ಏ.26ರಂದು ನಡೆದಿದ್ದ ಚುನಾವಣೆ ವೇಳೆ ಹಿಂಸಾಚಾರ ಸಂಭವಿಸಿದ್ದ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಸೋಮವಾರ ಮರುಮತದಾನ ನೀರಸವಾಗಿ ನಡೆಯಿತು. ಮತಗಟ್ಟೆ 146ರಲ್ಲಿ ಪೊಲೀಸ್ ಸರ್ಪಗಾವಲಿನಲ್ಲಿ ಕೇವಲ 71 ಮತದಾನ ಮಾಡಿದ್ದಾರೆ.
ಹನೂರು (ಏ.30): ಏ.26ರಂದು ನಡೆದಿದ್ದ ಚುನಾವಣೆ ವೇಳೆ ಹಿಂಸಾಚಾರ ಸಂಭವಿಸಿದ್ದ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಸೋಮವಾರ ಮರುಮತದಾನ ನೀರಸವಾಗಿ ನಡೆಯಿತು. ಮತಗಟ್ಟೆ 146ರಲ್ಲಿ ಪೊಲೀಸ್ ಸರ್ಪಗಾವಲಿನಲ್ಲಿ ಕೇವಲ 71 ಮತದಾನ ಮಾಡಿದ್ದಾರೆ. 528 ಮತದಾರರ ಪೈಕಿ ಮೆಂದರೆ ಗ್ರಾಮದ 58, ಇಂಡಿಗನತ್ತ ಗ್ರಾಮದ 13 ಮಂದಿ ಸೇರಿದಂತೆ 71 ಮತದಾನ ಮಾಡಿದ್ದು, ಇವರಲ್ಲಿ 39 ಮಹಿಳೆಯರು, 32 ಪುರುಷರಿದ್ದಾರೆ. ಶೇ. 13.44 ಮತದಾನವಾಗಿದೆ. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತ ಕ್ರಮವಾಗಿ ಚಾಮರಾಜನಗರ ಎಎಸ್ಸಿ ಉದೇಶ್ ಹಾಗೂ ಸಹಾಯಕ ಚುನಾವಣಾ ಅಧಿಕಾರಿ ಮಲ್ಲಿಕಾರ್ಜುನ್ ಮತ್ತು ಕೊಳ್ಳೇಗಾಲ ಡಿವೈಎಸ್ಪಿ ಧರ್ಮೇಂದರ್ ಇ ಹಾಗೂ ನೂರಾರು ಪೊಲೀಸರನ್ನು ನಿಯೋಜನೆ ಮಾಡುವ ಮೂಲಕ ಬಾರಿ ಭದ್ರತೆಯೊಂದಿಗೆ ಮರು ಮತದಾನ ಜರುಗಿತು.
ಮುಕ್ತ ಮನಸ್ಸಿನಿಂದ ಮತ ಚಲಾಯಿಸದ ಮತದಾರರು: ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣಾ ಸರಹದ್ದಿನ ಇಂಡಿಗನತ್ತ ಗ್ರಾಮದಲ್ಲಿ ನಡೆದ ಕಹಿ ಘಟನೆಯಿಂದ ಇಡೀ ಗ್ರಾಮವೇ ಭಯದ ವಾತಾವರಣದಿಂದ ತತ್ತರಿಸಿ ಹೋಗಿದೆ. ಜಿಲ್ಲಾಡಳಿತ ಮರು ಮತದಾನ ಮಾಡಿಸುವಲ್ಲಿ ಯಶಸ್ಸಿಯಾಗಿದೆ. ಆದರೆ, ಇಲ್ಲಿನ ಜನ ಮುಕ್ತ ಮನಸ್ಸಿನಿಂದ ಬಂದು ಮತ ಚಲಾಯಿಸಿಲ್ಲ. ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ನೀಡಿದ ಭರವಗಳು ಇನ್ನೂ ಬಾಕಿ ಇವೆ. ಕುಗ್ರಾಮ ಇಂಡಿಗನತ್ತ ಗ್ರಾಮದಲ್ಲಿ ಏ.26ರಂದು ನಡೆದ ಗಲಭೆಗೆ ಮೂಲ ಸೌಲಭ್ಯ ಮತ್ತು ನಿರುದ್ಯೋಗ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಮತದಾನ ಬಹಿಷ್ಕರಿಸಿದ್ದರು. ಮೆಂದಾರೆ ಗ್ರಾಮದ ಆದಿವಾಸಿ ಜನಾಂಗದವರನ್ನು ಇಂಡಿಗನತ್ತ ಗ್ರಾಮಕ್ಕೆಮತದಾನ ಮಾಡುವಂತೆ ಪೊಲೀಸ್ ಅಧಿಕಾರಿಯೊಬ್ಬರು ಪ್ರೇರೇಪಿಸಿ ಕರೆತಂದಿದ್ದೇ ಘಟನೆಗೆ ಕಾರಣವೆನ್ನಲಾಗಿದೆ.
