ನಮಗೂ ಮೀಸಲಾತಿ ಕಲ್ಪಿಸಿ : ಸರ್ಕಾರಕ್ಕೆ ಮೊಗವೀರ ಜನಾಂಗ ಆಗ್ರಹ

By Kannadaprabha NewsFirst Published Feb 25, 2021, 12:03 PM IST
Highlights

ದಶಕಗಳಿಂದ ಬೇಡಿಕೆ ಇಟ್ಟಿರುವಂತೆ ತಮಗೂ ಮೀಸಲಾತಿ ಸೌಲಭ್ಯವನ್ನು  ಕೊಡುವಂತೆ ಸರ್ಕಾರವನ್ನು ಮೊಗವೀರ ಸಮುದಾಯ ಒತ್ತಾಯಿಸಿದೆ. ಹಲವು ಸಂಕಷ್ಟಗಳ ನಡುವೆ ಬದುಕು ಸಾಗಿಸುವುದು ಕಷ್ಟವಾಗುತ್ತಿದ್ದು ಈ ನಿಟ್ಟಿನಲ್ಲಿ ಮೀಸಲಾತಿ ನೀಡಲು ಆಗ್ರಹಿಸಿದ್ದಾರೆ. 

ಬೆಂಗಳೂರು (ಫೆ.25):  ರಾಜ್ಯದಲ್ಲಿ ಆರಂಭವಾಗಿರುವ ಮೀಸಲಾತಿ ಪರ್ವದ ಕೂಗಿಗೆ ಮೊಗವೀರ ಸಮುದಾಯವೂ ದನಿಗೂಡಿಸಿದೆ. ದಶಕಗಳಿಂದ ಬೇಡಿಕೆ ಇಟ್ಟಿರುವಂತೆ ತಮಗೂ ಮೀಸಲಾತಿ ಸೌಲಭ್ಯವನ್ನು ಕೊಡುವಂತೆ ಸರ್ಕಾರವನ್ನವರು   ಒತ್ತಾಯಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ  ಮಾತನಾಡಿದ ಸಂಘದ ಪ್ರಮುಖರು ಇದೇ ವೇಳೆ ತಮ್ಮ ಪ್ರವೃತ್ತಿಯಾದ ಮೀನುಗಾರಿಕೆ ಸಂಕಷ್ಟದ ಬಗೆಗೂ ಮಾಹಿತಿ ಹಂಚಿಕೊಂಡರು. 

 ಚಂಡ ಮಾರುತಗಳ ಅಬ್ಬರ, ಪೆಟ್ರೋಲ್ , ಡೀಸೆಲ್ ದರ ಏರಿಕೆಯಿಂದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಮಾಡಲಾಗದೇ ಶೇ. 90 ರಷ್ಟು ಮಂದಿ ಮೀನುಗಾರರು ಸಂಕಷ್ಟಕ್ಕೀಡಾಗಿದ್ದಾರೆ.  ಹವಾಮಾನ ವೈಪರೀತ್ಯ, ಪರಿಸರ ಮಾಲಿನ್ಯದಿಂದ ಒಂದು ಸಲ ಮೀನುಗಾರಿಕೆ ಮಾಡಬೇಕಾದರೆ ಹನ್ನೆರಡು ದಿನ ಸಮುದ್ರದಲ್ಲಿ ಕಳೆಯುವಂತಾಗಿದೆ. ಸುಮಾರು ಎಂಟು ನೂರು ಕಿ.ಮೀ. ದೂರ ಸಮುದ್ರ ಯಾನ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ನಾನಾ ಕಾರಣದಿಂದ ಸಂಕಷ್ಟಕ್ಕೆ ಒಳಗಾಗಿರುವ ಕರಾವಳಿ ಭಾಗದ ಮೀನುಗಾರರ ಸಾಲ ಮತ್ತು ಬಡ್ಡಿ ಮನ್ನಾ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 

ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಸುಧಾಕರ್ ಕುಂದರ್, ಉಪಾಧ್ಯಕ್ಷ ದೇವರಾಜ್ ಬೋಳೂರು ಬುಧವಾರ ಜಂಟಿ ಸುದ್ದಿ ಗೋಷ್ಠಿಯಲ್ಲಿ ಕರಾವಳಿ ಮೀನುಗಾರರು ಎದರಿಸುತ್ತಿರುಮಿವ ಸವಾಲುಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಸಮುದ್ರಕ್ಕೆ ದಿಢೀರನೆ ಹಾರಿ ಮೀನುಗಾರರೊಂದಿಗೆ ರಾಹುಲ್ ಈಜು!

