ರಾಜ್ಯದ 62 ಸ್ಟಾರ್‌ ಹೋಟೆಲ್‌ಗೆ ಕೈಗಾರಿಕೆ ಸ್ಥಾನ: ಸಚಿವ ಯೋಗೇಶ್ವರ್‌

By Kannadaprabha NewsFirst Published Feb 21, 2021, 1:58 PM IST
Highlights

ಕೇಬಲ್‌ ಕಾರ್‌ ವ್ಯವಸ್ಥೆಗೆ ಒತ್ತು| ಖಾಸಗಿಯವರ ಸಹಭಾಗಿತ್ವಕ್ಕೂ ಅವಕಾಶ| ಬಾದಾಮಿ, ಪಟ್ಟದಕಲ್ಲು, ಹಂಪಿ, ವಿಜಯಪುರ ಮತ್ತು ಬೇಲೂರಿನ ಪಾರಂಪರಿಕ ತಾಣಗಳ ಅಭಿವೃದ್ಧಿಗೂ ರೂಪರೇಷೆ ಸಿದ್ಧ| ನಂದಿ, ಜೋಗ, ಕೆಮ್ಮಣ್ಣುಗುಂಡಿ ಅಭಿವೃದ್ಧಿ| 

ಬೆಂಗಳೂರು(ಫೆ.21): ಬೃಹತ್‌ ಹೋಟೆಲ್‌ ಉದ್ಯಮಕ್ಕೆ ಕೈಗಾರಿಕೆ ಸ್ಥಾನಮಾನ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಮೊದಲ ಹಂತದಲ್ಲಿ 62 ಸ್ಟಾರ್‌ ಹೋಟೆಲ್‌ಗಳನ್ನು ಕೈಗಾರಿಕೆ ವ್ಯಾಪ್ತಿಗೆ ತರಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್‌ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್‌ನಿಂದ ಪ್ರವಾಸೋದ್ಯಮ ನಲುಗಿದೆ. ಇದನ್ನೇ ನಂಬಿದ್ದ ಹೋಟೆಲ್‌ ಉದ್ಯಮ ಸೇರಿದಂತೆ ಇತರೆ ಸಂಸ್ಥೆಗಳು ಆರ್ಥಿಕ ಹಿಂಜರಿತ ಕಂಡಿವೆ. ಹೋಟೆಲ್‌ ಉದ್ಯಮಕ್ಕೆ ಚೇತರಿಕೆ ನೀಡುವ ಉದ್ದೇಶದಿಂದ ಅವುಗಳನ್ನು ಕೈಗಾರಿಕಾ ವ್ಯಾಪ್ತಿಗೆ ತಂದು ಒಂದಷ್ಟು ಪ್ರಮಾಣದ ತೆರಿಗೆ ಹಾಗೂ ವಿದ್ಯುತ್‌ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುತ್ತಿದೆ ಎಂದು ಹೇಳಿದರು.

ಇದುವರೆಗೆ ವಾಣಿಜ್ಯ ದರದಲ್ಲಿ ಹೋಟೆಲ್‌ಗಳಿಗೆ ಕಟ್ಟಡದ ಆಸ್ತಿ ತೆರಿಗೆ ಹಾಗೂ ವಿದ್ಯುತ್‌ ಶುಲ್ಕ ವಿಧಿಸಲಾಗಿತ್ತು. ಈಗ ಕೈಗಾರಿಕೆ ಸ್ಥಾನಮಾನ ನೀಡುವುದರಿಂದ ಕಟ್ಟಡದ ಆಸ್ತಿ ತೆರಿಗೆ ಹಾಗೂ ವಿದ್ಯುತ್‌ ಶುಲ್ಕ ಕಡಿಮೆ ಆಗಲಿದೆ. ಕೈಗಾರಿಕೆ ಸ್ಥಾನಮಾನ ಹೊಂದಿರುವ ಸಂಸ್ಥೆಗಳಿಗೆ ತೆರಿಗೆ ಮತ್ತು ವಿದ್ಯುತ್‌ ದರ ಕಡಿಮೆ ಇರುತ್ತದೆ. ಇದರ ಲಾಭ ಸ್ಟಾರ್‌ ಹೋಟೆಲ್‌ಗಳಿಗೆ ದೊರೆಯಲಿದೆ. ಈ ನಿರ್ಧಾರದಿಂದ ಪರೋಕ್ಷವಾಗಿ ಪ್ರವಾಸೋದ್ಯಮಕ್ಕೂ ಉಪಯೋಗ ಆಗಲಿದೆ. ಆದರೆ, ಸಣ್ಣ ಹೋಟೆಲ್‌ಗಳು ಈ ಯೋಜನೆಯಡಿ ಬರುವುದಿಲ್ಲ. ಅವುಗಳನ್ನು ಬೇರೆ ಯೋಜನೆಯಡಿ ಇಂತಹುದೇ ಸೌಲಭ್ಯ ನೀಡುವ ಉದ್ದೇಶವಿದೆ ಎಂದು ವಿವರಿಸಿದರು.

