ಭದ್ರತಾ ಸಿಬ್ಬಂದಿ ಮುಖಕ್ಕೆ ಪೆಪ್ಪರ್ ಸ್ಪ್ರೆ ಸಿಂಪಡಿಸಿ ಗಾಯಗೊಳಿಸಿದ ಮತ್ತು ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಸಿ.ಕೃಷ್ಣಯ್ಯ ಚೆಟ್ಟಿ ಆ್ಯಂಡ್ ಸನ್ಸ್ ಕಂಪನಿ (ಸಿಕೆಸಿ ಆ್ಯಂಡ್ ಸನ್ಸ್ ಕಂಪನಿ) ಚಿನ್ನಾಭರಣಗಳ ಮಳಿಗೆ ನಿರ್ದೇಶಕ ಸಿ.ಗಣೇಶ್ ನಾರಾಯಣ ಮತ್ತವರ ಪತ್ನಿ ವಿದ್ಯಾ ನಟರಾಜ್ ವಿರುದ್ಧದ ಎಫ್‌ಐಆರ್ ರದ್ದುಪಡಿಸಲು ನಿರಾಕರಿಸಿದೆ.
ಬೆಂಗಳೂರು (ಮೇ.08): ಪೆಪ್ಪರ್ ಸ್ಪ್ರೇ ಎನ್ನುವುದು ಅತ್ಯಂತ ಅಪಾಯಕಾರಿ ಆಯುಧವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಭದ್ರತಾ ಸಿಬ್ಬಂದಿ ಮುಖಕ್ಕೆ ಪೆಪ್ಪರ್ ಸ್ಪ್ರೆ ಸಿಂಪಡಿಸಿ ಗಾಯಗೊಳಿಸಿದ ಮತ್ತು ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಸಿ.ಕೃಷ್ಣಯ್ಯ ಚೆಟ್ಟಿ ಆ್ಯಂಡ್ ಸನ್ಸ್ ಕಂಪನಿ (ಸಿಕೆಸಿ ಆ್ಯಂಡ್ ಸನ್ಸ್ ಕಂಪನಿ) ಚಿನ್ನಾಭರಣಗಳ ಮಳಿಗೆ ನಿರ್ದೇಶಕ ಸಿ.ಗಣೇಶ್ ನಾರಾಯಣ ಮತ್ತವರ ಪತ್ನಿ ವಿದ್ಯಾ ನಟರಾಜ್ ವಿರುದ್ಧದ ಎಫ್‌ಐಆರ್ ರದ್ದುಪಡಿಸಲು ನಿರಾಕರಿಸಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಗಣೇಶ್ ನಾರಾಯಣ್ ಮತ್ತವರ ಪತ್ನಿ ವಿದ್ಯಾ ನಟರಾಜ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ, ಅಮೆರಿಕ ನ್ಯಾಯಾಲಯದ ಆದೇಶವೊಂದರಲ್ಲಿ ಪೆಪ್ಪರ್ ಸ್ಪ್ರೇಯನ್ನು ಅಪಾಯಕಾರಿ ಆಯುಧವಾಗಿ ಪರಿಗಣಿಸಿರುವುದನ್ನು ಪ್ರಸ್ತಾಪಿಸಿ ಅರ್ಜಿ ವಜಾಗೊಳಿಸಿದೆ.
ದಾರಿ ತಪ್ಪಿಸುವ ಜಾಹೀರಾತಿಗೆ ನಟಿಸಿದವರೂ ಹೊಣೆ: ಸುಪ್ರೀಂಕೋರ್ಟ್
ಪ್ರಕರಣದಲ್ಲಿ ದೂರುದಾರ ಸಿಕೆಸಿ ಆ್ಯಂಡ್ ಸನ್ಸ್ ಮಳಿಗೆಯ ಭದ್ರತಾ ಸಿಬ್ಬಂದಿ ರಣದೀಪ್ ದಾಸ್ ಮುಖಕ್ಕೆ ಪೆಪ್ಪರ್ ಸ್ಪ್ರೇ ಸಿಂಪಡಿಸಿ ಗಾಯಗೊಳಿಸಿದ ಆರೋಪ ಅರ್ಜಿದಾರರ ಮೇಲಿದೆ. ಪೆಪ್ಪರ್ ಸ್ಪ್ರೇ ಸಹ ಐಪಿಸಿ ಸೆಕ್ಷನ್ 324 ಅಡಿಯಲ್ಲಿ ವ್ಯಾಖ್ಯಾನಿಸುವ ಅಪಾಯಕಾರಿ ಆಯುಧ ಎಂದು ದೂರುದಾರರು ವಾದಿಸುತ್ತಿದ್ದಾರೆ. ಪೆಪ್ಪರ್ ಸ್ಪ್ರೇ ಅಪಾಯಕಾರಿ ಆಯುಧವಲ್ಲ ಎಂದು ಅರ್ಜಿದಾರರು ಹೇಳುತ್ತಿದ್ದಾರೆ. ಆದರೆ, ಪೆಪ್ಪರ್ ಸ್ಪ್ರೇ ಸಹ ಒಂದು ಅಪಾಯಕಾರಿ ಆಯುಧ ಎನ್ನುವುದರಲ್ಲಿ ಸಂಶಯವೇ ಇಲ್ಲ. ಪೆಪ್ಪರ್ ಸ್ಪ್ರೇ ಬಳಕೆಯು ಅಪಾಯಕಾರಿ ಎಂಬುದಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಯಾವುದೇ ಕಾನೂನು ಇಲ್ಲ.
