
ಯಲ್ಲಾಪುರ (ಉತ್ತರ ಕನ್ನಡ) (ಏ.12): ರಾಜ್ಯದ ಕಾಂಗ್ರೆಸ್ ಸರ್ಕಾರ ಕೆಪಿಟಿಸಿಎಲ್ (ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ) ಆಸ್ತಿಯ ಮೌಲ್ಯ ಕುಗ್ಗಿಸಿ ಮಾರಾಟ ಮಾಡಲು ಹೊರಡುವ ಮೂಲಕ ಮತ್ತೊಂದು ಭ್ರಷ್ಟಾಚಾರಕ್ಕೆ ಮುಂದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದಲ್ಲಿ ಶುಕ್ರವಾರ ಬಿಜೆಪಿಯ ಜನಾಕ್ರೋಶ ಯಾತ್ರೆ ಉದ್ಘಾಟಿಸಿ ಮಾತನಾಡಿದ ವಿಜಯೇಂದ್ರ, ಕೆಪಿಟಿಸಿಎಲ್‌ನ ಸಾವಿರಾರು ಕೋಟಿ ರೂ.ಆಸ್ತಿಯನ್ನು ಕಡಿಮೆ ಲೆಕ್ಕ ತೋರಿಸಿ ಮಾರಾಟ ಮಾಡಿ, ದುಡ್ಡು ಹೊಡೆಯಲು ಮುಂದಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಈ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಜನರ ಕಣ್ಣಿಗೆ ಬೂದಿ ಎರಚಿದೆ. ಸಿದ್ಧರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ 50ಕ್ಕೂ ಹೆಚ್ಚಿನ ದಿನಬಳಕೆಯ ವಸ್ತುಗಳ ಬೆಲೆ ಏರಿಸಲಾಗಿದೆ. ಶಕ್ತಿ ಯೋಜನೆಯ ಮೂಲಕ ಕೆಎಸ್ಆರ್‌ಟಿಸಿಯನ್ನು ಸರ್ಕಾರವೇ ದಿವಾಳಿ ಮಾಡಿದ್ದು, ಈಗ ₹6,500 ಕೋಟಿ ಬಾಕಿ ಉಳಿಸಿಕೊಂಡಿದೆ. ಗ್ರಾಮೀಣ ಭಾಗದಲ್ಲಿ ಪ್ರಯಾಣಿಸುತ್ತಿದ್ದ ಬಸ್‌ಗಳನ್ನು ನಿಲ್ಲಿಸಿದ್ದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಎಸ್‌ಸಿ, ಎಸ್‌ಟಿ ಸಮುದಾಯದ 38,500 ಕೋಟಿ ರೂ.ಹಣವನ್ನು ಬೇರೆ ಕಾರ್ಯಕ್ರಮಕ್ಕೆ ಬಳಸಿ, ಅದರಲ್ಲಿಯೂ ಭ್ರಷ್ಟಾಚಾರವೆಸಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿರೋದು 80% ಭ್ರಷ್ಟಾಚಾರದ ಸರ್ಕಾರ: ವಿಜಯೇಂದ್ರ ಆರೋಪ
ಚುನಾವಣೆ ವೇಳೆ ಸಿದ್ಧರಾಮಯ್ಯನವರು, ‘ಈ ರಾಜ್ಯದ ಜನರು ಆಶೀರ್ವಾದ ಮಾಡಿದರೆ ರಾಜ್ಯದಲ್ಲಿ ನೀರಾವರಿ ಯೋಜನೆಗೆ ಹಣ ನೀಡುವೆ’ ಎಂದಿದ್ದರು. ಡಿಕೆಶಿಯವರು ಮೇಕೆದಾಟು ಹೆಸರಿನಲ್ಲಿ ಪಾದಯಾತ್ರೆ ಮಾಡಿದ್ದರು. ಈಗ ಈ ಬಗ್ಗೆ ಅವರು ಮೌನಕ್ಕೆ ಶರಣಾಗಿದ್ದಾರೆ ಎಂದರು. ಸಿದ್ಧರಾಮಯ್ಯನವರ ಬಜೆಟ್ ಮಂಡನೆ ವೇಳೆ ಮುಸಲ್ಮಾನರ ಓಲೈಕೆ ಎದ್ದು ಕಾಣುತ್ತಿತ್ತು. ಮುಸಲ್ಮಾನ ಹೆಣ್ಣುಮಕ್ಕಳ ಆತ್ಮರಕ್ಷಣೆಗೆ ಸಾವಿರಾರು ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇಂದು ಲವ್ ಜಿಹಾದ್‌ಗೆ ಬಲಿಯಾಗುತ್ತಿರುವುದು ಹಿಂದೂ ಹೆಣ್ಣು ಮಕ್ಕಳು, ಮುಸಲ್ಮಾನ ಹೆಣ್ಣು ಮಕ್ಕಳಲ್ಲ. ಮುಖ್ಯಮಂತ್ರಿಯವರು ಆತ್ಮರಕ್ಷಣೆಗೆ ಹಣ ಇಡಬೇಕು ಅಂತಾದರೆ ಹಿಂದೂ ಹೆಣ್ಣುಮಕ್ಕಳಿಗೋಸ್ಕರ ಇಡಬೇಕಿತ್ತು.
