ಹೊಸ ವರ್ಷಕ್ಕೆ ಬಸ್ ಪ್ರಯಾಣಿಕರಿಗೆ ಟಿಕೆಟ್ ಬೆಲೆ ಏರಿಕೆ ಬರೆ?

By Web DeskFirst Published Dec 28, 2018, 12:35 PM IST
Highlights

ಹಳೆಯ ಪ್ರಸ್ತಾವಕ್ಕೆ ಸಾರಿಗೆ ಇಲಾಖೆ ಮರುಜೀವ| ಸಿಎಂ ವಿವೇಚನೆಗೆ ದರ ಏರಿಕೆ ವಿಷಯ: ತಮ್ಮಣ್ಣ| ಶೀಘ್ರದಲ್ಲೇ ಸಿಎಂಗೆ ಪ್ರಸ್ತಾವ ಸಲ್ಲಿಕೆ: ಸಚಿವ ತಮ್ಮಣ್ಣ| ಸಾರಿಗೆ ಸಂಸ್ಥೆಗೆ ಪ್ರಸಕ್ತ ವರ್ಷ 687 ಕೋಟಿ ರು. ನಷ್ಟ

ಬೆಂಗಳೂರು[ಡಿ.28]: ಹೊಸ ವರ್ಷಕ್ಕೆ ಸಾರಿಗೆ ಇಲಾಖೆಯು ಬಸ್‌ ದರ ಏರಿಕೆಯ ಶಾಕ್‌ ನೀಡುವ ಸಾಧ್ಯತೆ ಇದೆ. ಕಳೆದ ಬಾರಿ ಶೇ.18ರಷ್ಟುಬಸ್‌ ದರ ಹೆಚ್ಚಳಕ್ಕೆ ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಈ ಬಾರಿ ಏರಿಕೆಯ ಪ್ರಮಾಣವನ್ನು ಮುಖ್ಯಮಂತ್ರಿಗಳ ವಿವೇಚನಕ್ಕೆ ಬಿಡಲು ನಿರ್ಧರಿಸಿದೆ.

ಸಾರಿಗೆ ಸಂಸ್ಥೆಗಳು ನಷ್ಟದಲ್ಲಿರುವ ಹಿನ್ನೆಲೆಯಲ್ಲಿ ಬಸ್‌ ಪ್ರಯಾಣ ದರ ಏರಿಕೆಯು ಅನಿವಾರ್ಯವಾಗಿದ್ದು, ಮುಖ್ಯಮಂತ್ರಿಗಳಿಗೆ ಶೀಘ್ರದಲ್ಲಿಯೇ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ. ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಳೆದ ಬಾರಿ ಶೇ.18 ರಷ್ಟುಬಸ್‌ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಹೆಚ್ಚಳದ ಪ್ರಮಾಣವು ಹೆಚ್ಚಾಗಿದೆ ಎಂದು ಮುಖ್ಯಮಂತ್ರಿಗಳು ಹಿಂದೇಟು ಹಾಕಿದ್ದರು. ಹೀಗಾಗಿ ಬಸ್‌ ದರ ಹೆಚ್ಚಳ ಕುರಿತು ಮುಖ್ಯಮಂತ್ರಿಗಳ ಅವಗಾಹನೆಗೆ ಬಿಡಲಾಗಿದೆ ಎಂದು ತಿಳಿಸಿದರು.

