ಲಾಕ್‌ಡೌನ್‌ ಎಫೆಕ್ಟ್‌: ಮಾರಾಟಕ್ಕಿವೆ ರಾಜ್ಯದ 10,000 ಹೋಟೆಲ್‌ಗಳು..!

By Kannadaprabha NewsFirst Published Jul 1, 2021, 7:13 AM IST
Highlights

* ರಾಜ್ಯದಲ್ಲಿವೆ 70000 ನೋಂದಾಯಿತ ಹೋಟೆಲ್‌, ರೆಸ್ಟೋರೆಂಟ್‌ಗಳು
* ಕೋವಿಡ್‌, ಲಾಕ್‌ಡೌನ್‌ನಿಂದ ಉದ್ಯಮಕ್ಕೆ ಭಾರೀ ನಷ್ಟ
* ಬೆಂಗ್ಳೂರಲ್ಲೇ 2500ಕ್ಕೂ ಹೆಚ್ಚು ಹೋಟೆಲ್‌ಗಳು ಮಾರಾಟಕ್ಕೆ ಲಭ್ಯ
 

ಲಿಂಗರಾಜು ಕೋರಾ

ಬೆಂಗಳೂರು(ಜು.01): ಕೋವಿಡ್‌ ಲಾಕ್‌ಡೌನ್‌ನಿಂದ ಆರ್ಥಿಕ ನಷ್ಟಕ್ಕೆ ತತ್ತರಿಸಿರುವ ರಾಜ್ಯದ ಅಂದಾಜು 10000 ಹೋಟೆಲ್‌ಗಳ ಮಾಲೀಕರು, ತಮ್ಮ ಹೋಟೆಲ್‌ಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ ಎಂಬ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.

ಆಶ್ಚರ್ಯವಾದರೂ ಇದು ಸತ್ಯ. ಕೋವಿಡ್‌ ಹಾಗೂ ಕೋವಿಡ್‌ ನಿಯಂತ್ರಣಕ್ಕೆ ಸರ್ಕಾರ ಜಾರಿಗೊಳಿಸಿದ್ದ ವಿವಿಧ ಹಂತಗಳ ಲಾಕ್‌ಡೌನ್‌ನಿಂದ ರಾಜ್ಯದ ಹೋಟೆಲ್‌ ಉದ್ಯಮ ಭಾರೀ ನಷ್ಟ ಅನುಭವಿಸಿದೆ. ಈ ನಷ್ಟ ತಡೆದುಕೊಳ್ಳುವ ಶಕ್ತಿ ಇಲ್ಲದ ಶೇ.10 ರಿಂದ ಶೇ.15ರಷ್ಟು ಮಾಲೀಕರು ತನ್ನ ಹೋಟೆಲ್‌ಗಳನ್ನು ವಿಧಿ ಇಲ್ಲದೆ ಮಾರಾಟಕ್ಕಿಟ್ಟಿದ್ದಾರೆ.

ರಾಜ್ಯ ಹೋಟೆಲ್‌ ಮಾಲೀಕರ ಸಂಘದ ಮಾಹಿತಿ ಅನ್ವಯ, ರಾಜಧಾನಿ ಬೆಂಗಳೂರಿನ 25 ಸಾವಿರ ಸೇರಿದಂತೆ ರಾಜ್ಯದಲ್ಲಿ ಒಟ್ಟಾರೆ 70 ಸಾವಿರಷ್ಟು ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ನೋಂದಾಯಿಸಿಕೊಂಡಿವೆ. ಇವುಗಳ ಪೈಕಿ ಸುಮಾರು 9500ರಿಂದ 10000 ಹೋಟೆಲ್‌ಗಳನ್ನು ಅವುಗಳ ಮಾಲೀಕರು ಕೋವಿಡ್‌ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಮಾರಾಟಕ್ಕೆ ಇಟ್ಟಿದ್ದಾರೆ.

ಇವುಗಳಲ್ಲಿ ಬಹುತೇಕ ಸಣ್ಣಪುಟ್ಟ ಹಾಗೂ ಮಧ್ಯಮ ಕ್ರಮಾಂಕ ಶ್ರೇಣಿಯ ಹೋಟೆಲ್‌ಗಳು. ಒಂದಕ್ಕಿಂತ ಹೆಚ್ಚು ಹೋಟೆಲ್‌ಗಳನ್ನು ಹೊಂದಿರುವ ಕೆಲ ಮಾಲೀಕರು ಕೂಡ ನಷ್ಟನಿಭಾಯಿಸಲು ತಮ್ಮ ಒಂದೋ, ಎರಡೋ ಹೋಟೆಲ್‌ಗಳನ್ನು ಮಾರಾಟಕ್ಕಿಟ್ಟಿದ್ದಾರೆ. ನಷ್ಟ ಇಡೀ ಉದ್ಯಮವೇ ಅನುಭವಿಸಿದರೂ ಆರ್ಥಿಕವಾಗಿ ಸದೃಢವಾಗಿದ್ದ ಕೆಲ ಪ್ರತಿಷ್ಠಿತ ಹೋಟೆಲ್‌ಗಳ ಮಾಲೀಕರು ಮಾತ್ರ ಹಾಗೂ ಹೀಗೂ ತಡೆದುಕೊಂಡಿದ್ದಾರೆ. ಉಳಿದವರು ಹೋಟೆಲ್‌ ಆರಂಭಿಸಲಾಗದೆ ಇಂದಿಗೂ ಬಾಗಿಲು ಹಾಕಿದ್ದಾರೆ. ಇನ್ನು ಕೆಲವರು ಮಾರಾಟಕ್ಕಿಟ್ಟಿದ್ದಾರೆ ಎನ್ನುತ್ತಾರೆ ಸಂಘದ ಪ್ರತಿನಿಧಿಗಳು.

