ಮಂಗಳವಾರ ಭಾರತ ತಂಡ ಪ್ರಕಟಗೊಂಡಿದ್ದು, ರಿಂಕು ಮೀಸಲು ಆಟಗಾರರ ಪಟ್ಟಿಯಲ್ಲಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ರಿಂಕು ತಂದೆ, ‘ರಿಂಕು ಮುಖ್ಯ ತಂಡಕ್ಕೆ ಆಯ್ಕೆಯಾಗುವ ಭರವಸೆ ಇತ್ತು. ಆದರೆ ಸುದ್ದಿ ನೋಡಿ ಆಘಾತವಾಯಿತು. ರಿಂಕುರ ಹೃದಯವೂ ಒಡೆದು ಹೋಗಿದೆ. ಆದರೆ ಮೀಸಲು ಆಟಗಾರನಾಗಿ ತಂಡದ ಜೊತೆಗಿರುವುದಕ್ಕೆ ಸಮಾಧಾನವಿದೆ’ ಎಂದು ತಿಳಿಸಿದ್ದಾರೆ.
ನವದೆಹಲಿ(ಮೇ.03): ಐಸಿಸಿ ಟಿ20 ವಿಶ್ವಕಪ್‌ನ ಭಾರತ ತಂಡಕ್ಕೆ ಯುವ ಬ್ಯಾಟರ್ ರಿಂಕು ಸಿಂಗ್ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದ ಅವರ ತಂದೆ ಖಾನ್‌ಚಂದ್ರ ಸಿಂಗ್, ‘ರಿಂಕು ಆಯ್ಕೆಯಾದರೆ ಸಂಭ್ರಮಿಸಲು ಪಟಾಕಿ ಹಾಗೂ ಸ್ವೀಟ್ ತಂದು ಕಾಯುತ್ತಿದ್ದೆವು’ ಎಂದು ತಿಳಿಸಿದ್ದಾರೆ.
ಮಂಗಳವಾರ ಭಾರತ ತಂಡ ಪ್ರಕಟಗೊಂಡಿದ್ದು, ರಿಂಕು ಮೀಸಲು ಆಟಗಾರರ ಪಟ್ಟಿಯಲ್ಲಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ರಿಂಕು ತಂದೆ, ‘ರಿಂಕು ಮುಖ್ಯ ತಂಡಕ್ಕೆ ಆಯ್ಕೆಯಾಗುವ ಭರವಸೆ ಇತ್ತು. ಆದರೆ ಸುದ್ದಿ ನೋಡಿ ಆಘಾತವಾಯಿತು. ರಿಂಕುರ ಹೃದಯವೂ ಒಡೆದು ಹೋಗಿದೆ. ಆದರೆ ಮೀಸಲು ಆಟಗಾರನಾಗಿ ತಂಡದ ಜೊತೆಗಿರುವುದಕ್ಕೆ ಸಮಾಧಾನವಿದೆ’ ಎಂದು ತಿಳಿಸಿದ್ದಾರೆ.
IPL 2024 ವಾಂಖೇಡೆ ಮೈದಾನದಲ್ಲಿಂದು ಮುಂಬೈ-ಕೆಕೆಆರ್ ಹೈವೋಲ್ಟೇಜ್ ಫೈಟ್
ರಿಂಕು ಕೈಬಿಟ್ಟು ದುಬೆಗೆ ಅವಕಾಶ ಕೊಟ್ಟಿದ್ದೇಕೆ?
ತಜ್ಞ ಫಿನಿಶರ್ ರಿಂಕು ಸಿಂಗ್‌ರನ್ನು 15 ಸದಸ್ಯರ ತಂಡಕ್ಕೆ ಆಯ್ಕೆ ಮಾಡದ್ದಕ್ಕೆ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ರಿಂಕು ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದರೂ ಅವರ ಬದಲು ಈ ಐಪಿಎಲ್‌ನಲ್ಲಿ ಉತ್ತಮ ಆಟ ಪ್ರದರ್ಶಿಸುತ್ತಿರುವ ಶಿವಂ ದುಬೆಯನ್ನು ಆಯ್ಕೆ ಮಾಡಲಾಗಿದೆ. ರಿಂಕು ಅವಕಾಶದಿಂದ ವಂಚಿತರಾಗಲು, ಐಪಿಎಲ್‌ನ ‘ಇಂಪ್ಯಾಕ್ಟ್ ಆಟಗಾರ’ ನಿಯಮವೇ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗಿದೆ.