ಈಶಾನ್ಯ, ವಾಯವ್ಯ, ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಸಾರಿಗೆ ಸಂಸ್ಥೆಗಳಿಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ 687 ಕೋಟಿ ರು. ನಷ್ಟವಾಗಿದೆ. ಸಂಸ್ಥೆ ನಿರ್ವಹಣೆ, ಸಿಬ್ಬಂದಿ ವೇತನ ಸೇರಿದಂತೆ ಇತರೆ ಸೌಲಭ್ಯಗಳಿಗೆ ಆರ್ಥಿಕ ಹೊರೆಯಾಗುತ್ತಿದೆ. ಈ ಬಗ್ಗೆ ಬುಧವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಲಾಯಿತು. ಡೀಸೆಲ್‌ ದರ ಪ್ರತಿ ಲೀಟರ್‌ಗೆ 53 ರು. ಇದ್ದಾಗ ಬಸ್‌ದರ ಹೆಚ್ಚಳ ಮಾಡಲಾಗಿತ್ತು. ಪ್ರತಿ ಲೀಟರ್‌ಗೆ 78 ರು. ಇದ್ದರೂ ಬಸ್‌ ದರ ಹೆಚ್ಚಳ ಮಾಡಿರಲಿಲ್ಲ. ಬಸ್‌ ದರ ಹೆಚ್ಚಳ ಮಾಡದಿದ್ದರೆ ಸರ್ಕಾರದಿಂದ ಅನುದಾನ ನೀಡುವಂತೆ ಕೋರಲಾಗುವುದು. ಸಾರಿಗೆ ಸಂಸ್ಥೆ ಉಳಿಯ ಬೇಕಾದರೆ ಬಸ್‌ ದರ ಹೆಚ್ಚಳ ಅನಿವಾರ್ಯವಾಗಿದೆ. ಬಸ್‌ ದರ ಏರಿಕೆಯ ಪ್ರಮಾಣದ ಕುರಿತು ಮುಖ್ಯಮಂತ್ರಿಗಳ ವಿವೇಚನಕ್ಕೆ ಬಿಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಪ್ರಸ್ತಾವನೆ ಸಿದ್ದಪಡಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಸಲ್ಲಿಕೆ ಮಾಡಲಾಗುತ್ತದೆ ಎಂದು ಹೇಳಿದರು.

ಹೊಸ ಬಸ್‌ಗಳ ಖರೀದಿ:

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ 4 ಸಾವಿರಕ್ಕೂ ಹೆಚ್ಚು ಹೊಸ ಬಸ್‌ಗಳನ್ನು ಖರೀದಿಸಲು ಉದ್ದೇಶಿಸಲಾಗಿದ್ದು, ಹಳೆ ಬಸ್‌ಗಳನ್ನು ಗುಜರಿಗೆ ಹಾಕಿ ಹೊಸ ಬಸ್‌ಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ವಾಯುವ್ಯ ಸಾರಿಗೆ ಸಂಸ್ಥೆಗೆ 313 ಬಸ್‌ಗಳನ್ನು ಹೊಸದಾಗಿ ಖರೀದಿಸಲು ನಿರ್ಧರಿಸಲಾಗಿದ್ದು, ಸರ್ಕಾರದಿಂದ ಅನುಮೋದನೆಯು ಸಿಕ್ಕಿದೆ. 10 ಲಕ್ಷ ಕಿ.ಮೀ. ಚಲಿಸಿರುವ ವೋಲ್ವೋ ಬಸ್‌ಗಳನ್ನು ಗುಜರಿಗೆ ಹಾಕಿ 24 ವೋಲ್ವೋ ಬಸ್‌ಗಳನ್ನು ಖರೀದಿ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.

ಬಿಎಂಟಿಸಿಗೆ ಹೊಸದಾಗಿ ಒಟ್ಟು 3 ಸಾವಿರ ಬಸ್‌ಗಳನ್ನು ಖರೀದಿಸಲು ಇಲಾಖೆಯು ಮುಂದಾಗಿದೆ. 1500 ಬಸ್‌ಗಳನ್ನು ಇಲಾಖೆಯು ಖರೀದಿ ಮಾಡಲಿದ್ದು, ಇನ್ನುಳಿದ 1500 ಬಸ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆದುಕೊಳ್ಳಲಾಗುವುದು. ಬಿಎಂಟಿಸಿಗೆ ಹೊಸ ಬಸ್‌ಗಳನ್ನು ಖರೀದಿಸಲು ಎನ್‌ಜಿಟಿ ನಿರ್ಬಂಧ ಹೇರಿದೆ. ಆದರೂ ಅದನ್ನು ಬದಿಗೊತ್ತಿ ಬಸ್‌ಗಳ ಖರೀದಿ ಮಾಡಲಾಗುವುದು. ಬೆಂಗಳೂರಲ್ಲಿ 5,500 ಬಸ್‌ಗಳು ಸಂಚರಿಸಿದರೆ 80 ಲಕ್ಷ ಇತರೆ ವಾಹನಗಳು ಸಂಚರಿಸುತ್ತಿವೆ. ಬೇರೆ ವಾಹನಗಳಿಗೆ ಇಲ್ಲದ ನಿರ್ಬಂಧ ಎನ್‌ಜಿಟಿ ಬಿಎಂಟಿಸಿಗೆ ಮಾತ್ರ ವಿಧಿಸಿದೆ. ಜ.9ರಂದು ನಡೆಯುವ ವಿಚಾರಣೆ ವೇಳೆ ಈ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಲಾಗುವುದು. ಅಲ್ಲದೇ, ಕೆಎಸ್‌ಆರ್‌ಟಿಸಿ ಬಸ್‌ಗಳ ಖರೀದಿ ಸಂಬಂಧ ಜ.3ರಂದು ನಡೆಯುವ ಆಡಳಿತ ಮಂಡಳಿಯಲ್ಲಿ ಸ್ಪಷ್ಟನಿರ್ಧಾರ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ಆರ್‌ಟಿಓಗಳ ನೇಮಕ:

