ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್‌ ಜಿಹಾದ್‌, ರೇಪ್‌ ಆರೋಪ

By Kannadaprabha News  |  First Published May 4, 2024, 5:03 AM IST

ಹುಬ್ಬಳ್ಳಿಯ ಕಾಲೇಜು ಕ್ಯಾಂಪಸ್‌ನಲ್ಲಿ ಹಾಡಹಗಲೇ ಹತ್ಯೆಗೀಡಾದ ನೇಹಾ ಹಿರೇಮಠ ಪ್ರಕರಣ ಜನಮನದಿಂದ ಮಾಸುವ ಮುನ್ನವೇ ಇದೀಗ ನಗರದಲ್ಲಿ ಮತ್ತೊಂದು ಲವ್‌ ಜಿಹಾದ್‌ ಆರೋಪದ ಪ್ರಕರಣ ಸದ್ದು ಮಾಡಿದೆ. 


ಹುಬ್ಬಳ್ಳಿ (ಮೇ.04): ಹುಬ್ಬಳ್ಳಿಯ ಕಾಲೇಜು ಕ್ಯಾಂಪಸ್‌ನಲ್ಲಿ ಹಾಡಹಗಲೇ ಹತ್ಯೆಗೀಡಾದ ನೇಹಾ ಹಿರೇಮಠ ಪ್ರಕರಣ ಜನಮನದಿಂದ ಮಾಸುವ ಮುನ್ನವೇ ಇದೀಗ ನಗರದಲ್ಲಿ ಮತ್ತೊಂದು ಲವ್‌ ಜಿಹಾದ್‌ ಆರೋಪದ ಪ್ರಕರಣ ಸದ್ದು ಮಾಡಿದೆ. ಅಪ್ರಾಪ್ತ ಹಿಂದೂ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿ ಮಾಡಿದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸಂತ್ರಸ್ತೆ ನೀಡಿದ ದೂರಿನಂತೆ ಮುಸ್ಲಿಂ ಯುವಕನೊಬ್ಬನನ್ನು ಬಂಧಿಸಲಾಗಿದೆ.

ಘಟನೆಯ ಬೆನ್ನಲ್ಲೇ ಪೊಲೀಸ್‌ ಠಾಣೆಯ ಮುಂದೆ ಹಿಂದೂಗಳು ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿ ಶಾಸಕ ಅರವಿಂದ ಬೆಲ್ಲದ್‌ ಅವರು ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ‘ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವು ರಾಜ್ಯದ ಮಹಿಳೆಯರಿಗೆ ಲವ್‌ ಜಿಹಾದ್‌ ಭಾಗ್ಯ ಕರುಣಿಸಿದೆ. ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಪ್ರಕರಣ ಇನ್ನೂ ಚರ್ಚೆಯಲ್ಲಿರುವಾಗಲೇ ಹುಬ್ಬಳ್ಳಿಯಲ್ಲಿ ಮುಸ್ಲಿಂ ಯುವಕನಿಂದ ಪರಿಶಿಷ್ಟ ವರ್ಗಕ್ಕೆ ಸೇರಿದ ಅಪ್ರಾಪ್ತೆ ಮೇಲೆ ದೌರ್ಜನ್ಯ ನಡೆದಿದೆ. ರಾಜ್ಯದ ಮಹಿಳೆಯರಿಗೆ ಕಾಂಗ್ರೆಸ್ ಸರ್ಕಾರ ಕೊಡುವ ಭಾಗ್ಯ ಇದೇನಾ?’ ಎಂದು ಪ್ರಶ್ನಿಸಿದ್ದಾರೆ.

