ತಮ್ಮ ಬಿಡುವಿಲ್ಲದ ಪ್ರಚಾರದ ಮಧ್ಯೆಯೇ ‘ಕನ್ನಡಪ್ರಭ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ದೇಶಕ್ಕೆ ಮೋದಿ ಏಕೆ ಅನಿವಾರ್ಯ? ಕಾಂಗ್ರೆಸ್ ವೈಫಲ್ಯಗಳೇನು? ಕಾಂಗ್ರೆಸ್‌ನ ಅಲ್ಪಸಂಖ್ಯಾತರ ತುಷ್ಟೀಕರಣ? ಎಂಬಿತ್ಯಾದಿ ಹತ್ತಾರು ವಿಷಯಗಳ ಕುರಿತು ಪ್ರಲ್ಹಾದ್ ಜೋಶಿ ಮನಬಿಚ್ಚಿ ಮಾತನಾಡಿದ್ದಾರೆ. ಸಂದರ್ಶನದ ಪೂರ್ಣಪಾಠ ಹೀಗಿದೆ..
ಶಿವಾನಂದ ಗೊಂಬಿ
ಹುಬ್ಬಳ್ಳಿ (ಏ.30): ತೊಂಬತ್ತರ ದಶಕದಲ್ಲಿ ಈದ್ಗಾ ಮೈದಾನದ ಹೋರಾಟದಿಂದ ಮುಂಚೂಣಿಗೆ ಬಂದ ನಾಯಕರಲ್ಲಿ ಪ್ರಲ್ಹಾದ್ ಜೋಶಿ ಅವರೂ ಒಬ್ಬರು. ಕೇಂದ್ರದಲ್ಲಿ ಸಚಿವರೂ ಆಗಿರುವ ಜೋಶಿ ಅವರು ಇದೀಗ ಬಿಜೆಪಿಯ ಪ್ರಭಾವಿ ನಾಯಕರಾಗಿ ರೂಪುಗೊಂಡಿದ್ದಾರೆ. ಪ್ರಖರ ಹಿಂದುತ್ವವಾದಿ, ವಾಗ್ಮಿ ಆಗಿರುವ ಜೋಶಿ, ಸಂಸದರಾಗಿ ಈಗಾಗಲೇ ಬೌಂಡರಿ ಬಾರಿಸಿದ್ದಾರೆ. ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರದಿಂದ 5ನೇ ಬಾರಿಗೆ ಗೆಲುವು ಸಾಧಿಸುವ ಗುರಿಯೊಂದಿಗೆ ಕಣಕ್ಕಿಳಿದಿದ್ದಾರೆ. ತಮ್ಮ ಬಿಡುವಿಲ್ಲದ ಪ್ರಚಾರದ ಮಧ್ಯೆಯೇ ‘ಕನ್ನಡಪ್ರಭ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ದೇಶಕ್ಕೆ ಮೋದಿ ಏಕೆ ಅನಿವಾರ್ಯ? ಕಾಂಗ್ರೆಸ್ ವೈಫಲ್ಯಗಳೇನು? ಕಾಂಗ್ರೆಸ್‌ನ ಅಲ್ಪಸಂಖ್ಯಾತರ ತುಷ್ಟೀಕರಣ? ಎಂಬಿತ್ಯಾದಿ ಹತ್ತಾರು ವಿಷಯಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಸಂದರ್ಶನದ ಪೂರ್ಣಪಾಠ ಹೀಗಿದೆ..
*ಐದನೆಯ ಬಾರಿಗೆ ಸ್ಪರ್ಧಿಸುತ್ತಿದ್ದೀರಿ. ತಯಾರಿ, ಪ್ರಚಾರ ಹೇಗಿದೆ?
