100 ಕೋಟಿ ಡೋಸ್ ಲಸಿಕೆ, ಯುದ್ಧ ಗೆಲ್ಲುವ ಹೊಸ್ತಿಲಿನಲ್ಲಿ ಭಾರತ: ಡಾ. ಸುಧಾಕರ್

By Suvarna News  |  First Published Oct 22, 2021, 10:53 AM IST

ಕೋವಿಡ್‌ ಲಸಿಕೆಯನ್ನು ಅಭೂತಪೂರ್ವ ವೇಗದಲ್ಲಿ ನೀಡಿದ ಪರಿಣಾಮ ನಾವಿಂದು ಸಾಂಕ್ರಾಮಿಕದ ವಿರುದ್ಧ ಹೋರಾಟದಲ್ಲಿ ಗೆಲುವು ಸಾಧಿಸುವ ಹೊಸ್ತಿಲಲ್ಲಿ ನಿಂತಿದ್ದೇವೆ. ಕೋಟ್ಯಂತರ ಆರೋಗ್ಯ ಸಿಬ್ಬಂದಿ, ಮುಂಚೂಣಿ ಕಾರ್ಯಕರ್ತರ ಶ್ರಮಕ್ಕೆ ಫಲ ದೊರೆಯುತ್ತಿದೆ. 


ಬೆಂಗಳೂರು (ಅ. 22): ಕೋವಿಡ್‌ ಸಾಂಕ್ರಾಮಿಕ ಆರಂಭವಾದ ಒಂದೂವರೆ ವರ್ಷದಲ್ಲಿಯೇ ಭಾರತ 100 ಕೋಟಿ ಡೋಸ್‌ ಲಸಿಕೆಗಳನ್ನು ನೀಡುವ ಮೂಲಕ ಶತಮಾನದಲ್ಲೇ ರೋಗಪೂರ್ವ ನಿಯಂತ್ರಣದ ಅತ್ಯುತ್ತಮ ಮೈಲಿಗಲ್ಲು ತಲುಪಿದೆ. ಕೋವಿಡ್‌ ನಿಯಂತ್ರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವದ ಕ್ರಮಗಳಲ್ಲಿ ಪ್ರಮುಖವಾದ ಲಸಿಕೆ ವಿತರಣೆಯು, ವೇಗವಾಗಿ ಈ ಹಂತ ತಲುಪಿರುವುದು ಈ ಶತಮಾನದಲ್ಲಿಯೇ ಭಾರತ ಆರೋಗ್ಯ ಕ್ಷೇತ್ರದಲ್ಲಿ ಮಾಡಿದ ದೊಡ್ಡ ಸಾಧನೆ.

ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್‌ನಿಂದ ಮುಕ್ತಿ ಪಡೆಯಲು ಎಲ್ಲಾ ದೇಶಗಳು ನಾನಾ ಕ್ರಮಗಳನ್ನು ಅನುಸರಿಸಿದ್ದವು. ಲಾಕ್‌ಡೌನ್‌, ಕಂಟೈನ್‌ಮೆಂಟ್‌, ಮಾಸ್ಕ್‌ ಕಡ್ಡಾಯ ಬಳಕೆ, ಕೈಗಳ ಸ್ವಚ್ಛತೆ, ಕ್ವಾರಂಟೈನ್‌, ಸಾರ್ವಜನಿಕ ಸ್ಥಳಗಳಲ್ಲೂ ವೈದ್ಯಕೀಯ ತಪಾಸಣೆ ಮೊದಲಾದ ಕ್ರಮಗಳನ್ನು ಅನುಸರಿಸಿ ಕೊರೊನಾ ವೈರಸ್‌ ದಾಳಿಯಿಂದ ಸ್ವಲ್ಪಮಟ್ಟಿಗೆ ತಪ್ಪಿಸಿಕೊಂಡೆವು. ನಂತರ ವಿಜ್ಞಾನಿಗಳ ಅವಿರತ ಶ್ರಮದಿಂದ ಸಂಜೀವಿನಿಯಂತೆ ಬಂದ ಕೋವಿಡ್‌ ಲಸಿಕೆ ಸಾಂಕ್ರಾಮಿಕದ ಚಿತ್ರಣವನ್ನು ಬದಲಿಸಿದ್ದು ನಿಜ. ಅದರಲ್ಲೂ, ‘ಆತ್ಮನಿರ್ಭರ ಭಾರತ’ದ ಪರಿಕಲ್ಪನೆಯಡಿ ದೇಶದಲ್ಲೇ ತಯಾರಾದ ಕೋವ್ಯಾಕ್ಸಿನ್‌ ಹಾಗೂ ಕೋವಿಶೀಲ್ಡ್‌ ಲಸಿಕೆಗಳು ಇಡೀ ದೇಶದ ಜನರು ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿದ್ದವು.