ಮುಸಲ್ಮಾನ ವಿದ್ಯಾರ್ಥಿಗಳು ವಿದೇಶದಲ್ಲಿ ಅಧ್ಯಯನ ಮಾಡಲು ನೀಡಲಾಗುವ ಧನಸಹಾಯವನ್ನು 20 ರಿಂದ 30 ಲಕ್ಷಕ್ಕೆ ಏರಿಸಿದ್ದಾರೆ. ಈ ಸರ್ಕಾರಕ್ಕೆ ಹಿಂದೂಗಳ ಬಡ ಹೆಣ್ಣುಮಕ್ಕಳು ಕಾಣುತ್ತಿಲ್ಲವಾ?. ಬರೀ ಮುಸಲ್ಮಾನರ ಮತಗಳಿಂದಲೇ ಸಿದ್ದರಾಮಯ್ಯನವರು ರಾಜ್ಯದ ಸಿಎಂ ಆಯಾದರಾ ಎಂದು ಪ್ರಶ್ನಿಸಿದರು. ಇಂದಿನ ದಿನಗಳಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ. ಕಾಂಗ್ರೆಸ್ಸಿಗರ ಮಾತು ಕೇಳಿ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸಿದರೆ, ಕಾರ್ಯಕರ್ತರು ಬಡಿಗೆ ಹಿಡಿದು ಠಾಣೆಗೆ ನುಗ್ಗುವ ದಿನಗಳು ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು.
ಬೆದರುಗೊಂಬೆಯಾದ ಜಾತಿ ಗಣತಿ: ಜಾತಿ ಗಣತಿ ಪ್ರಸ್ತಾಪಿಸಿದ ವಿಜಯೇಂದ್ರ, ಯಾವ್ಯಾವಾಗ ಮುಖ್ಯಮಂತ್ರಿಯ ಕುರ್ಚಿ ಅಲುಗಾಡುತ್ತೋ ಆವಾಗಲೆಲ್ಲಾ ಜಾತಿಗಣತಿ ನೆನಪಾಗುತ್ತದೆ. ಮುಖ್ಯಮಂತ್ರಿಯವರು ಜಾತಿ ಗಣತಿಯನ್ನು ಬೆದರುಗೊಂಬೆಯಂತೆ ಬಳಕೆ ಮಾಡುತ್ತಿದ್ದಾರೆ. ಜಾತಿಗಣತಿ ಬಿಡುಗಡೆ ಮಾಡಿ ಆಯಾ ಸಮುದಾಯಗಳಿಗೆ ನ್ಯಾಯ ಕೊಡಬೇಕೆಂಬ ಕಳಕಳಿ ಮುಖ್ಯಮಂತ್ರಿಗೆ ಇಲ್ಲ. ಬೆಲೆ ಏರಿಕೆಯಿಂದ ಜನತೆ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿರುವ ಸಂದರ್ಭದಲ್ಲಿ ಜನರ ಗಮನವನ್ನು ಬೇರೆಡೆ ಹೊರಳಿಸಲು ಜಾತಿ ಗಣತಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಸಮಾವೇಶಕ್ಕೆ ಹೆಬ್ಬಾರ್ ಗೈರು: ತಮ್ಮ ಕ್ಷೇತ್ರದಲ್ಲೇ ಸಮಾವೇಶ ನಡೆದರೂ, ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಅವರು ಸಮಾವೇಶಕ್ಕೆ ಆಗಮಿಸಲಿಲ್ಲ. ಆದರೆ, ವಿಜಯೇಂದ್ರ ಅವರು ತಮ್ಮ ಭಾಷಣದಲ್ಲಿ ಹೆಬ್ಬಾರ್ ಹೆಸರನ್ನು ಪ್ರಸ್ತಾಪಿಸಿದರು. ಹೆಬ್ಬಾರ್ ಅವರು ಈ ಕ್ಷೇತ್ರದಲ್ಲಿ ಯಾವುದಾದರೂ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮಾಡಿದ್ದರೆ, ಅದು ಯಡಿಯೂರಪ್ಪ ಸರ್ಕಾರ ನೀಡಿದ್ದ ಅನುದಾನದಿಂದ ಮಾತ್ರ. ಮುಂದಿನ ಚುನಾವಣೆಯಲ್ಲಿ ಯಲ್ಲಾಪುರದಲ್ಲಿ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ, ಬಿಜೆಪಿಯ ಧ್ವಜ ಹಾರಿಸೋಣ ಎಂದರು.
ರಾಜ್ಯದಲ್ಲಿರುವುದು ಹಿಂದುಗಳ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಹಿಟ್ಲರ್ ಸರ್ಕಾರ: ವಿಜಯೇಂದ್ರ
ಗ್ರಾಮದೇವತೆಗೆ ಪೂಜೆ: ಯಾತ್ರೆಯಲ್ಲಿ ಪಾಲ್ಗೊಳ್ಳಲು ಯಲ್ಲಾಪುರಕ್ಕೆ ಆಗಮಿಸಿದ ವಿಜಯೇಂದ್ರ, ಗ್ರಾಮದೇವಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ, ಅಂಬೇಡ್ಕರ್ ಸರ್ಕಲ್ ಬಳಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪಾದಯಾತ್ರೆ ಮೂಲಕ ಸಮಾವೇಶ ನಡೆದ ವೈಟಿಎಸ್‌ಎಸ್ ಮೈದಾನಕ್ಕೆ ಆಗಮಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.