ಮೋದಿ, ಮನ್‌ಮೋಹನ್ ಸರ್ಕಾರ ನೀಡಿದ ಬರ ಪರಿಹಾರವೆಷ್ಟು? ದಾಖಲೆ ಬಿಚ್ಚಿಟ್ಟು ಕಾಂಗ್ರೆಸ್ ತಿವಿದ ಬೊಮ್ಮಾಯಿ!

By Suvarna NewsFirst Published Apr 28, 2024, 5:09 PM IST
Highlights

ಬರ ಪರಿಹಾರ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ ಬೊಮ್ಮಾಯಿ, ಮನ್‌ಮೋಹನ್ ಸಿಂಗ್ ಸರ್ಕಾರ, ಮೋದಿ ಸರ್ಕಾರ ಅವಧಿಯಲ್ಲಿ ನೀಡಿದ ಬರಪರಿಹಾರ ಮೊತ್ತದ ಅಂಕಿ ಅಂಶ ಬಿಚ್ಚಿಟ್ಟು ವಾಗ್ದಾಳಿ ನಡೆಸಿದ್ದಾರೆ. 

ದಾವಣಗೆರೆ(ಏ.28) ಹತ್ತು ವರ್ಷದ ಮನ್‌ಮೋಹನ್ ಸಿಂಗ್ ಸರ್ಕಾರ ಅಂದು ಕರ್ನಾಟಕ ಕೊಟ್ಟಿದ್ದು ಕೇವಲ 1,054 ಕೋಟಿ ರೂಪಾಯಿ ಬರಪರಿಹಾರ. ಆದರೆ 10 ವರ್ಷದ ಮೋದಿ ಸರ್ಕಾರ ಒಟ್ಟು 10,000 ಕೋಟಿ ರೂಪಾಯಿ ಬರಪರಿಹಾರ ಬಿಡುಗಡೆ ಮಾಡಿದೆ. ಇದೀಗ ಕಾಂಗ್ರೆಸ್ ಯಾವ ಮುಖವಿಟ್ಟುಕೊಂಡು ಕೇಂದ್ರದ ವಿರುದ್ದ ಪ್ರತಿಭಟನೆ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರಶ್ನಿಸಿದ್ದಾರೆ. ದಾವಣಗೆರೆಯಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಬೊಮ್ಮಾಯಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. 

ಕೇಂದ್ರ ಸರ್ಕಾರ ಬರ ಪರಿಹಾರ ನೀಡಿರುವ ವಿಚಾರದಲ್ಲಿ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ. ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು. ಯುಪಿಎ ಸರ್ಕಾರವಿದ್ದಾಗ ಕರ್ನಾಟಕದಲ್ಲಿ ಬರ ಎದುರಾಗಿತ್ತು. ಈ ವೇಳೆ ಯುಪಿಎ ಸರ್ಕಾರ ಒಂದೂವರೆ ವರ್ಷ ನಂತ್ರ ಕೇವಲ 7 ರಿಂದ 8 ಶೇಕಡಾ ಬರ ಪರಿಹಾರ ನೀಡಿತ್ತು. 2004ರಿಂದ 2014ರ ವರೆಗಿನ ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯ ಸರ್ಕಾರ 19,589 ಕೋಟಿ ರೂಪಾಯಿ ಬರ ಪರಿಹಾರ ಬಿಡುಗಡೆ ಮಾಡುವಂತೆ ಬೇಡಿಕೆ ಇಟ್ಟಿತ್ತು. ಆದರೆ ಮನ್‌ಮೋಹನ್ ಸಿಂಗ್ ಸರ್ಕಾರ ಕೊಟ್ಟಿದ್ದು ಕೇವಲ 1,054 ಕೋಟಿ ರೂಪಾಯಿ ಮಾತ್ರ. ಕರ್ನಾಟಕದ ಬೇಡಿಕೆಯ ಕೇವಲ 10 ಶೇಕಡಾ ಮಾತ್ರ ಪರಿಹಾರ ನೀಡಿತ್ತು.2014ರಿಂದ 2024ರ ವರೆಗಿನ ಮೋದಿ ಸರ್ಕಾರದ ವೇಳೆ ರಾಜ್ಯ ಸರ್ಕಾರ 18,747 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದೆ. ಈ ಬೇಡಿಕೆಗೆ ಮೋದಿ ಸರ್ಕಾರ ಒಟ್ಟು 10,000 ಕೋಟಿ ರೂಪಾಯಿ ನೀಡಿದೆ. ಇದೀಗ ರಾಜಕೀಯಕ್ಕಾಗಿ, ಚುನಾವಣೆಗಾಗಿ, ಮತಕ್ಕಾಗಿ ಕಾಂಗ್ರೆಸ್ ಈ ನಾಟಕವಾಡುತ್ತಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.  

