ರಾಹುಲ್, ಮಯಾಂಕ್, ವೇದಾಗೆ ಒಲಿದ ಏಕಲವ್ಯ ಪ್ರಶಸ್ತಿ

By Kannadaprabha NewsFirst Published Nov 2, 2020, 8:51 AM IST
Highlights

ಕರ್ನಾಟಕ ರಾಜ್ಯ ಸರ್ಕಾರ ಕ್ರೀಡಾ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಟೀಂ ಇಂಡಿಯಾ ಕ್ರಿಕೆಟಿಗರಾದ ಕೆ.ಎಲ್ ರಾಹುಲ್, ಮಯಾಂಕ್ ಅಗರ್‌ವಾಲ್ ಮಹಿಳಾ ಕ್ರಿಕೆಟ್ ಆಟಗಾರ್ತಿ ವೇಧಾ ಕೃಷ್ಣಮೂರ್ತಿ ಸೇರಿದಂತೆ 31 ಕ್ರೀಡಾ ಸಾಧಕರಿಗೆ ಏಕಲವ್ಯ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಬೆಂಗಳೂರು(ನ.02): ಟೀಂ ಇಂಡಿಯಾದ ತಾರಾ ಆಟಗಾರರಾಗಿ ಗುರುತಿಸಿಕೊಂಡಿರುವ ಕರ್ನಾಟಕದ ಕ್ರಿಕೆಟಿಗರಾದ ಕೆ.ಎಲ್‌. ರಾಹುಲ್‌, ಮಯಾಂಕ್‌ ಅಗರ್‌ವಾಲ್‌ ಹಾಗೂ ಮಹಿಳಾ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಸೇರಿದಂತೆ 64 ಕ್ರೀಡಾ ಸಾಧಕರು ಹಾಗೂ 5 ಸಂಸ್ಥೆಗಳಿಗೆ ಕರ್ನಾಟಕ ರಾಜ್ಯ ಸರ್ಕಾರ ಸೋಮವಾರ ಪ್ರಶಸ್ತಿ ನೀಡಿ ಗೌರವಿಸಲಿದೆ.

ವಿಧಾನಸೌಧದ ಬಾಂಕ್ವೆಟ್‌ ಹಾಲ್‌ನಲ್ಲಿ ಸೋಮವಾರ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಸಿ.ಟಿ. ರವಿ ಅವರು ಭಾನುವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವಿವಿಧ ಕಾರಣಗಳಿಂದಾಗಿ 2017, 2018 ಹಾಗೂ 2019 ರವರೆಗೆ ವಿತರಿಸದೇ ಬಾಕಿಯಿದ್ದ ಏಕಲವ್ಯ, ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾ ರತ್ನ ಹಾಗೂ ಕ್ರೀಡಾ ಪೋಷಕ ಪ್ರಶಸ್ತಿಗಳನ್ನು ರಾಜ್ಯ ಸರ್ಕಾರ ಭಾನುವಾರ ಪ್ರಕಟಿಸಿದೆ. ವಿವಿಧ ಕ್ರೀಡಾ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದ 31 ಕ್ರೀಡಾಪಟುಗಳಿಗೆ ಏಕಲವ್ಯ, 6 ಕ್ರೀಡಾಳುಗಳಿಗೆ ಜೀವಮಾನ ಸಾಧನೆ, 27 ಮಂದಿಗೆ ಕರ್ನಾಟಕ ಕ್ರೀಡಾರತ್ನ ಹಾಗೂ ತುಮಕೂರಿನ ಸಿದ್ಧಗಂಗಾ ಮಠ ಸೇರಿದಂತೆ 5 ಸಂಸ್ಥೆಗಳಿಗೆ ಕ್ರೀಡಾಪೋಷಕ ಪ್ರಶಸ್ತಿ ಲಭಿಸಿದೆ.

