
ಬೆಂಗಳೂರು(ಜೂ.26): ಕೊರೋನಾ ವೈರಸ್‌ನ ರೂಪಾಂತರಿ ವೈರಸ್ ಡೆಲ್ಟಾಪ್ಲಸ್ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಹಾಗೂ ಕೇರಳದ ಗಡಿಯಲ್ಲಿ ಕಟ್ಟೆಚ್ಚರ ವಹಿಸಬೇಕು. ಗಡಿ ಭಾಗದಲ್ಲಿ ಸೋಂಕು ಪತ್ತೆ ಪರೀಕ್ಷೆ ಹೆಚ್ಚಿಸಬೇಕು ಹಾಗೂ ಈ ರಾಜ್ಯಗಳಿಂದ ಬರುವವರನ್ನು ರಾರಯಂಡಮ್ ಟೆಸ್ಟ್‌ಗೆ ಒಳಪಡಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಗಳಿಗೆ ನಿರ್ದೇಶಿಸಿದ್ದಾರೆ.
ರಾಜ್ಯದಲ್ಲಿ ಡೆಲ್ಟಾಪ್ಲಸ್ ವೈರಸ್ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಅವರು ತುರ್ತು ಸಭೆ ನಡೆಸಿ ಈ ಸೂಚನೆ ನೀಡಿದರು.
ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಡೆಲ್ಟಾಪ್ಲಸ್ ವೈರಸ್ ಕಂಡುಬರುತ್ತಿದೆ. ಹೀಗಾಗಿ ಗಡಿ ಭಾಗದಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಬೇಕು. ಮಹಾರಾಷ್ಟ್ರ ಮತ್ತು ಕೇರಳದಿಂದ ಬರುವವರ ಬಗ್ಗೆಯೂ ಸಹ ತೀವ್ರ ನಿಗಾ ಇಟ್ಟು ಅವರನ್ನು ರಾರಯಂಡಮ್ ಪರೀಕ್ಷೆಗೆ ಒಳಪಡಿಸಬೇಕು ಎಂದು ಸೂಚಿಸಿದರು.
ರಾಜ್ಯದಲ್ಲೂ ಎಚ್ಚರದಿಂದ ಇರಬೇಕು:
ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಎರಡನೇ ಅಲೆ ತೀವ್ರತೆ ಕಡಿಮೆಯಾಗಿಲ್ಲ. ಹೀಗಾಗಿ ರಾಜ್ಯದಲ್ಲಿ ಕೊರೋನಾ ನಿರ್ಬಂಧಗಳನ್ನು ಸಡಿಲಗೊಳಿಸಿದರೂ ಎಚ್ಚರಿಕೆಯಿಂದ ಇರಬೇಕು. ಸಾರ್ವಜನಿಕರು ಮೈಮರೆಯಬಾರದು ಎಂದು ಸಭೆಯಲ್ಲಿ ಯಡಿಯೂರಪ್ಪ ಮನವಿ ಮಾಡಿದರು.
ಲಾಕ್ಡೌನ್‌ನಿಂದಾಗಿ ಮಕ್ಕಳು ಅಪೌಷ್ಟಿಕತೆಗೆ ಗುರಿಯಾಗುವ ಸಾಧ್ಯತೆ ಇದೆ. ಅಲ್ಲದೆ ಮೂರನೇ ಅಲೆ ಮಕ್ಕಳಿಗೆ ಸಮಸ್ಯೆ ಉಂಟುಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಅಪೌಷ್ಟಿಕತೆ ಇರುವ ಮಕ್ಕಳನ್ನು ಗುರುತಿಸಿ ಅವರಿಗೆ ಸೂಕ್ತ ಪೌಷ್ಟಿಕ ಆಹಾರ ಒದಗಿಸಿ ವೈದ್ಯಕೀಯ ನಿಗಾ ವಹಿಸಬೇಕು ಎಂದು ಹೇಳಿದರು.
6 ವರ್ಷದವರೆಗಿನ ಅಂಗನವಾಡಿ ಮಕ್ಕಳಿಗೆ ಹಾಲಿನ ಜತೆಗೆ ನ್ಯೂಟ್ರಿಷನ್ ಪೌಡರ್ ನೀಡಬೇಕು. ಅಂಗನವಾಡಿಯಲ್ಲಿ ಮಕ್ಕಳಿಗೆ ನೀಡುತ್ತಿದ್ದ ಪೌಷ್ಟಿಕ ಆಹಾರವನ್ನು ಮುಂದುವರೆಸಬೇಕು. ಮಕ್ಕಳು ಅಂಗನವಾಡಿಗೆ ಬಾರದಿದ್ದರೆ ನ್ಯೂಟ್ರಿಷನ್ ಬಾರ್, ನ್ಯೂಟ್ರಿಷನ್ ಕಿಟ್, ಲಡ್ಡುಗಳನ್ನು ಮನೆಗೆ ನೀಡಬಹುದು ಎಂಬ ಸಲಹೆ ಸರ್ಕಾರಕ್ಕೆ ಬಂದಿತ್ತು.
ರಾಜ್ಯ ಗಡಿ ಬಂದ್ ಇಲ್ಲ:
ಸಭೆಗೂ ಮೊದಲು ಮಾತಾಡಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಕೇರಳದಲ್ಲಿ ಶೇ.10ರಷ್ಟುಪಾಸಿಟಿವಿಟಿ ದರ ಇದೆ. ಮಹಾರಾಷ್ಟ್ರದಲ್ಲೂ ಸೋಂಕು ಹೆಚ್ಚಿದೆ. ಹೀಗಾಗಿ ಮಹಾರಾಷ್ಟ್ರದಿಂದ ಆಗಮಿಸುವವರಿಗೆ ರಾರಯಂಡಮ್ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಿದ್ದೇವೆ. ಆದರೆ, ಅಂತರ್ ರಾಜ್ಯ ಗಡಿ ಬಂದ್ ಮಾಡುವ ಚಿಂತನೆ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ರೂಪಾಂತರಿ ವೈರಸ್ ಪತ್ತೆಗೆ ಬೆಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ ವೈದ್ಯಕೀಯ ಕಾಲೇಜುಗಳಲ್ಲಿ ಜಿನೋಮ್ ಪ್ರಯೋಗಾಲಯ ಪ್ರಾರಂಭಿಸುತ್ತಿದ್ದೇವೆ. ಡೆಲ್ಟಾಪ್ಲಸ್ ಪರೀಕ್ಷೆ ನಡೆಸಿ ಸೀಕ್ವೆನ್ಸ್ ಪತ್ತೆ ಮಾಡುತ್ತೇವೆ. ಈ ಮೂಲಕ ರೂಪಾಂತರಿ ಹರಡದಂತೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