ಯಾವುದು ಅಸಾಧ್ಯವಾಗಿತ್ತೋ  ಅದನ್ನು ಸಾಧಿಸಿ ತೋರಿಸಿದ ಧೀಮಂತ ನಾಯಕ ನರೇಂದ್ರ ಮೋದಿ. ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿ ಮಾತು ಬದಿಗಿರಲಿ, ಅದು ಭಯೋತ್ಪಾದನೆ, ಆತಂಕದ ರಾಜ್ಯ ಎಂದು ಯುಪಿಎ ಸರ್ಕಾರ ಕೈಚೆಲ್ಲಿತ್ತು. ಆದರೆ ಮೋದಿ ಆಡಳಿತದಲ್ಲಿ ಜಮ್ಮು ಮತ್ತು ಕಾಶ್ಮೀರ ಸಂಪೂರ್ಣ ಬದಲಾಗಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.  ಕಳೆದ 10 ವರ್ಷದಲ್ಲಿ 25 ಕೋಟಿ ಜನರನ್ನು ಬಡನದಿಂದ ಮೇಲಕ್ಕೆತ್ತಿದ್ದಾರೆ. ಅತೀ ದೊಡ್ಡ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಎಲ್ಲರಿಗೂ ಕುಡಿಯ ನೀರು ಲಭ್ಯವಾಗಿಸುವುದು ಅಸಾಧ್ಯದ ಮಾತಾಗಿತ್ತು. ಆದರೆ ಮೋದಿ ಕೆಂಪು ಕೋಟೆ ಮೇಲೆ ಘೋಷಣೆ ಮಾಡಿದ್ದರು. ಎಲ್ಲರಿಗೂ ನೀರು ಕೊಡುತ್ತೇವೆ ಎಂದಿದ್ದರು. ಅದರಂತೆ ಪ್ರತಿ ಮನೆಗೆ ಕುಡಿಯುವ ನೀರಿನ ಯೋಜನೆ ಲಾಭ ಸಿಗುತ್ತಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.


ಕಾಂಗ್ರೆಸ್ 60 ವರ್ಷ ಆಡಳಿತ ಮಾಡಿದರೂ ಆಯುಷ್ಮಾನ್ ಕಾರ್ಡ್ ನೀಡಿತ್ತಾ? ಪ್ರಧಾನಿ ಮೋದಿ ಇದೀಗ ಬಡವರಿಗೆ ಆಯುಷ್ಮಾನ್ ಕಾರ್ಡ್ ನೀಡುವ ಮೂಲಕ ಆರೋಗ್ಯ ಕಾಳಜಿಗೆ ಒತ್ತು ನೀಡಿದ್ದಾರೆ. ಮೋದಿಗೂ ಮೊದಲು ಉಜ್ವಲ ಯೋಜನೆ ಇತ್ತಾ? ಸ್ಮಾರ್ಟ್ ಸಿಟಿ ಇತ್ತಾ? ಈ ರೀತಿಯ ಯಾವುದೇ ಯೋಜನೆ ಇರಲಿಲ್ಲ. ಮೋದಿ  ಆಡಳಿತದಲ್ಲಿ ಆರ್ಥಿಕ, ಸಾಮಾಜಿಕ ಕ್ರಾಂತಿ ಮಾಡಿದ್ದಾರೆ ಎಂದು ಬೊಮ್ಮಾಯಿ ಹೇಳಿದ್ದಾರೆ.
 

click me!