ಕಾಲೇಜು, ವಿಶ್ವವಿದ್ಯಾಲಯ ಆರಂಭಕ್ಕೆ 2 ರೀತಿಯ ವ್ಯವಸ್ಥೆ

By Kannadaprabha NewsFirst Published Aug 28, 2020, 7:38 AM IST
Highlights

ಕರ್ನಾಟಕದಲ್ಲಿ ಶಾಲಾ ಕಾಲೇಜುಗಳನ್ನು ಮತ್ತೆ ಆರಂಭಕ್ಕೆ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಆದರೆ ಎರಡು ವ್ಯವಸ್ಥೆಯ ಮೂಲಕ ಶಾಲಾ ಕಾಲೂಜುಗಳ ಆರಂಭ ಮಾಡಲು ನಿರ್ಧಾರ ಮಾಡಲಾಗಿದೆ.

ವರದಿ : ಎನ್‌.ಎಲ್‌. ಶಿವಮಾದು

ಬೆಂಗಳೂರು (ಆ.28): ಬದಲಾದ ಪರಿಸ್ಥಿತಿಯಲ್ಲಿ ಸೆಪ್ಟೆಂಬರ್‌ 1ರಿಂದ ಜೂಮ್‌, ವೆಬಿನಾರ್‌ ಆ್ಯಪ್‌ ಮೂಲಕ ಆನ್‌ಲೈನ್‌ ತರಗತಿ ಹಾಗೂ ಅಕ್ಟೋಬರ್‌ನಿಂದ ಭೌತಿಕ ಕಾಲೇಜುಗಳು ಆರಂಭವಾದರೆ ಹೆಚ್ಚಿನ ವಿದ್ಯಾರ್ಥಿಗಳಿದ್ದಲ್ಲಿ ಪಾಳಿಯ ವ್ಯವಸ್ಥೆಯಲ್ಲಿ ತರಗತಿ ನಡೆಸಲು ರಾಜ್ಯದ ಪದವಿ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳು ಸಿದ್ಧತೆ ಮಾಡತೊಡಗಿವೆ.

2020-21ನೇ ಶೈಕ್ಷಣಿಕ ವರ್ಷವನ್ನು ಸೆ.1ರಿಂದ ರಾಜ್ಯದ ಎರಡು ಮತ್ತು ಮೂರನೇ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಗಳನ್ನು ಆರಂಭಿಸುವ ಮೂಲಕ ಚಾಲನೆ ನೀಡಲು ಅಗತ್ಯ ಸಿದ್ಧತೆ ಮಾಡಲಾಗುತ್ತಿದೆ.

ಆನ್‌ಲೈನ್‌ ತರಗತಿಗಳನ್ನು ವೆಬಿನಾರ್‌, ಜೂಮ್‌ ಆ್ಯಪ್‌ಗಳ ಮೂಲಕ ನಡೆಸಲಾಗುತ್ತಿದೆ. ತರಗತಿಗಳನ್ನು ನಡೆಸುವ ಪ್ರಾಧ್ಯಾಪಕರು ಜೂಮ್‌ ಅಥವಾ ವೆಬಿನಾರ್‌ನಲ್ಲಿ ಬೋಧನೆ ನಡೆಸಬೇಕಿದೆ. ಒಂದು ವೇಳೆ ವಿದ್ಯಾರ್ಥಿಗಳು ಹಾಜರಾಗದಿದ್ದರೆ, ವಾಟ್ಸ್‌ ಆ್ಯಪ್‌ ಲಿಂಕ್‌ ಕಳುಹಿಸಿ ವಿದ್ಯಾರ್ಥಿಗಳಿಗೆ ತಲುಪಿಸಲು ಆಯಾ ಕಾಲೇಜು ಪ್ರಾಂಶುಪಾಲರುಗಳು ಪ್ರಾಧ್ಯಾಪಕರಿಗೆ ಸೂಚನೆ ನೀಡಿದ್ದಾರೆ.