ರಾಜ್ಯದ 62 ಸ್ಟಾರ್‌ ಹೋಟೆಲ್‌ಗೆ ಕೈಗಾರಿಕೆ ಸ್ಥಾನ: ಸಚಿವ ಯೋಗೇಶ್ವರ್‌

ಬೆಂಗಳೂರಲ್ಲೇ 2500 ಹೋಟೆಲ್‌ ಮಾರಾಟಕ್ಕಿವೆ:

ತಮಿಳುನಾಡಿನಲ್ಲಿ ಶೇ.30ರಷ್ಟು ಹೋಟೆಲ್‌ಗಳನ್ನು ಮಾಲೀಕರು ಮಾರಾಟಕ್ಕಿಟ್ಟಿದ್ದಾರೆಂದು ನೋಡಿದ್ದೇನೆ. ಆದರೆ, ರಾಜ್ಯದಲ್ಲಿ ಅಷ್ಟುದೊಡ್ಡ ಮಟ್ಟದ ಅಲ್ಲದಿದ್ದರೂ ಶೇ.10ರಷ್ಟು ಹೋಟೆಲ್‌ಗಳ ಮಾಲೀಕರು ನಷ್ಟ ತಡೆಯಲಾಗದೆ ಮಾರಾಟಕ್ಕಿಳಿದಿದ್ದಾರೆ. ಬೆಂಗಳೂರು ನಗರ ಹೋಟೆಲ್‌ ಮಾಲೀಕರ ಸಂಘದ ಕಾರ್ಯದರ್ಶಿ ಪಿ.ಸಿ.ರಾವ್‌ ಪ್ರಕಾರ, ರಾಜಧಾನಿಯದ ನೊಂದಾಯಿತ 24 ಸಾವಿರಕ್ಕಿಂತಲೂ ಹೆಚ್ಚು ಹೋಟೆಲ್‌, ರೆಸ್ಟೋರೆಂಟ್‌ಗಳ ಪೈಕಿ 2500 ಹೋಟೆಲ್‌ಗಳನ್ನು ಮಾಲೀಕರು ಮಾರಾಟಕ್ಕೆ ಇಟ್ಟಿದ್ದಾರೆ. ಸುಮಾರು 6000 ಹೋಟೆಲ್‌ಗಳನ್ನು ಇದುವರೆಗೂ ಬಾಗಿಲು ಹಾಕಲಾಗಿತ್ತು. ಇತ್ತೀಚೆಗೆ ಅವರು ಸಾಲ ಸೋಲ ಮಾಡಿ ಮತ್ತೆ ಬಾಗಿಲು ತೆರೆದಿದ್ದಾರೆ. ಇಂತಹವರು ಸಂಘಕ್ಕೆ ಮಾಹಿತಿ ನೀಡಿ ತಮ್ಮ ಹೋಟೆಲ್‌ ಖರೀಸುವವರಿದ್ದರೆ ತಿಳಿಸಲು ಮನವಿ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಲಾಕ್‌ಡೌನ್‌ ಹೊಡೆತ:

ಎರಡೂ ಲಾಕ್‌ಡೌನ್‌ ವೇಳೆ ಹೋಟೆಲ್‌ಗಳಲ್ಲಿ ಪಾರ್ಸೆಲ್‌ ನೀಡಲೂ ಕೂಡ ಅವಕಾಶ ನೀಡದಿರುವುದು ಬಹಳ ಹೊಡೆತ ಬಿತ್ತು. ಒಂದೆಡೆ 1 ವರ್ಷದಿದಲೂ ಗ್ರಾಹಕರ ಕೊರತೆ. ಇದರ ನಡುವೆ ಲಾಕ್‌ಡೌನ್‌ನಿಂದ ತಿಂಗಳುಗಳಗಟ್ಟಲೆ ಒಂದು ರು. ವ್ಯಾಪಾರ ಇಲ್ಲದಿದ್ದರೂ ಲಕ್ಷಾಂತರ ರು. ಬಾಡಿಗೆ, ಬಾಣಸಿಗರು, ಸಹಾಯಕರು ಸೇರಿ ಕಾರ್ಮಿಕರಿಗೆ ಕನಿಷ್ಠ ಅರ್ಧದಷ್ಟು ವೇತನವನ್ನಾದರೂ ನೀಡಬೇಕಾಯಿತು.

