ಪ್ರಯಾಣಿಕರ ಗಮನಕ್ಕೆ, ಮೇ-19 ರಿಂದ ಜೂ.2ರವರೆಗೆ ಕರ್ನಾಟಕ ತಲುಪುವ ಮತ್ತು ಹೊರಡುವ ರೈಲುಗಳ ಸಂಚಾರ ರದ್ದು

By Kannadaprabha News  |  First Published May 19, 2024, 11:52 AM IST

ರೈಲ್ವೆ ಕಾಮಗಾರಿ ಹಿನ್ನೆಲೆ ರಾಜ್ಯದಲ್ಲಿ ವಿವಿಧ ರೈಲುಗಳ ಸಂಚಾರ ಭಾಗಶಃ ರದ್ದಾಗಲಿವೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.


 ಬೆಂಗಳೂರು (ಮೇ.19): ರತ್ಲಾಮ್ ವಿಭಾಗದ ರಾವು ಮತ್ತು ಡಾ। ಅಂಬೇಡ್ಕರ್ ನಗರ ನಿಲ್ದಾಣಗಳ ನಡುವೆ ಜೋಡಿ ಮಾರ್ಗ ಕಾಮಗಾರಿ ಕೈಗೊಳ್ಳುವುದರಿಂದ ವಿವಿಧ ರೈಲುಗಳ ಸಂಚಾರ ಭಾಗಶಃ ರದ್ದಾಗಲಿವೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಮೇ 21 ಮತ್ತು 28ರಂದು ಯಶವಂತಪುರದಿಂದ ಹೊರಡುವ ರೈಲು (19302) ಯಶವಂತಪುರ - ಡಾ। ಅಂಬೇಡ್ಕರ್ ನಗರ ವೀಕ್ಲಿ ಎಕ್ಸ್‌ಪ್ರೆಸ್ ರೈಲು ಇಂದೋರ್-ಡಾ.ಅಂಬೇಡ್ಕರ್ ನಗರ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಡಾ.ಅಂಬೇಡ್ಕರ್ ನಗರದ ಬದಲು ಇಂದೋರ್ ಜಂಕ್ಷನ್ ನಲ್ಲಿ ಕೊನೆಗೊಳ್ಳುತ್ತದೆ.

Tap to resize

Latest Videos

ಮೇ 19 ಮತ್ತು 26ರಂದು ಡಾ। ಅಂಬೇಡ್ಕರ್ ನಗರ-ಯಶವಂತಪುರ ವೀಕ್ಲಿ ಎಕ್ಸ್‌ಪ್ರೆಸ್ ರೈಲು (19301) ಡಾ। ಅಂಬೇಡ್ಕರ್ ನಗರ ನಿಲ್ದಾಣದ ಬದಲು ಇಂದೋರ್ ನಿಲ್ದಾಣದಿಂದ ಪ್ರಾರಂಭವಾಲಿದೆ. ಡಾ। ಅಂಬೇಡ್ಕರ್ ನಗರ ಮತ್ತು ಇಂದೋರ್ ನಿಲ್ದಾಣಗಳ ನಡುವಿನ ಪ್ರಯಾಣ ರದ್ದಾಗಿದೆ.

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಲ್ಲಿ ಸುರಕ್ಷತಾ ನಿರ್ವಹಣೆ ಮತ್ತು ವಿವಿಧ ಎಂಜಿನಿಯರಿಂಗ್ ಕಾಮಗಾರಿ ಸಲುವಾಗಿ ಮೇ 31ರಂದು ಕೆಎಸ್ಆರ್ ಬೆಂಗಳೂರಿನಿಂದ ಹೊರಡುವ ರೈಲು (11302) ಕೆಎಸ್ಆರ್ ಬೆಂಗಳೂರು-ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಮುಂಬೈ ಉದ್ಯಾನ್ ಡೈಲಿ ಎಕ್ಸ್‌ಪ್ರೆಸ್ ರೈಲು ಮುಂಬೈನ ಸಿಎಸ್ಎಂಟಿ ನಿಲ್ದಾಣದ ಬದಲು ಪುಣೆಯಲ್ಲಿ ಸೇವೆ ಕೊನೆಗೊಳ್ಳಲಿದೆ.

ಜೂ.1 ಮತ್ತು 2ರಂದು ಕೆಎಸ್ಆರ್ ಬೆಂಗಳೂರಿನಿಂದ ಹೊರಡುವ ರೈಲು (11301) ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಮುಂಬೈ-ಕೆಎಸ್ಆರ್ ಬೆಂಗಳೂರು ಉದ್ಯಾನ್ ಡೈಲಿ ಎಕ್ಸ್ ಪ್ರೆಸ್ ರೈಲು ಸಿಎಸ್ಎಂಟಿ, ಮುಂಬೈ-ಪುಣೆ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ.

ಸುಬ್ರಹ್ಮಣ್ಯ-ಸಕಲೇಶಪುರ ರೈಲು ಮಾರ್ಗದಲ್ಲಿ ಪ್ರಾಕೃತಿಕ ವಿಕೋಪ ಪ್ರದೇಶಗಳಲ್ಲಿ ಮೂಲ ಸೌಕರ್ಯ ಹೆಚ್ಚಳ ಕ್ರಮ
ಸುಬ್ರಹ್ಮಣ್ಯ-ಸಕಲೇಶಪುರ ರೈಲು ಮಾರ್ಗದಲ್ಲಿ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಬಹುದಾದ ಪ್ರದೇಶಗಳಿಗೆ ಮೈಸೂರು ರೈಲ್ವೆ ವಿಭಾಗದ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ಇತ್ತೀಚೆಗೆ ಭೇಟಿ ನೀಡಿ ಪರಿಶೀಲಿಸಿದರು.