ಮೀನುಗಾರಿಕೆ ಕೊಡುಗೆ: ಕರಾವಳಿ ಭಾಗದಲ್ಲಿ 4750  ಯಾಂತ್ರಿಕ ಬೋಟುಗಳು, 7500 ನಾಡ ದೋಣಿಗಳು, 10 ,500 ಕ್ಕೂ ಹೆಚ್ಚು ಔಟ್ ಬೋರ್ಡ್ ಯಾಂತ್ರಿಕ ಬೋಟುಗಳು ಮೀನುಗಾರಿಕೆಯಲ್ಲಿ ತೊಡಗಿವೆ. ಮೀನು ಮಾರಾಟ, ಮೀನು ಹೋಟೆಲ್, ಮೀನು ಸಾಗಣೆ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸಿದೆ. ವಾರ್ಷಿಕ ಐದು ಸಾವಿರ ಕೋಟಿ ರೂಪಾಯಿ ವಿದೇಶಿ ವಿನಿಮಯ ಬರುತ್ತಿದೆ. ಇನ್ನು ಮೀನು ಗಾರಿಗೆ ಅವಲಂಭಿಸಿದ ಪರೋಕ್ಷ ಉದ್ಯಮದಲ್ಲಿ ಲಕ್ಷಾಂತರ ಮಂದಿ ಉದ್ಯೋಗ ಕಂಡು ಕೊಂಡಿದ್ದಾರೆ. 


 
ಚಂಡ ಮಾರುತಗಳ ಹೊಡೆತ 150 ಕಿ.ಮೀ. ಆಳದಲ್ಲಿ ಮೀನುಗಾರಿಕೆ  : ಕಳೆದ ಐದು ವರ್ಷದಿಂದ ಸತತವಾಗಿ ಚಂಡಮಾರುತ ಅಪ್ಪಳಿಸುತ್ತಿವೆ. ಹೀಗಾಗಿ ಮೀನುಗಾರಿಕೆ ಋತುವಿನಿಂದ ಋತುವಿಗೆ ಇಳಿ ಮುಖವಾಗುತ್ತಿದೆ. ಕರೋನಾ ಬಂದ ಮೇಲೆಂತೂ ಮೀನುಗಾರರ ಬದುಕನ್ನು ಮೂರಾಬಟ್ಟೆ ಮಾಡಿದೆ. ಕೈಗಾರಿಕೆಗಳ ತಾಜ್ಯ, ವಾಯು ಮಾಲಿನ್ಯ, ಹವಾಮಾನ ವೈಪರೀತ್ಯದಿಂದ ಸಮುದ್ರ ತೀರದಿಂದ ಮೀನುಗಳು ದೂರದ ಪ್ರದೇಶಕ್ಕೆ ವಲಸೆ ಹೋಗಿವೆ. ಹೀಗಾಗಿ ಇಂದು ಮೀನುಗಾರಿಕೆ ಮಾಡಬೇಕಾದರೆ ಸುಮಾರು 800 ಕಿ.ಮೀ . ದೂರದಲ್ಲಿ 150 ಕಿ.ಮೀ. ಆಳದಲ್ಲಿ ಮೀನುಗಾರಿಕೆ ನಡೆಸಬೇಕಾಗಿದೆ. ಒಮ್ಮೆ ಮೀನುಗಾರಿಕೆ ಮಾಡಲು ಹನ್ನೆರಡು ದಿನ ಸಮುದ್ರದಲ್ಲಿ ಕಳೆಯುವಂತಾಗಿದೆ.  ಮೀನುಗಾರರನ್ನು ಸಂಕಷ್ಟಕ್ಕೆ ದೂಡಿದೆ. ಶತಮಾನಗಳಿಂದ ಮಾಡಿಕೊಂಡಿರುವ ಮೀನುಗಾರಿಕೆ ಬಿಟ್ಟರೆ ಬದುಕಲಿಕ್ಕೆ ಬೇರೆ ಉದ್ಯೋಗ ಗೊತ್ತಿಲ್ಲ. ಇದನ್ನು ಬಿಟ್ಟು ಬೇರೆ ಮಾಡಲಿಕ್ಕೂ ಅವಕಾಶ ಇಲ್ಲದೇ ಕರಾವಳಿ ಭಾಗದ ಮೀನುಗಾರರು ಸಂಕಷ್ಟದಲ್ಲಿ ತೊಡಗಿದ್ದಾರೆ ಎಂದ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಇವತ್ತಿನ ಮೀನುಗಾರಿಕೆ ಎದುರಿಸುತ್ತಿರುವ ಸವಾಲುಗಳನ್ನು ವಿವರಿಸಿದರು. 
 