ಚುನಾವಣೆ ತಯಾರಿ ಎಂಬುದೇನೂ ಇಲ್ಲ. ನಿರಂತರ ಜನರ ಸಂಪರ್ಕ ಇಟ್ಟುಕೊಂಡಿದ್ದೇನೆ. ಪ್ರಚಾರವಂತೂ ಅತ್ಯದ್ಭುತವಾಗಿ ಸಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ 10 ವರ್ಷಗಳಲ್ಲಿ ಅಭೂತಪೂರ್ವ ಕೆಲಸಗಳಾಗಿವೆ. ಜನ ಸಂತುಷ್ಟವಾಗಿದ್ದಾರೆ. ಈ ಸಲವೂ ನಮಗೇ ಬೆಂಬಲ ಖಚಿತ.
ಗ್ಯಾರಂಟಿ, ಮೋದಿ ವೈಫಲ್ಯ ಕಾಂಗ್ರೆಸ್ ಅಸ್ತ್ರ: ಮುಖಾಮುಖಿ ಸಂದರ್ಶನದಲ್ಲಿ ಸಿಎಂ ಸಿದ್ದರಾಮಯ್ಯ
*ಹಿಂದಿನ ಚುನಾವಣೆಗಳಿಗೂ ಈಗಿನ ಚುನಾವಣೆಗೂ ಏನು ವ್ಯತ್ಯಾಸ?
ಹಿಂದೆ ಯುಪಿಎ ಸರ್ಕಾರದ ವೈಫಲ್ಯಗಳಿಂದ ಚುನಾವಣೆ ಎದುರಿಸಿದ್ದೆ. ಇದೀಗ ನನ್ನ 5ನೇ ಹಾಗೂ ಮೋದಿ ನೇತೃತ್ವದಲ್ಲಿ 3ನೇ ಚುನಾವಣೆ ಎದುರಿಸುತ್ತಿದ್ದೇನೆ. ಮೋದಿ ಅವರ ಭರವಸೆಯ ಆಡಳಿತದಿಂದ ಜನರಲ್ಲಿ ಹೊಸ ವಿಶ್ವಾಸ ಚಿಗುರಿದೆ. ಏನಾದರೂ ಹೊಸದಾಗಿ ನಡೆಯುತ್ತದೆ ಎಂಬ ವಿಶ್ವಾಸ ಜನರಲ್ಲಿದೆ. ಇದರೊಂದಿಗೆ ನನ್ನ ಕ್ಷೇತ್ರವನ್ನು ನಾನು ಕಿಂಚಿತ್ತೂ ನಿರ್ಲಕ್ಷ್ಯ ಮಾಡಿಲ್ಲ. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ನಮ್ಮ ಪಕ್ಷಕ್ಕೆ ಜನ ಆಶೀರ್ವಾದ ಮಾಡುತ್ತಾರೆ.
*ಕೇಂದ್ರ ಸಚಿವರಾಗಿ ಸಾಕಷ್ಟು ಕೆಲಸ ಮಾಡಿದ್ದೀರಿ. ಆದರೂ ಅನುಷ್ಠಾನದ ಬಗ್ಗೆ ಕೆಲವೊಂದಿಷ್ಟು ಅಪಸ್ವರ ಕೇಳಿಬರುತ್ತಿದೆ?
