ಸಂಸದ ಡಾ.ಮಂಜುನಾಥ್‌ಗೆ ಉರುಳಾಗುತ್ತಾ ಕೋವಿಡ್ ಹಗರಣದ ತನಿಖೆ; ಬಿಗ್ ಅಪ್ಡೇಟ್ ಕೊಟ್ಟ ಸಚಿವ ದಿನೇಶ್ ಗುಂಡೂರಾವ್!

By Sathish Kumar KH  |  First Published Nov 14, 2024, 6:27 PM IST

ರಾಜ್ಯ ಬಿಜೆಪಿ ಸರ್ಕಾರದ ಅವಧಿಯ ಕೋವಿಡ್ ಹಗರಣದ ತನಿಖೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಮಾಜಿ ಸಿಎಂ ಯಡಿಯೂರಪ್ಪ, ಶ್ರೀರಾಮುಲು ಸೇರಿದಂತೆ ಟಾಸ್ಕ್‌ ಫೋರ್ಸ್ ಮುಖ್ಯಸ್ಥ ಡಾ.ಸಿ.ಎನ್. ಮಂಜುನಾಥ್‌ಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.


ಬೆಂಗಳೂರು (ನ.14): ರಾಜ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಹಗರಣವನ್ನು ತನಿಖೆ ಮಾಡುವುದಕ್ಕೆ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ಇದರ ಬೆನ್ನಲ್ಲಿಯೇ ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಚಿವ ಶ್ರೀರಾಮುಲು ಅವರ ಜೊತೆಗೆ ಕೋವಿಡ್ ಟಾಸ್ಕ್‌ ಫೋರ್ಸ್ ಸಮಿತಿ ಮುಖ್ಯಸ್ಥರಾಗಿದ್ದ ಡಾ.ಸಿ.ಎನ್. ಮಂಜುನಾಥ್ ಅವರಿಗೂ ಸಂಕಷ್ಟ ಎದುರಾಗಲಿದೆಯೇ ಎಂಬ ಪ್ರಶ್ನೆ ಶುರುವಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸುರ್ವಣ ನ್ಯೂಸ್‌ಗೆ ಬಿಗ್ ಅಪ್ಡೇಟ್ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಕೋವಿಡ್ ಹಗರಣದ ತನಿಖೆ ಎಸ್‌ಐಟಿಯಿಂದ ಪ್ರಾಮಾಣಿಕವಾಗಿಯೇ ಆಗಲಿದೆ. ನಾವು ವಿಪಕ್ಷದಲ್ಲಿ ಇದ್ದಾಗ ಕೋವಿಡ್ ನಿರ್ವಹಣೆಗೆ ಮಾಡಿದ ವೆಚ್ಚದ ಬಗ್ಗೆ ಗಂಭೀರವಾದ ಆರೋಪಗಳನ್ನ ಮಾಡಿದ್ದೆವು. ಈಗ ಸಾಕಷ್ಟು ವಿಚಾರಗಳು ವರದಿಯಲ್ಲಿ ಬಹಿರಂಗ ಆಗಿದೆ. ಹೀಗಾಗಿ, ವ್ಯವಸ್ಥಿತ ರೀತಿಯಲ್ಲಿ ತನಿಖೆ ಆಗಬೇಕಾಗಿದೆ. ಎಸ್ಐಟಿ ಯಾವ ರೀತಿ ಕಾರ್ಯ ವೈಖರಿ ಇರುತ್ತದೆ ಅಂತ ನಾವು ಹೇಳಲು ಸಾಧ್ಯವಿಲ್ಲ. ನಮ್ಮ ಬಳಿ ಇರುವ ಮಾಹಿತಿಯನ್ನು, ಅವರು ಕೇಳುವ ಇನ್ನಷ್ಟು ದಾಖಲೆಗಳನ್ನು ಕೊಡುವ ಜವಾಬ್ದಾರಿ ನಮ್ಮ ಇಲಾಖೆಯದ್ದಾಗಿದೆ. ಕೋವಿಡ್ ಹಗರಣದಿಂದ ರಾಜ್ಯದ ಬೊಕ್ಕಸಕ್ಕೆ ಸಾವಿರಾರು ಕೋಟಿ ಹಣ ನಷ್ಟ ಆಗಿದೆ. ಇದು ಸಾಮಾನ್ಯ ವಿಷಯವಲ್ಲ. ಹಿಂದಿನ ಸರ್ಕಾರದ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರುಗಳು ಅವ್ಯವಹಾರಕ್ಕೆ ಕಾರಣಕರ್ತರು. ಅದೆಲ್ಲವೂ ಕೂಡ ಈಗ ಹೊರಗೆ ಬರಬೇಕು. ಇದರಲ್ಲಿ ವಿಪಕ್ಷಗಳನ್ನ ಬೆದರಿಸುವಂಥದ್ದು ಏನು ಇಲ್ಲ ಎಂದು ಹೇಳಿದರು.

