ಸರ್ಕಾರದ ನಿರ್ಲಕ್ಷ್ಯಕ್ಕೆ ಬೇಸತ್ತು ಕಂಕಣವಾಡಿ ಗ್ರಾಮಸ್ಥರೇ ನಿರ್ಮಿಸಿರೋ ಸೇತುವೆ ಇದು! ಎಷ್ಟೊಂದು ಸುಂದರ ಅಲ್ವಾ?

By Ravi JanekalFirst Published Sep 28, 2023, 7:56 PM IST
Highlights

ನಡುಗಡ್ಡೆಗೆ ರೈತರ ವಂತಿಗೆಯಿಂದಲೇ ಸಿದ್ದವಾಯ್ತು ಬೃಹತ್ ಬ್ಯಾರಲ್ ಸೇತುವೆ. ಕೃಷ್ಣೆಗೆ ಅಡ್ಡಲಾಗಿ 600 ಅಡಿ ಉದ್ದ, 8 ಅಡಿ ಅಗಲದ ಉದ್ದದ ಸೇತುವೆ ನಿರ್ಮಿಸಿದ ರೈತರು. ಬಾಗಲಕೋಟೆ ಜಿಲ್ಲೆಯ ಕಂಕಣವಾಡಿಯಿಂದ ಗುಹೇಶ್ವರ ನಡುಗಡ್ಡೆವರೆಗೆ ಸೇತುವೆ ನಿರ್ಮಾಣ. ಅಂದಾಜು 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರೋ ರೈತರ ಸೇತುವೆಗೆ ಯುಟ್ಯೂಬ್ ವಿಡಿಯೋ ಪ್ರೇರಣೆಯಾಯ್ತು೧

ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ.

ಬಾಗಲಕೋಟೆ (ಸೆ.28):- ಸಾಮಾನ್ಯವಾಗಿ ಮನಸ್ಸೊಂದಿದ್ದರೆ ಮಾರ್ಗ ಅನ್ನೋ ಮಾತನ್ನ ಕೇಳಿದಿವಿ, ಆದರೆ ಇದಕ್ಕೆ ಪೂರಕವಾಗಿ ಕೃಷ್ಣಾ ತೀರದ ರೈತ ಸಮೂಹವೊಂದು ತಾವೇ ವಂತಿಗೆ ಸೇರಿಸುವ ಮೂಲಕ ಯಾವ ಇಂಜಿನಿಯರ್ ಗಳ ಸಹಾಯವೂ ಇಲ್ಲದೆ ಕೃಷ್ಣಾ ನದಿಗೆ ಅಡ್ಡಲಾಗಿ ಬ್ಯಾರಲ್ ಸೇತುವೆಯೊಂದನ್ನು ನಿರ್ಮಿಸುವ ಮೂಲಕ ಗಮನ ಸೆಳೆದಿದ್ದಾರೆ. 

ಸಾಲದ್ದಕ್ಕೆ ತಮ್ಮ ಸಮಸ್ಯೆಗೆ ಸ್ಪಂದಿಸದ ಸರ್ಕಾರಗಳು ಮತ್ತು ಜನಪ್ರತಿನಿಧಿಗಳಿಗೆ ಸೆಡ್ಡು ಹೊಡೆದು ಸೇತುವೆ ನಿರ್ಮಿಸಿ ಸೈ ಎನಿಸಿಕೊಂಡಿದ್ದಾರೆ. ಹಾಗಾದ್ರೆ ಅದೆಲ್ಲಿ? ರೈತರ ಏನೆಲ್ಲಾ ಮಾಡಿದ್ರು? ಅಂತೀರಾ. ಈ ಕುರಿತ ವರದಿ ಇಲ್ಲಿದೆ.

ಯಾದಗಿರಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ವಲಯ ಪಟ್ಟಿಗೆ ವಡಗೇರಾ ಆಯ್ಕೆ

ಹೌದು, ನಾವೀಗ ಹೇಳಲು ಹೊರಟ್ಟಿದ್ದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಂಕಣವಾಡಿ ಗ್ರಾಮದ ಬಳಿ ಇರುವ ಗುಹೇಶ್ವರ ನಡುಗಡ್ಡೆಯಲ್ಲಿರುವ ರೈತರ ಯಶೋಗಾಥೆ. ಈ ಗುಹೇಶ್ವರ ನಡುಗಡ್ಡೆಯಲ್ಲಿ ಇರುವ ರೈತ ಕುಟುಂಬಗಳು ಪ್ರತಿಯೊಂದು ವಸ್ತುಗಳನ್ನ ತರಲು ಕೊಂಡೊಯ್ಯಲು ನದಿ ಮೂಲಕ ಬೋಟ್​ಗಳನ್ನೇ ಆಶ್ರಯಿಸಬೇಕಿತ್ತು. ಇನ್ನು ಮೇಲಾಗಿ ರಾತ್ರಿ ವೇಳೆಯಂತೂ ಸಂಚಾರ ಸಾಧ್ಯವೇ ಆಗುತ್ತಿರಲಿಲ್ಲ, ಹೀಗಾಗಿ ಆಗಾಗ ಸರ್ಕಾರಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಸೇತುವೆ ನಿರ್ಮಿಸುವ ಸಂಭಂದ ಮನವಿ ಸಲ್ಲಿಸುತ್ತಲೇ ಇರುತ್ತಿದ್ದರು. ಆದ್ರೆ ಮುಳುಗಡೆ ಕಾರಣವನ್ನೊಡ್ಡಿ ರಾಜ್ಯದಲ್ಲಿ ಅಸ್ಥಿತ್ವದಲ್ಲಿದ್ದ ಯಾವೊಂದು ಸರ್ಕಾರಗಳು ಸಹ ಇವರ ಸ್ಪಂದನೆಗೆ ಬರಲೇ ಇಲ್ಲ, ಹೀಗಾಗಿ ಇದ್ಯಾವುದು ಸಾದ್ಯವೇ ಆಗದಿದ್ದಾಗ ಕೊನೆಗೆ ರೈತರೇ ತಾವೇ ಬ್ಯಾರಲ್​​ ಮೂಲಕ ಸೇತುವೆಯೊಂದನ್ನು ನಿರ್ಮಿಸುವ ಯೋಚನೆಗೆ ಮುಂದಾದರು. ಇದರ ಪ್ರತಿಫಲವಾಗಿ 600 ಅಡಿ ಉದ್ದ ಮತ್ತು 8 ಅಡಿ ಅಗಲವಾದ ಬ್ಯಾರಲ್​ ಸೇತುವೆಯೊಂದನ್ನು ನಿರ್ಮಿಸಿಲು ರೈತರು ಮುಂದಾದರು. 

ಸೇತುವೆಗಾಗಿಯೇ ವಂತಿಗೆ ಮೂಲಕವೇ 25 ಲಕ್ಷ ಹಣ ಕ್ರೂಢೀಕರಿಸಿದ ರೈತರು

ರೈತರು ತಮ್ಮ ಸಮಸ್ಯೆಗಳನ್ನ ಸರ್ಕಾರದ ಮುಂದೆ ಇಟ್ಟಾಗಲೂ ಸ್ಪಂದನೆ ಸಿಗದೇ ಹೋದಾಗ ರೈತ ಮುಖಂಡರೆಲ್ಲಾ ಸೇರಿ ತಮ್ಮ ನಡುಗಡ್ಡೆಗೆ ಅಡ್ಡಲಾಗಿರುವ ಕೃಷ್ಣಾ ನದಿಗೆ ಬ್ಯಾರಲ್​ ಸೇತುವೆಯೊಂದನ್ನು ನಿರ್ಮಿಸಬೇಕು ಎಂಬ ಕನಸು ಕಂಡರು. ಹೀಗಾಗಿಯೇ ನಡುಗಡ್ಡೆಯಲ್ಲಿರುವ 200ಕ್ಕೂ ಅಧಿಕ ರೈತ ಕುಟುಂಬಗಳು ಎಕರೆಗೆ 1 ಲಕ್ಷ ವಂತಿಗೆಯಂತೆ ಹಣ ಸೇರಿಸುತ್ತಾ ಹೋದರು. 

