ಸಾಫ್ಟ್‌ವೇರ್‌ ಸಹಾಯದಿಂದ ವಿಶ್ವಕಪ್‌ಗೆ ತಂಡ ಆಯ್ಕೆ!

By Web DeskFirst Published Apr 17, 2019, 12:21 PM IST
Highlights

ಸಾಫ್ಟ್‌ವೇರ್‌ ಸಹಾಯದಿಂದ ವಿಶ್ವಕಪ್‌ಗೆ ತಂಡ|  ಒಂದೂವರೆ ಎರಡು ವರ್ಷಗಳಿಂದ ಪರಿಶ್ರಮ ವಹಿಸಿದ್ದರೂ, ಆಟಗಾರರನ್ನು ಅಂತಿಮಗೊಳಿಸಲು ನೆರವಾಗಿದ್ದು ತಂತ್ರಜ್ಞಾನ

ನವದೆಹಲಿ[ಏ.17]: ಐಸಿಸಿ ಏಕದಿನ ವಿಶ್ವಕಪ್‌ಗೆ ಭಾರತ ತಂಡವನ್ನು ಆಯ್ಕೆ ಮಾಡಲು ಬಿಸಿಸಿಐ ಒಂದೂವರೆ ಎರಡು ವರ್ಷಗಳಿಂದ ಪರಿಶ್ರಮ ವಹಿಸಿದ್ದರೂ, ಆಟಗಾರರನ್ನು ಅಂತಿಮಗೊಳಿಸಲು ನೆರವಾಗಿದ್ದು ತಂತ್ರಜ್ಞಾನ. ಭಾರತೀಯ ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿಗೆ ತಂಡದ ಆಯ್ಕೆಗೆ ಮಾಹಿತಿ ವಿಶ್ಲೇಷಣಾ ಸಾಫ್ಟ್‌ವೇರ್‌ (ಡೇಟಾ ಅನಾಲಿಟಿಕ್ಸ್‌ ಸಾಫ್ಟ್‌ವೇರ್‌) ಬಳಕೆ ಮಾಡಲಾಗಿದೆ. ಮಧ್ಯ ಓವರ್‌ಗಳಲ್ಲಿ ದಿನೇಶ್‌ ಕಾರ್ತಿಕ್‌ ಹೇಗೆ ರನ್‌ ಗಳಿಸುತ್ತಾರೆ, ಡೆತ್‌ ಓವರ್‌ಗಳಲ್ಲಿ ರಿಷಭ್‌ ಪಂತ್‌ರ ಯಶಸ್ಸಿನ ಪ್ರಮಾಣವೆಷ್ಟು, ಹೀಗೆ ಪ್ರತಿಯೊಂದು ಅಂಶವನ್ನು ಸಾಫ್ಟ್‌ವೇರ್‌ನ ಸಹಾಯದಿಂದ ಆಯ್ಕೆ ಸಮಿತಿಗೆ ಮಾಹಿತಿ ಒದಗಿಸಲಾಗಿತ್ತು.

ಆಯ್ಕೆ ಸಮಿತಿ ಸಭೆ ನಡೆಯುವ ಒಂದು ದಿನ ಮೊದಲು ಎಂದರೆ ಭಾನುವಾರ ಭಾರತ ತಂಡದ ಮಾಹಿತಿ ವಿಶ್ಲೇಷಕ ಸಿಕೆಎಂ ಧನಂಜಯ, ಐವರು ಆಯ್ಕೆ ಸಮಿತಿ ಸದಸ್ಯರಿಗೆ ಮೂರೂವರೆ ಗಂಟೆಗಳ ಪ್ರಸ್ತುತಿ ನೀಡಿದ್ದಾರೆ. ಇದರಲ್ಲಿ 2017ರ ಚಾಂಪಿಯನ್ಸ್‌ ಟ್ರೋಫಿ ಬಳಿಕ ಪ್ರತಿ ಆಟಗಾರನ ಪ್ರದರ್ಶನ ಹೇಗಿದೆ. ಅವರ ಪ್ರಾಬಲ್ಯ, ದೌರ್ಬಲ್ಯಗಳ ವಿವರ ನೀಡಲಾಯಿತು ಎಂದು ವರದಿಯಾಗಿದೆ.