Latest Videos

undefined

ನಾವು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ವರದಿ ಕೊಡಲು ಒಳ್ಳೆಯ ನ್ಯಾಯಾಧೀಶರಿಗೆ ಒಪ್ಪಿಸಿದ್ದೆವು. ಅವರು ಪ್ರಾಥಮಿಕ ವರದಿ ಕೊಟ್ಟಿದ್ದಾರೆ. ಇದರಲ್ಲಿ ಯಾರನ್ನು ದುರುದ್ದೇಶದಿಂದ ತನಿಖೆಗೆ ಒಳಪಡಿಸುವಂತ ಪ್ರಯತ್ನ ಮಾಡುತ್ತಿಲ್ಲ. ಲೋಪದೋಷ ಆಗಿದೆ ಭ್ರಷ್ಟಾಚಾರ ಆಗಿದೆ ಅಂತ ಮಾಹಿತಿ ಇತ್ತು. ಈಗ ವರದಿಯಲ್ಲೂ ಕೂಡ ದೃಢೀಕರಣ ಆಗಿದೆ. ತಪ್ಪು ನಡೆದಿದೆ ಎಂದು ದೃಡೀಕರಣ ಆದಾಗ ಕ್ರಮ ತೆಗೆದುಕೊಳ್ಳದೇ ಇದ್ದರೆ ನಾವು ತಪ್ಪಿತಸ್ಥರಾಗುತ್ತೇವೆ. ಈ ವರದಿಯಲ್ಲಿ ಕಂಪನಿ ಸಹಿತ ಎಲ್ಲಾ ಡೀಟೇಲ್ಸ್ ಗಳು ಕೂಡ ಇದೆ. ಇದು ಉಡಾಫೆಯಿಂದ ಕೊಟ್ಟಿರುವ ವರದಿಯಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: 'ಸಚಿವ ಜಮೀರ್ ಹೇಳಿಕೆಯಿಂದ ಪಕ್ಷಕ್ಕೆ ಒಂದಷ್ಟು ನಷ್ಟ ಆಗಿದೆ' ಎಂದ ಸಿಪಿವೈ; ಫಲಿತಾಂಶಕ್ಕೂ ಮೊದಲೇ ಸೋಲೊಪ್ಪಿಕೊಂಡ್ರಾ ಸೈನಿಕ?

ಬಿಜೆಪಿ ನಾಯಕರು ಕಾನೂನಾತ್ಮಕವಾಗಿ ಹೋರಾಟ ಮಾಡಲು ಅವಕಾಶ ಇದೆ ಹೋರಾಟ ಮಾಡಲಿ. ತಪ್ಪು ಮಾಡದೆ ಇದ್ದರೆ ಭಯಪಡಬೇಕಾದ ಅಗತ್ಯ ಇಲ್ಲ. ಇದು ಪ್ರಥಮ ವರದಿ ಮಾತ್ರ. ಎರಡನೇ ವರದಿ ಕೊಡಲು ಮೂರು ತಿಂಗಳ ಸಮಯಾವಕಾಶ ಕೇಳಿದ್ದಾರೆ. ಮುಂದಿನ ಜನವರಿಗೆ 2ನೇ ವರದಿ ಬರಬಹುದು. ಈಗ ಇರುವ ವರದಿ ಕೂಡ ಪೂರ್ತಿಯಾಗಿ ಇದೆ. ಆದರೆ, ಇದು ಪ್ರಥಮ ವರದಿ ಇದರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಎಸ್ಐಟಿ ಎಲ್ಲರಿಗೂ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯುತ್ತಾರೆ. ಯಾರ ಮೇಲೆ ತನಿಖೆ ಆಗಬೇಕೋ ಅವರನ್ನು ಕರೆಸಿ ವಿಚಾರಿಸುತ್ತಾರೆ ಎಂದು ಹೇಳಿದರು.