ಕೇಂದ್ರ ಸರ್ಕಾರ ನೇರವಾಗಿ ಯಾವ ಅನುದಾನ ಕೊಟ್ಟಿದೆಯೋ ಆ ಎಲ್ಲ ಕಾಮಗಾರಿಗಳು ಚೆನ್ನಾಗಿಯೇ ಆಗಿವೆ. ಉದಾಹರಣೆಗೆ ಹುಬ್ಬಳ್ಳಿ-ಗುತ್ತಿ ಹೆದ್ದಾರಿಯನ್ನೇ ತೆಗೆದುಕೊಳ್ಳಿ. ಹುಬ್ಬಳ್ಳಿ-ಗದಗವರೆಗೂ ಚತುಷ್ಪಥ ಮಾಡಿ ಎಂದು ಕೇಳಿಕೊಂಡಿದ್ದೆ. ಆದರೆ ಯುಪಿಎ ಸರ್ಕಾರ ಟ್ರಾಫಿಕ್ ಡೆನ್ಸಿಟಿ ನಿಯಮದಂತೆ ಇಲ್ಲ ಎಂದಿತ್ತು. ಮುಂದೆ 2014ರಲ್ಲೂ ಅಧಿಕಾರಿಗಳು ಇದನ್ನೇ ಹೇಳಿದ್ದರು. ಆದರೆ ಆಗ ಸಚಿವ ನಿತಿನ್ ಗಡ್ಕರಿ ಅವರು ನಿಯಮವನ್ನೇ ಬದಲಿಸುವಂತೆ ಸೂಚಿಸಿ ಹೆದ್ದಾರಿ ಆಗುವಂತೆ ನೋಡಿಕೊಂಡರು. ಬರೀ ಗದಗವರೆಗೆ ಅಲ್ಲ ಗುತ್ತಿವರೆಗೂ ಗುಣಮಟ್ಟದ ಹೆದ್ದಾರಿಯಾಗಿದೆ. ಇನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಬೇಕಾದ ಕೆಲವೊಂದಿಷ್ಟು ಕಾಮಗಾರಿಗಳ ಬಗ್ಗೆ ಅಪಸ್ವರ ಇದೆ. ಆದರೆ ಅವುಗಳನ್ನು ಸಮರ್ಪಕವಾಗಿ ಆಗುವಂತೆ ನೋಡಿಕೊಳ್ಳಲಾಗುತ್ತಿದೆ.
*ಮಹದಾಯಿ ಡಿಪಿಆರ್‌ಗೂ ಅನುಮತಿ ಕೊಟ್ಟಿದ್ದೀರಿ. ಕೆಲಸ ಮಾತ್ರ ಶುರುವಾಗಿಲ್ಲ?
ಮಹದಾಯಿ ಯೋಜನೆ ಬಗ್ಗೆ ಬಿಜೆಪಿಗೆ ಸಂಪೂರ್ಣ ಬದ್ಧತೆ ಇದೆ. ಕೆಲವೊಂದಿಷ್ಟು ಸೂಕ್ಷ್ಮ ವಿಷಯಗಳಿರುತ್ತವೆ. ಅರಣ್ಯ ಇಲಾಖೆಯಿಂದ ಕ್ಲಿಯರೆನ್ಸ್ ಸಿಕ್ಕಿಲ್ಲ. ಅದಕ್ಕೆ ಅದರದೇ ಆದ ನಿಯಮಗಳಿವೆ. ಟೈಗರ್ ಕಾರಿಡಾರ್ ಬರುತ್ತದೆ. ಹೀಗಾಗಿ ವನ್ಯಜೀವಿ ಮಂಡಳಿ ಮುಂದಿದೆ. ಇದಕ್ಕೆ ಸಂಬಂಧಿಸಿ ಕೆಲವೊಂದಿಷ್ಟು ವರದಿಯನ್ನು ರಾಜ್ಯ ಸರ್ಕಾರದಿಂದ ಕೇಳಲಾಗಿತ್ತು. ಕೊಡಲು ಅದು ವಿಳಂಬ ಮಾಡಿತ್ತು. ಆದರೆ ಈ ಯೋಜನೆ ಜಾರಿಗೊಳಿಸುವುದು ನಮ್ಮ ಕರ್ತವ್ಯ ಹಾಗೂ ಜವಾಬ್ದಾರಿ. ಆ ಕೆಲಸ ಮಾಡಿಯೇ ತೀರುತ್ತೇವೆ.
*ಮಹದಾಯಿಗಾಗಿ ಇಷ್ಟೆಲ್ಲ ಶ್ರಮಿಸಿದರೂ ಜಾರಿಯಾಗದಿರುವುದಕ್ಕೆ ನೀವೇ ಕಾರಣ ಎಂದು ಕಾಂಗ್ರೆಸ್ ಆರೋಪಿಸುತ್ತಿದೆಯಲ್ಲ?
