
ಬೆಂಗಳೂರು (ಅ.22): ಕೋವಿಡ್-19 ಕಾರಣದಿಂದ ಸತ್ತ 16 ಗಂಟೆಗಳ ಬಳಿಕವೂ ಶವದಲ್ಲಿ ಕೊರೋನಾ ವೈರಸ್ ಸಕ್ರಿಯವಾಗಿರುತ್ತದೆ. ಹಾಗೆಯೇ ಕೊರೋನಾ ಕೇವಲ ಶ್ವಾಸಕೋಶಕ್ಕೆ ಮಾತ್ರವಲ್ಲದೆ ಇತರೇ ಅಂಗಗಳ ಮೇಲೂ ಮಾರಕ ಪರಿಣಾಮ ಬೀರುತ್ತದೆ ಎಂಬ ಮಹತ್ವದ ಸಂಗತಿ ಖ್ಯಾತ ವಿಧಿ ವಿಜ್ಞಾನ ತಜ್ಞ ಡಾ. ದಿನೇಶ್‌ರಾವ್ ಮಾಡಿರುವ ಶವ ಪರೀಕ್ಷೆಯಲ್ಲಿ ಬಹಿರಂಗವಾಗಿದೆ.
"
ಕೊರೋನಾ ವೈರಸ್ ನಿರ್ಜೀವ ವಸ್ತುಗಳ ಮೇಲೆ ಗರಿಷ್ಠವೆಂದರೆ 8 ರಿಂದ 9 ಗಂಟೆಗಳ ಕಾಲ ಮಾತ್ರ ಸಕ್ರಿಯವಾಗಿರುತ್ತದೆ ಎಂಬ ಅಭಿಪ್ರಾಯವಿತ್ತು. ಆದರೆ, ರಾಜ್ಯದಲ್ಲೇ ಮೊದಲ ಬಾರಿಗೆ ಕೊರೋನಾ ಸೋಂಕಿನಿಂದ ಮೃತಪಟ್ಟಶವದ ಪರೀಕ್ಷೆ ನಡೆಸಿರುವ ಡಾ. ದಿನೇಶ್ ರಾವ್ ಅವರು ಈ ವೈರಸ್ ವ್ಯಕ್ತಿ ಮೃತಪಟ್ಟ16 ಗಂಟೆಗಳ ನಂತರವೂ ಸಕ್ರಿಯವಾಗಿರುತ್ತದೆ ಎಂಬುದನ್ನು ಕಂಡುಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು ತಮ್ಮ ಶವಪರೀಕ್ಷೆಯಲ್ಲಿ ಕೊರೋನಾ ವೈರಸ್‌ನ ನಡವಳಿಕೆಯ ಬಗ್ಗೆ ಅನೇಕ ಅಚ್ಚರಿಯ ಮತ್ತು ಈವರೆಗೆ ನಡೆದಿರುವ ಸಂಶೋಧನೆಗಳ ಫಲಿತಾಂಶಗಳಿಗಿಂತ ವಿಭಿನ್ನ ಮಾಹಿತಿ ಹೊರಬಿದ್ದಿದೆ ಎಂದರು.
ಡ್ರಗ್ಸ್ ಮಾಫಿಯಾ: ಕೊರೋನಾ ಕಾರಣ ವಿಚಾರಣೆಗೆ ಬರ್ತಿಲ್ಲ ಒಬೆರಾಯ್ ಪತ್ನಿ ಪ್ರಿಯಾಂಕ ...
ಅನೇಕ ಅಂಗ ನಾಶ: ಪ್ರಮುಖವಾಗಿ ಶವದಲ್ಲಿ ಸೋಂಕು ಶ್ವಾಸಕೋಶ, ಹೃದಯ, ರಕ್ತನಾಳ, ಯಕೃತ್ತು (ಲಿವರ್), ಮೂತ್ರಜನಕಾಂಗ ಮತ್ತು ಮೆದುಳಿಗೂ ಹಬ್ಬಿತ್ತು. ಯಕೃತ್ತು ಮತ್ತು ಮೆದುಳಿನಲ್ಲಿ ರಕ್ತಸ್ರಾವ ಆಗಿರುವುದು ಕಂಡು ಬಂದಿತ್ತು. ಹಾಗಾಗಿ ಕೋವಿಡ್ ರೋಗಿಗಳಿಗೆ ಕಡ್ಡಾಯವಾಗಿ ಸಿ.ಟಿ. ಸ್ಕ್ಯಾನ್ ಮಾಡಬೇಕು ಎಂದು ಡಾ. ದಿನೇಶ್ ರಾವ್ ಸಲಹೆ ನೀಡುತ್ತಾರೆ.