Latest Videos

ಅಷ್ಟೇ ಅಲ್ಲದೆ, ಬೇರೆ ದೇಶಗಳಿಗೂ ಲಸಿಕೆ ಪೂರೈಕೆ ಮಾಡಿ ಆರೋಗ್ಯ ಕ್ಷೇತ್ರದಲ್ಲಿ ಭಾರತ ಜಾಗತಿಕವಾಗಿ ಉನ್ನತ ಜವಾಬ್ದಾರಿ ನಿರ್ವಹಿಸುವಂತೆ ಈ ಲಸಿಕೆಗಳು ಜಾದೂ ಮಾಡಿದ್ದವು. ಇಂದು ಈ ಲಸಿಕೆಗಳು 100 ಕೋಟಿ ಡೋಸ್‌ನ ಮೈಲಿಗಲ್ಲು ಮುಟ್ಟಿರುವುದರ ಹಿಂದೆ ಕೋಟ್ಯಂತರ ಆರೋಗ್ಯ ಸಿಬ್ಬಂದಿ, ಮುಂಚೂಣಿ ಕಾರ್ಯಕರ್ತರ ಹಗಲಿರುಳಿನ ಶ್ರಮ ಅಡಗಿದೆ. ಹಾಗೆಯೇ ಇವೆಲ್ಲದರ ನಾಯಕತ್ವ ವಹಿಸಿದ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಚಿಂತನೆಯೂ ಸ್ಪಷ್ಟವಾಗಿ ಗೋಚರಿಸಿದೆ. ಈ ಸಾಧನೆ ಕೋವಿಡ್‌ ವಿರುದ್ಧದ ಜಾಗತಿಕ ಹೋರಾಟದಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.

Narendra Modi Speech Highlights: ಭಾರತ ಶಕ್ತಿಗೆ ವಿಶ್ವವೇ ನಿಬ್ಬೆರಗು: ಮೋದಿ ಮಾತು

ಲಸಿಕೆಗೆ ಕೇಂದ್ರದ ಪ್ರೋತ್ಸಾಹ

ದೇಶದಲ್ಲಿ ಕೋವಿಡ್‌ ಆರಂಭದ ಬಳಿಕ ಲಾಕ್‌ಡೌನ್‌ ಸೇರಿದಂತೆ ಹಲವಾರು ಸುರಕ್ಷತಾ ಕ್ರಮಗಳನ್ನು ಕೇಂದ್ರ ಸರ್ಕಾರ ಜಾರಿ ಮಾಡಿತು. 2020ರ ಮೇ ತಿಂಗಳಲ್ಲಿ ಲಸಿಕೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಮೊಟ್ಟಮೊದಲ ಸಭೆ ನಡೆಯಿತು. ಖಾಸಗಿ ಕಂಪನಿಗಳನ್ನು ಸರ್ಕಾರದ ಪಾಲುದಾರರಂತೆ ಭಾವಿಸಿ ಲಸಿಕೆ ತಯಾರಿಕೆಗೆ ಎಲ್ಲ ಬಗೆಯ ಉತ್ತೇಜನ ನೀಡಬೇಕು ಹಾಗೂ ಸಾರ್ವಜನಿಕ ವಲಯ, ಖಾಸಗಿ ವಲಯದ ನಡುವಿನ ಭೇದವನ್ನು ಬದಿಗೆ ಸರಿಸಿ ಒಟ್ಟಿಗೆ ಸಾಂಕ್ರಾಮಿಕ ವಿರುದ್ಧ ಹೋರಾಡಬೇಕು ಎಂದು ಪ್ರಧಾನಿ ಈ ಸಭೆಯಲ್ಲಿ ಸೂಚನೆ ನೀಡಿದ್ದರು.