ಮಹದಾಯಿ ಯೋಜನೆ ಬಗ್ಗೆ ಕಾಂಗ್ರೆಸ್‌ಗೆ ಬದ್ಧತೆ ಇಲ್ಲ. ಗೋವಾದಲ್ಲಿ ಸೋನಿಯಾ ಗಾಂಧಿ ಹನಿ ನೀರೂ ಕೊಡಲ್ಲ ಎಂದಿದ್ದರು. ಕುಡಿಯುವ ನೀರಿನ ಯೋಜನೆಗೆ ಟ್ರಿಬ್ಯುನಲ್ ಬೇಡ ಎಂದು ಮನವಿ ಮಾಡಿದ್ದೆವು. ಆದರೆ ಯುಪಿಎ ಸರ್ಕಾರ ಟ್ರಿಬ್ಯುನಲ್ ರಚಿಸಿತು. ಅದಕ್ಕೆ ಎರಡೂವರೆ ವರ್ಷದ ಬಳಿಕ ನ್ಯಾಯಾಧೀಶರನ್ನು ನೇಮಿಸಿತ್ತು. ಆದರೆ ಸಿಬ್ಬಂದಿ, ಕಚೇರಿ ಕೊಟ್ಟಿರಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆಯೇ ಸಿಬ್ಬಂದಿ, ಕಚೇರಿ ನೀಡಿದೆವು. ತೀರ್ಪು ಬಂದ ಮೇಲೆ ಅಧಿಸೂಚನೆಯನ್ನೂ ಹೊರಡಿಸಿದೆವು. ಪರಿಸರ ಇಲಾಖೆಯ ವಿನಾಯಿತಿಯೂ ಸಿಕ್ಕಿತು. ಡಿಪಿಆರ್ ಕೂಡ ಓಕೆ ಆಗಿದೆ. ಇದೀಗ ಅರಣ್ಯ ಇಲಾಖೆ ಅನುಮತಿಯೊಂದು ಬಾಕಿಯುಳಿದಿದೆ. ನಮ್ಮ ಕೈಯಲ್ಲಿದ್ದರೆ ಕೊಡಿಸುತ್ತಿರಲಿಲ್ಲವೇ? ಯೋಜನೆಗಾಗಿ ಹೋರಾಟ ಮಾಡಿದವರು ನಾವು. ಕಾಲುವೆ ಕಟ್ಟಿದ್ದು ನಾವು. ಕಾಂಗ್ರೆಸ್ ನಾವು ಕಟ್ಟಿದ್ದ ಕಾಲುವೆಗೆ ತಡೆಗೋಡೆ ಕಟ್ಟಿತು. ಅವರಿಗೆ ಯೋಜನೆ ಜಾರಿಯಾಗುವುದು ಬೇಕಾಗಿಲ್ಲ. ಆರೋಪ ಮಾಡುತ್ತಿರುವುದೇಕೆ ಎಂಬುದೆಲ್ಲವೂ ಜನತೆಗೆ ಗೊತ್ತಿದೆ. ಯೋಜನೆ ಬಿಜೆಪಿಯಿಂದ ಮಾತ್ರ ಜಾರಿಯಾಗುತ್ತದೆ ಎಂಬುದರ ಅರಿವೂ ಜನರಿಗಿದೆ. ಇದನ್ನು ಜಾರಿಗೊಳಿಸುವ ಮೂಲಕ ನಮ್ಮ ಬದ್ಧತೆ ಪ್ರದರ್ಶಿಸುತ್ತೇವೆ.
*ನೇಹಾ ಹಿರೇಮಠಳ ಹತ್ಯೆ ಪ್ರಕರಣದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ?
