ಎಣ್ಣೆಕಾಳಿಗೆ ಬೆಂಬಲ ಬೆಲೆ, ಪ್ರೋತ್ಸಾಹ ಧನಕ್ಕೆ ಶಿಫಾರಸು

By Govindaraj SFirst Published Dec 8, 2022, 6:26 AM IST
Highlights

ರಾಜ್ಯದಲ್ಲಿ ಎಣ್ಣೆಕಾಳು ಬೆಳೆಗೆ ವಿಪುಲ ಅವಕಾಶವಿರುವ ಹಿನ್ನೆಲೆಯಲ್ಲಿ ಕೃಷಿ ವಿವಿಗಳು ಹೆಚ್ಚು ಇಳುವರಿ ನೀಡುವ ಹೊಸ ತಳಿಗಳನ್ನು ಸಂಶೋಧಿಸಬೇಕು. ನವೀಕೃತ ತಂತ್ರಜ್ಞಾನ ಬಳಕೆಗೆ ಸರ್ಕಾರ ಪ್ರೋತ್ಸಾಹ ಹಾಗೂ ಸಹಾಯಧನ ನೀಡಬೇಕು ಎಂದು ರಾಜ್ಯ ಕೃಷಿ ಬೆಲೆ ಆಯೋಗ ಶೀಘ್ರದಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. 

ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು (ಡಿ.08): ರಾಜ್ಯದಲ್ಲಿ ಎಣ್ಣೆಕಾಳು ಬೆಳೆಗೆ ವಿಪುಲ ಅವಕಾಶವಿರುವ ಹಿನ್ನೆಲೆಯಲ್ಲಿ ಕೃಷಿ ವಿವಿಗಳು ಹೆಚ್ಚು ಇಳುವರಿ ನೀಡುವ ಹೊಸ ತಳಿಗಳನ್ನು ಸಂಶೋಧಿಸಬೇಕು. ನವೀಕೃತ ತಂತ್ರಜ್ಞಾನ ಬಳಕೆಗೆ ಸರ್ಕಾರ ಪ್ರೋತ್ಸಾಹ ಹಾಗೂ ಸಹಾಯಧನ ನೀಡಬೇಕು ಎಂದು ರಾಜ್ಯ ಕೃಷಿ ಬೆಲೆ ಆಯೋಗ ಶೀಘ್ರದಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಎಣ್ಣೆಕಾಳು ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು. ಬೆಳೆಗಾರರಿಗೆ ಕಡಿಮೆ ಬಡ್ಡಿದರ ಅಥವಾ ಬಡ್ಡಿ ರಹಿತವಾಗಿ ಸಾಲ ನೀಡಬೇಕು. ಬೆಳೆ ವಿಮೆ ಕಡ್ಡಾಯ ಮಾಡಬೇಕು. ಸೆಕೆಂಡರಿ ಅಗ್ರಿಕಲ್ಚರಲ್‌ ನಿರ್ದೇಶನಾಲಯ ಎಣ್ಣೆ ಕಾಳು ಬೆಳೆಗೆ ಆದ್ಯತೆ ಕೊಡಬೇಕು. 

ಬೆಳೆ ಪ್ರದೇಶ ಹೆಚ್ಚಳ, ಸಂಸ್ಕರಣೆಗೆ ಒತ್ತು ನೀಡಬೇಕು ಎಂಬುದು ಸೇರಿದಂತೆ ಹಲವು ಶಿಫಾರಸುಗಳ ವರದಿಯನ್ನು ಕೃಷಿ ಬೆಲೆ ಆಯೋಗ ಸಿದ್ಧಪಡಿಸಿದ್ದು, ವಾರದಲ್ಲಿ ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆಯಿದೆ. ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಎಣ್ಣೆಕಾಳು ಬೆಳೆಯುವ ಪ್ರದೇಶ ಹಾಗೂ ಇಳುವರಿ ಸಹ ಕಡಿಮೆಯಾಗುತ್ತಿದೆ. 2021-22ನೇ ಸಾಲಿನಲ್ಲಿ 12.47 ಲಕ್ಷ ಹೆಕ್ಟೇರ್‌ನಲ್ಲಿ ಎಣ್ಣೆ ಕಾಳು ಬೆಳೆದಿದ್ದರೂ ಇಳುವರಿ ಮಾತ್ರ 11.74 ಲಕ್ಷ ಟನ್‌ಗೆ ಕುಸಿದಿದೆ. ಗುಜರಾತ್‌, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಮತ್ತಿತರ ರಾಜ್ಯಗಳ ಇಳುವರಿಗೆ ಹೋಲಿಸಿದರೆ ರಾಜ್ಯದ ಇಳುವರಿ ಬಹಳ ಕಡಿಮೆ ಇದೆ. 

Maharashtra Karnataka Border Row: ಬಸ್‌, ಬ್ಯಾಂಕಿಗೆ ಮಸಿ: ಮಹಾ ಪುಂಡಾಟಿಕೆ!