ಇಷ್ಟೇ ಅಲ್ಲದೆ, ಮೋದಿ ಖುದ್ದಾಗಿ ಲಸಿಕೆ ತಯಾರಿಕಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನೂ ನಡೆಸಿದ್ದರು. ಭಾರತ್‌ ಬಯೋಟೆಕ್‌ ಹಾಗೂ ಸೀರಂ ಸಂಸ್ಥೆಯ ಲಸಿಕೆ ತಯಾರಿಕೆಯ ಪ್ರತಿ ಹಂತದಲ್ಲೂ ಇದ್ದ ಅಡೆತಡೆಗಳನ್ನು ನಿವಾರಿಸಿ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡಿತು. ಇವೆಲ್ಲದರ ಪರಿಣಾಮ 275 ದಿನಗಳಿಗಿಂತಲೂ ಕಡಿಮೆ ಅವಧಿಯಲ್ಲಿ 100 ಕೋಟಿ ಲಸಿಕೆ ನೀಡಲಾಗಿದೆ.

ರಾಜ್ಯದಲ್ಲಿ ಸಮರೋಪಾದಿ ಸಿದ್ಧತೆ

ರಾಜ್ಯದಲ್ಲಿ ಕೋವಿಡ್‌ನಿಂದಾಗಿ ಅನೇಕ ಬಡಜನರು ಬವಣೆಗೊಳಗಾಗಿರುವುದನ್ನು ನೋಡಿದ್ದೇವೆ. ಸಾಂಕ್ರಾಮಿಕದಿಂದ ರಾಜ್ಯವನ್ನು ಮುಕ್ತ ಮಾಡಲು ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರ ನೇತೃತ್ವದಲ್ಲಿ ತ್ವರಿತ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಜನವರಿಯಲ್ಲೇ 263 ಕಡೆ ಲಸಿಕೆ ತಾಲೀಮು ನಡೆಸಿ ಸಿಬ್ಬಂದಿಗೆ ತರಬೇತಿ ನೀಡಲಾಗಿತ್ತು. 10 ವಾಕಿಂಗ್‌ ಕೂಲರ್‌, 4 ವಾಕಿಂಗ್‌ ಫ್ರೀಜರ್‌, 3,312 ಕೋಲ್ಡ್‌ ಬಾಕ್ಸ್‌, 46,591 ಕ್ಯಾರಿಯರ್‌, 2.25 ಲಕ್ಷ ಐಸ್‌ ಪ್ಯಾಕ್‌ ಮೊದಲಾದವನ್ನು ಒಂದು ತಿಂಗಳ ಮುನ್ನವೇ ಸಿದ್ಧಪಡಿಸಿಟ್ಟುಕೊಂಡು, ಲಸಿಕೆ ದೊರೆತಾಗ ಜನಾಂದೋಲನದಂತೆ ಲಸಿಕೆ ನೀಡಲಾಯಿತು.

