ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ಗೆ ಲಗ್ಗೆಯಿಟ್ಟ ಶ್ರೀಕಾಂತ್, ಪ್ರಣಯ್
ಪಿ.ವಿ.ಸಿಂಧು ಹಾಗೂ ಲಕ್ಷ್ಯ ಸೇನ್ 2ನೇ ಸುತ್ತಲ್ಲೇ ಅಭಿಯಾನ ಅಂತ್ಯ
ಮಾಜಿ ವಿಶ್ವ ನಂ.1 ಶ್ರೀಕಾಂತ್, ಸೇನ್ ವಿರುದ್ಧ ಜಯಭೇರಿ
ಜಕಾರ್ತ(ಜೂ.16): ಭಾರತದ ತಾರಾ ಶಟ್ಲರ್ಗಳಾದ ಕಿದಂಬಿ ಶ್ರೀಕಾಂತ್ ಹಾಗೂ ಎಚ್.ಎಸ್.ಪ್ರಣಯ್ ಇಲ್ಲಿ ನಡೆಯುತ್ತಿರುವ ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಆದರೆ ಕೆಲ ಸಮಯದಿಂದ ಪದಕ ಬರ ಎದುರಿಸುತ್ತಿರುವ ಪಿ.ವಿ.ಸಿಂಧು ಹಾಗೂ ಲಕ್ಷ್ಯ ಸೇನ್ 2ನೇ ಸುತ್ತಲ್ಲೇ ಅಭಿಯಾನ ಕೊನೆಗೊಳಿಸಿದ್ದಾರೆ.
ಗುರುವಾರ ಪುರುಷರ ಸಿಂಗಲ್ಸ್ ಪ್ರಿ ಕ್ವಾರ್ಟರ್ನಲ್ಲಿ 7ನೇ ಶ್ರೇಯಾಂಕಿತ ಪ್ರಣಯ್ ಹಾಂಕಾಂಗ್ನ ಅಂಗುಸ್ ಲಾಂಗ್ ವಿರುದ್ಧ 21-18, 21-16ರಲ್ಲಿ ಜಯಗಳಿಸಿದರೆ, ಮಾಜಿ ವಿಶ್ವ ನಂ.1 ಶ್ರೀಕಾಂತ್, ಸೇನ್ ವಿರುದ್ಧ 21-17, 22-20 ಅಂತರದಲ್ಲಿ ಗೆದ್ದು ಬೀಗಿದರು. ಮಹಿಳಾ ಸಿಂಗಲ್ಸ್ನಲ್ಲಿ ಸಿಂಧುಗೆ ವಿಶ್ವ ನಂ.2, ಚೈನೀಸ್ ತೈಪೆಯ ತೈ ತ್ಸು ಯಿಂಗ್ ವಿರುದ್ಧ 18-21, 16-21ರಲ್ಲಿ ಸೋಲಿನ ಆಘಾತ ಎದುರಾಯಿತು. ಇದೇ ವೇಳೆ ಪುರುಷರ ಡಬಲ್ಸ್ನಲ್ಲಿ ವಿಶ್ವ ನಂ.4 ಜೋಡಿ ಸಾತ್ವಿಕ್-ಚಿರಾಗ್ ಚೀನಾ ಜೋಡಿಯನ್ನು ಮಣಿಸಿ ಕ್ವಾರ್ಟರ್ಗೇರಿತು.
undefined
ಏಷ್ಯನ್ ಗೇಮ್ಸ್ಗೆ ಅರ್ಹತೆ ಪಡೆದ ಕಾರ್ತಿಕ್, ಗುಲ್ವೀರ್
ಭುವನೇಶ್ವರ್: ಇಲ್ಲಿ ಗುರುವಾರ ಆರಂಭಗೊಂಡ ರಾಷ್ಟ್ರೀಯ ಅಂತಾರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಉತ್ತರ ಪ್ರದೇಶದ ಕಾರ್ತಿಕ್ ಕುಮಾರ್ ಹಾಗೂ ಗುಲ್ವೀರ್ ಸಿಂಗ್ ಏಷ್ಯನ್ ಗೇಮ್ಸ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಕೂಟದ ಮೊದಲ ದಿನ 1000 ಮೀ. ಓಟದಲ್ಲಿ ಕುಮಾರ್ 29 ನಿಮಿಷ 01.84 ಸೆಕೆಂಡ್ಗಳಲ್ಲಿ ಗುರಿ ತಲುಪಿ ಅಗ್ರಸ್ಥಾನಿಯಾದರೆ, ಗುಲ್ವೀರ್ 29:03.78 ನಿಮಿಷಗಳಲ್ಲಿ ಕ್ರಮಿಸಿ ದ್ವಿತೀಯ ಸ್ಥಾನ ಪಡೆದರು.
ಬ್ರಿಜ್ ವಿರುದ್ಧ ಜಾರ್ಜ್ಶೀಟ್: 6 ಮಂದಿ ಮೇಲೆ ಲೈಂಗಿಕ ಕಿರುಕುಳ ತನಿಖೆಯಿಂದ ಸಾಬೀತು..!