ಈ ನಿಯಮದಿಂದಾಗಿ ಕೆಕೆಆರ್ ತಂಡ ರಿಂಕುರನ್ನು ತಜ್ಞ ಫಿನಿಶರ್ ಆಗಿ ಬಳಸಿಕೊಳ್ಳುತ್ತಿದ್ದು, ಅವರಿಗೆ ಮೇಲ್ಕ್ರಮಾಂಕದಲ್ಲಿ ಅವಕಾಶವನ್ನೇ ನೀಡುತ್ತಿಲ್ಲ. ಈ ಐಪಿಎಲ್‌ನಲ್ಲಿ ಅವರು 8 ಇನ್ನಿಂಗ್ಸಲ್ಲಿ ಎದುರಿಸಿರುವುದು ಕೇವಲ 82 ಎಸೆತ. ಇದೇ ವೇಳೆ 9 ಇನ್ನಿಂಗ್ಸಲ್ಲಿ 203 ಎಸೆತ ಎದುರಿಸಿರುವ ದುಬೆ, ಅಬ್ಬರದ ಆಟವಾಡಿ ಆಯ್ಕೆ ರೇಸ್‌ನಲ್ಲಿ ಗೆದ್ದಿದ್ದಾರೆ. ವಿಂಡೀಸ್‌ನ ನಿಧಾನಗತಿಯ ಪಿಚ್‌ಗಳಲ್ಲಿ ದುಬೆ ಬೌಲಿಂಗ್‌ನಲ್ಲೂ ನೆರವಾಗಬಲ್ಲರು ಎನ್ನುವುದೂ ಅವರ ಆಯ್ಕೆಗೆ ಕಾರಣವಿರಬಹುದು.
ಭಾರತ ತಂಡದಿಂದ ಕೆ ಎಲ್ ರಾಹಲ್ ಕೈಬಿಟ್ಟಿದ್ದೇಕೆ? ಕೊನೆಗೂ ಮೌನ ಮುರಿದ ಅಜಿತ್ ಅಗರ್ಕರ್, ರೋಹಿತ್ ಶರ್ಮಾ
2024ರ ಟಿ20 ವಿಶ್ವಕಪ್‌ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಯಜುವೇಂದ್ರ ಚಹಲ್, ಅರ್ಶ್‌ದೀಪ್ ಸಿಂಗ್, ಜಸ್‌ಪ್ರೀತ್ ಬೂಮ್ರಾ, ಮೊಹಮದ್ ಸಿರಾಜ್.
ಮೀಸಲು ಆಟಗಾರರು: ಶುಭ್‌ಮನ್ ಗಿಲ್, ರಿಂಕು ಸಿಂಗ್, ಆವೇಶ್ ಖಾನ್, ಖಲೀಲ್ ಅಹ್ಮದ್.
ದಿವಂಗತ ಸೈಮಂಡ್ಸ್ ಮಕ್ಕಳಿಂದ ಆಸೀಸ್ ವಿಶ್ವಕಪ್ ತಂಡ ಪ್ರಕಟ!
ಮೆಲ್ಬರ್ನ್: ಟಿ20 ವಿಶ್ವಕಪ್‌ಗೆ ಆಸ್ಟ್ರೇಲಿಯಾ ತಂಡವನ್ನು 2007ರಲ್ಲಿ ವಿಂಡೀಸ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರು, 2022ರಲ್ಲಿ ಕಾರು ಅಪಘಾತದಲ್ಲಿ ನಿಧನರಾದ ಖ್ಯಾತ ಆಲ್ರೌಂಡರ್ ಆ್ಯಂಡ್ರೂ ಸೈಮಂಡ್ಸ್‌ರ ಮಕ್ಕಳಿಂದ ಪ್ರಕಟಗೊಳಿಸಲಾಯಿತು.