ಈ ಮೊದಲು ಆಯ್ಕೆಗಾರರು ಸಾಮಾನ್ಯವಾಗಿ ಆಟಗಾರರು ಆಡಿರುವ ಪಂದ್ಯಗಳೆಷ್ಟು, ಗಳಿಸಿರುವ ರನ್‌, ಸ್ಟೆ್ರೖಕ್‌ರೇಟ್‌, ಪಡೆದಿರುವ ವಿಕೆಟ್‌ಗಳ ಅಂಕಿ-ಅಂಶಗಳನ್ನಿಟ್ಟುಕೊಂಡು ತಂಡದ ಆಯ್ಕೆ ನಡೆಸುತ್ತಿದ್ದರು. ಆದರೆ ಈ ಬಾರಿ ಆಳವಾದ ವಿಶ್ಲೇಷಣೆ ನಡೆಸಿ ಸೂಕ್ತ ಆಟಗಾರರನ್ನು ವಿಶ್ವಕಪ್‌ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಚರ್ಚೆಯಾದ ವಿಷಯಗಳೇನು?: ತಂಡದ ಮಾಹಿತಿ ವಿಶ್ಲೇಷಕ ನೀಡಿದ ಪ್ರಸ್ತುತಿಯಲ್ಲಿ ಪ್ರತಿ ಆಟಗಾರನ ಕುರಿತು ವಿವರಣೆ ಇತ್ತು. ಯಾವ ಆಟಗಾರ ಪಂದ್ಯದ ಯಾವ ಹಂತದಲ್ಲಿ ಅತಿ ಹೆಚ್ಚು ಪರಿಣಾಮಕಾರಿ ಎನ್ನುವುದನ್ನು ಗುರುತಿಸಲಾಗಿತ್ತು. ಇದರ ಆಧಾರದಲ್ಲಿ ಬ್ಯಾಟಿಂಗ್‌ ಕ್ರಮಾಂಕಗಳನ್ನು ನಿರ್ಧರಿಸಲು ಅನುಕೂಲವಾಗಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು, ಇಂಗ್ಲೆಂಡ್‌ನ ಪಿಚ್‌ಗಳಲ್ಲಿ ಭಾರತೀಯ ಆಟಗಾರರು ಎಷ್ಟರ ಮಟ್ಟಿಗೆ ಯಶಸ್ಸು ಕಾಣಬಲ್ಲರು. ಅಲ್ಲಿ ಆಡಿದ ಅನುಭವ ಹೊಂದಿದ್ದಾರೆಯೇ? ಇಲ್ಲವೇ ಅಂತಹ ವಾತಾವರಣಗಳಲ್ಲಿ ಆಡಿದ್ದಾರೆಯೇ ಎನ್ನುವುದನ್ನು ಪರಿಗಣಿಸಲಾಗಿದೆ. ಬಹುಮುಖ್ಯವಾಗಿ ವಿಶ್ವಕಪ್‌ ಪಂದ್ಯಗಳು ನಡೆಯುವ ಪ್ರತಿ ಕ್ರೀಡಾಂಗಣದ ಅಂಕಿ-ಅಂಶಗಳನ್ನು ಕಲೆಹಾಕಲಾಗಿದೆ. ಉದಾಹರಣೆಗೆ ಲಂಡನ್‌ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್‌ ಮಾಡುವ ತಂಡ ಸರಾಸರಿ ಎಷ್ಟುರನ್‌ ಗಳಿಸಲಿದೆ. ಇನ್ನಿಂಗ್ಸ್‌ನ ಯಾವ ಹಂತದಲ್ಲಿ ಅತಿಹೆಚ್ಚು ರನ್‌ ದಾಖಲಾಗಿದೆ. ಯಾವ ರೀತಿಯ ಬೌಲರ್‌ಗಳು ಹೆಚ್ಚು ಪರಿಣಾಮಕಾರಿಯಾಗಿದ್ದಾರೆ. ಭಾರತ ಈ ಮೈದಾನದಲ್ಲಿ ಯಶಸ್ಸು ಸಾಧಿಸಬೇಕು ಎಂದರೆ ಯಾವೆಲ್ಲಾ ವಿಭಾಗಗಳಲ್ಲಿ ಸುಧಾರಿತ ಪ್ರದರ್ಶನ ತೋರಬೇಕು ಎನ್ನುವ ಅಂಶಗಳನ್ನು ಆಯ್ಕೆಗಾರರಿಗೆ ವಿವರಿಸಲಾಗಿತ್ತು. ಇದಷ್ಟೇ ಅಲ್ಲ, ಕಳೆದ ಕೆಲ ವರ್ಷಗಳಲ್ಲಿ ಇಂಗ್ಲೆಂಡ್‌ನ ವಿವಿಧ ಪಿಚ್‌ಗಳಲ್ಲಿ ಆತಿಥೇಯ ತಂಡ ಯಾವ ರೀತಿ ಸಂಯೋಜನೆಯೊಂದಿಗೆ ಕಣಕ್ಕಿಳಿದಿದೆ. ಯಾವ ಮೈದಾನದಲ್ಲಿ ಯಾವ ಸಂಯೋಜನೆಯೊಂದಿಗೆ ಆಡಿದರೆ ಹೆಚ್ಚು ಯಶಸ್ಸು ನಿರೀಕ್ಷಿಸಬಹುದು ಎನ್ನುವ ಅಂಕಿ-ಅಂಶಗಳನ್ನೂ ಆಯ್ಕೆಗಾರರಿಗೆ ಒದಗಿಸಲಾಗಿತ್ತು.