ಖಾಲಿ ಇರುವ ಆರ್‌ಟಿಓ ಹುದ್ದೆಗಳಿಗೆ ಭರ್ತಿ ಮಾಡಲು ಉದ್ದೇಶಿಸಲಾಗಿದ್ದು, ಕೆಪಿಎಸ್‌ಸಿ ಮೂಲಕ 139 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. 764 ಹುದ್ದೆಗಳ ಪೈಕಿ 400 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 270ಕ್ಕೂ ಹೆಚ್ಚು ಆರ್‌ಟಿಓ ಹುದ್ದೆಗಳು ಖಾಲಿ ಇವೆ. ಒಬ್ಬೊಬ್ಬ ಆರ್‌ಟಿಓಗಳು 3-4 ಕಚೇರಿಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಕೆಲಸ ಒತ್ತಡದಿಂದ ಸಮರ್ಪಕವಾಗಿ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆರ್‌ಟಿಓ ಹುದ್ದೆಗೆ ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಆರ್‌ಟಿಓ ಹುದ್ದೆಗೆ ನೇಮಕವಾಗಬೇಕಾದರೆ ಗ್ಯಾರೇಜ್‌ನಲ್ಲಿ ತರಬೇತಿ ಪಡೆದಿರಬೇಕು ಎಂಬ ನಿಯಮ ಇದೆ. ಈ ನಿಯಮವನ್ನು ಸಡಿಲಿಸಲು ಕಾಯ್ದೆಗೆ ತಿದ್ದುಪಡಿ ತರಲಾಗುವುದು. ನೇಮಕಾತಿ ಬಳಿಕ ಒಂದು ವರ್ಷ ತರಬೇತಿ ನೀಡಲಾಗುವುದು. ಈ ಅವಧಿಯನ್ನು ಪ್ರೊಬೆಷನರಿ ಅವಧಿ ಎಂದು ಪರಿಗಣಿಸಲು ಉದ್ದೇಶಿಸಲಾಗಿದೆ. ಇದಲ್ಲದೇ, ಚಾಲಕರು, ನಿರ್ವಾಹಕರು ಸೇರಿದಂತೆ ಇತರೆ 2500 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗಿದೆ. ಈ ಹಿಂದೆಯೇ ನಡೆಯಬೇಕಿತ್ತು. ಆದರೆ, ಈಗ ಪ್ರಕ್ರಿಯೆ ನಡೆಸಲಾಗಿದೆ ಎಂದು ತಿಳಿಸಿದರು.

ಖಾಸಗಿ ಬಸ್‌ಗಳಿಗೆ ಜಿಪಿಎಸ್‌:

ಖಾಸಗಿ ಬಸ್‌ಗಳು ಪ್ರಯಾಣಿಕರಿಂದ ಹೆಚ್ಚಿನ ದರ ಸುಲಿಗೆ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಲು ಮತ್ತು ಅವುಗಳ ಮೇಲೆ ನಿಯಂತ್ರಣ ಹೊಂದಲು ಜಿಪಿಎಸ್‌ ಅಳವಡಿಕೆ ಮಾಡಲು ಚಿಂತನೆ ನಡೆಸಲಾಗಿದೆ. ಖಾಸಗಿ ಬಸ್‌ಗಳ ಸಂಚಾರವನ್ನು ವ್ಯವಸ್ಥಿತ ಮತ್ತು ಸಂಚಾರ ವ್ಯವಸ್ಥೆಯಲ್ಲಿ ಶಿಸ್ತು ಕಾಯ್ದುಕೊಳ್ಳಲು ಇದು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

click me!