ಇದ್ರಿಂದ ರೈತರಿಂದಲೇ ರೈತರಿಗಾಗಿ ಸೇರಿದ್ದು ಬರೋಬ್ಬರಿ 25 ಲಕ್ಷಕ್ಕೂ ಅಧಿಕ ಹಣ. ಈ ಹಣದಿಂದಲೇ ರೈತರು ಇದೀಗ ಬ್ಯಾರಲ್ ಮೂಲಕ ಸೇತುವೆ ನಿರ್ಮಿಸಿದ್ದು, ಇದ್ರಿಂದ ರೈತರು ತಮ್ಮ ನಡುಗಡ್ಡೆಯ ಹೊಲ ಮನೆಗಳಿಗೆ ಹೋಗಿ ಬರಲು ಅನುಕೂಲ ಮಾಡಿಕೊಂಡಿದ್ದು, ಈ ಮೂಲಕ ಸೇತುವೆ ಮೇಲೆ ಜನ ಜಾನುವಾರು, ದ್ವಿಚಕ್ರ ವಾಹನ ಸಂಚಾರ ಮಾಡಬಹುದಾಗಿದೆ. 

ಯೂಟ್ಯೂಬ್​ನಲ್ಲಿ ನೋಡಿದ ಬ್ಯಾರಲ್ ಸೇತುವೆ ವಿಡಿಯೋ ರೈತರಿಗೆ ಪ್ರೇರಣೆ

ಇನ್ನು ರೈತರು ನಿರ್ಮಿಸಿದ ಈ ಬ್ಯಾರಲ್​ ಸೇತುವೆಗೆ ಯಾವುದೇ ಇಂಜಿನಿಯರ್ಸಗಳಿಲ್ಲ, ಬದಲಾಗಿ ಇಲ್ಲ ಎಲ್ಲವೂ ರೈತರೇ ಆಗಿದ್ದಾರೆ. ಯಾಕಂದ್ರೆ ಯೂಟ್ಯೂಬ್​ನಲ್ಲಿ ಬಾಂಗ್ಲಾದೇಶದಲ್ಲಿ ಕಟ್ಟಲಾಗಿದ್ದ ಬ್ಯಾರಲ್​ ಸೇತುವೆ ಮಾದರಿಯನ್ನ ನೋಡಿದ್ದ ರೈತರು ಅದೇ ಮಾದರಿಯಲ್ಲಿ ತಮ್ಮೂರಿನಲ್ಲಿ ಯಾಕೆ ಸೇತುವೆ ನಿರ್ಮಿಸಬಾರದು ಎಂಬ ಯೋಚನೆಯಲ್ಲಿ ಮುಳುಗಿದರು.

 ಇದಕ್ಕಾಗಿ ಹಣ ಬೇಕಾದಾಗ ರೈತರೆಲ್ಲಾ ಸೇರಿ ವಂತಿಗೆ ಮೂಲಕ ಹಣ ಸೇರಿಸಿದರಾಯ್ತು ಎಂದು ನಿರ್ಧರಿಸಿದ್ರು, ಇದರ ಪರಿಣಾಮ ಈಗ ತಮ್ಮೂರಿನಲ್ಲಿ ಬರೋಬ್ಬರಿ 25 ಲಕ್ಷಕ್ಕೂ ಅಧಿಕ ಹಣ ವಂತಿಗೆ ಹಣ ಹಾಕಿ ಸೇತುವೆ ಕಟ್ಟಿದ್ದಾರೆ. ಇನ್ನು 600 ಅಡಿ ಉದ್ದದ ಈ ಸೇತುವೆ ಗೆ 20 ಅಡಿಗೊಂದರಂತೆ ಕಬ್ಬಿಣದ ಆಂಗಲ್​ ಮತ್ತು ಎರಡು ಬದಿಗೆ ಕಟಂಜನ್​ ಹಾಕುವ ಮೂಲಕ ಉದ್ದವಾದ ಸೇತುವೆಯನ್ನ ನಿರ್ಮಿಸಿದ್ದಾರೆ. ಮದ್ಯದಲ್ಲಿ ಕಟ್ಟಿಗೆ ಪಳಿ ಹಾಕಲಾಗಿದ್ದು, ಸಂಚರಿಸಲು ಯೋಗ್ಯವಾಗಿದೆ. 