ಎದುರಾಳಿಗಳ ಕುರಿತೂ ಮಾಹಿತಿ: ಈ ಬಾರಿ ವಿಶ್ವಕಪ್‌ನಲ್ಲಿ ರೌಂಡ್‌ ರಾಬಿನ್‌ ಮಾದರಿ ಅನುಸರಿಸುವ ಕಾರಣ, ಭಾರತ ಎಲ್ಲಾ 9 ತಂಡಗಳ ವಿರುದ್ಧವೂ ಆಡಲಿದೆ. ಹೀಗಾಗಿ ಯಾವ್ಯಾವ ತಂಡದ ವಿರುದ್ಧ ಭಾರತ ಎಷ್ಟುಪ್ರಮಾಣದಲ್ಲಿ ಯಶಸ್ಸು ಕಂಡಿದೆ. ಭಾರತೀಯ ಬೌಲರ್‌ಗಳ ವಿರುದ್ಧ ಆಸ್ಪ್ರೇಲಿಯಾ, ನ್ಯೂಜಿಲೆಂಡ್‌, ಇಂಗ್ಲೆಂಡ್‌ ಸೇರಿದಂತೆ ಬಲಿಷ್ಠ ತಂಡಗಳ ಬ್ಯಾಟ್ಸ್‌ಮನ್‌ಗಳ ದಾಖಲೆ ಹೇಗಿದೆ. ಪಂದ್ಯದ ಯಾವ ಹಂತದಲ್ಲಿ ಭಾರತೀಯ ಬೌಲರ್‌ಗಳು ಪ್ರಾಬಲ್ಯ ಹೊಂದಿದ್ದಾರೆ. ಭಾರತದ ಪ್ರಮುಖ ಸ್ಪಿನ್ನರ್‌ಗಳಾದ ಕುಲ್ದೀಪ್‌ ಹಾಗೂ ಚಹಲ್‌ರನ್ನು ಸಮರ್ಥವಾಗಿ ಎದುರಿಸಬಲ್ಲ ಆಟಗಾರರು ಯಾರಾರು?. ವಿಶ್ವಕಪ್‌ನಲ್ಲಿ ಎದುರಾಳಿ ತಂಡದಿಂದ ಯಾವ ರೀತಿ ಬೌಲಿಂಗ್‌ ದಾಳಿಯನ್ನು ನಿರೀಕ್ಷಿಸಬಹುದು. ಹೀಗೆ ಸಣ್ಣ ಸಣ್ಣ ವಿಚಾರಗಳ ಬಗ್ಗೆಯೂ ಗಮನ ಹರಿಸಲಾಗಿದೆ.

ಈ ರೀತಿ ತಂತ್ರಜ್ಞಾನದ ಸಹಾಯ ಪಡೆದು ತಂಡದ ಆಯ್ಕೆ ಮಾಡಿದ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು, ‘ಬಲಿಷ್ಠ ತಂಡವನ್ನು ವಿಶ್ವಕಪ್‌ಗೆ ಕಳುಹಿಸುವ ಉದ್ದೇಶ ನಮ್ಮದು. ನಾವು ಆಯ್ಕೆ ಮಾಡುವ ಪ್ರತಿ ಆಟಗಾರನೂ ಪಂದ್ಯ ಗೆಲ್ಲಿಸುವಂತಹ ಆಟಗಾರನಾಗಿರಬೇಕು. ಹೀಗಾಗಿ ಆಳವಾದ ವಿಶ್ಲೇಷಣೆ ನಡೆಸಲಾಯಿತು. ಮುಂದಿನ ದಿನಗಳಲ್ಲಿ ಪ್ರತಿ ಮಹತ್ವದ ಸರಣಿಗೂ ಮುನ್ನ ಈ ರೀತಿಯ ಮಾಹಿತಿ ವಿಶ್ಲೇಷಣಾ ಸಾಫ್ಟ್‌ವೇರ್‌ನ ಉಪಯೋಗ ಪಡೆಯಬಹುದಾಗಿದೆ’ ಎಂದಿದ್ದಾರೆ.

click me!