Tap to resize

Latest Videos

ಕೇಂದ್ರ ಸರ್ಕಾರ ಪ್ರಜ್ವಲ್‌ ರೇವಣ್ಣಗೆ ರಕ್ಷಣೆ ನೀಡುತ್ತಿದೆ: ಸಿಎಂ ಸಿದ್ದರಾಮಯ್ಯ ಕಿಡಿ

ಪೋಕ್ಸೋ ಕೇಸ್‌ ದಾಖಲು: ಆರೋಪಿಯನ್ನು ಈಶ್ವರನಗರದ ಸದ್ದಾಂ ಹುಸೇನ್‌ ಲಿಂಬುವಾಲೆ ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ಐಪಿಸಿ 376, 506, ಜಾತಿ ನಿಂದನೆ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಬಾಲಕಿಯನ್ನು ಚಿಕಿತ್ಸೆಗಾಗಿ ಇಲ್ಲಿನ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ಶುಕ್ರವಾರ ಸಂಜೆ ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದು, ಇದರಿಂದ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ರೇಪ್‌ ಮಾಡಿ ಬೆದರಿಕೆ: ಸದ್ದಾಂ ಹುಸೇನ್‌ ಲಿಂಬುವಾಲೆ ಎಂಬಾತ ಅಮರಗೋಳದ ಅಪ್ರಾಪ್ತ ಬಾಲಕಿ ಜತೆ ಸಲುಗೆ ಬೆಳೆಸಿ, ಪ್ರೀತಿಸುವಂತೆ ನಂಬಿಸಿ ಒತ್ತಾಯ ಪೂರ್ವಕವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಬಗ್ಗೆ ಮನೆಯಲ್ಲಿ ಹೇಳಿದರೆ, ಜೀವಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದ ಎಂದು ಸಂತ್ರಸ್ತೆ ನವನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಕಳೆದ ಮೂರ್‍ನಾಲ್ಕು ದಿನದಿಂದ ಬಾಲಕಿ ವಾಂತಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಕಿಮ್ಸ್‌ಗೆ ದಾಖಲಿಸಿದ್ದರು. ಆದರೂ ವಾಂತಿ ಕಡಿಮೆಯಾಗದಿದ್ದಾಗ ವೈದ್ಯರು ಪರೀಕ್ಷೆಗೆ ಒಳಪಡಿಸಿದಾಗ ಬಾಲಕಿ ಗರ್ಭಿಣಿಯಾಗಿರುವುದು ದೃಢಪಟ್ಟಿದೆ. ಆ ವೇಳೆ ಬಾಲಕಿಯನ್ನು ವಿಚಾರಿಸಿದಾಗ ಸದ್ದಾಂ ಹುಸೇನ್‌ ಹೆದರಿಸಿ, ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ತಿಳಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಬಾಲಕಿಯ ತಂದೆ-ತಾಯಿ ದೂರು ದಾಖಲಿಸಿದ್ದಾರೆ.

ಠಾಣೆಗೆ ಮುತ್ತಿಗೆ: ಅನ್ಯಕೋಮಿನ ಯುವಕ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಠಾಣೆ ಎದುರು ಸೇರಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬೃಹತ್‌ ಪ್ರತಿಭಟನೆ ನಡೆಸಿದರು. ಕೂಡಲೇ ಎಫ್‌ಐಆರ್‌ ದಾಖಲಿಸಬೇಕು ಎಂದು ಪಟ್ಟು ಹಿಡಿದರು. ಅಲ್ಲದೆ, ಕೂಡಲೇ ಆರೋಪಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ಸರಿಸುಮಾರು 2 ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ಮುಂದುವರಿಯಿತು. ರಾಜ್ಯ ಸರ್ಕಾರ ತುಷ್ಟೀಕರಣ ಮಾಡುತ್ತಿದೆ. ಹೀಗಾಗಿ ಈ ರೀತಿಯ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ರಾಜ್ಯ ಸರ್ಕಾರ ಇಂಥ ಆರೋಪಿಗಳನ್ನು ಎನ್‌ಕೌಂಟರ್‌ ಮಾಡಬೇಕು. 

ಮತದಾರರಿಗೆ ಹಣ ಕೊಡುವವರೇ ರಣಹೇಡಿಗಳು: ಡಿಕೆಶಿಗೆ ಎಚ್‌ಡಿಕೆ ತಿರುಗೇಟು

ಲವ್ ಜಿಹಾದ್ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು. ಇಲ್ಲವೇ ಆರೋಪಿಯನ್ನು ನಮಗೆ ಒಪ್ಪಿಸಿ ಎಂದು ಆಗ್ರಹಿಸಿದರು ಕೊನೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸ್‌ ಕಮಿಷನರ್‌ ರೇಣುಕಾ ಸುಕುಮಾರ್‌, ಡಿಸಿಪಿ ಎಂ. ರಾಜೀವ್‌ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ. ಹೀಗಾಗಿ ಪ್ರತಿಭಟನೆ ಹಿಂದಕ್ಕೆ ಪಡೆಯಿರಿ. ಕಾನೂನು ಪ್ರಕಾರ ಏನು ಶಿಕ್ಷೆಯಾಗಬೇಕು ಅದನ್ನು ಕೊಡಿಸಲಾಗುವುದು ಎಂದು ಭರವಸೆ ನೀಡಿದರು. ಆ ಬಳಿಕ ಪ್ರತಿಭಟನೆ ಕೈಬಿಡಲಾಯಿತು.

click me!