BCCI ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ನಿಗ್ರಹ ಘಟಕ ವ್ಯಾಪ್ತಿಗೆ ಸೇರ್ಪಡೆಗೊಂಡ ಬೆನ್ನಲ್ಲೇ ಇದೀಗ ಕ್ರಿಕೆಟಿಗರ ಡೋಪಿಂಗ್ ಪರೀಕ್ಷೆ ಮಾಡಲು ಮುಂದಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ(ಆ.19): ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ನಿಗ್ರಹ ಘಟಕ (ನಾಡಾ), ಭಾರತೀಯ ಕ್ರಿಕೆಟಿಗರ ಡೋಪಿಂಗ್ ಪರೀಕ್ಷೆಯನ್ನು ದುಲೀಪ್ ಟ್ರೋಫಿಯಿಂದಲೇ ಆರಂಭಿಸಲಿದೆ. ಬೆಂಗಳೂರಲ್ಲಿ ನಡೆಯುತ್ತಿರುವ ಟೂರ್ನಿಯ 2ನೇ ಪಂದ್ಯದಲ್ಲಿ ಆಟಗಾರರ ಮೂತ್ರದ ಮಾದರಿ ಸಂಗ್ರಹಿಸುವುದಾಗಿ ತಿಳಿದು ಬಂದಿದೆ. ಮಾನ್ಯತೆ ಪಡೆದ ವೈದ್ಯರೇ ಮಾದರಿ ಸಂಗ್ರಹಿಸಬೇಕು ಎನ್ನುವ ಬಿಸಿಸಿಐ ಷರತ್ತಿಗೆ ನಾಡಾ ಒಪ್ಪಿಗೆ ಸೂಚಿಸಿದೆ.
ಕೊನೆಗೂ ನಾಡಾ ವ್ಯಾಪ್ತಿಗೆ ಸೇರಿದ ಬಿಸಿಸಿಐ!
undefined
ಇತ್ತೀಚೆಗಷ್ಟೇ ಬಿಸಿಸಿಐ ಕ್ರಿಕೆಟ್ ಕಾರ್ಯಾಚರಣೆಯ ಪ್ರಧಾನ ವ್ಯವಸ್ಥಾಪಕ ಸಾಬಾ ಕರೀಂ ಹಾಗೂ ಉದ್ದೀಪನ ನಿಗ್ರಹ ಘಟಕದ ಮುಖ್ಯಸ್ಥ ಡಾ.ಅಭಿಜಿತ್ ಸಾಳ್ವೆ, ನಾಡಾದ ನಿರ್ದೇಶಕ ನವೀನ್ ಅಗರ್‌ವಾಲ್ ಸೇರಿದಂತೆ ಕೆಲ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ, ಮಾರ್ಗಸೂಚಿ ಬಗ್ಗೆ ಚರ್ಚಿಸಿದರು. ಸಭೆ ಬಳಿಕ ದುಲೀಪ್ ಟ್ರೋಫಿ ವೇಳೆಯೇ ಪರೀಕ್ಷೆ ಆರಂಭಿಸುವುದಾಗಿ ನಾಡಾ ಘೋಷಿಸಿತು.
ಸದ್ಯ ನಡೆಯುತ್ತಿರುವ ಭಾರತ ಬ್ಲೂ ಹಾಗೂ ಗ್ರೀನ್ ನಡುವಿನ ಪಂದ್ಯದಲ್ಲಿ ಆಟಗಾರರ ಪರೀಕ್ಷೆ ನಡೆಸುವುದಿಲ್ಲ ಎಂದಿರುವ ನಾಡಾ, ಆ.23ರಿಂದ ನಡೆಯಲಿರುವ 2ನೇ ಪಂದ್ಯದ ವೇಳೆ ಆಟಗಾರರ ಮಾದರಿ ಸಂಗ್ರಹಿಸುವುದಾಗಿ ತಿಳಿಸಿದೆ. ಬಿಸಿಸಿಐ ತನ್ನ ದೇಸಿ ಋುತುವಿನ ವೇಳಾಪಟ್ಟಿಯನ್ನು ನಾಡಾಗೆ ಹಸ್ತಾಂತರಿಸಿದೆ.
ಕ್ರಿಕೆಟ್ ಅಭಿಮಾನಿಗಳಿಗಿದು ಸಿಹಿ ಸುದ್ದಿ: ದಶಕಗಳ ಕನಸು ನನಸು..?
