ರಾಜ್ಯದ್ದು ಎಸ್‌ಐಟಿ ಅಲ್ಲ, ಎಸ್‌ಎಸ್‌ಎಸ್‌ಐಟಿ: ಅಶೋಕ್‌

By Kannadaprabha NewsFirst Published May 8, 2024, 4:18 AM IST
Highlights

ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ಹೋಗಲು ಕಾಂಗ್ರೆಸ್‌ ಕಾರಣ. ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಲೆಂದೇ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೀಗೆ ಪ್ಲಾನ್‌ ಮಾಡಿದ್ದಾರೆ. ಚಿತ್ರಕಥೆಯನ್ನು ಸುರ್ಜೇವಾಲಾ ಬರೆದಿದ್ದು, ಸಿದ್ದರಾಮಯ್ಯ ನಿರ್ದೇಶನ ಹಾಗೂ ಡಿ.ಕೆ.ಶಿವಕುಮಾರ್‌ ನಿರ್ಮಾಣ ಮಾಡಿದ್ದಾರೆ ಎಂದು ಲೇವಡಿ ಮಾಡಿದ ಆರ್‌.ಅಶೋಕ್ 

ಬೆಂಗಳೂರು(ಮೇ.08): ‘ಪ್ರಜ್ವಲ್‌ ರೇವಣ್ಣ ಪ್ರಕರಣದ ತನಿಖೆಗೆ ರಚಿಸಿರುವುದು ಎಸ್‌ಐಟಿ ಅಲ್ಲ ಎಸ್‌ಎಸ್‌ಎಸ್‌ಐಟಿ. ಅದು ಸುರ್ಜೇವಾಲಾ, ಸಿದ್ದರಾಮಯ್ಯ ಮತ್ತು ಶಿವಕುಮಾರ್‌ ಇನ್‌ವೆಸ್ಟಿಗೇಷನ್ ಟೀಮ್’ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್ ಆಪಾದಿಸಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ಹೋಗಲು ಕಾಂಗ್ರೆಸ್‌ ಕಾರಣ. ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಲೆಂದೇ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೀಗೆ ಪ್ಲಾನ್‌ ಮಾಡಿದ್ದಾರೆ. ಚಿತ್ರಕಥೆಯನ್ನು ಸುರ್ಜೇವಾಲಾ ಬರೆದಿದ್ದು, ಸಿದ್ದರಾಮಯ್ಯ ನಿರ್ದೇಶನ ಹಾಗೂ ಡಿ.ಕೆ.ಶಿವಕುಮಾರ್‌ ನಿರ್ಮಾಣ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.

ಪ್ರಜ್ವಲ್‌ ರೇವಣ್ಣ ಗೆದ್ದರೆ ಎನ್‌ಡಿಎಯಿಂದ ಕಾನೂನು ಕ್ರಮ: ಆರ್‌.ಅಶೋಕ್‌

ಹಿಂದೆ ವೀರೇಂದ್ರ ಪಾಟೀಲ್‌ ಅವರಿಂದ ಕಾಂಗ್ರೆಸ್‌ ಪಕ್ಷ ಅಧಿಕಾರ ಕಿತ್ತುಕೊಂಡಿತ್ತು. ಬಳಿಕ ಬಿ.ಎಸ್.ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸಿ ಲಿಂಗಾಯತರಿಗೆ ಕಾಂಗ್ರೆಸ್‌ ಅಪಮಾನ ಮಾಡಿತ್ತು. ಈಗ ಒಕ್ಕಲಿಗರನ್ನು ಟಾರ್ಗೆಟ್‌ ಮಾಡಿ ಒಂದು ಲಕ್ಷ ಪೆನ್‌ಡ್ರೈವ್‌ ತಯಾರು ಮಾಡಿ ಹಂಚಲಾಗಿದೆ. ಎಸ್‌ಐಟಿ ರಬ್ಬರ್‌ ಸ್ಟಾಂಪ್‌ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದಂತೆ ಕೇಳುತ್ತದೆ. ವೀಡಿಯೋ ಹಂಚುವುದು ಅಪರಾಧ ಎಂದೇ ಎಸ್‌ಐಟಿ ಹೇಳಿದೆ. ಪೆನ್‌ಡ್ರೈವ್‌ ಕೊಟ್ಟ ಚಾಲಕನನ್ನು ಜೈಲಿಗೆ ಹಾಕಿಲ್ಲ. ಪೆನ್‌ಡ್ರೈವ್‌ ಹಂಚಿದವರಲ್ಲಿ ಎಷ್ಟು ಜನರನ್ನು ಎಸ್‌ಐಟಿ ಜೈಲಿಗೆ ಹಾಕಿದೆ ಎಂದು ಖಾರವಾಗಿ ಪ್ರಶ್ನಿಸಿದರು.

ಈ ಪ್ರಕರಣದಲ್ಲಿ ಸರ್ಕಾರದ ಪಾತ್ರವಿದೆ ಎಂದು ಕಾನೂನು ತಜ್ಞರೇ ಹೇಳಿದ್ದಾರೆ. ಆದ್ದರಿಂದ ರಾಜ್ಯಪಾಲರು ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

click me!