ದೇಶದ ಮೊದಲ ಹಾಟ್‌ ಏರ್‌ ಬಲೂನ್‌ ಸಫಾರಿ

ಈ ನಿರ್ಧಾರದಿಂದ ಹಂತ-ಹಂತವಾಗಿ ಸಿಂಗಲ್‌ ಸ್ಟಾರ್‌ನಿಂದ 5 ಸ್ಟಾರ್‌ವರೆಗಿನ ಹೋಟೆಲ್‌ಗಳಿಗೆ ಕೈಗಾರಿಕಾ ಮಾನ್ಯತೆ ದೊರೆಯವಲಿವೆ. ಅವು ಮುಂದಿನ ಐದು ವರ್ಷದವರೆಗೆ ತೆರಿಗೆ ಹಾಗೂ ವಿದ್ಯುತ್‌ ದರ ರಿಯಾಯ್ತಿಯ ಲಾಭ ಪಡೆಯಲಿವೆ. ಮೊದಲ ಹಂತದಲ್ಲಿ ಕೇಂದ್ರ ಸರ್ಕಾರ ಗುರುತಿಸಿರುವ 62 ಸ್ಟಾರ್‌ ಹೋಟೆಲ್‌ಗಳಿಗೆ ಯೋಜನೆಯ ಲಾಭ ದೊರೆಯಲಿದೆ. ಕೈಗಾರಿಕೆ, ಇಂಧನ, ನಗರಾಭಿವೃದ್ಧಿ ಇಲಾಖೆ ಹಾಗೂ ಮಹಾನಗರ ಪಾಲಿಕೆಗಳ ಜೊತೆ ಸಭೆ ನಡೆಸಿ ನಂತರ ಈ ನಿಟ್ಟಿನಲ್ಲಿ ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದರು. ಸರ್ಕಾರ ನೀಡುವ ಈ ರಿಯಾಯ್ತಿಯ ಲಾಭ ಗ್ರಾಹಕನಿಗೂ ದೊರೆಯುವಂತೆ ಮಾಡಲು ಆ ಹೋಟೆಲ್‌ಗಳಿಗೆ ಹೋಗುವ ಗ್ರಾಹಕರಿಗೂ ಕೆಲ ರಿಯಾಯಿತಿ ನೀಡುವಂತಹ ನಿಯಮಗಳನ್ನು ರೂಪಿಸಲಾಗುವುದು ಎಂದರು.

ನಂದಿ, ಜೋಗ, ಕೆಮ್ಮಣ್ಣುಗುಂಡಿ ಅಭಿವೃದ್ಧಿ

ನಂದಿ ಗಿರಿಧಾಮ, ಜೋಗ್‌ಫಾಲ್ಸ್‌, ಕೊಡಚಾದ್ರಿ, ಕೆಮ್ಮಣ್ಣು ಗುಂಡಿ ಪ್ರವಾಸಿ ತಾಣಗಳನ್ನು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಸುಸ್ಥಿರ ಪರಿಸರ ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ಇದೇ ವೇಳೆ ಸಚಿವ ಯೋಗೇಶ್ವರ್‌ ಹೇಳಿದರು.