ಖಾದ್ಯತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಕೇಂದ್ರ ಸರ್ಕಾರ ತಾಳೆ ಬೆಳೆಯಲು ಪ್ರೋತ್ಸಾಹ ನೀಡುತ್ತಿದೆ. ಆದರೆ ರಾಜ್ಯದಲ್ಲಿ ತಾಳೆ ಬೆಳೆಯಲು ಅಷ್ಟೇನೂ ಪೂರಕ ವಾತಾವರಣ ಇಲ್ಲದಿರುವುದರಿಂದ ಯೋಜನೆಗೆ ನಮ್ಮಲ್ಲಿ ಒಂದಷ್ಟು ಹಿನ್ನಡೆಯಾಗಿದೆ. ದೇಶದಲ್ಲಿ ಅತಿ ಹೆಚ್ಚು ಸೋಯಾ ಅವರೆ ಬೆಳೆಯುತ್ತಿದ್ದರೆ, ನಂತರದ ಸ್ಥಾನದಲ್ಲಿ ನೆಲಗಡಲೆ ಮತ್ತು ಸಾಸಿವೆ ಇವೆ. ಇನ್ನುಳಿದಂತೆ ಹರಳು, ಎಳ್ಳು, ಹುಚ್ಚೆಳ್ಳು, ಅಗಸೆ, ಕುಸುವೆ ಮತ್ತಿತರ ಬೆಳೆಗಳನ್ನೂ ಬೆಳೆಯಲಾಗುತ್ತಿದೆ. ದೇಶದಲ್ಲಿ ಒಟ್ಟಾರೆ 288 ಲಕ್ಷ ಹೆಕ್ಟೇರ್‌ನಲ್ಲಿ ಎಣ್ಣೆಕಾಳುಗಳನ್ನು ಬೆಳೆಯುತ್ತಿದ್ದು, ಮಧ್ಯಪ್ರದೇಶ ಪ್ರಥಮ ಸ್ಥಾನದಲ್ಲಿದ್ದರೆ, ರಾಜಸ್ಥಾನ ದ್ವಿತೀಯ ಸ್ಥಾನದಲ್ಲಿದೆ.

ವರ್ಷ ರಾಜ್ಯದ ಎಣ್ಣೆ ಕಾಳು ಬೆಳೆಗಳ ವಿವರ
ವಿಸ್ತೀರ್ಣ(ಲಕ್ಷ ಹೆಕ್ಟೇರ್‌) ಉತ್ಪಾದನೆ(ಲಕ್ಷ ಟನ್‌)

2005-06 28.63 15.27
2009-10 20.01 9.00
2014-15 13.72 9.58
2018-19 9.98 7.90
2020-21 12.09 12.49
2021-22 12.47 11.74

ಸರ್ಕಾರಕ್ಕೆ ಕೃಷಿ ಬೆಲೆ ಆಯೋಗದ ಶಿಫಾರಸು
- ಎಣ್ಣೆಕಾಳಿಗೆ ಬೆಂಬಲ ಬೆಲೆ, ಪ್ರೋತ್ಸಾಹ ಧನ ಹೆಚ್ಚಿಸಬೇಕು
- ಬೆಳೆಗಾರರಿಗೆ ಕಡಿಮೆ ಬಡ್ಡಿದರ ಅಥವಾ ಬಡ್ಡಿ ರಹಿತ ಸಾಲ ನೀಡಬೇಕು
- ಎಣ್ಣೆಕಾಳು ಬೆಳೆಗಳಿಗೆ ಬೆಳೆ ವಿಮೆ ಕಡ್ಡಾಯ ಮಾಡಬೇಕು
- ಸೆಕೆಂಡರಿ ಅಗ್ರಿಕಲ್ಚರಲ್‌ ನಿರ್ದೇಶನಾಲಯ ಎಣ್ಣೆ ಕಾಳು ಬೆಳೆಗೆ ಆದ್ಯತೆ ಕೊಡಬೇಕು
- ಎಣ್ಣೆಕಾಳು ಬೆಳೆ ಪ್ರದೇಶ ಹೆಚ್ಚಳ, ಸಂಸ್ಕರಣೆಗೆ ಒತ್ತು ನೀಡಬೇಕು

Grama Vastavya: ಡಿ.17ರಂದು ಸ್ವಕ್ಷೇತ್ರದಲ್ಲಿ ಸಿಎಂ ಬೊಮ್ಮಾಯಿ ಗ್ರಾಮ ವಾಸ್ತವ್ಯ?

ಕರ್ನಾಟಕ ಎಣ್ಣೆಕಾಳು ಉತ್ಪಾದಕರ ಒಕ್ಕೂಟವನ್ನು ಸರ್ಕಾರ ಸಬಲಗೊಳಿಸಬೇಕು. ಇಳುವರಿ ಕಡಿಮೆಯಾಗುತ್ತಿದ್ದು, ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು. ಆಮದುದಾರರ ಲಾಬಿ ತಪ್ಪಿಸಲು ಎಣ್ಣೆಕಾಳು ಬೆಳೆಗಳಿಗೆ ಬೆಂಬಲ ಬೆಲೆ ಖಾತ್ರಿಪಡಿಸಿ ಉತ್ಪಾದನೆ ಹೆಚ್ಚಿಸಬೇಕು.
- ಪ್ರಕಾಶ್‌ ಕಮ್ಮರಡಿ, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ

click me!