ಅಕಾಲಿಕ ಮಳೆಯಿಂದ ಆತಂಕ: ಬೆಳೆ ವಿಮೆ ಮಾಡಿಸಲು ಮುಗಿಬಿದ್ದ ರೈತರು

By Kannadaprabha NewsFirst Published Aug 29, 2022, 2:00 AM IST
Highlights

ಮುಂಗಾರು ಹಂಗಾಮಲ್ಲಿ ಕಳೆದ 4 ವರ್ಷದ ದಾಖಲೆಯ ವಿಮೆ, 42.61 ಲಕ್ಷ ಹೆಕ್ಟೇರ್‌ಗೆ ವಿಮೆ ಮಾಡಿಸಿದ ಮಣ್ಣಿನ ಮಕ್ಕಳು

ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು(ಆ.29):  ರಾಜ್ಯದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಆತಂಕಗೊಂಡ ಮಣ್ಣಿನ ಮಕ್ಕಳು ಬೆಳೆ ವಿಮೆಗೆ ಮುಗಿಬಿದ್ದಿದ್ದಾರೆ. ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಕಳೆದ ಐದು ವರ್ಷದಲ್ಲೇ ದಾಖಲೆಯ ಪ್ರಮಾಣದ 42.61 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ವಿಮೆ ಮಾಡಿಸಲಾಗಿದೆ. ಮೇ ತಿಂಗಳಿನಿಂದಲೂ ರಾಜ್ಯದ ಹಲವೆಡೆ ಅಕಾಲಿಕವಾಗಿ ಧಾರಾಕಾರ ಮಳೆಯಾಗುತ್ತಿದೆ. ಇದರಿಂದ ಫಸಲು ನಷ್ಟದ ಭೀತಿಯಲ್ಲಿರುವ ರೈತರು ಭಾರೀ ಪ್ರಮಾಣದಲ್ಲಿ ಪ್ರಧಾನ ಮಂತ್ರಿ ಫಸಲ್‌ ಬಿಮಾ (ವಿಮಾ) ಯೋಜನೆಯಡಿ ನೋಂದಾಯಿಸಿದ್ದಾರೆ. ಮುಂಗಾರಿನಲ್ಲೇ 18,42,453 ರೈತರು 42,61,369 ಹೆಕ್ಟೇರ್‌ ಪ್ರದೇಶದಲ್ಲಿರುವ ಬೆಳೆಗೆ ವಿಮೆ ಮಾಡಿಸಿರುವುದು ದಾಖಲೆಯಾಗಿದೆ. ಇನ್ನು ಹಿಂಗಾರು ಹಂಗಾಮಿನ ಲೆಕ್ಕವೂ ಪರಿಗಣನೆಯಾದರೆ ಇನ್ನಷ್ಟುಭಾರೀ ಹೆಚ್ಚಳವಾಗಲಿದೆ.

ಬೀದರ್‌ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 3,36,218 ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಕಲಬುರಗಿ ಜಿಲ್ಲೆಯಿದ್ದು 1,83,665 ನೋಂದಣಿಯಾಗಿವೆ. ಕೊಡಗಿನಲ್ಲಿ ಅತಿ ಕಡಿಮೆ 145 ರೈತರು ಮಾತ್ರ ವಿಮೆ ಮಾಡಿಸಿದ್ದಾರೆ.

Ramanagara: ಮಳೆಹಾನಿ ಪ್ರದೇಶಗಳಿಗೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ

ಕೊರೋನಾದಿಂದ ಇಳಿಮುಖ:

