Bengaluru city: 3 ಟನ್‌ ಸರಕು ವಾಹನಕ್ಕೆ ನಿರ್ಬಂಧವಿಲ್ಲ: ಸಲೀಂ

By Kannadaprabha NewsFirst Published Jan 31, 2023, 8:16 AM IST
Highlights

ನಗರ ವ್ಯಾಪ್ತಿಯಲ್ಲಿ ಮೂರು ಟನ್‌ವರೆಗೆ ಸರಕು ಸಾಗಿಸುವ ನಾಲ್ಕು ಚಕ್ರದ ಸರಕು ಸಾಗಾಣಿಕೆ ವಾಹನಗಳ ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ನಗರ ವಿಶೇಷ ಪೊಲೀಸ್‌ ಆಯುಕ್ತ (ಸಂಚಾರ) ಡಾ ಎಂ.ಎ.ಸಲೀಂ ಹೇಳಿದ್ದಾರೆ.

ಬೆಂಗಳೂರು (ಜ.31) : ನಗರ ವ್ಯಾಪ್ತಿಯಲ್ಲಿ ಮೂರು ಟನ್‌ವರೆಗೆ ಸರಕು ಸಾಗಿಸುವ ನಾಲ್ಕು ಚಕ್ರದ ಸರಕು ಸಾಗಾಣಿಕೆ ವಾಹನಗಳ ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ನಗರ ವಿಶೇಷ ಪೊಲೀಸ್‌ ಆಯುಕ್ತ (ಸಂಚಾರ) ಡಾ ಎಂ.ಎ.ಸಲೀಂ ಹೇಳಿದ್ದಾರೆ.

ನಗರದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ (ಎಫ್‌ಕೆಸಿಸಿಐ) ಸೋಮವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಲೀಂ ಅವರು, ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಸಲುವಾಗಿ ಬೃಹತ್‌ ಸರಕು ಸಾಗಾಣಿಕೆ ವಾಹನಗಳಿಗೆ ಪೀಕ್‌ ಆವರ್‌ನಲ್ಲಿ ಸಂಚಾರ ನಿರ್ಬಂಧಿಸಲಾಗಿದೆ ಎಂದರು.

ಪೀಕ್ ಅವರ್‌ನಲ್ಲಿ ಬೆಂಗಳೂರು ಟ್ರಾಫಿಕ್ ಜಾಮ್ ತಪ್ಪಿಸಲು ಪೊಲೀಸರ ಮಾಸ್ಟರ್‌ ಪ್ಲ್ಯಾನ್‌..!

ಸಂವಾದ ಕಾರ್ಯಕ್ರಮದಲ್ಲಿ ಸರಕು ಸಾಗಾಣಿಕೆ ವಾಹನಗಳಿಗೆ ನಿರ್ಬಂಧನೆಯಿಂದ ಆಹಾರ ಪೂರೈಕೆಗೆ ತೊಂದರೆಯಾಗುತ್ತಿದೆ. ಹೀಗಾಗಿ ಕ್ಯಾಟರಿಂಗ್‌ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ಕೊಡಬೇಕು ಎಂದು ಹೋಟೆಲ್‌ ಮಾಲಿಕರ ಸಂಘದ ಪ್ರತಿನಿಧಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಲೀಂ ಅವರು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ (ಹೆಬ್ಬಾಳ ಮೇಲ್ಸೇತುವೆ) ಹೊರತುಪಡಿಸಿ ನಗರ ವ್ಯಾಪ್ತಿಯಲ್ಲಿ ಎಲ್ಲ ಮಾದರಿ ಸರಕು ಸಾಗಾಣಿಕೆ ವಾಹನಗಳಿಗೆ ಸಂಚಾರ ನಿಷೇಧಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ನಗರದಲ್ಲಿ ಮೂರು ಟನ್‌ವರೆಗೆ ಸರಕು ಸಾಗಿಸುವ ನಾಲ್ಕು ಚಕ್ರದ ವಾಹನಗಳ ಓಡಾಟಕ್ಕೆ ಅವಕಾಶ ಕೊಡಲಾಗಿದೆ. ಆದರೆ ಪೀಕ್‌ ಆವರ್‌ನಲ್ಲಿ ಆ ವಾಹನಗಳಿಗೆ ಮೇಲ್ಸೇತುವೆಯಲ್ಲಿ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಅವುಗಳು ರಸ್ತೆ ಮಧ್ಯೆ ದುರಸ್ತಿಗೆ ಬಂದರೆ ಇತರೆ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತದೆ. ಈ ಕಾರಣಕ್ಕೆ ಬೆಳಗ್ಗೆ ಮತ್ತು ಸಂಜೆ ಪಿಕ್‌ ಆವರ್‌ನಲ್ಲಿ ಮೇಲ್ಸೇತುವೆಗಳಲ್ಲಿ ಸರಕು ಸಾಗಾಣಿಕೆ ವಾಹನಗಳ ಸಂಚಾರ ನಿಷೇಧಿಸಿದ್ದೇವೆ. ಆ ಸಮಯದಲ್ಲಿ ಸವೀರ್‍ಸ್‌ ರಸ್ತೆಯಲ್ಲಿ ಅವುಗಳು ಸಾಗಬಹುದು. ವಿಮಾನ ನಿಲ್ದಾಣ ರಸ್ತೆಯಲ್ಲಿ ಎರಡು ಗಂಟೆಗಳು ಮಾತ್ರ ಎಲ್ಲ ಮಾದರಿಯ ಸರಕು ವಾಹನಗಳಿಗೆ ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.