ಏಷ್ಯನ್ ಗೇಮ್ಸ್ಗೆ ಅರ್ಹತೆ ಪಡೆಯಲು 29:30.00 ನಿಮಿಷಗಳಲ್ಲಿ ಕ್ರಮಿಸಬೇಕಿತ್ತು. ಇನ್ನು, ಇದೇ ಸ್ಪರ್ಧೆಯಲ್ಲಿ ಡೆಲ್ಲಿಯ ಪ್ರೀತಂ ಕುಮಾರ್(29:22.36 ನಿ), ಮಧ್ಯಪ್ರದೇಶದ ಹರ್ಮನ್ಜೋತ್ ಸಿಂಗ್(29:26.86 ನಿ.) ಕೂಡಾ ಅರ್ಹತಾ ಮಟ್ಟವನ್ನು ತಲುಪಿದರೂ 1 ದೇಶದ ಇಬ್ಬರಿಗೆ ಮಾತ್ರ ಏಷ್ಯನ್ ಗೇಮ್ಸ್ನಲ್ಲಿ ಪಾಲ್ಗೊಳ್ಳಲು ಅವಕಾಶವಿರುವುದರಿಂದ ಇವರಿಬ್ಬರೂ ಅರ್ಹತೆ ಗಿಟ್ಟಿಸಿಕೊಳ್ಳಲಿಲ್ಲ. ಇದೇ ವೇಳೆ ಕರ್ನಾಟಕದ ವಂದನಾ ಮಹಿಳೆಯರ 20 ಕಿ.ಮೀ. ವೇಗದ ನಡಿಗೆ ಸ್ಪರ್ಧೆಯಲ್ಲಿ 1 ಗಂಟೆ 41:54 ನಿಮಿಷಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದರು.
ಕಿರಿಯರ ಹಾಕಿ: ರಾಜ್ಯ ತಂಡಕ್ಕೆ ಸತತ 2ನೇ ಜಯ
ರೂರ್ಕೆಲಾ: 13ನೇ ಆವೃತ್ತಿಯ ರಾಷ್ಟ್ರೀಯ ಕಿರಿಯರ ಹಾಕಿ ಟೂರ್ನಿಯಲ್ಲಿ ಕರ್ನಾಟಕ ಸತತ 2ನೇ ಗೆಲುವು ಸಾಧಿಸಿದೆ. ಆರಂಭಿಕ ಪಂದ್ಯದಲ್ಲಿ ತ್ರಿಪುರ ವಿರುದ್ಧ ವಾಕ್ ಓವರ್ ಪಡೆದು ಗೆದ್ದಿದ್ದ ರಾಜ್ಯ ತಂಡ ಬುಧವಾರ ರಾಜಸ್ಥಾನವನ್ನು 4-1 ಗೋಲುಗಳಿಂದ ಮಣಿಸಿತು. ಇದರೊಂದಿಗೆ ಕರ್ನಾಟಕ ‘ಇ’ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ನಾಕೌಟ್ ಹಂತಕ್ಕೇರುವುದು ಬಹುತೇಕ ಖಚಿತವಾಗಿದೆ.
ಬುಧವಾರದ ಪಂದ್ಯದಲ್ಲಿ ರಾಜ್ಯದ ಪರ ಆರ್ಯನ್ ಉತ್ತಪ್ಪ(27ನೇ ನಿಮಿಷ), ಎಚ್.ಆರ್.ಹರ್ಷಾ(51ನೇ ನಿ.), ಸಪನ್ ಅಯ್ಯಪ್ಪ(59ನೇ ನಿ.) ಹಾಗೂ ನಕುಲ್ ಮಲ್ನಾಡ್(60ನೇ ನಿಮಿಷ) ಗೋಲು ಬಾರಿಸಿದರು. ರಾಜ್ಯ ತಂಡ ಗುಂಪು ಹಂತದ ಕೊನೆ ಪಂದ್ಯದಲ್ಲಿ ಶುಕ್ರವಾರ ದಾದರ್-ನಗರ್ಹವೇಲಿ ಮತ್ತು ದಿಯು-ದಾಮನ್ ತಂಡದ ವಿರುದ್ಧ ಸೆಣಸಾಡಲಿದೆ.
ಮಹಿಳಾ ಫುಟ್ಬಾಲ್: ರಾಜ್ಯ ತಂಡಕ್ಕೆ ಪಂಜಾಬ್ ಸವಾಲು
ಅಮೃತ್ಸರ್: 27ನೇ ರಾಷ್ಟ್ರೀಯ ಹಿರಿಯ ಮಹಿಳೆಯರ ಫುಟ್ಬಾಲ್ ಚಾಂಪಿಯನ್ಶಿಪ್ನ ಫೈನಲ್ ಸುತ್ತಿನಲ್ಲಿ ಸೋಲಿನ ಆರಂಭ ಪಡೆದಿರುವ ಕರ್ನಾಟಕ, ಗುರುವಾರ ತನ್ನ 2ನೇ ಪಂದ್ಯದಲ್ಲಿ ಆತಿಥೇಯ ಪಂಜಾಬ್ ವಿರುದ್ಧ ಸೆಣಸಾಡಲಿದೆ.
ಬುಧವಾರ ‘ಎ’ ಗುಂಪಿನ ಆರಂಭಿಕ ಪಂದ್ಯದಲ್ಲಿ ರಾಜ್ಯ ತಂಡ 0-4 ಅಂತರದಲ್ಲಿ ಸೋಲನುಭವಿಸಿತ್ತು. 6 ತಂಡಗಳಿರುವ ಗುಂಪಿನಲ್ಲಿ ಅಗ್ರ 2 ತಂಡಗಳು ಮಾತ್ರ ಸೆಮೀಸ್ಗೇರಲಿದ್ದು, ಪಂಜಾಬ್ ವಿರುದ್ಧ ಗೆಲ್ಲುವ ಮೂಲಕ ಕರ್ನಾಟಕ ಅಗ್ರ-2ರಲ್ಲಿ ಸ್ಥಾನ ಪಡೆದುಕೊಳ್ಳುವ ನಿರೀಕ್ಷೆಯಲ್ಲಿದೆ.