ಇನ್ನೊಂದು ವಾರ ರಾಜ್ಯದಲ್ಲಿ ಉತ್ತಮ ಮಳೆ ಸಾಧ್ಯತೆ

By Kannadaprabha NewsFirst Published May 8, 2024, 6:00 AM IST
Highlights

ಬಂಗಾಳ ಕೊಲ್ಲಿಯಲ್ಲಿ ಸುಳಿಗಾಳಿ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸೋಮವಾರ ಮಳೆಯಾಗಿದೆ. ಬುಧವಾರದಿಂದ ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಜಿಲ್ಲೆಗಳಿಗೆ ಮಳೆ ವ್ಯಾಪಿಸಲಿದ್ದು, ಸತತ ಏಳು ದಿನ ಮಳೆಯಾಗಲಿದೆ. ಮೇ 13 ಹಾಗೂ 14 ರಂದು ರಾಜ್ಯಾದ್ಯಂತ ಹೆಚ್ಚಿನ ಪ್ರಮಾಣದ ಮಳೆಯಾಗಲಿದೆ.

ಬೆಂಗಳೂರು(ಮೇ.08):  ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಸೋಮವಾರ ಮಳೆಯಾಗಿದ್ದು, ಮುಂದಿನ ಒಂದು ವಾರ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ಸುಳಿಗಾಳಿ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸೋಮವಾರ ಮಳೆಯಾಗಿದೆ. ಬುಧವಾರದಿಂದ ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಜಿಲ್ಲೆಗಳಿಗೆ ಮಳೆ ವ್ಯಾಪಿಸಲಿದ್ದು, ಸತತ ಏಳು ದಿನ ಮಳೆಯಾಗಲಿದೆ. ಮೇ 13 ಹಾಗೂ 14 ರಂದು ರಾಜ್ಯಾದ್ಯಂತ ಹೆಚ್ಚಿನ ಪ್ರಮಾಣದ ಮಳೆಯಾಗಲಿದೆ.

ಉತ್ತರ ಕರ್ನಾಟಕದ ಬೀದರ್‌, ಕಲಬುರಗಿ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಬುಧವಾರದಿಂದಲೇ ಮಳೆ ಆರಂಭಗೊಳ್ಳಲಿದ್ದು, ನಂತರದ ದಿನಗಳಲ್ಲಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ವ್ಯಾಪಿಸಲಿದೆ.
ಮುಂದಿನ 48 ಗಂಟೆಯಲ್ಲಿ ಬಾಗಲಕೋಟೆ, ಧಾರವಾಡ, ಗದಗ, ಕೊಪ್ಪಳ ಜಿಲ್ಲೆಗಳಲ್ಲಿ ಮಳೆಯ ಜತೆ ಜತೆಗೆ ಉಷ್ಣ ಅಲೆ ಇರಲಿದೆ. ಮಳೆಯೊಂದಿಗೆ ಮುಂದಿನ ಎರಡು ದಿನ ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿಲಿನ ತಾಪ ಏರಿಕೆಯ ಭಾಸವಾಗಲಿದ್ದು, ಸೆಕೆಯೂ ಇರಲಿದೆ ಎಂದು ಇಲಾಖೆ ತಿಳಿಸಿದೆ.

ಮಂಡ್ಯದಲ್ಲಿ ಬಿರುಗಾಳಿ ಸಹಿತ ಮಳೆ ಮರ ಬಿದ್ದು ಯುವಕ ಸಾವು

ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಕಳೆದ 24 ಗಂಟೆಯಲ್ಲಿ ನಂಜನಗೂಡಿನಲ್ಲಿ ಅತಿ ಹೆಚ್ಚು 7 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಕೃಷ್ಣರಾಜಸಾಗರದಲ್ಲಿ 5, ಚಾಮರಾಜನಗರ, ಮಂಡ್ಯದ ಹೊನಕೆರೆಯಲ್ಲಿ ತಲಾ 3 ಸೆಂ.ಮೀ, ತುಮಕೂರಿನ ಮಿಡಿಗೆರೆ, ಕೋಲಾರ, ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣ, ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಭಾಗಮಂಡಲ, ಗುಬ್ಬಿಯಲ್ಲಿ ತಲಾ 2 ಸೆಂ.ಮೀ, ದೇವನಹಳ್ಳಿ, ಕೊಳ್ಳೇಗಾಲ, ಮಂಡ್ಯದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ಕಲಬುರಗಿಯಲ್ಲಿ ಅತಿ ಹೆಚ್ಚು 44.5 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

click me!