ಬಳಿಕ ಆಗಾಗ್ಗೆ ಸಭೆಗಳನ್ನು ನಡೆಸಿ ಲಸಿಕಾಕರಣದಲ್ಲಿ ಹಿಂದುಳಿದಿರುವ ಜಿಲ್ಲೆಗಳಿಗೆ ನಿಗದಿತ ಗುರಿಯನ್ನು ನೀಡಿ ಎಲ್ಲರಿಗೂ ಲಸಿಕೆ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಯಿತು. ಕೋವಿಡ್‌ ಸೇನಾನಿಗಳಾದ ಆರೋಗ್ಯ ಸಿಬ್ಬಂದಿ ಹಳ್ಳಿ ಹಳ್ಳಿಗೂ ಹೋಗಿ ಲಸಿಕೆ ನೀಡಿ, ಸಾಂಕ್ರಾಮಿಕದ ವಿರುದ್ಧದ ಹೋರಾಟಕ್ಕೆ ಚುರುಕು ನೀಡಿದರು. ಇದೇ ವರ್ಷಾಂತ್ಯಕ್ಕೆ ರಾಜ್ಯದ ಎಲ್ಲರಿಗೂ ಲಸಿಕೆ ನೀಡುವ ಗುರಿಯೊಂದಿಗೆ ಪ್ರತಿ ಬುಧವಾರ ವಿಶೇಷ ಲಸಿಕಾ ಮೇಳ ಆಯೋಜಿಸಲು ತೀರ್ಮಾನಿಸಲಾಯಿತು. ಪ್ರತಿ ದಿನ 5 ಲಕ್ಷ ಲಸಿಕೆ ನೀಡುವ ಗುರಿ ಇದ್ದರೆ, ವಿಶೇಷ ಮೇಳದಂದು 10 ಲಕ್ಷ ಗುರಿ ನಿಗದಿಪಡಿಸಲಾಯಿತು.

ಮೋದಿ ಹುಟ್ಟುಹಬ್ಬಕ್ಕೆ ಕೊಡುಗೆ

ಸೆ.17ರಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದಂದು ಮತ್ತೊಂದು ವಿಶೇಷ ಲಸಿಕಾ ಮೇಳ ಹಮ್ಮಿಕೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು. ಅದರಂತೆ, ವಿಶೇಷ ಮೇಳ ನಡೆಸಿ ಪ್ರಧಾನಿಗಳ ಹುಟ್ಟುಹಬ್ಬವನ್ನು ಜನರ ಆರೋಗ್ಯಕ್ಕೆ ಸಮರ್ಪಿಸಲಾಯಿತು. ಇದರ ಪರಿಣಾಮ ಆ ಒಂದೇ ದಿನ 31 ಲಕ್ಷ ಲಸಿಕೆಗಳನ್ನು ನೀಡಿದ ಹೊಸ ಮೈಲುಗಲ್ಲು ಸ್ಥಾಪನೆಯಾಯಿತು.

ಆ ದಿನ ಕರ್ನಾಟಕ, ಇಡೀ ದೇಶದಲ್ಲೇ ಲಸಿಕಾಕರಣದಲ್ಲಿ ಹೆಸರು ಮಾಡಿತ್ತು. ಅದರಲ್ಲೂ ರಾಜಧಾನಿ ಬೆಂಗಳೂರಿನ ಬಿಬಿಎಂಪಿ, ಇಡೀ ದೇಶದ ನಗರಗಳಲ್ಲೇ ಲಸಿಕಾ ಅಭಿಯಾನದಲ್ಲಿ ಮೊದಲ ಸ್ಥಾನ ಪಡೆದಿತ್ತು. ಲಸಿಕಾ ಅಭಿಯಾನದಲ್ಲಿ ಕರ್ನಾಟಕವೂ ಮುಂದಿದ್ದು, ಈವರೆಗೆ 6.17 ಕೋಟಿ ಲಸಿಕೆ ನೀಡಲಾಗಿದೆ. ಇದೇ ವರ್ಷದ ಡಿಸೆಂಬರ್‌ ಅಂತ್ಯದೊಳಗಾಗಿ ರಾಜ್ಯದ ಎಲ್ಲರಿಗೂ ಲಸಿಕೆ ನೀಡುವ ಗುರಿಯೊಂದಿಗೆ ಕಾರ್ಯನಿರ್ವಹಿಸಲಾಗುತ್ತಿದೆ.

