ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಜನಪ್ರತಿನಿಧಿ ನ್ಯಾಯಾಲಯಕ್ಕೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಅವರ ತಂದೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ.
ಬೆಂಗಳೂರು (ಏ.30): ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಜನಪ್ರತಿನಿಧಿ ನ್ಯಾಯಾಲಯಕ್ಕೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಅವರ ತಂದೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ. ಈ ಬಗ್ಗೆ ರೇವಣ್ಣ ಅವರು ಸೋಮವಾರ ಬೆಂಗಳೂರಿನಲ್ಲಿ ವಕೀಲರ ಜತೆ ಸಮಾಲೋಚನೆ ನಡೆಸಿದ್ದು, ಮಂಗಳವಾರ ಅವರು ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಬಹುದು ಎನ್ನಲಾಗಿದೆ. ಇನ್ನು ಜಾಮೀನು ಇತ್ಯರ್ಥ ಬಳಿಕ ಎಸ್‌ಐಟಿ ಮುಂದೆ ಹಾಜರಾಗಲು ವಿದೇಶದಲ್ಲಿರುವ ಸಂಸದ ಪ್ರಜ್ವಲ್ ರೇವಣ್ಣ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಂಸದನ ಅಧಿಕಾರ ಬಳಸಿ ಪರಾರಿ: ಲೋಕಸಭಾ ಚುನಾವಣೆ ಮತದಾನ ಪ್ರಕ್ರಿಯೆ ಮುಗಿದ ಬಳಿಕ ಶುಕ್ರವಾರ ಸಂಜೆ ದಿಢೀರ್ ಬೆಂಗಳೂರಿಗೆ ದೌಡಾಯಿಸಿದ ಹಾಸನ ಸಂಸದ ಪ್ರಜ್ವಲ್, ಬಳಿಕ ತಡರಾತ್ರಿವರೆಗೆ ಪರಿಚಿತರ ಮನೆಯಲ್ಲಿದ್ದರು. ನಂತರ ತಮ್ಮ ಸಂಸದರ ರಾಜತಾಂತ್ರಿಕ ಅಧಿಕಾರ ಬಳಸಿ ಜರ್ಮನಿ ವೀಸಾ ಪಡೆದು ಅವರು ತೆರಳಿದ್ದಾರೆ ಎಂದು ಮೂಲಗಳು ಹೇಳಿವೆ.
ಜೆಡಿಎಸ್‌ನಿಂದ ಪ್ರಜ್ವಲ್ ರೇವಣ್ಣ ಉಚ್ಚಾಟನೆಗೆ ನಿರ್ಧಾರ: ಎಚ್.ಡಿ.ಕುಮಾರಸ್ವಾಮಿ
ಎಸ್‌ಐಟಿ ಕರೆದರೆ ಪ್ರಜ್ವಲ್ ಬರ್ತಾರೆ: ಸಂಸದ ಮತ್ತು ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿ ಬಂದಿರುವ ಲೈಂಗಿಕ ದೌರ್ಜನ್ಯ ಪ್ರಕರಣವು ನಾಲ್ಕೈದು ವರ್ಷದ ಹಿಂದಿನ ಕಥೆ. ಅದನ್ನು ತಂದು ಈಗ ದೂರು ನೀಡಲಾಗಿದೆ. ಇದೆಲ್ಲವೂ ರಾಜಕೀಯ ಪ್ರೇರಿತ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.
ಪದ್ಮನಾಭನಗರದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದು ಮೊದಲೇ ನಿರ್ಧಾರವಾಗಿತ್ತು. ಅವರಿಗೆ ಪ್ರಕರಣವನ್ನು ಎಸ್‌ಐಟಿಗೆ ವಹಿಸುವುದಾಗಲೀ, ಎಫ್‌ಐಆರ್ ದಾಖಲಿಸುವುದಾಗಲೀ ಗೊತ್ತಿರಲಿಲ್ಲ. ರಾಜ್ಯ ಸರ್ಕಾರ ಎಸ್‌ಐಟಿ ತನಿಖೆ ನಡೆಸುತ್ತಿದ್ದು, ಕಾನೂನು ರೀತಿ ತನಿಖೆ ಮಾಡಲಿ. ಎಸ್‌ಐಟಿಯವರು ಕರೆದರೆ ಪ್ರಜ್ವಲ್ ಹಾಜರಾಗುತ್ತಾರೆ. ನಾಲ್ಕೈದು ವರ್ಷದ ಹಿಂದಿನ ಕಥೆಯನ್ನು ತಂದು ಈಗ ದೂರು ನೀಡಲಾಗಿದೆ. ಇದೆಲ್ಲವೂ ರಾಜಕೀಯ ಪ್ರೇರಿತ ಎಂದು ತಿಳಿಸಿದರು.
ಕೋಳಿ ಮಾಂಸಕ್ಕಿಂತಲೂ ಬೀನ್ಸ್ ದುಬಾರಿ: ಜನರ ನಿತ್ಯದ ಜೀವನದಲ್ಲಿ ತಳಮಳ
ಕಳೆದ 40 ವರ್ಷಗಳಿಂದಲೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ವಿರುದ್ಧ ಸಿಓಡಿ, ಲೋಕಾಯುಕ್ತ ಸೇರಿದಂತೆ ಹಲವು ತನಿಖೆಗಳು ನಡೆದಿದ್ದು, ತನಿಖೆಗಳನ್ನು ನಾವು ಎದುರಿಸಿದ್ದೇವೆ. ಪ್ರಜ್ವಲ್ ಪ್ರಕರಣವನ್ನು ಕಾನೂನು ಹೋರಾಟ ಮೂಲಕ ಎದುರಿಸುತ್ತೇವೆ. ತಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ನಡೆದಿದ್ದು, ಇದಕ್ಕೆಲ್ಲಾ ಹೆದರುವುದಿಲ್ಲ. ಪೆನ್‌ಡ್ರೈವ್ ಪ್ರಕರಣದ ಬಗ್ಗೆ ಎಸ್‌ಐಟಿ ತನಿಖೆ ನಡೆಸುತ್ತಿದ್ದು, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಈ ವಿಚಾರವನ್ನು ದೇವೇಗೌಡರ ಬಳಿ ತಾವು ಪ್ರಸ್ತಾಪಿಸಿಲ್ಲ ಎಂದು ಸ್ಪಷ್ಟಪಡಿಸಿದರು.