ನಂದಿ ಗಿರಿಧಾಮ ಪ್ರವಾಸಿ ತಾಣ ಅಭಿವೃದ್ಧಿ ಕುರಿತು ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಈವರೆಗೆ ಈ ತಾಣ ತೋಟಗಾರಿಕೆ ಇಲಾಖೆಯ ಹಿಡಿತದಲ್ಲಿತ್ತು. ಈಗ ಪ್ರವಾಸೋದ್ಯಮ ಇಲಾಖೆಗೆ ತೆಗೆದುಕೊಂಡಿದ್ದೇವೆ. ಕೇಬಲ್‌ ಕಾರ್‌ ವ್ಯವಸ್ಥೆ ಸೇರಿದಂತೆ ಎಲ್ಲವನ್ನೂ ಮಾಡುತ್ತೇವೆ. ಖಾಸಗಿಯವರ ಬಂಡವಾಳಕ್ಕೂ ಅವಕಾಶ ಕೊಟ್ಟಿದ್ದೇವೆ ಎಂದರು.

ಕೇರಳದಲ್ಲಿ ಭಾರತದ ಮೊದಲ ಸೋಲಾರ್ ಮಿನಿಯೇಚರ್ ಟ್ರೈನ್

ಇದೇ ರೀತಿ ಜೋಗ್‌ಫಾಲ್ಸ್‌, ಕೊಡಚಾದ್ರಿ, ಕೆಮ್ಮಣ್ಣು ಗುಂಡಿಯನ್ನೂ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ಬಾದಾಮಿ, ಪಟ್ಟದಕಲ್ಲು, ಹಂಪಿ, ವಿಜಯಪುರ ಮತ್ತು ಬೇಲೂರಿನ ಪಾರಂಪರಿಕ ತಾಣಗಳ ಅಭಿವೃದ್ಧಿಗೂ ರೂಪರೇಷೆ ಸಿದ್ಧವಾಗುತ್ತಿದೆ. ಈ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಜೊತೆಗೂ ಚರ್ಚಿಸಿದ್ದೇನೆ. ರಾಜ್ಯದ ಆಣೆಕಟ್ಟುಗಳಲ್ಲಿ ಜಲಕ್ರೀಡೆಗಳ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಿ, ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ರಾಜ್ಯದ ಸಂಸ್ಕೃತಿ ಮತ್ತು ಪಾರಂಪರಿಕತೆಯನ್ನು ಉಳಿಸುವ ನಿಟ್ಟಿನಲ್ಲಿ ಕೆ.ಎಸ್‌.ಟಿ.ಡಿ.ಸಿ ವತಿಯಿಂದ ರೋರಿಚ್‌ ಎಸ್ಟೇಟ್‌ ಅಭಿವೃದ್ಧಿಪಡಿಸಲಾಗುವುದು. ಬೆಂಗಳೂರಿನಿಂದ ಪ್ರವಾಸಿಗರು ಹೊರಗೆ ಹೋಗಲು ರಾಮನಗರ, ಕೋಲಾರ, ತುಮಕೂರು ಮತ್ತು ಹತ್ತಿರದ ಜಿಲ್ಲೆಗಳಲ್ಲಿನ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ಇದಕ್ಕೂ ಮುನ್ನ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಕಾರ್ಯಯೋಜನೆಗಳ ಪರಿಶೀಲನಾ ಸಭೆ ನಡೆಸಿದ ಸಚಿವರು, ರಾಜ್ಯದಲ್ಲಿರುವ ಐತಿಹಾಸಿಕ ಪ್ರವಾಸಿ ತಾಣಗಳನ್ನು ದೇಶ - ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸುವ ರೀತಿಯಲ್ಲಿ ಅಭಿವೃದ್ಧಿಪಡಿಸಲು ಸಮರ್ಪಕ ಕ್ರಿಯಾ ಯೋಜನೆಯನ್ನು ತ್ವರಿತವಾಗಿ ಸಿದ್ಧಪಡಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸಚಿವ ಯೋಗೇಶ್ವರ್‌ ತಾಕೀತು ಮಾಡಿದರು.
 

click me!