ಬರಗಾಲದಿಂದ ಬರಿದಾಗಿದ್ದ ಭಾಗಮಂಡಲದ ತ್ರಿವೇಣಿ ಸಂಗಮಕ್ಕೆ ಮರಳಿದ ಜೀವಕಳೆ

By Sathish Kumar KH  |  First Published May 18, 2024, 8:17 PM IST

ಕನ್ನಡ ನಾಡಿನ ಜೀವನದಿ ಕಾವೇರಿ ತವರು ಜಿಲ್ಲೆ ಕೊಡಗಿನಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆ ಸುರಿಯುತ್ತಿದ್ದು,  ಭಾಗಮಂಡಲದಲ್ಲಿರುವ ಕಾವೇರಿ ನದಿಯ ತ್ರಿವೇಣಿ ಸಂಗಮಕ್ಕೆ ಜೀವಕಳೆ ಬಂದಿದೆ.


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮೇ 18):
ಕೊಡಗು ಜಿಲ್ಲೆಯಲ್ಲಿ ಹುಟ್ಟಿ ನಾಡಿನ ಉದ್ಧಕ್ಕೂ ಹರಿದು ಲಕ್ಷಾಂತರ ಜನರ ಬದುಕಿಗೆ ಬೆಳಕಾಗಿದ್ದ ಜೀವನದಿ ಕಾವೇರಿ ತವರು ಜಿಲ್ಲೆ ಕೊಡಗಿನಲ್ಲಿ ಬತ್ತಿ ಹೋಗಿತ್ತು. ಅದರಲ್ಲೂ ಕಾವೇರಿಯ ಮೂಲ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಸಂಪೂರ್ಣ ಬತ್ತಿ ಹೋಗಿತ್ತು. ಆದರೆ ಕಳೆದ ಒಂದು ವಾರದಿಂದ ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿಯುತ್ತಿದ್ದು ಕಾವೇರಿ ನದಿಯ ತ್ರಿವೇಣಿ ಸಂಗಮಕ್ಕೆ ಜೀವಕಳೆ ಬಂದಿದೆ.

ಹೌದು, ಪವಿತ್ರ ಧಾರ್ಮಿಕ ಕ್ಷೇತ್ರವಾಗಿರುವ ಭಾಗಮಂಡಲಕ್ಕೆ ಬರುವ ಸಾವಿರಾರು ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಬಳಿಕ ಭಗಂಡೇಶ್ವರನಿಗೆ ಪೂಜೆ ಸಲ್ಲಿಸಿ ಭಕ್ತಿ ಭಾವ ಮೆರೆಯುತ್ತಿದ್ದರು. ವಿಪರ್ಯಾಸ ಎಂದರೆ ಕಳೆದ ಸಾಲಿನಲ್ಲಿ ತೀವ್ರ ಮಳೆ ಕೊರತೆ ಆಗಿದ್ದು, ಮಾರ್ಚಿ ಮತ್ತು ಏಪ್ರಿಲ್ ತಿಂಗಳಿನಲ್ಲಿ ಮುಂಗಾರು ಪೂರ್ವ ಮಳೆಗಳು ಬಾರದೆ ತ್ರಿವೇಣಿ ಸಂಗಮ ಪೂರ್ಣ ಬತ್ತಿ ಹೋಗಿತ್ತು. ಇದರಿಂದ ಭಾಗಮಂಡಲದ ಭಗಂಡೇಶ್ವರ ದೇವಾಲಯಕ್ಕೆ ಬರುತ್ತಿದ್ದ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೇಳಲು ಸಾಧ್ಯವಾಗದೆ ಬೇಸರದಿಂದ ವಾಪಸ್ ಆಗುತ್ತಿದ್ದರು. 