ಕರ್ನಾಟಕದಲ್ಲಿ 6 ಡೋಸ್ ಲಸಿಕೆ ವಿತರಣೆ: ಅಭಿಯಾನದಲ್ಲಿ ಕರ್ನಾಟಕ ಗೆದ್ದಿದ್ದು ಹೇಗೆ.?

ತಂತ್ರಜ್ಞಾನದ ಮೂಲಕ ಸಾಧನೆ

ದೇಶದಲ್ಲಿ ಮೊದಲ ಪ್ರಕರಣ ಕಂಡುಬಂದ 11 ತಿಂಗಳಲ್ಲೇ ಲಸಿಕೆ ಅಭಿಯಾನ ಆರಂಭವಾದ ಹೆಗ್ಗಳಿಕೆ ದೇಶಕ್ಕೆ ದೊರೆತಿದೆ. ಜೊತೆಗೆ ಜಗತ್ತಿನ ಅತಿದೊಡ್ಡ ಲಸಿಕಾ ಅಭಿಯಾನ ಹಾಗೂ 9 ತಿಂಗಳಲ್ಲೇ 100 ಕೋಟಿಗೆ ತಲುಪಿದೆ ದಾಖಲೆಯೂ ಇಲ್ಲಿ ಸೇರಿದೆ. ಅಮೆರಿಕದ ಜನಸಂಖ್ಯೆಯ ಎರಡು ಪಟ್ಟು, ಜಪಾನ್‌ ಜನಸಂಖ್ಯೆಯ 5 ಪಟ್ಟು, ಜರ್ಮನಿ ಜನಸಂಖ್ಯೆಯ 9 ಪಟ್ಟು ಹಾಗೂ ಫ್ರಾನ್ಸ್‌ ಜನಸಂಖ್ಯೆಯ 10 ಪಟ್ಟು ಪ್ರಮಾಣದಷ್ಟುಭಾರತದ ಜನರಿಗೆ ಕೇವಲ 9 ತಿಂಗಳಲ್ಲಿ ಲಸಿಕೆ ನೀಡಲಾಗಿದೆ ಎಂದರೆ ಅದು ಒಂದು ಅದ್ಭುತ ದಾಖಲೆ. ಡಿಜಿಟಲ್‌ ಇಂಡಿಯಾ ಪರಿಕಲ್ಪನೆಯಡಿ ಬಂದ ಕೋವಿಡ್‌ ಪೋರ್ಟಲ್‌ ಪ್ರತಿ ಲಸಿಕೆಯ ಕ್ಷಣಕ್ಷಣದ ಮಾಹಿತಿಯನ್ನು ಡಿಜಿಟಲ್‌ ಆಗಿ ದಾಖಲಿಸಿದ್ದು, ಇಂತಹ ಚುರುಕಾದ ತಂತ್ರಜ್ಞಾನ ವ್ಯವಸ್ಥೆಯನ್ನು ಹಲವಾರು ದೇಶಗಳು ಕೇಳಿರುವುದು ಕೂಡ ಭಾರತದ ತಂತ್ರಜ್ಞಾನದ ಸಾಧನೆಯ ಹೆಗ್ಗಳಿಕೆ.

ಲಸಿಕೆಯಲ್ಲೂ ರಾಜಕೀಯ!

ಕೋವಿಡ್‌ ಲಸಿಕೆಯನ್ನು ಪಡೆಯಿರಿ ಎಂದು ಜನರಿಗೆ ಹೇಳಿದರಾಯಿತು, ಆರೋಗ್ಯ ಸಿಬ್ಬಂದಿ ಲಸಿಕೆ ನೀಡಿದರೆ ಮುಗಿಯಿತು ಎಂಬ ಭಾವನೆ ಅನೇಕರಲ್ಲಿದೆ. ಆದರೆ ಅತಿ ಕಡಿಮೆ ಸಮಯದಲ್ಲಿ 100 ಕೋಟಿ ಲಸಿಕೆ ನೀಡುವುದು ಸುಲಭದ ಮಾತಲ್ಲ. ಇದರ ಹಿಂದೆ ಅಗಾಧ ಪರಿಶ್ರಮ, ಅನೇಕ ಅಡ್ಡಿ ಆತಂಕಗಳ ಸವಾಲುಗಳನ್ನು ಎದುರಿಸಿದ ನಿದರ್ಶನಗಳಿವೆ.