ಡೀಸೆಲ್ , ಸೀಮೆ ಎಣ್ಣೆ ಬೆಲೆ ಏರಿಕೆ :  ಶೇ. 75 ರಷ್ಟು ಗಳಿಕೆ ಇಂಧನಕ್ಕೆ ವ್ಯಯ :   ಇನ್ನು ದೇಶದಲ್ಲಿ ಇಂಧನ ಬೆಲೆ ತಾರಕಕ್ಕೇರಿದೆ. ಇದು ಮೀನುಗಾರರಿಗೂ ದೊಡ್ಡ ಪೆಟ್ಟು ನೀಡಿದೆ. ಸುಮಾರು 800 ಕಿ.ಮೀ. ದೂರದ ವರೆಗೆ ಕ್ರಮಿಸಬೇಕಾದ ಕಾರಣದಿಂದ ಒಮ್ಮೆ ಮೀನುಗಾರಿಕೆಗೆ ಹೋಗಿ ಬರಲು ದಿನಕ್ಕೆ 300 ರಿಂದ 500 ಲೀಟರ್ ಡೀಸೆಲ್ ಮತ್ತು ಸೀಮೆಎಣ್ಣೆ ಬೇಕಾಗುತ್ತದೆ. ಶೇ. 75  ರಷ್ಟು ಮೀನುಗಾರಿಕೆ ಬೋಟ್ ಗಳು ಡೀಸೆಲ್ ಅವಲಂಭಿಸಿದ್ದು, ಮೀನುಗಾರಿಕೆಯಿಂದ ಗಳಿಸುವ ಶೇ. 75 ರಷ್ಟು ಇಂಧನದ ಮೇಲೆ ವ್ಯಯ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.   ಈ ಕಾರಣದಿಂದಾಗಿ ಶೇ. 75 ರಷ್ಟು ಮೀನುಗಾರಿಕೆ ಸ್ಥಗಿತಗೊಳ್ಳುವಂತಾಗಿದೆ.  ಈ ಎಲ್ಲಾ ಸಮಸ್ಯೆಗಳಿಂದ ಮೀನುಗಾರರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಮೀನುಗಾರರ  ನೆರವಿಗೆ ಬರಬೇಕು ಎಂದು ಕಾರ್ಯದರ್ಶಿ ಸುಧಾಕರ್ ಕುಂದರ್ ಒತ್ತಾಯ ಮಾಡಿದರು. 

ಮೀನುಗಾರರ ನೆರವಿಗೆ ನಿಲ್ಲಲು ಮನವಿ 

ಮೊಗವೀರರು ಮುಂದಿಟ್ಟ ಬೇಡಿಕೆ :  ರಾಜ್ಯ ಸರ್ಕಾರ ನೀಡುತ್ತಿರುವ ಕರ ರಿಯಾಯಿತಿ ಡೀಸಲ್ ಪೂರೈಕೆ ಪದ್ಧತಿ ನಿಲ್ಲಿಸಿ ಡೆಲಿವರಿ ಪಾಯಿಂಟ್  ನಲ್ಲಿ ಕರ ರಿಯಾಯಿತಿ ಹಾಗೂ ವಾರ್ಷಿಕ ಕೋಟಾದಲ್ಲಿ ಡೀಸೆಲ್ ನೀಡಬೇಕು. ನಾಡದೋಣಿ ಮೀನುಗಾರರಿಗೆ ಕರ ರಹಿತ ಅಗತ್ಯ ಸೀಮೆಎಣ್ಣೆ ನೀಡಬೇಕು. ಐದು ವರ್ಷದಿಂದ ಭೀಕರ ಚಂಡ ಮಾರುತಗಳಿಂದ ತತ್ತರಿಸಿರುವ ಮೀನುಗಾರರ ಬ್ಯಾಂಕ್ ಸಾಲ ಮತ್ತು ಬಡ್ಡಿ ಮನ್ನಾ ಮಾಡಬೇಕು. ಮೀನುಗಾರಿಗೆ ಶೇ. 4 ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕಲ್ಪಿಸಬೇಕು. ಮತ್ಸ್ಯ ಕ್ಷಾಮದಿಂದ ಉದ್ಯೋಗ ಕಳೆದುಕೊಂಡಿರುವರಿಗೆ ಸರ್ಕಾರ ಪರಿಹಾರ ನೀಡಬೇಕು. ಮೀನುಗಾರರು ಬಳಸುವ ಡೀಸೆಲ್ ಮೇಲಿನ ರಸ್ತೆ ತೆರಿಗೆ ತೆರೆಯಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಪ್ರತ್ಯೇಕ ಮೀನುಗಾರಿಕಾ ಕೈಗಾರಿಕಾ ವಲಯ ರಚಿಸಬೇಕು.  ಪ್ರತಿ ತಾಲೂಕಿನಲ್ಲಿ ಸ್ವಚ್ಛ ಮೀನು ಮಾರುಕಟ್ಟೆ ನಿರ್ಮಾಣ ಮಾಡಬೇಕು. ಈ ಎಲ್ಲಾ ಬೇಡಿಕೆ ಸರ್ಕಾರ ಈಡೇರಿಸಿ ಮೀನುಗಾರರನ್ನು ರಕ್ಷಿಸಬೇಕು. ಇಲ್ಲದಿದ್ದರೆ ಅನಿರ್ಧಿಷ್ಟ ಮುಷ್ಕರ ಕೈಗೊಳ್ಳುವುದಾಗಿ ಸಂಘದ ಸದಸ್ಯರು ಎಚ್ಚರಿಕೆ ನೀಡಿದರು.

click me!