ಜೂ.15ಕ್ಕೆ ಇಫ್ಕೋ ನ್ಯಾನೋ ಯೂರಿಯಾ ಮಾರುಕಟ್ಟೆಗೆ : ಕೃಷಿಯಲ್ಲಿ ಹೊಸ ಕ್ರಾಂತಿ

By Suvarna NewsFirst Published May 30, 2021, 2:35 PM IST
Highlights
  • ಸಹಕಾರಿ ವಲಯದ ರಸಗೊಬ್ಬರ ಕಂಪನಿ ಇಫ್ಕೋ ಅಭಿವೃದ್ಧಿಪಡಿಸಿರುವ ನ್ಯಾನೋ-ಯೂರಿಯಾ 
  • ರಸಗೊಬ್ಬರವು ಕೃಷಿಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಉಂಟುಮಾಡಲಿದೆ
  •  ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಹೇಳಿಕೆ

ಬೆಂಗಳೂರು  (ಮೇ.30) : ಸಹಕಾರಿ ವಲಯದ ರಸಗೊಬ್ಬರ ಕಂಪನಿ ಇಫ್ಕೋ ಅಭಿವೃದ್ಧಿಪಡಿಸಿರುವ ನ್ಯಾನೋ-ಯೂರಿಯಾ ರಸಗೊಬ್ಬರವು ಕೃಷಿಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಉಂಟುಮಾಡಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಹೇಳಿದ್ದಾರೆ.

ನ್ಯಾನೋ-ಯುರಿಯಾ ಉಪಯೋಗದ ಬಗ್ಗೆ ಇಫ್ಕೋ ಸಂಸ್ಥೆ  ಶನಿವಾರ ಏರ್ಪಡಿಸಿದ್ದ ವೆಬಿನಾರ್ ಚರ್ಚೆಯನ್ನು ಉದ್ಘಾಟಿಸಿ ಮಾತನಾಡಿದ ಸಚಿವರು ಇದು ಪರಿಸರ ಸ್ನೇಹಿಯಾಗಿದ್ದು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದರು. 

ಗೊಬ್ಬರ ದರ ನಿಗದಿಪಡಿಸಿದ ಕರ್ನಾಟಕ ಸರಕಾರ ...

240 ರೂಪಾಯಿ ಬೆಲೆಯ 500 ಎಂಎಲ್ ನ್ಯಾನೋ ಯೂರಿಯಾ 45 ಕೆಜಿ ಮಾಮೂಲಿ ಯೂರಿಯಾಕ್ಕೆ ಸಮನಾಗಿದ್ದು ಜೂನ್ 15ನೇ ತಾರೀಖಿನಂದು ಮುಕ್ತ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂದು ಸಚಿವರು ಹೇಳಿದರು.

ನ್ಯಾನೋ ರಸಗೊಬ್ಬರದಿಂದ ಸಾಗುವಳಿ ವೆಚ್ಚದಲ್ಲಿ ಸುಮಾರು 15 ಪ್ರತಿಶತ ಕಡಿಮೆಯಾಗಲಿದೆ. ಇನ್ನು ಇಳುವರಿಯಲ್ಲಿ 15ರಿಂದ 20ರಷ್ಟು ಹೆಚ್ಚಳವಾಗಲಿದೆ ಎಂದ ಸಚಿವರು ರೈತರು ಇದನ್ನು ಹೆಚ್ಚೆಚ್ಚು ಬಳಕೆ ಮಾಡಿ ಇದರ ಲಾಭ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಹೊಸದರದಲ್ಲಿ ರಸಗೊಬ್ಬರ ಮಾರಿದರೆ ಕ್ರಿಮಿನಲ್‌ ಕೇಸ್‌ ...

ಭಾರತದಲ್ಲಿ ಈ ವರ್ಷ 350 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಬೇಕಾಗಬಹುದು ಎಂದು  ಅಂದಾಜು ಮಾಡಲಾಗಿದೆ. ಆದರೆ ಈಗ ನ್ಯಾನೋ ಯೂರಿಯಾ ಮಾರುಕಟ್ಟೆಗೆ ಬರುತ್ತಿರುವದರಿಂದ ಮಾಮೂಲಿ ಯೂರಿಯಾ ಬಳಕೆ ಗಣನೀಯವಾಗಿ  ಕಡಿಮೆಯಾಗಲಿದ್ದು ಸುಮಾರು 600 ಕೋಟಿ ರು. ಸಬ್ಸಿಡಿ ಉಳಿತಾಯವಾಗಲಿದೆ. ಯೂರಿಯಾ ಆಮದು ಕಡಿಮೆಯಾಗಿ ವಿದೇಶಿ ವಿನಿಮಯ ಉಳಿಯಲಿದೆ. ಎಲ್ಲ ದೃಷ್ಟಿಯಿಂದಲೂ ನ್ಯಾನೋ ಯೂರಿಯಾ ಲಾಭಕರವಾಗಿದ್ದು ಇದನ್ನು ಜನಪ್ರಿಯಗೊಳಿಸಲು ಸರ್ಕಾರವು ಗಮನಹರಿಸಲಿದೆ ಎಂದರು.