ಪಾಂಟಿಂಗ್, ಹೇಡನ್, ಮೆಗ್ರಾಥ್, ಮೈಕ್ ಹಸ್ಸಿ, ಗಿಲ್‌ಕ್ರಿಸ್ಟ್, ಮೈಕಲ್ ಕ್ಲಾರ್ಕ್, ಸ್ಟುವರ್ಟ್ ಕ್ಲಾರ್ಕ್‌ರ ಜೊತೆ ಸೈಮಂಡ್ಸ್‌ರ ಮಗ, ಮಗಳು ಆಟಗಾರರ ಹೆಸರನ್ನು ಘೋಷಿಸಿದರು. 2022ರ ವಿಶ್ವಕಪ್ ತಂಡದಲ್ಲಿದ್ದ 12 ಆಟಗಾರರು ಸ್ಥಾನ ಉಳಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಅಬ್ಬರಿಸುತ್ತಿರುವ ಜೇಕ್ ಫ್ರೇಸರ್‌ಗೆ ಸ್ಥಾನ ಸಿಕ್ಕಿಲ್ಲ.
ತಂಡ: ಟ್ರ್ಯಾವಿಸ್ ಹೆಡ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್ (ನಾಯಕ), ಜೋಶ್ ಇಂಗ್ಲಿಸ್, ಮ್ಯಾಥ್ಯೂ ವೇಡ್, ಟಿಮ್ ಡೇವಿಡ್, ಮಾರ್ಕಸ್ ಸ್ಟೋಯ್ನಿಸ್, ಕ್ಯಾಮರೂನ್ ಗ್ರೀನ್, ಗ್ಲೆನ್ ಮ್ಯಾಕ್ಸ್‌ವೆಲ್, ಆ್ಯಸ್ಟನ್ ಏಗಾರ್, ಆ್ಯಡಂ ಝ್ಯಾಂಪ, ಪ್ಯಾಟ್ ಕಮಿನ್ಸ್, ಜೋಶ್ ಹೇಜಲ್‌ವುಡ್, ಮಿಚೆಲ್ ಸ್ಟಾರ್ಕ್, ನೇಥನ್ ಎಲ್ಲೀಸ್.
ಟಿ20 ವಿಶ್ವಕಪ್: ಅಮೆರಿಕ, ದಕ್ಷಿಣ ಆಫ್ರಿಕಾ ತಂಡಗಳಿಗೆ ಅಮೂಲ್ ಪ್ರಾಯೋಜಕತ್ವ
ನವದೆಹಲಿ: ಜೂ.1ರಿಂದ ಅಮೆರಿಕ ಹಾಗೂ ವೆಸ್ಟ್‌ಇಂಡೀಸ್‌ನಲ್ಲಿ ಆರಂಭಗೊಳ್ಳಲಿರುವ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಅಮೆರಿಕ ತಂಡಗಳಿಗೆ ಭಾರತದ ಪ್ರಮುಖ ಡೈರಿ ಉತ್ಪನ್ನ ಸಂಸ್ಥೆ ಅಮೂಲ್ ಪ್ರಾಯೋಜಕತ್ವ ವಹಿಸಲಿದೆ. ಅಮೂಲ್ ವಿಶ್ವಕಪ್ ತಂಡಗಳಿಗೆ ಪ್ರಾಯೋಜಕತ್ವ ವಹಿಸುತ್ತಿರುವ 2ನೇ ಡೈರಿ ಸಂಸ್ಥೆ. ಕರ್ನಾಟಕದ ನಂದಿನಿ ಇತ್ತೀಚೆಗಷ್ಟೇ ಐರ್ಲೆಂಡ್, ಸ್ಕಾಟ್ಲೆಂಡ್ ತಂಡಗಳಿಗೆ ಪ್ರಾಯೋಜಕತ್ವ ವಹಿಸುತ್ತಿರುವುದಾಗಿ ಘೋಷಿಸಿತ್ತು. ಅಮೂಲ್ ಗುಜರಾತ್ ಮೂಲದ ಸಂಸ್ಥೆಯಾಗಿದ್ದು, ಈ ಮೊದಲು ಅಫ್ಘಾನಿಸ್ತಾನ, ನೆದರ್‌ಲೆಂಡ್ಸ್ ತಂಡಗಳಿಗೂ ಪ್ರಾಯೋಜಕತ್ವ ವಹಿಸಿತ್ತು. ಅಮೂಲ್ ಉತ್ಪನ್ನಗಳು ಈಗಾಗಲೇ ಅಮೆರಿಕದಲ್ಲೂ ಮಾರಾಟಗೊಳ್ಳುತ್ತಿವೆ.