ಸತ್ತ 16 ಗಂಟೆಯ ನಂತರ ಸಿಕ್ಕ ಮೃತದೇಹದ ಮೂಗು, ಬಾಯಿ, ಗಂಟಲ ದ್ರವ, ಚರ್ಮ, ಕೂದಲು, ಶ್ವಾಸಕೋಶ, ಶ್ವಾಸಕೋಶವನ್ನು ಸಂಪರ್ಕಿಸುವ ನಾಳ ಹಾಗೂ ಚರ್ಮಗಳಲ್ಲಿ ಕೊರೋನಾ ವೈರಾಣು ಇದೆಯೇ ಪರೀಕ್ಷೆ ನಡೆಸಲಾಯಿತು. ಆದರೆ ಚರ್ಮದ ಮೇಲೆ ಇರಲಿಲ್ಲ, ವಿಶೇಷವಾಗಿ ಗಂಟಲು, ಶ್ವಾಸಕೋಶದಲ್ಲೂ ವೈರಸ್ ಪತ್ತೆಯಾಗದೇ ಇರುವುದು ಕಂಡು ಬಂತು. ಬದಲಾಗಿ ಮೂಗು ಮತ್ತು ಬಾಯಲ್ಲಿ ಕೊರೋನಾ ಸಕ್ರಿಯವಾಗಿತ್ತು.
ಕೊರೋನಾ ಹಬ್ಬಿಸಿ ಲಸಿಕೆ ಪರೀಕ್ಷೆಗೆ ಮುಂದಾದ ವಿಜ್ಞಾನಿಗಳು! ..
ವೈರಸ್ ದಾಳಿಯ ಪ್ರಮುಖ ಗುರಿ ಶ್ವಾಸಕೋಶ ಆಗಿರುತ್ತದೆ. ಅನ್ಯ ಕಾರಣಗಳಿಂದ ಸತ್ತ ಸಾಮಾನ್ಯ ವ್ಯಕ್ತಿಯ ಶ್ವಾಸಕೋಶ ಸ್ಪಂಜಿನಂತಿರುತ್ತದೆ. ಆದರೆ ಕೋವಿಡ್‌ನಿಂದ ಸತ್ತ ವ್ಯಕ್ತಿಯ ಶ್ವಾಸಕೋಶ ತುಂಬ ಗಟ್ಟಿಯಾಗಿತ್ತು. ಶ್ವಾಸಕೋಶದಲ್ಲಿ ಗಾಳಿಯ ಅಂಶವೇ ಇರಲಿಲ್ಲ. ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಹಾಗೆಯೇ ಶ್ವಾಸಕೋಶದಲ್ಲಿ ಇನ್ನೂ ಅನೇಕ ಮಹತ್ವದ ಬದಲಾವಣೆ ಕಂಡು ಬಂದಿತು ಎಂದು ಅವರು ವಿವರಿಸಿದರು.
ಆಮ್ಲಜನಕ ನೀಡಬೇಕು:
ಕೋವಿಡ್ ನಿಂದ ಗಂಭೀರ ಸ್ಥಿತಿ ಎದುರಿಸುತ್ತಿರುವವರಿಗೆ ಕೇವಲ ವೆಂಟಿಲೇಟರ್‌ನಲ್ಲಿಟ್ಟು ಚಿಕಿತ್ಸೆ ನೀಡಿದರೆ ಪ್ರಯೋಜನವಿಲ್ಲ. ರಕ್ತ ತೆಳುಗೊಳಿಸುವ ಥ್ರೊಬೊಲೂಟಿಕ್ ಡ್ರಗ್ಸ್ ನೀಡಿ, ಸೋಂಕು ಹಬ್ಬದಂತೆ ತಡೆಯುವುದರ ಜೊತೆಗೆ ಆಮ್ಲಜನಕ ನೀಡಿದರೆ ಮಾತ್ರ ವ್ಯಕ್ತಿ ಚೇತರಿಸಿಕೊಳ್ಳಲು ಸಾಧ್ಯ ಎಂಬುದು ಸಂಶೋಧನೆಯಿಂದ ಸ್ಪಷ್ಟವಾಗಿದೆ ಎಂದು ದಿನೇಶ್ ಹೇಳಿದರು.