ಕೋಳಿ ಮಾಂಸಕ್ಕಿಂತಲೂ ಬೀನ್ಸ್ ದುಬಾರಿ: ಜನರ ನಿತ್ಯದ ಜೀವನದಲ್ಲಿ ತಳಮಳ
ಭಯದ ವಾತಾವರಣ: ಇಂಡಿಗನತ್ತ ಗ್ರಾಮದಲ್ಲಿ ಸೋಮವಾರ ಮರುಮತದಾನಕ್ಕೆ ಚುನಾವಣೆ ಅಧಿಕಾರಿಗಳು ಆದೇಶ ನೀಡಿದ ಹಿನ್ನೆಲೆ ಗ್ರಾಮದಲ್ಲಿ ಜನರಿಗಿಂತ ಎಲ್ಲಿ ನೋಡಿದರೂ ಪೊಲೀಸರೇ ಹೆಚ್ಚಾಗಿದ್ದರು. ಇಲ್ಲಿನ ಜನತೆ ಮತದಾನ ಮಾಡಬೇಕೆ ಇಲ್ಲವೋ ಎಂಬ ಗೊಂದಲ ಹಾಗೂ ಭಯದ ವಾತಾವರಣ ಕಂಡುಬಂದಿತು. ಇಂಡಿಗನತ್ತ ಗ್ರಾಮದ ಹಿರಿಯ ಮುಖಂಡ ಪುಟ್ಟ ತಂಬಡಿ ಅವರು ಮರುಮತದಾನದಲ್ಲಿ ಭಾಗವಹಿಸಿ ಮಾತನಾಡಿ, ಚುನಾವಣೆ ಮುನ್ನ ಎರಡು ಗ್ರಾಮಗಳ ಮುಖಂಡರು ಸೇರಿ ತೀರ್ಮಾನಿಸಿದಂತೆ ಮತದಾನ ಬಹಿಷ್ಕರಿಸಲಾಗಿತ್ತು. ಇದನ್ನು ಉಲ್ಲಂಘಿಸಿ ಏ.26ರಂದು ಮೆಂದರೆ ಗ್ರಾಮದ ಕೆಲವರು ಮತದಾನ ಮಾಡಿದ್ದರಿಂದ ಗ್ರಾಮದಲ್ಲಿದ್ದ ಕೆಲವು ಯುವಕರು ಪ್ರಶ್ನೆ ಮಾಡಲಾಗಿ ವಿಕೋಪಕ್ಕೆ ತಿರುಗಿ ಘಟನೆ ಜರುಗಿದೆ. ನನಗೆ ಹುಷಾರಿಲ್ಲದ ಕಾರಣ ನಾನು ಮನೆಯಲ್ಲಿ ಇದ್ದೆ ಮತ್ತೊಂದೆಡೆ ನಿರುದ್ಯೋಗದಿಂದ ಬೇಸತ್ತಿದ್ದ ಯುವಕರಿಗೆ ಅರಣ್ಯ ಇಲಾಖೆ ಕಿರುಕುಳ ಜೊತೆಗೆ ಜೀಪ್ ಚಾಲಕರ ದಿನಗೂಲಿಗೆ ಕಡಿವಾಣ ಹಾಕಿರುವುದೇ ಇಂತಹ ಘಟನೆಗೆ ಕಾರಣವಾಗಿದೆ ಎಂದು ತಿಳಿಸಿದರು.