ಎಂಜಿನಿಯರಿಂಗ್, ಕಾರ್ಯಾಚರಣೆ, ಸಿಗ್ನಲ್, ಸುರಕ್ಷತೆ, ರೈಲ್ವೆ ವಿದ್ಯುದೀಕರಣ ಮತ್ತು ವಿವಿಧ ವಿಭಾಗಗಳ ಅಧಿಕಾರಿಗಳನ್ನೊಳಗೊಂಡ ತಂಡ ಸಕಲೇಶಪುರದಿಂದ ಸುಬ್ರಹ್ಮಣ್ಯ ವರೆಗಿನ 56 ಕಿ.ಮೀ ವ್ಯಾಪ್ತಿಯಲ್ಲಿರುವ ಸಂಭವನೀಯ ಭೂ ಕುಸಿತ ಪ್ರದೇಶಗಳನ್ನು ಪರಿಶೀಲಿಸಿತು. ಈ ವ್ಯಾಪ್ತಿಯಲ್ಲಿ 57 ಸುರಂಗಗಳು, 234 ಸೇತುವೆಗಳು ಇವೆ.

2018ರಲ್ಲಿ ಅತಿ ಹೆಚ್ಚು ಮಳೆಯಾದ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ಹಲವಾರು ಸವಾಲು ಎದುರಾಗಿತ್ತು. 98 ಭೂ ಕುಸಿತ ಪ್ರಕರಣಗಳು ಸಂಭವಿಸಿದ್ದವು. ಮಾರ್ಗವನ್ನು ದುರಸ್ತಿಗೊಳಿಸಿ ರೈಲು ಸಂಚಾರ ಪುನರಾರಂಭಿಸಲು 45 ದಿನಗಳ ಕಾಲಾವಕಾಶ ತೆಗೆದುಕೊಳ್ಳಲಾಗಿತ್ತು. ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಲು ಮೈಸೂರು ವಿಭಾಗ ಈ ಮಾರ್ಗಕ್ಕೆ ವಿಶೇಷ ಆದ್ಯತೆ ನೀಡಿ, 2023–24ನೇ ಸಾಲಿನಲ್ಲಿ ಮೂಲ ಸೌಕರ್ಯ ಹೆಚ್ಚಳಕ್ಕೆ ಹಲವಾರು ಕ್ರಮಗಳನ್ನು ಕೈಗೊಂಡಿದೆ.

ಕಲ್ಲು ಬೀಳುವ ಅಪಾಯವನ್ನು ತಗ್ಗಿಸಲು ಘಾಟ್ ಉದ್ದಕ್ಕೂ ಐದು ಪ್ರಮುಖ ಸ್ಥಳಗಳಲ್ಲಿ ಕಲ್ಲು ಬೀಳುವ ತಡೆಗಳನ್ನು ಅಳವಡಿಸಲಾಗಿದೆ. ಬಂಡೆ ತುಂಡರಿಸಿ ದುರ್ಬಲವಾಗಿರುವ ಐದು ಜಾಗಗಳಲ್ಲಿ ಬಂಡೆ ಬೀಳದಂತೆ ತಡೆಯಲು ಬೋಲ್ಟಿಂಗ್ ಹಾಗೂ ಬೌಲ್ಡರ್‌ ಬಲೆಯ ಸುರಕ್ಷಾ ವ್ಯವಸ್ಥೆ ಅಳವಡಿಸಲಾಗಿದೆ. ಸೇತುವೆ ಹಾನಿಯಾಗಿದ್ದ ಸ್ಥಳಗಳಲ್ಲಿ ಅವುಗಳನ್ನು ಬಲಪಡಿಸುವ ಜೊತೆಗೆ, ಅನೇಕ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮತ್ತೊಂದು ಪ್ರಮುಖವಾದ ಸೇತುವೆಗೆ ಫೌಂಡೇಷನ್ ಜಾಕೆಟಿಂಗ್ ಮಾಡುವ ಜೊತೆಗೆ ಬದಿಯಲ್ಲಿ ಕಾಂಕ್ರೀಟ್ ಚರಂಡಿ ನಿರ್ಮಿಸಿ, ಗೋಡೆಗಳನ್ನು ಬಲಪಡಿಸಲಾಗಿದೆ.

ಪುತ್ತೂರು ಪಟ್ಟಣದ ಮೂಲಕ ಮಾಣಿ– ಪುತ್ತೂರು ಹೆದ್ದಾರಿ ಸಂಪರ್ಕಿಸುವ ಹಳೆ ಸೇತುವೆಯನ್ನು ಸದೃಢಗೊಳಿಸಿದ್ದರಿಂದ ಎರಡೂ ಕಡೆಗಳಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ.

ಶಿಲ್ಪಿ ಅಗರ್ವಾಲ್ ಅವರು ಘಾಟ್ ವಿಭಾಗದಲ್ಲಿ ಕೆಲಸ ಮಾಡುವ ಸಿಬ್ಬಂದಿ ಜೊತೆ ಸಂವಾದ ನಡೆಸಿದರು. ಯಾವುದೇ ಅಹಿತಕರ ಘಟನೆ ನಡೆದಲ್ಲಿ ತಕ್ಷಣ ಹಿರಿಯ ಅಧಿಕಾರಿಗಳಿಗೆ ತಿಳಿಸುವಂತೆ ಸೂಚಿಸಿದರು.

click me!