ವಿನೇಶ್‌ ಫೋಗಟ್‌, ಭಜರಂಗ್ ಪೂನಿಯಾ ನೇರ ಆಯ್ಕೆ ಪ್ರಶ್ನಿಸಿ ರೆಸ್ಲರ್ಸ್‌ ಕೋರ್ಟ್‌ ಮೊರೆ..!

By Kannadaprabha NewsFirst Published Jul 20, 2023, 10:53 AM IST
Highlights

ಮುಂಬರುವ ಏಷ್ಯನ್‌ ಗೇಮ್ಸ್‌ನ ಕುಸ್ತಿ ಸ್ಪರ್ಧೆಗೆ ಭಜರಂಗ್‌ ಪೂನಿಯಾ ಹಾಗೂ ವಿನೇಶ್‌ ಫೋಗಟ್‌ಗೆ ನೇರ ಆಯ್ಕೆ
ಆಯ್ಕೆಯಲ್ಲಿನ ತಾರತಮ್ಯ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ ಕುಸ್ತಿಪಟುಗಳು
ಭಜರಂಗ್‌, ವಿನೇಶ್‌ರನ್ನು ಯಾವ ಮಾನದಂಡದ ಮೇಲೆ ನೇರವಾಗಿ ಆಯ್ಕೆ ಮಾಡಲಾಗಿದೆ ಎಂದು ಅಂತಿಮ್‌ ಪಂಘಲ್‌ ಪ್ರಶ್ನೆ

ನವದೆಹಲಿ(ಜು.20): ಮುಂಬರುವ ಏಷ್ಯನ್‌ ಗೇಮ್ಸ್‌ನ ಕುಸ್ತಿ ಸ್ಪರ್ಧೆಗೆ ಭಜರಂಗ್‌ ಪೂನಿಯಾ ಹಾಗೂ ವಿನೇಶ್‌ ಫೋಗಟ್‌ಗೆ ನೇರ ಅರ್ಹತೆ ನೀಡಿದ್ದಕ್ಕೆ ಇತರ ಕುಸ್ತಿಪಟುಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆಯ್ಕೆಯಲ್ಲಿನ ತಾರತಮ್ಯ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಏಷ್ಯಾಡ್‌ಗೆ ಪುರುಷರ 65 ಕೆ.ಜಿ. ವಿಭಾಗದಲ್ಲಿ ಭಜರಂಗ್‌, ಮಹಿಳೆಯರ 53 ಕೆ.ಜಿ. ವಿಭಾಗದಲ್ಲಿ ವಿನೇಶ್‌ಗೆ ಆಯ್ಕೆ ಟ್ರಯಲ್ಸ್‌ ಇಲ್ಲದೆ ನೇರವಾಗಿ ಆಯ್ಕೆ ಮಾಡಲಾಗಿದೆ. ಆದರೆ ಈ ವಿಭಾಗಗಳಲ್ಲಿ ಕ್ರಮವಾಗಿ ಅಂಡರ್-20 ವಿಶ್ವ ಚಾಂಪಿಯನ್‌ಶಿಪ್ ಕಂಚು ವಿಜೇತ ಸುಜೀತ್‌ ಕಲ್ಕಲ್‌ ಹಾಗೂ ಹಾಲಿ ಅಂಡರ್-20 ವಿಶ್ವ ಚಾಂಪಿಯನ್ ಅಂತಿಮ್‌ ಪಂಘಲ್‌ ಆಯ್ಕೆ ನಿರೀಕ್ಷೆಯಲ್ಲಿದ್ದರು. ಸದ್ಯ ತಮ್ಮನ್ನು ಏಷ್ಯಾಡ್‌ಗೆ ಆಯ್ಕೆ ಮಾಡದೆ ಕಳೆದ 7 ತಿಂಗಳಿಂದ ಯಾವುದೇ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಳ್ಳದ ಭಜರಂಗ್‌, ವಿನೇಶ್‌ಗೆ ಅರ್ಹತೆ ನೀಡಿದ್ದಕ್ಕೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನ್ಯಾಯಯುತವಾಗಿಯೇ ಆಯ್ಕೆ ಟ್ರಯಲ್ಸ್‌ ಮಾಡಬೇಕು ಎಂದು ಅವರು ಕೋರಿದ್ದಾರೆ. ಕುಸ್ತಿಪಟುಗಳ ಅರ್ಜಿ ಪರಿಶೀಲಿಸಿದ ಮುಖ್ಯ ನ್ಯಾಯಾದೀಶ ಸತೀಶ್‌ ಚಂದ್ರ ಶರ್ಮ, ಗುರುವಾರ ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ.