ಏಕಲವ್ಯ ಪ್ರಶಸ್ತಿ 2 ಲಕ್ಷ ರುಪಾಯಿ ನಗದು ಮತ್ತು ಕಂಚಿನ ಪ್ರತಿಮೆ. ಜೀವಮಾನ ಸಾಧನೆ ಪ್ರಶಸ್ತಿ 1.5 ಲಕ್ಷ ರುಪಾಯಿ ನಗದು ಮತ್ತು ಫಲಕ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ 1 ಲಕ್ಷ ರುಪಾಯಿ ನಗದು, ಕ್ರೀಡಾ ಪೋಷಕ ಪ್ರಶಸ್ತಿ 5 ಲಕ್ಷ ರುಪಾಯಿ ನಗದು ಬಹುಮಾನ ನೀಡಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಕಂಬಳದ ಬೋಲ್ಟ್‌ಗೆ ಕ್ರೀಡಾ ರತ್ನ:

ಕಂಬಳ ಗದ್ದೆಯ ಉಸೇನ್‌ ಬೋಲ್ಟ್ ಎಂದೇ ಹೆಸರಾಗಿರುವ ದ.ಕ. ಜಿಲ್ಲೆಯ ಅಶ್ವತ್ಥಪುರ ಶ್ರೀನಿವಾಸ ಗೌಡಗೆ 2017ನೇ ಸಾಲಿನ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಪ್ರಕಟವಾಗಿದೆ. ಫೆ.1ರಂದು ಐಕಳದಲ್ಲಿ ನಡೆದ ಕಂಬಳದಲ್ಲಿ 142.50 ಮೀಟರ್‌ ದೂರವನ್ನು 13.62 ಸೆ.ಗಳಲ್ಲಿ ಮತ್ತು ಫೆ.16ರಂದು ವೇಣೂರಿನಲ್ಲಿ ನಡೆದ ಕಂಬಳದಲ್ಲಿ 146 ಮೀಟರ್‌ ದೂರವನ್ನು 13.68 ಸೆ.ಗಳಲ್ಲಿ ಕೋಣಗಳೊಂದಿಗೆ ಓಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದರು. ಆ ಬಳಿಕ ಶ್ರೀನಿವಾಸ್‌ ಗೌಡರನ್ನು ಕಂಬಳಗದ್ದೆಯ ಉಸೇನ್‌ ಬೋಲ್ಟ್ ಎಂದು ಕರೆಯಲಾಗುತ್ತಿದೆ.

ಟೀಂ ಇಂಡಿಯಾ ಕ್ರಿಕೆಟಿಗರಾದ ಕೆ ಎಲ್ ರಾಹುಲ್. ಮಯಾಂಕ್ ಅಗರ್‌ವಾಲ್‌ಗೆ ಏಕಲವ್ಯ ಪ್ರಶಸ್ತಿ?

ಪ್ರಶಸ್ತಿಗಳ ಪುರಸ್ಕೃತರ ವಿವರ:

ಏಕಲವ್ಯ ಪ್ರಶಸ್ತಿ

2017: ರೀನಾ ಜಾರ್ಜ್‍- ಅಥ್ಲೆಟಿಕ್ಸ್‌, ಮಿಥುಲಾ- ಬ್ಯಾಡ್ಮಿಂಟನ್‌, ಅವಿನಾಶ್‌ ಮಣಿ- ಈಜು, ಅರ್ಜುನ್‌ ಹಲಕುರ್ಕಿ- ಕುಸ್ತಿ, ಅನಿಲ್‌ಕುಮಾರ್‌- ಬಾಸ್ಕೆಟ್‌ ಬಾಲ್‌, ಉಷಾರಾಣಿ- ಕಬಡ್ಡಿ, ಖುಷಿ- ಟೇಬಲ್‌ ಟೆನಿಸ್‌, ಪೊನ್ನಮ್ಮ- ಹಾಕಿ, ವಿನಾಯಕ್‌ ರೋಖಡೆ- ವಾಲಿಬಾಲ್‌, ದೀಪಾ- ರೋಯಿಂಗ್‌, ರಾಜು ಅಡಿವೆಪ್ಪಾ ಭಾಟಿ- ಸೈಕ್ಲಿಂಗ್‌, ವರ್ಷಾ- ಬಿಲಿಯರ್ಡ್ಸ್/ಸ್ನೂಕರ್‌, ತೇಜಸ್‌- ಶೂಟಿಂಗ್‌, ಶೇಖರ್‌ ವೀರಸ್ವಾಮಿ- ಪ್ಯಾರಾ ಟೆನಿಸ್‌.