ಪ್ರತಿ ನಾಗರಿಕನಿಗೆ ಒಂದು ವಾಹನ

ಪ್ರಸುತ್ತ ನಗರದಲ್ಲಿ 1.3 ಕೋಟಿ ಜನಸಂಖ್ಯೆ ಇದ್ದು, 1.02 ಕೋಟಿಯಷ್ಟುವಾಹನಗಳಿವೆ. ಕೆಲವೇ ವರ್ಷಗಳಲ್ಲಿ ಪ್ರತಿ ನಾಗರಿಕನಿಗೆ ಒಂದು ವಾಹನ ಎಂಬ ಅನುಪಾತದಲ್ಲಿರುತ್ತದೆ. ಅಲ್ಲದೆ ಸಾರ್ವಜನಿಕ ಸಾರಿಗೆ (ಬಿಎಂಟಿಸಿ ಹಾಗೂ ಮೆಟ್ರೋ) ಬಳಸುವವರ ಪ್ರಮಾಣವು ಶೇ.42ರಷ್ಟಿದೆ. ಆದರೆ ಮುಂಬೈ ಮಹಾನಗರದಲ್ಲಿ ಶೇ.80 ರಷ್ಟುಜನರು ಸಾರ್ವಜನಿಕ ಸಾರಿಗೆ ಬಳಸುತ್ತಾರೆ. ಇದರಿಂದ ಅಲ್ಲಿ ಕೇವಲ 35 ಲಕ್ಷ ವಾಹನಗಳಿವೆ. ಆದರೆ ಬೆಂಗಳೂರಿನಲ್ಲಿ ಮನೆಗಳಲ್ಲೇ ನಾಲ್ಕೈದು ವಾಹನಗಳಿರುತ್ತವೆ. ಹೀಗಾಗಿ ಸಾರ್ವಜನಿಕ ಸಾರಿಗೆ ಬಳಸುವ ಪ್ರವೃತ್ತಿಯೂ ನಾಗರಿಕರಲ್ಲಿ ಮೂಡಿದರೆ ಸಂಚಾರ ನಿರ್ವಹಣೆ ಕೂಡ ಸುಲಭವಾಗಲಿದೆ ಎಂದು ಸಲೀಂ ಸಲಹೆ ನೀಡಿದರು.

Bengaluru: ಹಾಫ್‌ ಹೆಲ್ಮೆಟ್‌ ಧರಿಸಿದರೆ ಬೀಳುತ್ತೆ 500 ರೂ. ದಂಡ!

ಅವಿನ್ಯೂ ರಸ್ತೆಗೆ ಬಿಎಂಟಿಸಿ ಬಸ್‌

ಅವಿನ್ಯೂ ಹಾಗೂ ಶಿವಾಜಿನಗರದ ರಸೆಲ್‌ ಮಾರ್ಕೆಟ್‌ ರಸ್ತೆಗಳಲ್ಲಿ ಬಿಎಂಟಿಸಿ ಬಸ್‌ಗಳು ಶೀಘ್ರದಲ್ಲೇ ಓಡಾಡಲಿವೆ. ಈ ನಿಟ್ಟಿನಲ್ಲಿ ಸಂಚಾರ ವ್ಯವಸ್ಥೆ ಮಾಡಲಾಗುತ್ತದೆ. ದೊಡ್ಡ ಬಸ್‌ಗಳು ಓಡಾಟ ಶುರು ಮಾಡಿದರೆ ರಸ್ತೆ ಒತ್ತುವರಿ ಕೂಡಾ ತಾನಾಗಿಯೇ ಕಡಿಮೆಯಾಗುತ್ತದೆ ಎಂದು ಸಲೀಂ ಅಭಿಪ್ರಾಯಪಟ್ಟರು.

click me!