ಯಾವ ಸಾಧನೆ ಮೇಲೆ ನೇರ ಆಯ್ಕೆ: ಅಂತಿಮ್‌

ಭಜರಂಗ್‌, ವಿನೇಶ್‌ರನ್ನು ಯಾವ ಮಾನದಂಡದ ಮೇಲೆ ನೇರವಾಗಿ ಆಯ್ಕೆ ಮಾಡಲಾಗಿದೆ ಎಂದು ಅಂತಿಮ್‌ ಪಂಘಲ್‌ ಪ್ರಶ್ನಿಸಿದ್ದು, ತನ್ನನ್ನು ಸೇರಿ ಹಲವರಿಗೆ ವಿನೇಶ್‌ರನ್ನು ಸೋಲಿಸುವ ಸಾಮರ್ಥ್ಯವಿದೆ ಎಂದು ಸವಾಲು ಹಾಕಿದ್ದಾರೆ. ‘ವಿನೇಶ್‌ರನ್ನು ವಿಶ್ವ ಚಾಂಪಿಯನ್‌ಶಿಪ್‌ಗೂ ಕಳುಹಿಸುತ್ತಾರೆ ಎಂದು ಹೇಳಲಾಗುತ್ತಿದೆ. ಹೀಗಾದರೆ ವರ್ಷಗಟ್ಟಲೆ ನಾವು ಮಾಡಿದ ಕಠಿಣ ಅಭ್ಯಾಸಕ್ಕೆ ಬೆಲೆ ಏನಿದೆ?. ನಾವು ಕುಸ್ತಿಯನ್ನೇ ತೊರೆಯಬೇಕಾ’ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ, ಕಾಮನ್‌ವೆಲ್ತ್‌ ಗೇಮ್ಸ್‌ ಟ್ರಯಲ್ಸ್‌ ವೇಳೆ ವಿನೇಶ್‌ ಹಾಗೂ ಅಧಿಕಾರಿಗಳು ತಮಗೆ ವಂಚಿಸಿದ್ದರು ಎಂದು ಸಹ ಆರೋಪಿಸಿದ್ದಾರೆ.

ಏಷ್ಯನ್‌ ಗೇಮ್ಸ್‌ಗೆ ಭಜರಂಗ್‌, ವಿನೇಶ್‌ ಫೊಗಟ್‌ ನೇರ ಆಯ್ಕೆ! ಇನ್ನುಳಿದ ಕುಸ್ತಿಪಟುಗಳಿಂದ ಆಸಮಾಧಾನ

ಇದೇ ವೇಳೆ, ಸುಜೀತ್‌ ಕೂಡಾ ನೇರ ಆಯ್ಕೆ ಬಗ್ಗೆ ಕೆಂಡಕಾರಿದ್ದು, ಆಯ್ಕೆಯಲ್ಲಿ ಪಕ್ಷಪಾತ ಧೋರಣೆ ಸಲ್ಲದು ಎಂದಿದ್ದಾರೆ. ‘ಈ ಮೊದಲು ಕೂಡಾ ಭಜರಂಗ್‌ರನ್ನು ನೇರವಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಭಜರಂಗ್‌ರನ್ನು ನಾನು ಮಾತ್ರವಲ್ಲ ಇನ್ನೂ 5-6 ಮಂದಿ ಸೋಲಿಸಬಲ್ಲರು. ನನಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಕನಸಿದೆ. ಆದರೆ ಈ ರೀತಿ ಮಾಡಿದರೆ ನಮ್ಮಕನಸು ಈಡೇರುವುದು ಹೇಗೆ’ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

565 ಕಿ.ಮೀ. ಸ್ಮ್ಯಾಶ್‌: ಬ್ಯಾಡ್ಮಿಂಟನ್ ತಾರೆ ಸಾತ್ವಿಕ್‌ಸಾಯಿರಾಜ್‌ ಗಿನ್ನಿಸ್‌ ದಾಖಲೆ!

ರೆಸ್ಲರ್ಸ್ ಪ್ರತಿಭಟನೆ

ವಿನೇಶ್‌, ಭಜರಂಗ್‌ಗೆ ನೇರ ಪ್ರವೇಶ ನೀಡಿದ್ದಕ್ಕೆ ಭಾರತೀಯ ಕುಸ್ತಿ ಫೆಡರೇಶನ್‌ನ ತಾತ್ಕಾಲಿಕ ಸಮಿತಿ ವಿರುದ್ಧ ಕುಸ್ತಿಪಟು ಅಂತಿಮ್‌ ಸೇರಿದಂತೆ ಹಲವರು ಹರ್ಯಾಣದ ಹಿಸಾರ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅಂತಿಮ್‌ರ ಸಂಬಂಧಿ, ಕುಸ್ತಿಪಟು ವಿಶಾಲ್‌ ಕಾಳಿರಾಮನ್‌, ಹಿಸಾರ್‌ನ ಬಾಬಾ ಲಾಲ್‌ದಾಸ್‌ ಅಖಾಡ ಹಾಗೂ ನವದೆಹಲಿಯ ಛತ್ರಸಾಲ್‌ ಕ್ರೀಡಾಂಗಣದ ಕುಸ್ತಿಪಟುಗಳು ಕೂಡಾ ಪ್ರತಿಭಟನೆಯಲ್ಲಿ ಕೈ ಜೋಡಿಸಿದರು. ನ್ಯಾಯ ಸಿಗದೆ ಇದ್ದರೆ ಪ್ರತಿಭಟನೆ ಮುಂದುವರಿಸುವ ಬಗ್ಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.

click me!