ಬೆಳೆ ಹಾನಿಯಾದ ಭಾಗ, ಬೆಳೆಗಳನ್ನು ಪರಿಗಣಿಸಿ ವಿಮೆ ಪರಿಹಾರ ನೀಡುತ್ತಿದ್ದರಿಂದ ಇಲ್ಲಿಯವರೆಗೂ ರೈತರಿಂದ ಅಷ್ಟೇನೂ ಉತ್ತಮ ಪ್ರತಿಕ್ರಿಯೆ ಕಂಡುಬರುತ್ತಿರಲಿಲ್ಲ. 2020-21 ರಲ್ಲಿ 15.16 ಲಕ್ಷ ರೈತರು 14.82 ಲಕ್ಷ ಹೆಕ್ಟೇರ್‌ ಬೆಳೆಯನ್ನು ವಿಮೆ ಮಾಡಿಸಿದ್ದು 621.02 ಕೋಟಿ ರು. ಪರಿಹಾರವನ್ನು ರೈತರಿಗೆ ಪಾವತಿಸಲಾಗಿತ್ತು. 2021-22 ನೇ ಸಾಲಿನಲ್ಲಿ 15.77 ಲಕ್ಷ ರೈತರು 15.73 ಲಕ್ಷ ಹೆಕ್ಟೇರ್‌ ಬೆಳೆಯನ್ನು ನೋಂದಣಿ ಮಾಡಿಸಿ 757.41 ಕೋಟಿ ಪರಿಹಾರ ಪಡೆದಿದ್ದರು.

ಕಳೆದ 4 ವರ್ಷದ ಅಂಕಿ ಅಂಶಗಳನ್ನು ಅವಲೋಕಿಸಿದರೆ, 2019-20 ರಲ್ಲಿ ಬೆಳೆ ವಿಮೆ ಮಾಡಿಸಿದ ರೈತರ ಸಂಖ್ಯೆ ಹೆಚ್ಚಾಗಿತ್ತು. ಬಳಿಕ ಕೊರೋನಾ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರಿಂದ ಬೆಳೆ ವಿಮೆಯ ತಂಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಹೋಗಲಿಲ್ಲ. ಇದೀಗ ಕೊರೋನಾ ಕಾರ್ಮೋಡ ಒಂದಷ್ಟುಸರಿದಿರುವುದರಿಂದ ರೈತರೂ ಬೆಳೆ ವಿಮೆ ಮಾಡಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದಿದ್ದಾರೆ ಎಂದು ಕೃಷಿ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ವರ್ಷ ರೈತರ ನೊಂದಣಿ (ಲಕ್ಷಗಳಲ್ಲಿ) ವಿಸ್ತೀರ್ಣ (ಲಕ್ಷ ಹೆಕ್ಟೇರ್‌) ಪಾವತಿಸಿದ ಪರಿಹಾರ (ಕೋಟಿ ರು.)

ಮಳೆಯಿಂದ ಹಾನಿಯಾದ ಮನೆ, ಬೆಳೆಗೆ ಕೂಡಲೇ ಪರಿಹಾರ ವಿತರಿಸಿ: DCಗೆ ಸಿಎಂ ಖಡಕ್ ಸೂಚನೆ

2019-20 21.02 20.44 862.65
2020-21 15.16 14.82 621.02
2021-22 15.77 15.73 757.41
ಆಗಸ್ಟ್‌ವರೆಗೆ 18.42 42.61 (ಸಮೀಕ್ಷೆ ನಡೆಯಬೇಕಿದೆ)

ರೈತರಲ್ಲಿ ಜಾಗೃತಿಯಾಗಿದೆ

ಬೆಳೆ ನಷ್ಟಉಂಟಾದಾಗ ಪರಿಹಾರ ಪಡೆಯಬಹುದು ಎಂದು ರೈತರಲ್ಲಿ ಜಾಗೃತಿ ಉಂಟು ಮಾಡಲು ಕೃಷಿ ಇಲಾಖೆ ಅನೇಕ ಕ್ರಮಗಳನ್ನು ಕೈಗೊಂಡಿತ್ತು. ಇದರಿಂದಾಗಿ ದಾಖಲೆಯ ಸಂಖ್ಯೆಯಲ್ಲಿ ಬೆಳೆ ವಿಮೆ ಮಾಡಿಸಿದ್ದಾರೆ. ರೈತರ ಹಿತದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆ ಅಂತ ಕೃಷಿ ಇಲಾಖೆ ನಿರ್ದೇಶಕಿ ನಂದಿನಿಕುಮಾರಿ ಹೇಳಿದ್ದಾರೆ. 
 

click me!