ಪ್ರತಿವರ್ಷ ಬೆಳೆಯುತ್ತಿದ್ದ ಕಬ್ಬು ಬೆಳೆ ಸಾಗಿಸಲು ಪರದಾಡುತ್ತಿದ್ದ ರೈತರು

ಹೌದು, ಗುಹೇಶ್ವರ ನಡುಗಡ್ಡೆಯಲ್ಲಿದ್ದ ರೈತರು ತಮ್ಮ ಹೊಲಗದ್ದೆಗಳಲ್ಲಿ ಬೆಳೆದಿದ್ದ ಕಬ್ಬಿನ ಬೆಳೆಯನ್ನ ನದಿಯ ಆಚೆ ಕೊಂಡೊಯ್ಯಲು ಹರಸಾಹಸ ಪಡಬೇಕಿತ್ತು. ಅಂದಾಜು 600 ಎಕರೆಗೂ ಅಧಿಕ ಜಮೀನಿದ್ದು, ಇಲ್ಲಿ ಬೆಳೆದಂತಹ ಕಬ್ಬನ್ನು ಸಾಗಿಸುವುದು ದುಸ್ತರವಾಗಿತ್ತು. ಯಾಕಂದ್ರೆ ವರ್ಷದ 8 ತಿಂಗಳು ನದಿಯಲ್ಲಿ ನೀರು ಇರುತ್ತಿದ್ದರಿಂದ ಕಬ್ಬಿನ ಬೆಳೆಯನ್ನ ನದಿ ದಾಟಿಸಲು ಬೋಟ್​​ನ್ನೇ ರೈತರು ಆಶ್ರಯಿಸಬೇಕಿತ್ತು. ಇದ್ರಿಂದ ರೈತರು ನಡುಗಡ್ಡೆಯಿಂದ ಕಬ್ಬು ಸಾಗಿಸಲು ಎರಡು ಬೋಟ್​​ಗಳಿಗೆ ಕಬ್ಬಿಣದ ಪಟ್ಟಿ ಜೋಡಿಸಿ ನದಿಯಲ್ಲಿ ಕಬ್ಬು ಕೊಂಡೊಯ್ಯುವ ಸಾಹಸಗಳನ್ನೂ ಸಹ ರೈತರು ಮಾಡಿದ್ದರು. ಆದ್ರೆ ಮುಂದುವರೆದು ಈಗ ಕೃಷ್ಣಾ ನದಿಗೆ ಬ್ಯಾರಲ್ ಸೇತುವೆ ನಿರ್ಮಿಸಲು ರೈತರು ಮನಸ್ಸು ಮಾಡುವ ಮೂಲಕ ಅದರಲ್ಲಿ ಯಶಸ್ಸು ಕಂಡಿರೋದು ಹೆಮ್ಮೆಯ ಸಂಗತಿ. 

ಬಾಗಲಕೋಟೆ: ನಿಲ್ಲದ ಆಲಮಟ್ಟಿ ಹಿನ್ನೀರಿನ ಸಂತ್ರಸ್ಥರ ಗೋಳು, ಪರಿಹಾರ ನೀಡುವಂತೆ ಸಚಿವ ತಿಮ್ಮಾಪೂರಗೆ ಮನವಿ

ಒಟ್ಟಿನಲ್ಲಿ ರೈತರಿಂದ ರೈತರಿಗಾಗಿ ರೈತರಿಗೋಸ್ಕರವಾಗಿಯೇ ಅಪರೂಪದ ಬ್ಯಾರಲ್ ಸೇತುವೆಯೊಂದನ್ನು ನಿರ್ಮಿಸುವ ಮೂಲಕ ಕಂಕಣವಾಡಿ- ಗುಹೇಶ್ವರ ನಡುಗಡ್ಡೆಯ ರೈತರು ಇತಿಹಾಸ ನಿರ್ಮಿಸಿದ್ದು, ಸರ್ಕಾರಕ್ಕೆ ಸೆಡ್ಡು ಹೊಡೆದು ತಮ್ಮತನ ಮೆರೆದ ರೈತರು ಇದೀಗ ಮಾದರಿಯಾಗಿದ್ದಂತು ಸುಳ್ಳಲ್ಲ..

click me!