಗೆ ಮಾಹಿತಿ ಲಭ್ಯವಾಗುತ್ತಿದೆ. ನಮ್ಮ ಪಕ್ಷದ ಮಾಹಿತಿಗಳ ಪ್ರಕಾರವೇ ನಮ್ಮ ಪಕ್ಷವು ರಾಜ್ಯಾದ್ಯಂತ ಹೆಚ್ಚು ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ ಎಂದು ಹೇಳಿದರು.

click me!