ಒಂದೆಡೆ ಕಾರ್ಮಿಕರನ್ನು ಕೆಲಸದಿಂದ ಕೈಬಿಟ್ಟರೆ ಮತ್ತೆ ಹೊಸಬರನ್ನು ತರುವುದು ಕಷ್ಟ. ಮುಂದುವರೆಸಿದರೆ ವೇತನ ನೀಡಲೇಬೇಕಾದ ಸಂಕಷ್ಟ. ಹೋಟೆಲ್‌ ಉದ್ಯಮಗಳ ಮಾಲೀಕರು ಲಾಕ್‌ಡೌನ್‌ ಅವಧಿಯಲ್ಲಿ ಕೋಟ್ಯಾಂತರ ರು. ನಷ್ಟ ಅನುಭವಿಸಿದ್ದಾರೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸರ್ಕಾರ ಮುಂದೆ 3ನೇ ಅಲೆ ವೇಳೆ ಏನಾದರೂ ಲಾಕ್‌ಡೌನ್‌ ಮಾಡುವ ಸಮಯ ಬಂದರೆ ಬ್ಯಾಲೆನ್ಸ್‌ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು ಎನ್ನುತ್ತಾರೆ ರಾವ್‌.

ಹೋಟೆಲ್‌ಗಳು ಲೀಸ್‌ಗೂ ಲಭ್ಯ

ನಷ್ಟ ತಡೆಯಾಗದೆ ಹೋಟೆಲ್‌ಗಳನ್ನು ಮಾರಾಟಕ್ಕಿಟ್ಟಿದ್ದರೂ ಅದನ್ನು ಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿ ಗುತ್ತಿಗೆ ಆಧಾರದಲ್ಲೂ ಬೇರೆಯವರಿಗೆ ಹೋಟೆಲ್‌ಗಳನ್ನು ನೀಡಲು ಹೊಟೇಲ್‌ ಮಾಲೀಕರು ಮುಂದಾಗಿದ್ದಾರೆ.
ಇನ್ನು, ಆರ್ಥಿಕವಾಗಿ ಸ್ವಲ್ಪ ಸದೃಢವಾಗಿರುವ ಕೆಲ ಮಾಲೀಕರು ಹೋಟೆಲ್‌ ಮಾರಾಟದ ನಿರ್ಧಾರಕ್ಕೆ ಬರದಿದ್ದರೂ ಸದ್ಯ ಆಗುತ್ತಿರುವ ನಷ್ಟದಿಂದ ಹೊರಬರಲು ಒಂದೆರಡು ವರ್ಷಗಳ ಕಾಲ ಬೇರೆಯವರಿಗೆ ಗುತ್ತಿಗೆ ನೀಡಲು ಮುಂದಾಗಿದ್ದಾರೆ. ಈ ಸಂಬಂಧ ತಮ್ಮ ಹೋಟೆಲ್‌ಗಳ ಮುಂದೆ ಬಹಿರಂಗ ಪ್ರಕಟಣೆ, ಜಾಹೀರಾತುಗಳನ್ನೂ ನೀಡುತ್ತಿರುವುದು ಕಂಡುಬರುತ್ತಿದೆ.

ಈ ಸಂಬಂಧ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಕೆ.ಆರ್‌.ಪುರದ ವೈ.ಎನ್‌. ಹೋಟೆಲ್‌ ಮಾಲೀಕ ಶ್ರೀನಿವಾಸ್‌ ಅವರು, ಕೋವಿಡ್‌ ಲಾಕ್‌ಡೌನ್‌ನಿಂದ ಹೋಟೆಲ್‌ ಉದ್ಯಮ ತೀವ್ರ ನಷ್ಟಕ್ಕೆ ತುತ್ತಾಗಿದ್ದು, ಮಾಲೀಕರು ಇದರಿಂದ ಹೊರಬರಲಾಗದೆ ಪರಿತಪಿಸುತ್ತಿದ್ದಾರೆ. ಇದರಲ್ಲಿ ನಾನು ಕೂಡ ಒಬ್ಬನಾಗಿದ್ದು ನಷ್ಟದಿಂದ ಸಾವರಿಸಿಕೊಳ್ಳಲು ಸದ್ಯದ ಮಟ್ಟಿಗೆ ನನ್ನ ಹೋಟೆಲ್‌ ಅನ್ನು ಗುತ್ತಿಗೆ ನೀಡಲು ಮುಂದಾಗಿದ್ದೇನೆ ಎಂದು ತಿಳಿಸಿದರು.
 

click me!