ಈ ಶತಮಾನ ನ್ಯಾನೋ ತಂತ್ರಜ್ಞಾನಕ್ಕೆ ಸೇರಿದ್ದಾಗಿದೆ. ಈಗ ಕೃಷಿಯಲ್ಲೂ ಇದರ ಪ್ರವೇಶವಾಗಿದೆ. ನ್ಯಾನೋ ಯೂರಿಯಾ ಕೃಷಿಗೆ ಹೊಸ ಆಯಾಮ ನೀಡಲಿದೆ. ಮಣ್ಣಿನ ಪೌಷ್ಟಿಕಾಂಶ ಕಾಪಾಡಿಕೊಳ್ಳುವುದರ ಜೊತೆಗೆ ಸಾಗುವಳಿ ಹಾಗೂ ಸಾಗಣೆ ವೆಚ್ಚದಲ್ಲಿ ಅಪಾರ ಉಳಿತಾಯ ಮಾಡಲಿದೆ ಎಂದು ಇಫ್ಕೊ ವ್ಯವಸ್ಥಾಪಕ ನಿರ್ದೇಶಕ ಡಾ. ಯು.ಎಸ್. ಅವಸ್ಥಿ ತಿಳಿಸಿದರು.
  
ಇಫ್ಕೋ ನಿರ್ದೇಶಕ ಯೋಗೇಂದ್ರಕುಮಾರ್ ಮಾತನಾಡಿ ಆರಂಭಿಕವಾಗಿ 28 ಕೋಟಿ ಬಾಟಲಿ (500 ಎಂಎಲ್) ನ್ಯಾನೋ ಯೂರಿಯಾ ಉತ್ಪಾದಿಸಲಾಗುತ್ತಿದೆ. ಇದರ ಬೆಲೆ ಬಾಟಲಿಗೆ 240 ರೂ. ಸರ್ಕಾರದಿಂದ ಯಾವುದೇ ರೀತಿಯ ಸಬ್ಸಿಡಿ ಇಲ್ಲದಿರುವುದರಿಂದ ಇದನ್ನು ಯಾವುದೇ ಕಾಗದಪತ್ರ ಇಲ್ಲದೆ ಯಾರೂ ಬೇಕಾದರೂ ಖರೀದಿಸಬಹುದು ಎಂದರು.

ಇಫ್ಕೋ ಕರ್ನಾಟಕ ಮಾರುಕಟ್ಟೆ ವ್ಯವಸ್ಥಾಪಕ ಡಾ ಸಿ ನಾರಾಯಣಸ್ವಾಮಿ ಮಾತನಾಡಿ -  ನ್ಯಾನೋ ಯೂರಿಯಾವನ್ನು ಕೀಟನಾಶಕ ಸಿಂಪರಣೆ ಮಾಡಿದಂತೆಯೇ ಮಾಡಬೇಕಾಗುತ್ತದೆ. ಮಾಮೂಲಿ ರಸಗೊಬ್ಬರಗಳನ್ನು ಮಣ್ಣಿನಲ್ಲಿ ಬೆರೆಸಿದಂತೆ ಬೆರೆಸುವುದು ಅಲ್ಲ. ಒಂದು ಲೀಟರ್ ನೀರಿಗೆ ಕೇವಲ 2 ಎಂಎಲ್ ನ್ಯಾನೋ ಯೂರಿಯಾ ಮಿಶ್ರಣ ಮಾಡಿದರೆ ಸಾಕು. ಕೀಟನಾಶಕ ಸಲಕರಣೆಯನ್ನೇ ಬಳಸಿ ಇದನ್ನು ಸಿಂಪಡಿಸಬಹುದು ಎಂದು ವಿವರಿಸಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಉಪಕುಲಪತಿ ಡಾ.ಎಸ್. ರಾಜೇಂದ್ರ ಪ್ರಸಾದ್ ಅಧ್ಯಕ್ಷತೆ ವಹಿಸಿದರು. ಕರ್ನಾಟಕ ಸರ್ಕಾರದ ಕೃಷಿ ನಿರ್ದೇಶಕ ಡಾ.ಬಿ.ವೈ. ಶ್ರೀನಿವಾಸ್, NBRC ಜನರಲ್ ಮ್ಯಾನೇಜರ್ (ನ್ಯಾನೋ ಟೆಕ್ನಾಲಜಿ) ಡಾ. ರಮೇಶ್ ರಾಲಿಯಾ, ICAR (ಅಟಾರಿ) ನಿರ್ದೇಶಕ ಡಾ.ವೆಂಕಟಸುಬ್ರಮಣಿಯನ್ ಚರ್ಚೆಯಲ್ಲಿ ಪಾಲ್ಗೊಂಡರು.

click me!