3 ಜಿಲ್ಲೆಗಳಲ್ಲಿ ಮಂಗನ ಕಾಯಿಲೆ ತೀವ್ರ: ಚಚ್ಚುಮದ್ದು ಪಡೆದವರಿಗೂ ರೋಗ!

By Kannadaprabha News  |  First Published Apr 18, 2020, 7:56 AM IST

ಕೊರೋನಾದ್ದೇ ಆರ್ಭಟ; ಕೇಳೋರಿಲ್ಲ ಕೆಎಫ್‌ಡಿ ಸಂಕಟ!| 3 ಜಿಲ್ಲೆಗಳಲ್ಲಿ 199 ಮಂದಿಗೆ ಮಂಗನಕಾಯಿಲೆ, 6 ಮಂದಿ ಬಲಿ| ಚುಚ್ಚುಮದ್ದು ಪಡೆದವರಿಗೂ ರೋಗ: ಆತಂಕ


ಗೋಪಾಲ್‌ ಯಡಗೆರೆ

ಶಿವಮೊಗ್ಗ(ಏ.18): ಕೊರೋನಾ ಮಹಾಮಾರಿಯ ಆರ್ಭಟದ ನಡುವೆ ಪಶ್ಚಿಮಘಟ್ಟದ ತಪ್ಪಲಿನ ಜಿಲ್ಲೆಗಳನ್ನು ಸದ್ದಿಲ್ಲದೆ ಕಾಡುತ್ತಿರುವ ಕೆಎಫ್‌ಡಿ(ಮಂಗನ ಕಾಯಿಲೆ) ಸೋಂಕಿತರ ನೋವು, ಸಂಕಟ ದಟ್ಟಡವಿಯಲ್ಲೇ ಕರಗಿ ಹೋಗುತ್ತಿದೆ. 65 ವರ್ಷಗಳ ಹಿಂದೆ ಮಲೆನಾಡಿನಲ್ಲಿ ಕಾಣಿಸಿಕೊಂಡ ಈ ಮಾರಕ ರೋಗ ನೂರಾರು ಜೀವಗಳನ್ನು ಬಲಿ ತೆಗೆದುಕೊಂಡಿದ್ದರೂ ಈವರೆಗೂ ಸೂಕ್ತ ಔಷಧಿ ಕಂಡು ಹಿಡಿಯಲು ಸಾಧ್ಯವಾಗದಿರುವುದು ಜನರನ್ನು ಆತಂಕಕ್ಕೀಡು ಮಾಡಿದೆ. ಈ ವರ್ಷ ಜ.1ರಿಂದ ಈವರೆಗೆ ರಾಜ್ಯದಲ್ಲಿ 199 ಮಂದಿಗೆ ಈ ರೋಗ ಕಾಣಿಸಿಕೊಂಡಿದ್ದು, ಇವರಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ.

Latest Videos

undefined

ಕಳೆದ ವರ್ಷ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕಾರವಾರ ಜಿಲ್ಲೆಗಳ ಜೊತೆಗೆ ಉಡುಪಿ, ದಕ್ಷಿಣ ಕನ್ನಡ, ಕೊಡಗುಗಳಲ್ಲೂ ಈ ಸೋಂಕು ಸಾವು ನೋವಿಗೆ ಕಾರಣವಾಗಿತ್ತು. ಈ ವರ್ಷ ಶಿವಮೊಗ್ಗದಲ್ಲಿ ಅತಿ ಹೆಚ್ಚು ಕಾಣಿಸುತ್ತಿದ್ದರೆ, ಪಕ್ಕದ ಚಿಕ್ಕಮಗಳೂರಿನ ಎನ್‌.ಆರ್‌.ಪುರ ತಾಲೂಕು, ಉತ್ತರ ಕನ್ನಡದ ಸಿದ್ದಾಪುರ ತಾಲೂಕು, ಉಡುಪಿ ಜಿಲ್ಲೆಯ ಗಡಿ ಭಾಗದಲ್ಲಿ ಮಾತ್ರ ತನ್ನ ಅಟ್ಟಹಾಸ ಮೆರೆಯುತ್ತಿದೆ.

ಮಂಗನ ಕಾಯಿಲೆ ಹರಡದಂತೆ ಗಮನಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದ ಸಚಿವ ಈಶ್ವರಪ್ಪ

ಕಳೆದ ವರ್ಷ 27 ಸಾವು: ಕಳೆದ ವರ್ಷ ಶಿವಮೊಗ್ಗ ಜಿಲ್ಲೆಯೊಂದರಲ್ಲೇ 250ಕ್ಕೂ ಅಧಿಕ ಕೆಎಫ್‌ಡಿ ಪ್ರಕರಣಗಳು ಕಾಣಿಸಿಕೊಂಡಿದ್ದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು 18 ಪ್ರಕರಣಗಳು ಪತ್ತೆಯಾಗಿದ್ದವು. ಶಿವಮೊಗ್ಗ ಜಿಲ್ಲೆಯಲ್ಲಿ 23 ಮಂದಿ ಮೃತಪಟ್ಟರೆ, ಉತ್ತರ ಕನ್ನಡದಲ್ಲಿ 4 ಮಂದಿ ಬಲಿಯಾಗಿದ್ದರು. ಈ ವರ್ಷ ಶಿವಮೊಗ್ಗದಲ್ಲಿ ಈವರೆಗಿನ 155 ಪ್ರಕರಣಗಳಲ್ಲಿ 5 ಮಂದಿ ಮೃತಪಟ್ಟಿದ್ದಾರೆ. ಉತ್ತರ ಕನ್ನಡದಲ್ಲಿ 32 ಸೋಂಕು ಪ್ರಕರಣಗಳಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಚಿಕ್ಕಮಗಳೂರಿನಲ್ಲಿ 12 ಮಂದಿ ಕೆಎಫ್‌ಡಿಯಿಂದ ಬಳಲುತ್ತಿದ್ದಾರೆ.