ಆನ್‌ಲೈನ್‌ ತರಗತಿಗಳ ಬೋಧನೆಯನ್ನು ಶೈಕ್ಷಣಿಕ ವರ್ಷದ ತರಗತಿಗಳೆಂದು ಪರಿಗಣಿಸಲಾಗುತ್ತಿದೆ. ಆನ್‌ಲೈನ್‌ನಲ್ಲಿ ಮಾಡಿದ ಪಾಠಗಳನ್ನು ಮತ್ತೊಮ್ಮೆ ಕಾಲೇಜಿನಲ್ಲಿ ಬೋಧನೆ ಮಾಡುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಆನ್‌ಲೈನ್‌ ತರಗತಿಗಳಿಗೆ ಕಡ್ಡಾಯವಾಗಿ ಹಾಜರಾಗಬೇಕಿದೆ.

ಶಾಲಾ-ಕಾಲೇಜು ಆರಂಭದ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೊಟ್ಟ ಡಿಸಿಎಂ ಅಶ್ವತ್ಥನಾರಾಯಣ

‘ಆದರೆ, ಸರ್ಕಾರಿ ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳ ಬಳಿಯೂ ಮೊಬೈಲ್‌ ಇರುವುದಿಲ್ಲ. ಇಂತಹ ವಿದ್ಯಾರ್ಥಿಗಳಿಗೆ ಯಾವ ರೀತಿಯಲ್ಲಿ ಪಾಠಗಳನ್ನು ತಲುಪಿಸಲಿದ್ದಾರೆ ಎಂಬ ಬಗ್ಗೆ ಸರ್ಕಾರ ಯಾವುದೇ ಮಾರ್ಗಸೂಚಿ ಪ್ರಕಟಿಸಿಲ್ಲ. ಅದೇ ರೀತಿ ವಿದ್ಯಾರ್ಥಿಗಳ ಆನ್‌ಲೈನ್‌ ತರಗತಿಗಳ ಹಾಜರಾತಿಯನ್ನು ಪರಿಗಣಿಸಬೇಕೇ ಎಂಬುದರ ಬಗ್ಗೆ ಸರ್ಕಾರ ಯಾವುದೇ ಸಲಹೆ-ಸೂಚನೆಗಳನ್ನು ನೀಡದಿರುವುದರಿಂದ ನಮಗೂ ತಿಳಿಯುತ್ತಿಲ್ಲ’ ಎಂದು ಕುಲಪತಿಯೊಬ್ಬರು ತಿಳಿಸಿದರು.

ಪಾಳಿ ವ್ಯವಸ್ಥೆಯಲ್ಲಿ ಆಫ್‌ಲೈನ್‌ ತರಗತಿ:

ಅಕ್ಟೋಬರ್‌ನಿಂದ ಎಲ್ಲ ಪದವಿ ತರಗತಿಗಳಿಗೆ ಆಫ್‌ಲೈನ್‌ ತರಗತಿಗಳು (ಭೌತಿಕ ಹಾಜರಾತಿ) ಆರಂಭವಾಗಲಿವೆ. ಹೆಚ್ಚಿನ ವಿದ್ಯಾರ್ಥಿಗಳು ಇರುವ ಕಾಲೇಜುಗಳು ಪಾಳಿ ವ್ಯವಸ್ಥೆಯಲ್ಲಿ ತರಗತಿಗಳನ್ನು ಆರಂಭಿಸಲು ಚಿಂತನೆ ನಡೆಸುತ್ತಿವೆ. ಕನಿಷ್ಠ ಎರಡು ಅಥವಾ ಮೂರು ಪಾಳಿಯಲ್ಲಿ ತರಗತಿಗಳನ್ನು ನಡೆಸಬೇಕಾಗುತ್ತದೆ.