2018ರಲ್ಲಿ ಪ್ರಕರಣವೊಂದರಲ್ಲಿ ಅಮೆರಿಕ ನ್ಯಾಯಾಲಯವು ಪೆಪ್ಪರ್ ಸ್ಪ್ರೇ ಸಹ ಹಾನಿಕಾರಕ ರಾಸಾಯನಿಕಗಳಿರುವ ಅಪಾಯಕಾರಿ ಆಯುಧ ಎಂಬುದಾಗಿ ಸ್ಪಷ್ಟಪಡಿಸಲಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ. ಅಲ್ಲದೆ, ಸಿವಿಲ್ ವ್ಯಾಜ್ಯವೊಂದರ ವಿಚಾರವಾಗಿ ಅರ್ಜಿದಾರರು ಹಾಗೂ ದೂರುದಾರರು ನಡುವೆ ನಡೆದ ಗಲಾಟೆ ಸಂಬಂಧ ಇಬ್ಬರು ದೂರು-ಪ್ರತಿ ದೂರು ದಾಖಲಿಸಿದ್ದಾರೆ. ಅವುಗಳ ತನಿಖೆ ನಡೆಯಬೇಕಿದೆ. ಪ್ರಕರಣ ತನಿಖಾ ಹಂತದಲ್ಲಿದೆ. ಈ ಸಂದರ್ಭದಲ್ಲಿ ಎಫ್‌ಐಆರ್ ರದ್ದುಪಡಿಸಿದರೆ ತನಿಖೆಯನ್ನು ತಡೆದಂತಾಗುತ್ತದೆ. ಆದ್ದರಿಂದ ಪ್ರಕರಣದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ತಿಳಿಸಿದ ನ್ಯಾಯಪೀಠ, ಅರ್ಜಿ ವಜಾಗೊಳಿಸಿದೆ.
ಆಸ್ತಿ ವಿವಾದ: ಮುಖಕ್ಕೆ ಪೆಪ್ಪರ್ ಸ್ಪ್ರೇ ಸಿಂಪಡಿಸಿದ್ದ ಅರ್ಜಿದಾರೆ: ನಿವೇಶನವೊಂದರಲ್ಲಿ ತಮ್ಮ ಹೆಸರಿನ ಬೋರ್ಡ್ ಹಾಕುವ ವಿಚಾರದಲ್ಲಿ 2023ರ ಏ.5ರಂದು ಅರ್ಜಿದಾರರು ಮತ್ತು ದೂರುದಾರರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಅರ್ಜಿದಾರರಲ್ಲಿ ಒಬ್ಬರಾದ ವಿದ್ಯಾ, ಪೆಪ್ಪರ್ ಸ್ಪ್ರೇ ಅನ್ನು ದೂರುದಾರ ರಣದೀಪ್ ದಾಸ್ ಮುಖಕ್ಕೆ ಸಿಂಪಡಿಸಿದ ಪರಿಣಾಮ ಅವರ ಮುಖಕ್ಕೆ ಗಾಯವಾಗಿತ್ತು. ಈ ಸಂಬಂಧ ದಾಸ್ ಕಮರ್ಷಿಯಲ್ ಸ್ಟ್ರೀಟ್ ಠಾಣಾ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಪ್ರಜ್ವಲ್ ರೇವಣ್ಣನ ಬಿಟ್ಟುಬಿಡ್ತಾರೆ, ನಮ್ಮಂಥವರನ್ನು ಮಾತ್ರ ಬಂಧಿಸ್ತಾರೆ: ಕೆಸಿಆರ್ ಪುತ್ರಿ ಕವಿತಾ
ಅದನ್ನು ಆಧರಿಸಿ ಪೊಲೀಸರು, ಅರ್ಜಿದಾರರ ವಿರುದ್ಧ ಜಾಗವೊಂದರ ಅತಿಕ್ರಮ ಪ್ರವೇಶ, ಅಪಾಯಕಾರಿ ಆಯುಧದಿಂದ ಹಲ್ಲೆ, ಉದ್ದೇಶಪೂರ್ವಕವಾಗಿ ಅವಮಾನ ಮಾಡಿದ ಹಾಗೂ ಜೀವ ಬೆದರಿಕೆ ಹಾಕಿರುವುದು ಸೇರಿದಂತೆ ಇನ್ನಿತರ ಅಪರಾಧ ಕೃತ್ಯಗಳ ಸಂಬಂಧ ಎಫ್‌ಐಆರ್ ದಾಖಲಿಸಿದ್ದರು. ಅದನ್ನು ರದ್ದುಪಡಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.