ಬಹಳ ವಿಷಾದದ ಸಂಗತಿ ಎಂದರೆ, ಲಸಿಕೆಯ ವಿಚಾರದಲ್ಲೂ ಪ್ರತಿಪಕ್ಷಗಳು ರಾಜಕೀಯವನ್ನು ಬೆರೆಸಿರುವ ಘಟನೆಗಳು. ಆರಂಭಿಕ ಹಂತದಲ್ಲಿ ಲಸಿಕೆ ತಂದಾಗ ಆರೋಗ್ಯ ಸಿಬ್ಬಂದಿಗೆ ಮಾತ್ರ ನೀಡಲಾಯಿತು. ಆಗ ಪ್ರಧಾನಿ ಮೋದಿ ಲಸಿಕೆಯನ್ನು ಸಿಬ್ಬಂದಿಯ ಮೇಲೆ ಪ್ರಯೋಗ ಮಾಡುತ್ತಿದ್ದಾರೆ ಎಂದು ಟೀಕಿಸಲಾಯಿತು.

ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿಯ ಜೀವರಕ್ಷಣೆಗಾಗಿ ಈ ಕ್ರಮ ವಹಿಸಲಾಗಿತ್ತು ಎಂಬ ಸಾಮಾನ್ಯ ಪ್ರಜ್ಞೆಯೂ ಇಲ್ಲದೆ ಟೀಕಿಸಲಾಯಿತು. ಬಳಿಕ ಪ್ರಧಾನಿಗಳೇ ಖುದ್ದಾಗಿ ಲಸಿಕೆ ಪಡೆದು ಎಲ್ಲರಿಗೂ ಉತ್ತೇಜನ ನೀಡಿದರು. ಆದರೆ ಇದು ‘ಮೋದಿ ಲಸಿಕೆ’, ‘ಬಿಜೆಪಿ ಲಸಿಕೆ’ ಎಂದು ಟೀಕಿಸಲಾಯಿತು. ಆದರೆ ಪ್ರಜ್ಞಾವಂತ ಭಾರತೀಯರು ಈ ಟೀಕೆಗೆ ಸೊಪ್ಪು ಹಾಕದೆ ಲಸಿಕಾ ಕೇಂದ್ರಗಳಲ್ಲಿ ಸಾಲು ನಿಂತು ಉತ್ಸಾಹದಿಂದ ಲಸಿಕೆ ಪಡೆದರು. ಆದರೆ ಇನ್ನೂ ಅನೇಕರ ಮೇಲೆ ಈ ಟೀಕೆಗಳು ನಕಾರಾತ್ಮಕ ಪರಿಣಾಮ ಬೀರಿ ಲಸಿಕೆ ಪಡೆಯಲು ಹಿಂದೇಟು ಹಾಕಿದರು.