ನಾಲ್ಕು ಭಾಗವಾಗಿ ಪಠ್ಯ:

ತರಗತಿಗಳನ್ನು ಆರಂಭಿಸುವ ಕುರಿತು ಮಾತನಾಡಿದ ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಕೆ.ಆರ್‌. ವೇಣುಗೋಪಾಲ್‌, ‘ಕೊರೋನಾ ಪರಿಸ್ಥಿತಿಯಲ್ಲಿ ಆನ್‌ಲೈನ್‌ ತರಗತಿಗಳು ಅನಿವಾರ್ಯವಾಗಿವೆ. ಬೆಂಗಳೂರಿನ ವಿದ್ಯಾರ್ಥಿಗಳಲ್ಲಿ ಮೊಬೈಲ್‌ ಬಳಕೆ ಸಾಮಾನ್ಯವಾಗಿರುವುದರಿಂದ ಆನ್‌ಲೈನ್‌ ತರಗತಿಗಳು ಯಶಸ್ವಿಯಾಗಿ ನಡೆಯಲಿವೆ ಎಂದು ಆಶಾವಾದ ಹೊಂದಿದ್ದೇವೆ’ ಎಂದು ಹೇಳಿದರು.

'ಶಾಲೆ ಪುನರಾರಂಭಕ್ಕೆ ಯಾವುದೇ ರೀತಿ ಅವಸರ ಇಲ್ಲ'..

‘ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಿಗೆ ಆನ್‌ಲೈನ್‌ ತರಗತಿಗಳು ಹೊರೆಯಾಗಬಾರದು ಎಂಬ ಉದ್ದೇಶದಿಂದ ಪಠ್ಯವನ್ನು ಬೋಧಿಸುವ ಅವಧಿಯನ್ನು ಕಡಿತ ಮಾಡುವ ದೃಷ್ಟಿಯಿಂದ ನಾಲ್ಕು ವಿಭಾಗಗಳಾಗಿ ವಿಂಗಡಿಸಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳೇ ಮನೆಯಲ್ಲಿ ಓದಿಕೊಳ್ಳುವ ಪಾಠಗಳು, ವಿದ್ಯಾರ್ಥಿಗಳು ಓದಿಕೊಂಡು ಕಾಲೇಜಿನಲ್ಲಿ ಚರ್ಚೆ ಮಾಡುವ ವಿಷಯಗಳು, ಆನ್‌ಲೈನ್‌ ತರಗತಿಗಳು ಹಾಗೂ ಕಾಲೇಜಿನಲ್ಲಿಯೇ ಬೋಧಿಸಬೇಕಾದ ವಿಷಯಗಳು ಎಂಬ ನಾಲ್ಕು ವಿಭಾಗಗಳಾಗಿ ವಿಂಗಡಿಸಿಕೊಳ್ಳಲಾಗುತ್ತಿದೆ’ ಎಂದು ಪ್ರೊ. ವೇಣುಗೋಪಾಲ್‌ ತಿಳಿಸಿದರು.

ವಿಶ್ವವಿದ್ಯಾಲಯದ ಸಿದ್ಧತೆಗಳನ್ನು ಕುರಿತು ಕಾಲೇಜಿನ ಪ್ರಾಂಶುಪಾಲರಿಗೆ ಆನ್‌ಲೈನ್‌ ಕಾರ್ಯಾಗಾರ ನಡೆಸಿ ತಿಳಿವಳಿಕೆ ಮೂಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕೊರೋನಾ ಕಾಲಘಟ್ಟದಲ್ಲಿ ಪಾಳಿ ವ್ಯವಸ್ಥೆಯಲ್ಲಿ ಹಾಗೂ ಪಠ್ಯವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿಕೊಂಡು ಶೈಕ್ಷಣಿಕ ವರ್ಷವನ್ನು ಆರಂಭಿಸುವ ಬಗ್ಗೆ ಚರ್ಚಿಸಲಾಗುತ್ತಿದೆ. ಕಾಲೇಜು ಆರಂಭ ಅನಿವಾರ್ಯವಾಗಿರುವುದರಿಂದ ತಂತ್ರಜ್ಞಾನ ಬಳಸಿಕೊಂಡು ಹೊಸ ಮಾರ್ಗಗಳನ್ನು ಅನುಸರಿಸಬೇಕಿದೆ.

- ಪ್ರೊ. ಕೆ.ಆರ್‌. ವೇಣುಗೋಪಾಲ್‌, ಬೆಂ.ವಿವಿ ಕುಲಪತಿ

"

click me!