2018: ವಿಜಯಕುಮಾರಿ- ಅಥ್ಲೆಟಿಕ್ಸ್‌, ಬಾಂಧವ್ಯ- ಬಾಸ್ಕೆಟ್‌ ಬಾಲ್‌, ಫೌವಾದ್‌ ಮಿರ್ಜಾ- ಈಕ್ವೆಸ್ಟ್ರಿಯನ್‌, ನಿಕ್ಕಿನ್‌ ತಿಮ್ಮಯ್ಯ- ಹಾಕಿ, ಮೇಘಾ ಗೂಗಾಡ್‌- ಸೈಕ್ಲಿಂಗ್‌ , ಶಕೀನಾ ಖಾತೂನ್‌- ಪ್ಯಾರಾ ಪವರ್‌ ಲಿಫ್ಟಿಂಗ್‌, ಗೀತಾ ದಾನಪ್ಪಗೊಳ್‌- ಜುಡೋ, ಶ್ರೀಹರಿ ನಟರಾಜ್‌- ಈಜು, ಕೆ.ಎಲ್‌.ರಾಹುಲ್‌- ಕ್ರಿಕೆಟ್‌.

2019: ಅಭಿನಯ ಶೆಟ್ಟಿ- ಅಥ್ಲೆಟಿಕ್ಸ್‌, ಮಯಾಂಕ್‌ ಅಗರ್‌ವಾಲ್‌- ಕ್ರಿಕೆಟ್‌, ವೇದಾ ಕೃಷ್ಣಮೂರ್ತಿ- ಕ್ರಿಕೆಟ್‌, ವೆಂಕಪ್ಪ ಕೆಂಗಲಗುತ್ತಿ- ಸೈಕ್ಲಿಂಗ್‌, ಪುಲಿಂದ ಲೋಕೇಶ್‌ ತಿಮ್ಮಣ್ಣ- ಹಾಕಿ, ಖುಷಿ ದಿನೇಶ್‌- ಈಜು, ಪುನೀತ್‌ ನಂದಕುಮಾರ್‌- ಪ್ಯಾರಾ ಈಜು, ಅಭಿಷೇಕ್‌ ಎನ್‌. ಶೆಟ್ಟಿ- ಅಥ್ಲೆಟಿಕ್ಸ್‌.

ಜೀವಮಾನ ಸಾಧನೆ ಪ್ರಶಸ್ತಿ

2017: ಎಂ.ಫೆಡ್ರಿಕ್ಸ್‌- ಹಾಕಿ, ಡಾ.ಪಟೇಲ್‌ ಮೊಹಮದ್‌ ಇಲಿಯಾಸ್‌- ವಾಲಿಬಾಲ್‌.

2018: ಕರುಂಬಯ್ಯ- ಹಾಕಿ, ಆರ್‌. ಮಂಜುನಾಥ್‌- ಕಬಡ್ಡಿ.

2019: ಶಾಂತಾ ರಂಗಸ್ವಾಮಿ- ಕ್ರಿಕೆಟ್‌, ಸಂಜೀವ್‌ ಆರ್‌. ಕನಕ- ಖೋ ಖೋ.

ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ

2017: ವೀಣಾ- ಖೋ ಖೋ, ಕೌಸಲ್ಯ- ಕಬಡ್ಡಿ, ಜಯಲಕ್ಷ್ಮೇ - ಬಾಲ್‌ ಬ್ಯಾಡ್ಮಿಂಟನ್‌, ಅನುಶ್ರೀ- ಕುಸ್ತಿ, ರಂಜಿತ- ಥ್ರೋ ಬಾಲ್‌, ಭೀಮಪ್ಪ ಹಡಪದ- ಮಲ್ಲಕಂಬ, ಮಹೇಶ್‌ ಎರೆಮನಿ- ಅಟ್ಯಾ ಪಾಟ್ಯಾ, ಚಂದ್ರಶೇಖರ ಎಚ್‌. ಕಲ್ಲಹೊಲದ- ಗುಂಡು ಎತ್ತುವುದು, ಗೋಪಾಲಕೃಷ್ಣ ಪ್ರಭು- ಕಂಬಳ, ಶ್ರೀನಿವಾಸಗೌಡ- ಕಂಬಳ, ಮಣಿಕಂದನ್‌- ಪ್ಯಾರಾ ಕ್ಲೈಂಬಿಂಗ್‌.

2018: ಸಂಪತ್‌ ನಾಗಪ್ಪ ಯರಗಟ್ಟಿ- ಅಟ್ಯಾ ಪಟ್ಯಾ, ಲಾವಣ್ಯ- ಬಾಲ್‌ ಬ್ಯಾಡ್ಮಿಂಟನ್‌, ಯಮನಪ್ಪ ಎಂ.ಕಲ್ಲೋಳಿ- ಮಲ್ಲಕಂಬ, ಶಿವಕುಮಾರ್‌- ಖೋ ಖೋ, ಕಿರಣಕುಮಾರ್‌- ಟೆನ್ನಿಕ್ವಾಯ್ಟ್, ಮಲ್ಲಪ್ಪಗೌಡ ಪಾಟೀಲ್‌- ಕುಸ್ತಿ, ಸುರೇಶ್‌ ಶೆಟ್ಟಿ- ಕಂಬಳ.

2019: ಅನಿತಾ ಬಿಚಗಟ್ಟಿ- ಅಟ್ಯಾ ಪಟ್ಯಾ, ಪಲ್ಲವಿ- ಬಾಲ್‌ ಬ್ಯಾಡ್ಮಿಂಟನ್‌, ಸುದರ್ಶನ್‌- ಖೋ ಖೋ, ರಕ್ಷಿತ್‌- ಕಬಡ್ಡಿ, ಅನುಪಮ ಎಚ್‌. ಕೆರಕಲಮಟ್ಟಿ- ಮಲ್ಲಕಂಬ, ಪ್ರವೀಣ್‌- ಕಂಬಳ, ಮಂಜುನಾಥ್‌- ಥ್ರೋಬಾಲ್‌, ಸತೀಶ್‌ ಪಡತಾರೆ- ಕುಸ್ತಿ, ಅನಿಶಾ ಮಣೆಗಾರ್‌- ಟೆನ್ನಿಕ್ವಾಯ್‌್ಟ.

ಕ್ರೀಡಾ ಪೋಷಕ ಪ್ರಶಸ್ತಿ

2018-19: ಸ್ವರ್ಣ ಫುಟ್ಬಾಲ್‌ ಅಭಿವೃದ್ಧಿ ಸಂಸ್ಥೆ (ಮಂಡ್ಯ), ವಿ.ಆರ್‌. ದೇಶಪಾಂಡೆ ಮೆಮೋರಿಯಲ್‌ ಟ್ರಸ್ಟ್‌ (ಹಳಿಯಾಳ).

2019-20: ಮಂಗಳೂರು ವಿಶ್ವವಿದ್ಯಾಲಯ

2020-21: ಸಿದ್ಧಗಂಗಾ ಮಠ ಸಂಸ್ಥೆ (ತುಮಕೂರು), ಮಾಣಿಕಪ್ರಭು ಸ್ಪೋರ್ಟ್ಸ್ ಅಕಾಡೆಮಿ (ಬೀದರ್‌).
 

click me!