ವಿಚಿತ್ರವೆಂದರೆ, ಈ ಹಂತದಲ್ಲಿ ವಿನಾಕಾರಣ ಟೀಕೆ ಮಾಡಿ ಜನರಲ್ಲಿ ಆತಂಕ ಉಂಟುಮಾಡಿದ್ದ ವಿರೋಧ ಪಕ್ಷದ ವ್ಯಕ್ತಿಗಳೇ ಸಾಲಿನಲ್ಲಿ ಮುಂದೆ ನಿಂತು ಲಸಿಕೆ ಪಡೆದುಕೊಂಡರು! ಕೋವಿಡ್‌ ಸಂದರ್ಭದಲ್ಲಿ ಒಗ್ಗಟ್ಟಿನ ಹೋರಾಟ ನಡೆಸಿ ಜನರ ಜೀವರಕ್ಷಣೆ ಮಾಡಬೇಕಾದ ಪ್ರತಿಪಕ್ಷಗಳ ನಾಯಕರು ತಾವು ಲಸಿಕೆ ಪಡೆದು, ಬೇರೆಯವರ ದಾರಿ ತಪ್ಪಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದರು. ಆದರೆ ಆರೋಗ್ಯ ಇಲಾಖೆಯ ಸಿಬ್ಬಂದಿ, ಅಧಿಕಾರಿಗಳು ಜನರ ಮನ ಒಲಿಸುವುದು, ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೊದಲಾದ ಕಾರ್ಯಗಳನ್ನು ಮಾಡಿ ಜನರಲ್ಲಿ ಅರಿವು ಉಂಟುಮಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಟ್ಟದಲ್ಲಿ ಅನೇಕ ಸಭೆಗಳನ್ನು ನಡೆಸಿ ಪ್ರತಿ ಜಿಲ್ಲೆಯ ಅಧಿಕಾರಿಗಳಿಗೆ ಸೂಚನೆ ನೀಡಿ ಜನರಿಗೆ ಲಸಿಕೆ ನೀಡಲಾಯಿತು. ಇಷ್ಟೆಲ್ಲ ಸವಾಲುಗಳ ಹಾದಿಯನ್ನು ಸವೆಸಿದ ಶ್ರಮದ ಫಲವಾಗಿ ಇಂದು ಶತಕೋಟಿ ಲಸಿಕೆಯ ಸಾಧನೆ ಮಾಡಲು ಸಾಧ್ಯವಾಗಿದೆ.

ಯುದ್ಧ ಗೆಲ್ಲುವ ಹೊಸ್ತಿಲಿನಲ್ಲಿ

ಕೋವಿಡ್‌ ಲಸಿಕೆಯನ್ನು ಅಭೂತಪೂರ್ವ ವೇಗದಲ್ಲಿ ನೀಡಿದ ಪರಿಣಾಮ ನಾವಿಂದು ಸಾಂಕ್ರಾಮಿಕದ ವಿರುದ್ಧ ಹೋರಾಟದಲ್ಲಿ ಗೆಲುವು ಸಾಧಿಸುವ ಹೊಸ್ತಿಲಲ್ಲಿ ನಿಂತಿದ್ದೇವೆ. ಕೋಟ್ಯಂತರ ಆರೋಗ್ಯ ಸಿಬ್ಬಂದಿ, ಮುಂಚೂಣಿ ಕಾರ್ಯಕರ್ತರ ಶ್ರಮಕ್ಕೆ ಫಲ ದೊರೆಯುವ ಹಂತದಲ್ಲಿದ್ದೇವೆ. ಇನ್ನು ಶೀಘ್ರದಲ್ಲಿ ಮಕ್ಕಳಿಗೂ ಲಸಿಕೆ ಸಿಗಲಿದ್ದು, ಅದನ್ನು ಕೂಡ ವೇಗವಾಗಿ ನೀಡಿ ಮಕ್ಕಳ ಆರೋಗ್ಯ ರಕ್ಷಿಸುವ ಮಹತ್ತರ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಇದರೊಂದಿಗೆ ಭವಿಷ್ಯದಲ್ಲಿ ಆರೋಗ್ಯ ವಲಯದಲ್ಲಿ ರೋಗಪೂರ್ವ ನಿಯಂತ್ರಣ ಕ್ರಮದ ಮಹತ್ವ ತಿಳಿಯುವಂತಾಗಲಿದೆ. ರೋಗ ಬರುವ ಮುನ್ನವೇ ಜನರಲ್ಲಿ ರೋಗ ನಿರೋಧಕ ಶಕ್ತಿ ಬೆಳೆಸುವ ಅತ್ಯದ್ಭುತ ಕ್ರಮದ ಲಾಭವನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಮಾದರಿಯಾಗಿ ಈ ಲಸಿಕಾ ಅಭಿಯಾನ ದಾಖಲೆಯಾಗಿ ಉಳಿಯಲಿದೆ.

- ಡಾ. ಕೆ.ಸುಧಾಕರ್‌, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ

 

click me!