ರಾಜ್ಯದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಅಷ್ಟೇ ನಮ್ಮ ಉದ್ದೇಶ ಆಗಿದೆ. ಬಿಜೆಪಿಯವರು ತಪ್ಪೇ ಮಾಡಿಲ್ಲ ಎಂದರೆ ಆರಾಮವಾಗಿ ಇರಬಹುದು, ಹೆದರುವ ಅವಶ್ಯಕತೆ ಇಲ್ಲ. ಕೋವಿಡ್ ಸಂದರ್ಭದಲ್ಲಿ ಯಾರಿಗೆ ಅನ್ಯಾಯ ಆಗಿದೆ ಮೋಸ ಆಗಿದೆ ಎನ್ನುವುದು ಗೊತ್ತು. ರಾಜ್ಯಕ್ಕೆ ಅನ್ಯಾಯ ಆಗಿದೆ, ಅದನ್ನ ಸರಿಪಡಿಸುವ ಕೆಲಸ ಮಾಡುತ್ತೇವೆ. ಇದರಲ್ಲಿ ರಾಜಕೀಯ ದುರುದ್ದೇಶ ಇಲ್ಲದೆ ತನಿಖೆ ನಡೆಯಲಿದೆ, ತನಿಖೆಗೆ ನಮ್ಮ ಸಂಪೂರ್ಣ ಬೆಂಬಲ ಇರುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಇದನ್ನೂ ಓದಿ: ವೈದ್ಯೆಯ ನಗ್ನ ಫೋಟೋ ಕೇಳಿದ ಬಸವನಗುಡಿ ಪಿಎಸ್‌ಐ; ಪೊಲೀಸ್ ಕಮಿಷನರ್‌ಗೆ ದೂರು!

ಸಂಸದ ಡಾ. ಮಂಜುನಾಥ್‌ಗೂ ಸಂಕಷ್ಟ ಬರುತ್ತದೆಯೇ?
ರಾಜ್ಯದಲ್ಲಿ ಕೋವಿಡ್ ಹಗರಣ ಕಾಲದಲ್ಲಿ ಡಾ.ಸಿ.ಎನ್.ಮಂಜುನಾಥ್ ಅವರು ಟಾಸ್ಕ್ ಫೋರ್ಸ್ ಕಮಿಟಿ ಮುಖ್ಯಸ್ಥರಾಗಿದ್ದರು. ಟಾಸ್ಕ್ ಫೋರ್ಸ್ ನಿರ್ಣಯದಂತೆ ರಾಜ್ಯ ಸರ್ಕಾರದಿಂದ ಹಲವು ವಸ್ತುಗಳನ್ನು ಖರೀದಿ ಮಾಡಿ ಉಪಯೋಗಿಸಿದೆ. ಈ ಹಿನ್ನೆಲೆಯಲ್ಲಿ ಟಾಸ್ಕ್ ಫೋರ್ಸ್ ಬಗ್ಗೆಯೂ ಕುನ್ಹಾ ವರದಿಯಲ್ಲಿ ಪ್ರಸ್ತಾಪ ಮಾಡಲಾಗಿದೆ. ಆದ್ದರಿಂದ, ಸಂಸದ ಡಾ.ಮಂಜುನಾಥ್ ವಿರುದ್ದವೂ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಲಾಗಿದ್ದು, ಅವರಿಗೂ ಸಂಕಷ್ಟ ಬರಲಿದೆಯೇ ಪ್ರಶ್ನೆ ಶುರುವಾಗಿದೆ.

click me!