ಹಿಂದೂ ಯುವತಿ ಹತ್ಯೆಯಾದರೆ, ಅನ್ಯಾಯವಾದರೆ ನಾವು ಹೋರಾಟ ಮಾಡಬಾರದಾ? ಅನ್ಯಾಯದ ವಿರುದ್ಧ ಮಾಡಿದ ಹೋರಾಟವಿದು. ರಾಜಕಾರಣ ನಾವು ಮಾಡಿಲ್ಲ. ಇಂಥ ವಿಷಯದಲ್ಲಿ ರಾಜಕಾರಣ ಮಾಡುವ ಅಗತ್ಯವೂ ಬಿಜೆಪಿಗಿಲ್ಲ. ಹಾಗೆ ನೋಡಿದರೆ ಕಾಂಗ್ರೆಸ್ಸಿಗರೇ ರಾಜಕಾರಣ ಮಾಡುತ್ತಿದ್ದಾರೆ. ಹತ್ಯೆಯಾದ ತಕ್ಷಣವೇ ಮುಖ್ಯಮಂತ್ರಿ, ಗೃಹ ಮಂತ್ರಿಯ ಅಸಡ್ಡೆ ಹಾಗೂ ಉಡಾಫೆಯ ಹೇಳಿಕೆ ನೀಡಿದರು. ಅವರದೇ ಪಕ್ಷದ ಪಾಲಿಕೆ ಸದಸ್ಯನ ಮನೆಯಲ್ಲೇ ಘಟನೆಯಾದರೂ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ಮಾಡಿದರು. ಆರೋಪಿ ಜೈಲಿನಲ್ಲಿದ್ದಾಗಲೂ ಆತನ ಮೊಬೈಲ್‌ನಲ್ಲಿದ್ದ ವಿಡಿಯೋಗಳೆಲ್ಲ ರಿಲೀಸ್ ಆಗುತ್ತವೆ. ಇದನ್ನೆಲ್ಲ ನಾನು ಹೇಳಿದ್ದಲ್ಲ. ನೇಹಾಳ ತಂದೆಯೇ ಮಾಧ್ಯಮಗಳ ಸಮ್ಮುಖದಲ್ಲೇ ನನಗೆ ಹೇಳಿದ್ದು ಅಲ್ವಾ? ಮತ್ಹೇಗೆ ಇದರಲ್ಲಿ ರಾಜಕಾರಣ ಬರುತ್ತದೆ?
*ನೇಹಾ ಹಿರೇಮಠ ಹತ್ಯೆ ಕೇಸ್‌ನಿಂದ ಬಿಜೆಪಿಗೆ ಲಾಭವಾಗಿದೆಯೇ?
ನಾವು ಅದರಿಂದ ಲಾಭ ಪಡೆಯಬೇಕೆಂದು ಹೋರಾಟ ಮಾಡಿಲ್ಲ. ಕಾಂಗ್ರೆಸ್ಸಿಗರ ಹೇಳಿಕೆಗಳೆಲ್ಲ ಮುಸ್ಲಿಮರ ಪರವಾಗಿಯೇ ಇರುತ್ತವೆ. ಇದು ಹಿಂದೂ ವಿರೋಧಿ ಸರ್ಕಾರ. ಭಯೋತ್ಪಾದಕರನ್ನು ಬ್ರದರ್ಸ್ ಎಂದು ಕರೆಯುತ್ತಾರೆ. ವಿಧಾನಸೌಧದಲ್ಲೇ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದರೂ ಹಾಗೆ ಅಂದಿಲ್ಲ ಎಂದು ಹೇಳುತ್ತಾರೆ. ಡಿ.ಜೆ. ಹಳ್ಳಿ, ಕೆ.ಜೆ. ಹಳ್ಳಿ ಪ್ರಕರಣ ಹಾಗೂ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ನಡೆದ ಗಲಾಟೆಯಲ್ಲಿನ ಆರೋಪಿಗಳಿಗೆಲ್ಲ ಇವರು ಬಂದ ಮೇಲೆ ಬೇಲ್ ಸಿಗುತ್ತದೆ. ಕಾಂಗ್ರೆಸ್ ಅಲ್ಪಸಂಖ್ಯಾತರ ತುಷ್ಟೀಕರಣದಲ್ಲಿ ತೊಡಗಿದೆ. ಅವರೇ ರಾಜಕಾರಣ ಮಾಡುತ್ತಿರುವುದು. ನಮ್ಮ ಹೋರಾಟದಿಂದ ಲಾಭದ ಬಗ್ಗೆ ಯೋಚನೆಯನ್ನೇ ಮಾಡಿಲ್ಲ. ಒಂದು ವೇಳೆ ಲಾಸ್ ಆದರೂ ಸ್ವೀಕರಿಸಲು ಸಿದ್ಧ. ಇಂಥ ಅನ್ಯಾಯವಾದಾಗ ಮಾತ್ರ ನಮ್ಮ ಹೋರಾಟ ನಿರಂತರ.
*ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಚೊಂಬು ಪ್ರದರ್ಶಿಸುತ್ತಿದೆಯಲ್ಲ?
ಇವರು 75 ವರ್ಷದಲ್ಲಿ 60 ವರ್ಷ ಆಡಳಿತ ನಡೆಸಿದ್ದಾರೆ. ಜನರಿಗೆ ಚೊಂಬು ಕೊಟ್ಟು ಅಡ್ಡಾಡಿಸುತ್ತಿದ್ದರು. ಈಗ ನಾವು ಅಧಿಕಾರಕ್ಕೆ ಬಂದ ಮೇಲೆ 12 ಕೋಟಿಗೂ ಅಧಿಕ ಟಾಯ್ಲೆಟ್ ಕಟ್ಟಿದ್ದೇವೆ. ಜನ ಚೊಂಬು ಹಿಡಿಯುವುದನ್ನು ಬಿಟ್ಟಿದ್ದಾರೆ. ಆದರೆ ಇವರು ಚೊಂಬು ಹಿಡಿದುಕೊಂಡು ಅಡ್ಡಾಡುತ್ತಿದ್ದಾರೆ. ಅಡ್ಡಾಡಲಿ ಬಿಡಿ, ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿಲ್ಲ. ಚುನಾವಣೆಯಲ್ಲಿ ಜನರೇ ಇವರಿಗೆ ಚೊಂಬು ಕೊಡುತ್ತಾರೆ.
*ಕಾಂಗ್ರೆಸ್ ಆರೋಪಿಸುವಂತೆ ಬರ ಹಾಗೂ ತೆರಿಗೆ ಸೇರಿ ಅನುದಾನದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆಯೇ?
ಯುಪಿಎ ಸರ್ಕಾರಕ್ಕಿಂತ ಜಾಸ್ತಿ ಅನುದಾನ, ತೆರಿಗೆ ಹಂಚಿಕೆ ಮಾಡಿದ್ದೇವೆ. ಇನ್ನು ಬರದ ವಿಷಯದಲ್ಲಿ ಪರಿಹಾರ ವಿತರಿಸಲು ಅದಕ್ಕೊಂದು ಪ್ರೊಸೆಸ್ ಇರುತ್ತದೆ. ಇದು ಸಹಜ ಪ್ರಕ್ರಿಯೆ. ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಕೇಂದ್ರದ ಹಣ ಕಾಯದೇ ಪ್ರತಿ ಹೆಕ್ಟೇರ್‌ಗೆ ₹20-25 ಸಾವಿರ ಕೊಟ್ಟಿರಲಿಲ್ಲವೇ? ಇವರು ಬರೀ ₹2 ಸಾವಿರ ಕೊಟ್ಟು ರೈತರಿಗೆ ಅಪಮಾನ ಮಾಡುತ್ತಿಲ್ಲವೇ? ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ತಮ್ಮ ತಪ್ಪು ಮುಚ್ಚಿಕೊಳ್ಳಲು ಕೇಂದ್ರದತ್ತ ಬೊಟ್ಟು ತೋರಿಸುವ ಕೆಲಸ ಮಾಡುತ್ತಿದೆ ಅಷ್ಟೇ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕ ಅಷ್ಟೇ ಅಲ್ಲ, ಯಾವ ರಾಜ್ಯಕ್ಕೂ ಅನ್ಯಾಯ ಮಾಡಿಲ್ಲ. ಮಾಡುವುದೂ ಇಲ್ಲ.