ಅಗ್ನಿಸ್ಪರ್ಶ ಉತ್ತಮ
ಗಂಟಲ ದ್ರವ ಮತ್ತು ಮೂಗಿನಲ್ಲಿ 16 ಗಂಟೆಗಳ ಬಳಿಕವೂ ವೈರಸ್ ಇರುತ್ತದೆ. ಚರ್ಮ ಮತ್ತು ಕೂದಲಿನಲ್ಲಿ ವೈರಸ್ ಪತ್ತೆಯಾಗದ ಹಿನ್ನೆಲೆಯಲ್ಲಿ ಶವವನ್ನೂ ಕುಟುಂಬಸ್ಥರಿಗೆ ನೀಡಬಹುದು. ಆದರೆ ಗಂಟಲು ಮತ್ತು ಮೂಗಿನಿಂದ ವೈರಸ್ ಹಬ್ಬದಂತೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಶವವನ್ನು ಹೂಳಿದಾಗ ದೇಹದಲ್ಲಿರುವ ವೈರಾಣು ಜಲ ಮೂಲಗಳಿಗೆ ಸೇರಬಹುದು, ಪ್ರಾಣಿ, ಪಕ್ಷಿಗಳಿಗೂ ವೈರಾಣು ಸೇರುವ ಸಾಧ್ಯತೆಗಳಿವೆ. ಆದ್ದರಿಂದ ದಹನ ಮಾಡುವುದೇ ಸೂಕ್ತ ಎಂದು ದಿನೇಶ್‌ರಾವ್ ಅಭಿಪ್ರಾಯಪಡುತ್ತಾರೆ.
ದೇಶದಲ್ಲಿ 25-30 ಶವಗಳ ಮೇಲೆ ಸಂಶೋಧನೆ ನಡೆಸಿದರೆ ಕೊರೋನಾದ ಬಗ್ಗೆ ಸ್ಪಷ್ಟಚಿತ್ರಣ ಸಿಗಬಹುದು. ಎಚ್‌ಐವಿ, ಕ್ಷಯ, ಸಾರ್ಸ್ ಮುಂತಾದ ಕಾಯಿಲೆಗಳಿಂದ ಸತ್ತವರ ಶವ ಪರೀಕ್ಷೆಗಳನ್ನು ಮಾಡಿದ ನಂತರವೇ ಹೆಚ್ಚಿನ ಮಾಹಿತಿ ಲಭ್ಯವಾಗಿತ್ತು. ಕನಿಷ್ಠ ಪಕ್ಷ ಏಮ್ಸ್ ಅಥವಾ ಸರ್ಕಾರ ತನ್ನ ಅಸ್ಪತ್ರೆಗಳ ಮೂಲಕವಾದರೂ ಇಂತಹ ಸಂಶೋಧನೆಗೆ ಒತ್ತು ನೀಡಬೇಕು.
-ಡಾ.ದಿನೇಶ್‌ರಾವ್, ತಜ್ಞ ವೈದ್ಯ
ಸಂಶೋಧನೆ ಅಗತ್ಯ:
ಅಮೆರಿಕ ಮತ್ತು ಇಟಲಿಯಲ್ಲಿ ನಡೆದ ಸಂಶೋಧನೆಗೂ ತಾವು ನಡೆಸಿರುವ ಪರೀಕ್ಷೆಗೂ ಮೂಲಭೂತ ವ್ಯತ್ಯಾಸ ಕಂಡು ಬಂದಿದೆ. ಅಲ್ಲಿ ಶ್ವಾಸಕೋಶದ ‘ಅಯಾಲಿನ್’ನಲ್ಲಿ ಬದಲಾವಣೆ ಕಂಡು ಬಂದಿದ್ದರೆ ನಮ್ಮಲ್ಲಿ ಅಂತಹ ಬದಲಾವಣೆ ಆಗಿಲ್ಲ. ರಕ್ತ ಹೆಪ್ಪುಗಟ್ಟುವಿಕೆ, ‘ಕೊಗುಲಟಿವ್ ನೆಕ್ರೊಸಿಸ್’ ಸಮಸ್ಯೆ ನಮ್ಮಲ್ಲಿ ಕಂಡು ಬಂದಿದೆ. ಈ ಬಗ್ಗೆ ಸಂಶೋಧನೆ ನಡೆಯುವ ಅಗತ್ಯವಿದೆ ಎಂದು ದಿನೇಶ್‌ರಾವ್ ಅಭಿಪ್ರಾಯಪಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