ಕಳೆದ ಬಾರಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅರಳಗೋಡು ಗ್ರಾಮದಲ್ಲಿ ಈ ಕಾಯಿಲೆ ಜನರಿಗೆ ನರಕದ ಪರಿಚಯ ಮಾಡಿಕೊಟ್ಟಿದ್ದರೂ ಸರ್ಕಾರದ ಈವರೆಗಿನ ಕ್ರಮ ತೃಪ್ತಿ ನೀಡಿಲ್ಲ. ಜಿಲ್ಲೆಯಲ್ಲಿ ಕಳೆದ ವರ್ಷದವರೆಗೆ ಕೆಎಫ್‌ಡಿ ರಕ್ತ ಪರೀಕ್ಷೆ ಮಾಡುವ ಕೇಂದ್ರ ಕೂಡ ಇರಲಿಲ್ಲ. ಇಲ್ಲಿನ ಪರಮಾಣು ಕ್ರಿಮಿ ಸಂಶೋಧನಾ ಕೇಂದ್ರವನ್ನೂ ಹಲವು ವರ್ಷಗಳ ಹಿಂದೆಯೇ ಸ್ಥಳಾಂತರಿಸಲಾಗಿತ್ತು. ಕಳೆದ ವರ್ಷ ಈ ಕಾಯಿಲೆಯ ಆರ್ಭಟ ಕಂಡ ಬಳಿಕವಷ್ಟೇ ಸರ್ಕಾರ ಇಲ್ಲೇ ಕೆಎಫ್‌ಡಿ ಸೋಂಕು ಪರೀಕ್ಷೆ ನಡೆಸುವ ವ್ಯವಸ್ಥೆ ಮಾಡಿ ಉಚಿತ ಚಿಕಿತ್ಸೆ ನೀಡಿತು. ಈ ವರ್ಷ ಮುಂಜಾಗ್ರತಾ ಕ್ರಮವಾಗಿ ಸಾಕಷ್ಟುವ್ಯಾಕ್ಸಿನ್‌ ಹಾಗೂ ಡಿಎಂಪಿ ಆಯಿಲ್‌ ನೀಡಲಾಗಿದೆ. ಆದರೆ ವ್ಯಾಕ್ಸಿನ್‌ ಪಡೆದವರಿಗೂ ರೋಗ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

ಸಾಗರದಲ್ಲಿ ಮತ್ತೆರಡು ಹೊಸದಾಗಿ ಕೆಎಫ್‌ಡಿ ಪ್ರಕರಣ ಪತ್ತೆ

ಸಂಶೋಧನಾ ಕೇಂದ್ರ: ಕೆಎಫ್‌ಡಿ ಕುರಿತು ಸಂಶೋಧನಾ ಕೇಂದ್ರವೊಂದನ್ನು ತೆರೆಯಬೇಕೆಂಬ ಒತ್ತಡ ಕಳೆದ ವರ್ಷ ಆರಂಭವಾಗಿದ್ದು, ಇದುವರೆಗೆ ಎಲ್ಲಿ ಸ್ಥಾಪಿಸಬೇಕು ಎಂಬ ನಿರ್ಧಾರ ಕೈಗೊಳ್ಳಲೇ ಸಾಧ್ಯವಾಗಿಲ್ಲ. ಇದೀಗ ಸಾಗರದಲ್ಲಿ ಆರು ಎಕರೆ ಜಾಗವನ್ನು ಗುರುತಿಸಲಾಗಿದೆ.

ಕೆಎಫ್‌ಡಿ (ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌ ವೈರಸ್‌) ರೋಗಗ್ರಸ್ಥ ಮಂಗಗಳ ದೇಹದ ಮೇಲಿರುವ ಉಣ್ಣಿ ಅಥವಾ ಉಣುಗುಗಳ ಮೂಲಕ ಜಾನುವಾರುಗಳ ಮೂಲಕ ಅಥವಾ ನೇರ ಸಂಪರ್ಕದಿಂದ ಮನುಷ್ಯನಿಗೆ ಹರಡುತ್ತದೆ. ಇದು ಸಾಂಕ್ರಾಮಿಕ ರೋಗ ಅಲ್ಲ ಅನ್ನುವುದಷ್ಟೇ ನೆಮ್ಮದಿಯ ವಿಚಾರ. ಜ್ವರ, ತಲೆನೋವು, ನರದೌರ್ಬಲ್ಯ, ಮಾಂಸಖಂಡಗಳ ಸೆಳೆತ ಈ ರೋಗದ ಪ್ರಮುಖ ಲಕ್ಷಣಗಳಾಗಿವೆ.

click me!