*ತಾವೆಲ್ಲ ಸಾಕಷ್ಟು ಕೆಲಸ ಮಾಡಿದ್ದಾಗಿ ದೊಡ್ಡ ಪಟ್ಟಿಯನ್ನೇ ನೀಡುತ್ತೀರಿ. ಆದರೆ ಬರೀ ಪ್ರಧಾನಿ ಮೋದಿ ಹೆಸರೇಳಿ ಮತ ಯಾಚಿಸುತ್ತೀರಲ್ಲ?
ಇದು ಕಾಂಗ್ರೆಸ್ಸಿಗರ ಸಾಮಾನ್ಯ ಆರೋಪ. ಮೋದಿ ಹೆಸರಲ್ಲಿ ಮತ ಕೇಳಲು ನಮಗೆ ಹೆಮ್ಮೆ. ಮೋದಿ ಅವರು ದೇಶದ ಸಮರ್ಥ ನಾಯಕ. ದೇಶವನ್ನು ವಿಶ್ವಗುರು ಪಟ್ಟಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ನಾವು ಅವರ ಹೆಸರನ್ನೂ ಹೇಳುತ್ತೇವೆ. ನಮ್ಮ ಸರ್ಕಾರದ ಸಾಧನೆಯನ್ನೂ ಹೇಳುತ್ತೇವೆ. ನಾವೇನು ಅವರಿಗೆ ರಾಹುಲ್ ಗಾಂಧಿ ಹೆಸರು ಹೇಳಿ ಮತ ಕೇಳಬೇಡಿ ಅಂತ ಹೇಳಿಲ್ಲ. ರಾಹುಲ್ ಹೆಸರು ಹೇಳಲು ಅವರಿಗೆ ಸಂಕೋಚ. ಅದಕ್ಕೆ ನಾವೇನು ಮಾಡೋಣ. ಅವರಿಗೆ ಪ್ರಧಾನಿ ಅಭ್ಯರ್ಥಿ ಯಾರು ಎಂಬುದನ್ನು ಹೇಳಲು ಈವರೆಗೂ ಆಗಿಲ್ಲ. ಪ್ರಧಾನಿ ಅಭ್ಯರ್ಥಿ ಬಗ್ಗೆ ಪ್ರಶ್ನೆ ಬರುತ್ತಿದ್ದಂತೆ ಅವರ ಇಂಡಿಯಾ ಕೂಟವೇ ಮುರಿದು ಬಿದ್ದಿಲ್ಲವೇ?
ನನಗೆ ಚಿಕ್ಕಬಳ್ಳಾಪುರ ಟಿಕೆಟ್ ಕೊಡಿಸಿದ್ದು ಅಂಬಾನಿ ಅಲ್ಲ: ಮುಖಾಮುಖಿ ಸಂದರ್ಶನದಲ್ಲಿ ಡಾ.ಕೆ.ಸುಧಾಕರ್
*ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರ ಬೀಳುತ್ತದೆ ಎಂದು ಬಿಜೆಪಿ ನಾಯಕರು ಪದೇ ಪದೇ ಹೇಳುತ್ತಿದ್ದಾರೆ?
ನೋ ನೋ,. ರಾಜ್ಯದ ಚುನಾವಣೆ ಬೇರೆ, ಕೇಂದ್ರದ ಚುನಾವಣೆ ಬೇರೆ. ನಾವು ಅವರ ಸರ್ಕಾರಕ್ಕೆ ಡಿಸ್ಟರ್ಬ್ ಮಾಡಲು ಹೋಗಲ್ಲ. ಇದು ನಾನು ಕರ್ನಾಟಕ ಜನತೆಗೆ ನೀಡುತ್ತಿರುವ ಸ್ಪಷ್ಟ ಭರವಸೆ. ಆದರೆ ಅವರಲ್ಲಿನ ಆಂತರಿಕ ಜಗಳದಿಂದ ಏನು ಬೇಕಾದರೂ ಆಗಬಹುದು. ಅವರ ಸರ್ಕಾರ ಬೀಳಬಾರದು ಎಂದು ಅಪೇಕ್ಷೆ ಪಡುತ್ತೇವೆ.