ಎಂಬಿಬಿಎಸ್ ಪದವಿ ಹೊಂದಿರುವ, ಉದ್ದೀಪನದ ಬಗ್ಗೆ ಮಾಹಿತಿ ಇರುವ ವೈದ್ಯರನ್ನೇ ಮಾದರಿ ಸಂಗ್ರಹಿಸಲು ಕಳುಹಿಸುವಂತೆ ಬಿಸಿಸಿಐ, ನಾಡಾಗೆ ಕೇಳಿಕೊಂಡಿದೆ. ಇದಕ್ಕೆ ಹೆಚ್ಚುವರಿ ಶುಲ್ಕ ಪಾವತಿಸಬೇಕು ಎನ್ನುವ ನಾಡಾದ ಷರತ್ತವನ್ನು ಬಿಸಿಸಿಐ ಒಪ್ಪಿಕೊಂಡಿದೆ. ಆದರೆ ಪ್ರತಿ ಪಂದ್ಯದ ವೇಳೆಯೂ ವೈದ್ಯರನ್ನೇ ಕಳುಹಿಸಲು ಸಾಧ್ಯವೇ ಎನ್ನುವ ಪ್ರಶ್ನೆ ಉದ್ಭವವಾಗಿದೆ.
ನಾಡಾ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ 16 ವೈದ್ಯರು ಮಾನ್ಯತೆ ಹೊಂದಿದ್ದಾರೆ. ಇದರಲ್ಲಿ 12 ಮಂದಿ ಪುಣೆಯಲ್ಲಿದ್ದು, ಇನ್ನುಳಿದ ನಾಲ್ವರು ತಿರುವನಂತಪುರಂನಲ್ಲಿದ್ದಾರೆ. ಬಿಸಿಸಿಐ ಬೇಡಿಕೆಯನ್ನು ನಾಡಾ ಪೂರೈಸಲು ಸಾಧ್ಯವೇ ಎನ್ನುವ ಕುತೂಹಲ ಶುರುವಾಗಿದೆ.
ದೇಸಿ ಪಂದ್ಯಗಳು ನಡೆಯುವ ಎಲ್ಲಾ ಮೈದಾನಗಳಲ್ಲೂ ಡೋಪಿಂಗ್ ಪರೀಕ್ಷೆ ನಡೆಸಲು ಪ್ರತ್ಯೇಕ ಕೊಠಡಿಗಳು ಇಲ್ಲ ಎನ್ನುವ ಕಾರಣಕ್ಕೆ, ಪರೀಕ್ಷೆ ಕುರಿತು ಮುಂಚಿತವಾಗಿಯೇ ಮಾಹಿತಿ ನೀಡುವಂತೆ ಬಿಸಿಸಿಐ, ನಾಡಾಗೆ ಮನವಿ ಮಾಡಿದೆ. ನಾಡಾ ವೈದ್ಯರು ಯಾವ ಪಂದ್ಯದ ವೇಳೆ ಆಟಗಾರ ಪರೀಕ್ಷೆ ನಡೆಸುತ್ತಾರೆ ಎನ್ನುವ ಮಾಹಿತಿ ನೀಡಿದರೆ ಸೂಕ್ತ ವ್ಯವಸ್ಥೆ ಮಾಡುವುದಾಗಿ ಬಿಸಿಸಿಐ ಭರವಸೆ ನೀಡಿದೆ.
ಮೂತ್ರ ಮಾದರಿ ಸಂಗ್ರಹಕ್ಕೆ ವೈದ್ಯರೇಕೆ?
ಬಿಸಿಸಿಐ ಹೆಚ್ಚುವರಿ ಶುಲ್ಕ ಪಾವತಿಸಲಿದೆ ಎನ್ನುವ ಕಾರಣಕ್ಕೆ ಕ್ರಿಕೆಟಿಗರ ಮೂತ್ರ ಮಾದರಿ ಸಂಗ್ರಹಿಸಲು ವೈದ್ಯರೇಕೆ ಬೇಕು ಎಂದು ನಾಡಾದ ಅಧಿಕಾರಿಯೊಬ್ಬರು ಆಕ್ಷೇಪಿಸಿದ್ದಾರೆ. ‘ಇದೊಂದು ಸರಳ ಪ್ರಕ್ರಿಯೆ. ಮನೆಗಳಿಗೆ ವೈದ್ಯರು ಆಗಮಿಸಿ ಮೂತ್ರ ಮಾದರಿ ಸಂಗ್ರಹಿಸುತ್ತಾರೆಯೇ. ಅದಕ್ಕಾಗಿಯೇ ತರಬೇತಿ ಪಡೆದ ಸಿಬ್ಬಂದಿ ಇದ್ದಾರೆ’ ಎಂದು ನಾಡಾ ಅಧಿಕಾರಿ ಹೇಳಿದ್ದಾರೆ.