Latest Videos

undefined

ಬಳಕೆಗೆ ಮುಕ್ತವಾದ ಭಾಗಮಂಡಲ ಮೇಲ್ಸೇತುವೆ; ಹತ್ತಾರು ಗ್ರಾಮಗಳಿಗೆ ಇನ್ನು ಪ್ರವಾಹ ಭೀತಿ ಇಲ್ಲ

'ಆದರೀಗ ಕಳೆದ ಒಂದು ವಾರದಿಂದ ಬ್ರಹ್ಮಗಿರಿ, ಪುಷ್ಪಗಿರಿ ಬೆಟ್ಟ ಪ್ರದೇಶ ಹಾಗೂ ಭಾಗಮಂಡಲ ಸುತ್ತಮುತ್ತ ಪ್ರದೇಶದಲ್ಲಿ ಸುರಿದ ಮಳೆಗೆ ಕಾವೇರಿ, ಕನ್ನಿಕೆ ಹಾಗೂ ಸುಜ್ಯೋತಿ ನದಿಗಳಲ್ಲಿ ಒಂದಷ್ಟು ಪ್ರಮಾಣದಲ್ಲಿ ನೀರು ಹರಿಯಾರಂಭಿಸಿದೆ. ಇದರಿಂದ ತ್ರಿವೇಣಿ ಸಂಗಮಕ್ಕೆ ಜೀವಕಳೆ ಬಂದಿದ್ದು, ಬಂದ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಸಂಭ್ರಮ ಪಡುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ತ್ರಿವೇಣಿ ಸಂಗಮದಲ್ಲಿ ಕೊಡಗಿನ ಜನರು ಹಾಗೂ ಹೊರ ಜಿಲ್ಲೆಯ ಕೆಲವು ಜನರು ಪಿಂಡ ಪ್ರಧಾನ ಮಾಡುವುದು ವಾಡಿಕೆ. ಇಲ್ಲಿ ಪಿಂಡ ಪ್ರಧಾನ ಮಾಡಿದರೆ ತಮ್ಮ ಮನೆಗಳ ಮೃತರ ಆತ್ಮಕ್ಕೆ ಶಾಂತಿ ದೊರಕುತ್ತದೆ ಎನ್ನುವ ನಂಬಿಕೆ. ಹೀಗಾಗಿಯೇ ಇಲ್ಲಿಯೇ ಪಿಂಡ ಪ್ರಧಾನ ಮಾಡಿ ತ್ರಿವೇಣಿಯಲ್ಲಿ ಮೂರು ಬಾರಿ ಮುಳುಗಿ ಮೇಲೇಳುತ್ತಿದ್ದರು. 

ಆದರೆ ಮಳೆಯ ತೀವ್ರ ಅಭಾವದಿಂದ ತ್ರಿವೇಣಿ ಸಂಗಮ ಬತ್ತಿ ಬರಿದಾಗಿ ಹೋಗಿತ್ತು. ಇದರಿಂದ ಪಿಂಡ ಪ್ರದಾನ ಮಾಡುತ್ತಿದ್ದ ಜನರು ಸ್ನಾನ ಮಾಡುವ ಮಾತಿರಲಿ ಕನಿಷ್ಠ ತಲೆ ಮೇಲೆ ನೀರು ಹಾಕಿಕೊಳ್ಳಲು ಅವಕಾಶವಿರಲಿಲ್ಲ. ಬದಲಾಗಿ ಪಿಂಡ ಪ್ರಧಾನದ ಬಳಿಕ ಮತ್ತೆಲ್ಲಿಂದಲೋ ನೀರು ತಂದು ತಲೆಮೇಲೆ ಹಾಕಿಕೊಂಡು ವಿಧಿ ವಿಧಾನಗಳನ್ನು ಮುಗಿಸಿಕೊಂಡು ತೆರಳುತ್ತಿದ್ದರು. ಆದರೆ ಈಗ ಜಿಲ್ಲೆಯಲ್ಲಿ ಉತ್ತಮ ಮಳೆ ಬಂದ ಪರಿಣಾಮ ತ್ರಿವೇಣಿ ಸಂಗಮದಲ್ಲಿ ನೀರು ಹರಿಯುತ್ತಿರುವುದು ಭಕ್ತರಿಗೆ ಸಂತಸ ತಂದಿದೆ. 

ಕೊಡಗಿನಲ್ಲಿ ಮಳೆ ಇಲ್ಲದಿದ್ದರೂ ಇಡೀ ಊರಿಗೆ ಸಿಡಿಲು ಬಡಿದ ಅನುಭವ, ಭಾರೀ ಶಬ್ಧದೊಂದಿಗೆ ಭೂಮಿ ಛಿದ್ರ!

ಹಿಂದೆಂದಿನಂತೆ ಪಿಂಡ ಪ್ರದಾನ ಕಾರ್ಯಗಳನ್ನು ಯಶಸ್ವಿಯಾಗಿ ನೆರವೇರಿಸುತ್ತಿದ್ದಾರೆ. ಈ ಕುರಿತು ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದ ಸ್ಥಳೀಯರಾದ ಭರತ್ ಅವರು ಕಳೆದ 75 ವರ್ಷಗಳಲ್ಲಿ ನಾವು ಎಂದೂ ಕೂಡ ತ್ರಿವೇಣಿ ಸಂಗಮ ಈ ರೀತಿ ಬತ್ತಿ ಹೋಗಿದ್ದನ್ನು ನಾವು ನೋಡಿರಲೇ ಇಲ್ಲ. ಬತ್ತಿ ಹೋಗಿದ್ದರಿಂದ ಸಾಕಷ್ಟು ಸಮಸ್ಯೆ ಆಗಿತ್ತು. ಸದ್ಯ ಒಂದು ವಾರದಿಂದ ಸಾಕಷ್ಟು ಮಳೆ ಬರುತ್ತಿರುವುದರಿಂದ ತ್ರಿವೇಣಿ ಸಂಗಮದಲ್ಲಿ ನೀರು ಹರಿಯುತ್ತಿದೆ. ಇದು ಸಂತಸದ ವಿಷಯ ಎಂದಿದ್ದಾರೆ. ಒಟ್ಟಿನಲ್ಲಿ ಕಳೆದ ಒಂದುವರೆ ತಿಂಗಳಿನಿಂದ ಸಂಪೂರ್ಣ ಬತ್ತಿ ಹೋಗಿದ್ದ ತ್ರಿವೇಣಿ ಸಂಗಮದಲ್ಲಿ ನೀರು ತುಂಬಿ ಹರಿಯುತ್ತಿದ್ದು, ಕಾವೇರಿ ಭಕ್ತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

click me!